ಕಪ್ತಾನ ಕೊಹ್ಲಿಗೂ ಬಂತು ಕಂಟಕ; ವಿರಾಟ್ ಸ್ಥಾನದ ಮೇಲೆ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನ ಕಣ್ಣು!

Virat Kohli: ವಿಶ್ವಕಪ್​ನಲ್ಲಿ ಹ್ಯಾಟ್ರಿಕ್​ 50 ಪ್ಲಸ್​ ರನ್ ಬಾರಿಸಿರುವ ರೋಹಿತ್​ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಭಾರೀ ಸ್ಪರ್ಧೆ ಒಡ್ಡಿದ್ದಾರೆ. ಇದಕ್ಕೆ ಕಾರಣ ಆ ನಂಬರ್ 1 ಪ್ಲೇಸ್

zahir | news18
Updated:July 2, 2019, 5:49 PM IST
ಕಪ್ತಾನ ಕೊಹ್ಲಿಗೂ ಬಂತು ಕಂಟಕ; ವಿರಾಟ್ ಸ್ಥಾನದ ಮೇಲೆ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನ ಕಣ್ಣು!
ವಿರಾಟ್ ಕೊಹಲಿ (ಟೀಂ ಇಂಡಿಯಾ ನಾಯಕ)
  • News18
  • Last Updated: July 2, 2019, 5:49 PM IST
  • Share this:
ವಿಶ್ವ ಕ್ರಿಕೆಟ್​ನಲ್ಲಿ ಸದ್ಯ ಕ್ಲಾಸ್​​ ಹಾಗೂ ಮಾಸ್​​​ ಎರಡೂ ಇರುವ ಆಟಗಾರರು​​​ ಇರುವುದು ಬೆರಳಣಿಕೆಯಷ್ಟು. ಹೀಗಿರುವಾಗ ಏಕದಿನ ಕ್ರಿಕೆಟ್​​ನಲ್ಲಿ ಮಿಂಚುಹರಿಸುತ್ತಿರುವ ಇಬ್ಬರು ಆಟಗಾರರು, ಟೀಂ ಇಂಡಿಯಾದಲ್ಲೇ ಇರುವುದು ಬಲು ವಿಶೇಷ. ಅವರೇ ಟೀಂ ಇಂಡಿಯಾ ನಾಯಕ​ ವಿರಾಟ್​ ಕೊಹ್ಲಿ ಹಾಗೂ ಉಪ- ನಾಯಕ​ ರೋಹಿತ್​ ಶರ್ಮಾ.

ವಿಶ್ವಕಪ್​ನಲ್ಲಿ 10 ತಂಡಗಳ ನಡುವೆ ಕಠಿಣ ಪೈಪೋಟಿ ನಡೆಯುತ್ತಿದೆ. ಟೀಂ ಇಂಡಿಯಾ ಎದುರಾಳಿ ವಿರುದ್ಧ ಭರ್ಜರಿಯಾಗೇ ಆಟವಾಡುತ್ತಿದೆ. ಅದರ ಜೊತೆಗೆ ಟೀಂ ಇಂಡಿಯಾ ಒಳಗೂ ಭರ್ಜರಿಯಾಗೇ ಫೈಟ್ ನಡೆಯುತ್ತಿದೆ. ಅದೂ ಯಾವುದೇ ವೈಯಕ್ತಿಕ ವಿಚಾರಕ್ಕಲ್ಲ, ಬದಲಾಗಿ ಅತ್ಯುತ್ತಮ ಪ್ರದರ್ಶನ ನೀಡುವುದರಲ್ಲಿ.

ವಿಶ್ವಕಪ್​ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಸಿತು. ಮೊದಲ ಪಂದ್ಯದಲ್ಲೇ ಓಪನರ್ ರೋಹಿತ್ ಶರ್ಮಾ ಭರ್ಜರಿ ಸೆಂಚುರಿ ಸಿಡಿಸಿ ತಂಡ 300ರ ಗಡಿ ದಾಟುವಂತೆ ನೋಡಿಕೊಂಡರು.

