Virat kohli: ಟಿ20 ವಿಶ್ವಕಪ್ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ನಿರ್ಣಾಯಕ..!

ನಾಯಕನಾಗಿ ಕೊಹ್ಲಿ ಟಿ20 ವಿಶ್ವಕಪ್​, ಏಕದಿನ ವಿಶ್ವಕಪ್​, ಚಾಂಪಿಯನ್​​ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೇರಿ 4 ಟೂರ್ನಿಗಳಲ್ಲಿ ಕೊನೆ ಹಂತದಲ್ಲಿ ಎಡವಿದ್ದಾರೆ. 2017 ರಲ್ಲಿ ಚಾಂಪಿಯನ್​ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದರೂ ಪಾಕ್ ವಿರುದ್ದ ಸೋಲುವ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದರು.

Virat kohli

Virat kohli

  • Share this:
    ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ನಾಯಕತ್ವದ ಚರ್ಚೆಗಳು ಶುರುವಾಗಿತ್ತು. ಇದಕ್ಕೆ ಬಹುಮುಖ್ಯ ಕಾರಣ ಇದುವರೆಗೆ ಕೊಹ್ಲಿ ಐಸಿಸಿ ಟ್ರೋಫಿ ಗೆಲ್ಲದಿರುವುದು. 2014 ರಿಂದ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಕೊಹ್ಲಿ ನಾಯಕತ್ವದಲ್ಲಿ ಭಾರತ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ.

    ನಾಯಕನಾಗಿ ಕೊಹ್ಲಿ ಟಿ20 ವಿಶ್ವಕಪ್​, ಏಕದಿನ ವಿಶ್ವಕಪ್​, ಚಾಂಪಿಯನ್​​ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೇರಿ 4 ಟೂರ್ನಿಗಳಲ್ಲಿ ಕೊನೆ ಹಂತದಲ್ಲಿ ಎಡವಿದ್ದಾರೆ. 2017 ರಲ್ಲಿ ಚಾಂಪಿಯನ್​ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದರೂ ಪಾಕ್ ವಿರುದ್ದ ಸೋಲುವ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದರು.

    ಇನ್ನು 2019 ರ ವಿಶ್ವಕಪ್​​ನಲ್ಲಿ ಸೆಮಿಫೈನಲ್​ನಲ್ಲಿ ಎಡವಿದ ಟೀಮ್ ಇಂಡಿಯಾ ಟ್ರೋಫಿಗೆ ಮುತ್ತಿಕ್ಕುವ ಅವಕಾಶವನ್ನು ಕಳೆದುಕೊಂಡಿತು. ಇದೀಗ ಕಿವೀಸ್​ ಪಡೆ ವಿರುದ್ದ ಸೋಲುವ ಮೂಲಕ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಕನಸು ಕೂಡ ಭಗ್ನಗೊಂಡಿದೆ. ಇದರೊಂದಿಗೆ ಕೊಹ್ಲಿ ನಾಯಕತ್ವದ ಬಗ್ಗೆ ಟೀಕೆಗಳು ಮೂಡಿ ಬರಲಾರಂಭಿಸಿದೆ.

    ಇದಾಗ್ಯೂ ಕೊಹ್ಲಿ ಮುಂದಿನ ಟಿ20 ವಿಶ್ವಕಪ್​ವರೆಗೂ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದಿದ್ದಾರೆ ಮಾಜಿ ಬಿಸಿಸಿಐ ಕಾರ್ಯಾಚರಣೆಗಳ ಜನರಲ್ ಮ್ಯಾನೇಜರ್ ಸಬಾ ಕರೀಮ್. ಟೀಮ್ ಇಂಡಿಯಾ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಮಾಜಿ ವಿಕೆಟ್ ಕೀಪರ್, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವಿರಾಟ್ ಕೊಹ್ಲಿ ಅವರ ನಾಯಕತ್ವಕ್ಕೆ ಮಹತ್ವದ್ದಾಗಿದೆ.