ಇನ್ನು 2ನೇ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಉತ್ತಮವಾಗೇ ಬ್ಯಾಟ್​ ಬೀಸಿದರು. ಆ ಪಂದ್ಯದಲ್ಲಿ ಶಿಖರ್ ಧವನ್ ಸೆಂಚುರಿ ಸಿಡಿಸಿದರೆ, ರೋಹಿತ್ 57 ರನ್​ಗಳಿಸಿ ಔಟಾದರು. ಆದರೆ ರೋಹಿತ್-ಧವನ್ ಜೊತೆಯಾಟದಿಂದಲೇ ಭಾರತ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಭಾರತ ನಂತರ ಆಡಿದ್ದು ಪಾಕಿಸ್ತಾನ ವಿರುದ್ಧ. ನ್ಯೂಜಿಲೆಂಡ್ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗಿದ್ದರಿಂದ ಪಾಕ್​ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿತು. ಇದಕ್ಕೆ ಮುಖ್ಯ ಕಾರಣ ಇದೇ ಹಿಟ್​ಮ್ಯಾನ್​. ಸಖತ್ ಸೆಂಚುರಿ ಸಿಡಿಸಿದ ರೋಹಿತ್​, ಏಕದಿನ ಕ್ರಿಕೆಟ್​ನಲ್ಲಿ 24ನೇ ಶತಕ ಸಿಡಿಸಿದರು. ಅಲ್ಲದೆ ಈ ಬಾರಿಯ ವಿಶ್ವಕಪ್​ನಲ್ಲಿ 2ನೇ ಶತಕ ದಾಖಲಿಸಿದರು. ಈ ಮೂಲಕ ಭಾರತ ಪರ ಲೀಡಿಂಗ್​ ರನ್​ ಸ್ಕೋರರ್ ಆಗಿದ್ದಾರೆ ಡಬಲ್ ಸೆಂಚುರಿ ಸ್ಟಾರ್​. ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 102 ರನ್​ ಬಾರಿಸಿದ ಹಿಟ್​ ಮ್ಯಾನ್ ಶತಕದ ಸಂಖ್ಯೆಯನ್ನು ಏರಿಸಿದ್ದರು. ಇದೀಗ ಬಾಂಗ್ಲಾದೇಶದ ವಿರುದ್ಧ ಕೂಡ ತಮ್ಮ ಬ್ಯಾಟ್ ಝಳಪಳಿಸಿದ್ದಾರೆ.

92 ಎಸೆತಗಳಲ್ಲಿ 104 ರನ್​ ಸಿಡಿಸಿ ಟೀಂ ಇಂಡಿಯಾಗೆ ಭರ್ಜರಿ ಆರಂಭ ಒದಗಿಸಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಪರ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರನೆಂಬ ಕೀರ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ 2003ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ 3 ಶತಕ ಸಿಡಿಸಿ ದಾಖಲೆ ಬರೆದಿದ್ದರು.

ಸದ್ಯ ವಿಶ್ವಕಪ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿ ರೋಹಿತ್ ಶರ್ಮಾ ಶತಕದಾಟದೊಂದಿಗೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಭಾರೀ ಸ್ಪರ್ಧೆ ಒಡ್ಡಿದ್ದಾರೆ. ಇದಕ್ಕೆ ಕಾರಣ ಆ ನಂಬರ್ 1 ಪ್ಲೇಸ್​.ಭಾರತ ತಂಡದ ಕಪ್ತಾನ ಕೊಹ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ ಸತತ 5 ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ನಾಯಕನಾಗಿ ಇಂತಹದೊಂದು ಪ್ರದರ್ಶನ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲು. 2007 ರಲ್ಲಿ ದಕ್ಷಿಣ ಆಫ್ರಿಕಾ ತಂಡ ನಾಯಕರಾಗಿದ್ದ ಗೇಮ್​ ಸ್ಮಿತ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರ ಅಮೋಘ ಆಟದಿಂದ ಮೂಡಿ ಬಂದದ್ದು ಸತತ ನಾಲ್ಕು ಅರ್ಧಶತಕಗಳು. ಇದೀಗ ಸ್ಮಿತ್ ದಾಖಲೆಯನ್ನು ರನ್​ ಮಿಷಿನ್ ಕೊಹ್ಲಿ 5 ಅರ್ಧಶತಕಗಳ ಮೂಲಕ ಮುರಿದಿದ್ದಾರೆ.

2019ರ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 18 ಸಿಡಿಸಿದ್ದ ಕೊಹ್ಲಿ, ಉಳಿದ ಐದು ಪಂದ್ಯಗಳಲ್ಲೂ ಮಿಂಚಿದ್ದರು. ಈ ವೇಳೆ ಪಾಕಿಸ್ತಾನದ ವಿರುದ್ಧ 77, ಅಫ್ಘಾನಿಸ್ತಾನದ ವಿರುದ್ಧ 67, ಆಸ್ಟ್ರೇಲಿಯಾ ವಿರುದ್ಧ 82, ವೆಸ್ಟ್​ ಇಂಡೀಸ್​ ವಿರುದ್ಧ 72 ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 66 ರನ್​ಗಳು ಕೊಹ್ಲಿಯ ಬ್ಯಾಟ್​ನಿಂದ ಸಿಡಿಯಿತು.

ಸದ್ಯ ಏಕದಿನ ಕ್ರಿಕೆಟ್​​ನಲ್ಲಿ ರನ್​ ಮಳೆ ಸುರಿಸುತ್ತಿರುವ ಇಬ್ಬರು ಪ್ಲೇಯರ್​ಗಳೆಂದರೆ ಅದು ವಿರಾಟ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ. ಏಕದಿನ ರ್ಯಾಂಕಿಂಗ್​​​ನಲ್ಲಿ ನಂಬರ್​ 1 ಹಾಗೂ ನಂಬರ್ 2 ಬ್ಯಾಟ್ಸ್​​ಮನ್​ಗಳು ಈ ಇಬ್ಬರು ಆಟಗಾರರು. ಆದರೆ ಸದ್ಯ ಕೊಹ್ಲಿಗಿಂತಲೂ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ನಂಬರ್ 1 ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಏಕದಿನ ಕ್ರಿಕೆಟ್​​ನಲ್ಲಿ ಸದ್ಯ 890 ರೇಟಿಂಗ್ ಹೊಂದಿರುವ ವಿರಾಟ್​ ನಂಬರ್ 1 ಸ್ಥಾನ ಅಲಂಕರಿಸಿದ್ದಾರೆ. ನಂತರದಲ್ಲೇ ರೋಹಿತ್​ ಶರ್ಮಾ ಇದ್ದು, 839 ರೇಟಿಂಗ್​​ನೊಂದಿಗೆ  2 ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಸೆಂಚುರಿ ಮೇಲೆ ಸೆಂಚುರಿ ಬಾರಿಸುತ್ತಿರುವ ರೋಹಿತ್ ತನ್ನ ಅಂಕವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಅತ್ತ ಕಡೆ ಕೊಹ್ಲಿ ಕೂಡ ಪಾಯಿಂಟ್ ಏರಿಸುವಲ್ಲಿ ನಿರತರಾಗಿದ್ದಾರೆ.

ಹೀಗೆ ನಂಬರ್ 1 ಪಟ್ಟಕ್ಕೇರುವವರು ಯಾರೆಂಬ ಕುತೂಹಲಕಾರಿ ಪ್ರಶ್ನೆಗೆ ಟೀಂ ಇಂಡಿಯಾದಲ್ಲೇ ಉತ್ತರ ಇರುವುದು ವಿಶೇಷ. ಆದರೀಗ ವಿಶ್ವಕಪ್​ನಲ್ಲಿ ಸತತ ಶತಕ ಸಿಡಿಸುತ್ತಿರುವ ಹಿಟ್​ಮ್ಯಾನ್​ ಸದ್ಯದಲ್ಲೇ ವಿರಾಟ್​ ಕೊಹ್ಲಿ ಸೆಡ್ಡೊಡೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಷ್ಟು ಸುಲಭವಾಗಿ ತನ್ನ ನಂಬರ್ ಒನ್ ಪಟ್ಟವನ್ನು ಬಿಟ್ಟುಕೊಡದಿರಲು ರನ್​ ಮಿಷಿನ್ ಕೊಹ್ಲಿ ನಿರ್ಧರಿಸಿದಂತಿದೆ.  ಸದ್ಯದ ರೋಹಿತ್​ ಶರ್ಮಾರ ಅಮೋಘ ಫಾರ್ಮ್​ ಗಮನಿಸಿದರೆ ಶೀಘ್ರದಲ್ಲೇ ಕ್ಯಾಪ್ಟನ್ ಕೊಹ್ಲಿಯನ್ನು ಹಿಟ್​ಮ್ಯಾನ್ ಹಿಂದಕ್ಕೆ ಸರಿಸಲಿದ್ದಾರೆ ಎನ್ನಬಹುದು.

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