    ಕೊಹ್ಲಿ ಮೇಲೆ ಒತ್ತಡ ಹೆಚ್ಚುತ್ತಿದೆ, ಅವರು ಇದುವರೆಗೂ ಒಂದೇ ಒಂದು ಐಸಿಸಿ ಟ್ರೋಪಿ ಗೆದ್ದಿಲ್ಲ ಎಂಬ ಅವರಿಗೂ ಅರಿವಿದೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್ ಗೆಲ್ಲುವುದು ಅವರ ಗುರಿಯಾಗಿದೆ. ಒಂದು ವೇಳೆ ಅವರು ಟಿ20 ವಿಶ್ವಕಪ್ ಗೆದ್ದರೆ ನಾಯಕತ್ವ ಮುಂದುವರೆಯಲಿದೆ. ಇದಾಗ್ಯೂ ಮತ್ತೊಮ್ಮೆ ವಿಫಲರಾದರೆ ವಿಭಜಿತ ನಾಯಕತ್ವ ಜಾರಿಗೆ ಬರಲಿದೆ ಎಂಬ ಸುಳಿವು ನೀಡಿದ್ದಾರೆ ಸಬಾ ಕರೀಮ್.

    ಮೂರು ಸ್ವರೂಪದ ಕ್ರಿಕೆಟ್​ಗೆ ವಿಭಿನ್ನ ಶೈಲಿಗಳು ಮತ್ತು ಆಲೋಚನೆಗಳು ಅಗತ್ಯವಿದೆ. ಹೀಗಾಗಿ ಟಿ20 ವಿಶ್ವಕಪ್​ ಗೆಲುವು ಕೊಹ್ಲಿ ಪಾಲಿಗೆ ನಿರ್ಣಾಯಕವಾಗಲಿದೆ. ಏಕೆಂದರೆ ಒಬ್ಬ ಕ್ಯಾಪ್ಟನ್ ಮಾತ್ರ ಇದ್ದರೆ, ಅದು ಅವರ ಮೇಲೆ ಹೆಚ್ಚು ಹೊರೆಯಾಗುತ್ತದೆ. ಪ್ರತಿ ಸ್ವರೂಪಕ್ಕೂ ಹೊಸ ಮತ್ತು ನವೀನ ಆಲೋಚನೆಗಳು ಬೇಕಾಗುತ್ತವೆ. ಹೀಗಾಗಿ ಏಕದಿನ, ಟಿ20 ಹಾಗೂ ಟೆಸ್ಟ್​ ತಂಡಗಳಿಗೆ ಬೇರೆ ನಾಯಕರನ್ನು ಆಯ್ಕೆ ಮಾಡುವುದು ಉತ್ತಮ ಎಂದಿದ್ದಾರೆ ಬಿಸಿಸಿಐ ಮಾಜಿ ಆಪರೇಷನ್ ಜನರಲ್ ಮ್ಯಾನೇಜರ್.

    ಸಬಾ ಕರೀಮ್ ಬಿಸಿಸಿಐ ಜೊತೆ ಕಾರ್ಯನಿರ್ವಹಿಸುತ್ತಿದ್ದ ವೇಳೆಯೇ ಕೊಹ್ಲಿಯ ನಾಯಕತ್ವ ಬದಲಾವಣೆ ಬಗ್ಗೆ ಕೂಗುಗಳು ಕೇಳಿಬಂದಿದ್ದವು. ಅಲ್ಲದೆ ಮೂರು ಸ್ವರೂಪಕ್ಕೂ ಭಿನ್ನ ನಾಯಕರನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಬಿಸಿಸಿಐ ಕೊಹ್ಲಿ ಅವರನ್ನೇ ಮುಂದುವರೆಸಿದ್ದರು. ಇದೀಗ ಟೆಸ್ಟ್ ಚಾಂಪಿಯನ್​ಶಿಪ್ ಸೋಲು ಮತ್ತೊಮ್ಮೆ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇದರ ಬೆನ್ನಲ್ಲೇ ಸಬಾ ಕರೀಮ್ ಅವರು ಕೂಡ ಟಿ20 ವಿಶ್ವಕಪ್ ಫಲಿತಾಂಶ ಕೊಹ್ಲಿ ನಾಯಕತ್ವವನ್ನು ನಿರ್ಧರಿಸಲಿದೆ ಎಂದಿರುವುದು ನಾಯಕತ್ವ ಬದಲಾವಣೆ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.



    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:zahir
    First published: