T20 World Cup- ಗೆಲುವಿನ ಲಯಕ್ಕೆ ಮರಳಲು ಭಾರತ ಏನು ಮಾಡಬೇಕು? ಇಲ್ಲಿವೆ ತಜ್ಞರ ಸಲಹೆಗಳು

India at World Cup: ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿರುವ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯಗಳನ್ನ ಗೆಲ್ಲಲು ಕೆಲ ಕ್ರಮಗಳನ್ನ ಕೈಗೊಳ್ಳುವುದು ಅನಿವಾರ್ಯ ಎನ್ನುತ್ತಾರೆ ತಜ್ಞರು.

ಭಾರತದ ಆಟಗಾರರು

ಭಾರತದ ಆಟಗಾರರು

 • Share this:
  ದುಬೈ,: ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿದ, ಹಾಗೂ ವಾರ್ಮಪ್ ಮ್ಯಾಚ್​ಗಳಲ್ಲಿ ಪ್ರಬಲ ತಂಡಗಳಿಗೆ ಸೋಲುಣಿಸಿ ಅತ್ಮವಿಶ್ವಾಸದಲ್ಲಿದ್ದ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯ ಸೋಲನುಭವಿಸಿತು. ವಿಶ್ವಕಪ್ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಪಾಕಿಸ್ತಾನದೆದುರು ಭಾರತ ಸೋತಿತು. ಇದು ಮಾಮೂಲಿಯ ಸೋಲಲ್ಲ, ಜಂಘಾಬಲ ಉಡುಗಿಸುವ ಸೋಲು. ಎಲ್ಲಾ ವಿಭಾಗದಲ್ಲೂ ಭಾರತವನ್ನ ಪಾಕಿಸ್ತಾನ ಸಲೀಸಾಗಿ ಸೋಲಿಸಿತ್ತು. ಆರಂಭಿಕ ಆಘಾತ ಅನುಭವಿಸಿದ ಬಳಿಕ ಟೀಮ್ ಇಂಡಿಯಾ ಸರಿಯಾದ ರೀತಿಯಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಬೌಲಿಂಗ್ ಹಲ್ಲು ಕಿತ್ತ ಹಾವಿನಂತಾಗಿತ್ತು.

  ಐಪಿಎಲ್​ನಲ್ಲಿ ಮಧ್ಯಮಗತಿಯ ವೇಗದ ಬೌಲಿಂಗ್​ಗೆ ಹೊಂದಿಕೊಂಡಿದ್ದ ಭಾರತೀಯ ಬ್ಯಾಟುಗಾರರು ಪಾಕಿಸ್ತಾನದ ರಣವೇಗದ ಬೌಲಿಂಗ್ ದಾಳಿಗೆ ಸರಿಯಾಗಿ ಸ್ಪಂದಿಸಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಹೇಳಿದ್ದರು. ಅದು ಸರಿಯಾದುದೇ. ಈಗ ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧ ಇದೆ. ಇದಾದ ಬಳಿಕ ನಡೆಯುವ ಪಂದ್ಯಗಳು ತುಸು ಸುಲಭವಾಗಿರುವ ನಿರೀಕ್ಷೆ ಇರುವುದರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಕ್ವಾರ್ಟರ್​ಫೈನಲ್ ಎಂದೇ ಪರಿಗಣಿಸಲು ಅಡ್ಡಿ ಇಲ್ಲ. ನ್ಯೂಜಿಲೆಂಡ್ ವಿರುದ್ಧ ಭಾರತ ಗೆಲ್ಲಲು ಏನು ಮಾಡಬೇಕು? ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆದ ತಪ್ಪುಗಳನ್ನ ತಿದ್ದಿಕೊಳ್ಳುವುದು ಹೇಗೆ? ಕೆಲ ತಜ್ಞರು ಕೊಟ್ಟ ಸಲಹೆ ಇಲ್ಲಿದೆ:

  1) ತಂಡದಲ್ಲಿ ಬದಲಾವಣೆ: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅವರನ್ನ ಸೇರ್ಪಡೆ ಮಾಡಿದ್ದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಹಾರ್ದಿಪ್ ಪಾಂಡ್ಯ ಬೌಲಿಂಗ್ ಮಾಡುತ್ತಿಲ್ಲ. ಅವರು ಸ್ಪೆಷಲಿಸ್ಟ್ ಬ್ಯಾಟರ್ ಕೂಡ ಅಲ್ಲ. ಹೀಗಾಗಿ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬದಲು ಇಶಾನ್ ಕಿಶನ್ ಅವರನ್ನ ಸೇರಿಸಿಕೊಳ್ಳಬೇಕು ಎಂದು ಸುನೀಲ್ ಗವಾಸ್ಕರ್ ಸೇರಿದಂತೆ ಹಲವರು ಒತ್ತಾಯಿಸಿದ್ಧಾರೆ.

  ಹಾಗೆಯೇ, ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ ಅವರನ್ನ ಆಡಿಸಬೇಕು ಎಂಬ ಒತ್ತಾಯ ಬಂದಿದೆ. ವರುಣ್ ಚಕ್ರವರ್ತಿ ಬದಲು ರಾಹುಲ್ ಚಾಹರ್ ಅಥವಾ ಆರ್ ಅಶ್ವಿನ್ ಅವರನ್ನ ಆಡಿಸಬೇಕು ಎಂಬ ಸಲಹೆಯೂ ಇದೆ. ಆದರೆ, ಪಾಕಿಸ್ತಾನ ವಿರುದ್ಧ ಪರಿಣಾಮಕಾರಿ ಎನಿಸದ ವರುಣ್ ಚಕ್ರವರ್ತಿ ನ್ಯೂಜಿಲೆಂಡ್ ವಿರುದ್ಧ ಎಫೆಕ್ಟಿವ್ ಆಗಬಹುದು ಎಂಬ ಅಭಿಪ್ರಾಯವೂ ಇದೆ.

  ಇದನ್ನೂ ಓದಿ: T20 records- ಟಿ20 ಕ್ರಿಕೆಟ್​ನಲ್ಲಿ ಸೋಲೇ ಕಾಣದ 2 ತಂಡಗಳು; 10 ಇಂಟರೆಸ್ಟಿಂಗ್ ಸಂಗತಿಗಳು

  2) ಫುಟ್ ವರ್ಕ್​ನತ್ತ ಗಮನ: ಶಾಹೀನ್ ಅಫ್ರಿದಿ ಮೊದಲಾದ ಪಾಕಿಸ್ತಾನದ ವೇಗದ ಬೌಲರ್​ಗಳನ್ನ ಎದುರಿಸಲು ಭಾರತದ ಬ್ಯಾಟರ್ಸ್ ಪರದಾಡಿದ್ದು ಸತ್ಯ. ಇದರ ಬಗ್ಗೆ ವಿವಿಎಸ್ ಲಕ್ಷ್ಮಣ್ ವಿಶ್ಲೇಷಣೆ ಕುತೂಹಲಕಾರಿ ಆಗಿದೆ. ಶಾಹೀನ್ ಅಫ್ರಿದಿ ಎಡಗೈ ವೇಗದ ಬೌಲರ್. ಇವರು ಇನ್ ಸ್ವಿಂಗ್, ಔಟ್ ಸ್ವಿಂಗ್ ಮಾಡುವುದರಲ್ಲಿ ನಿಸ್ಸೀಮ. ಇವರ ಅದ್ಬುತ ಸ್ವಿಂಗ್ ಬೌಲಿಂಗ್​ಗೆ ರೋಹಿತ್ ಮತ್ತು ರಾಹುಲ್ ಇಬ್ಬರೂ ಇನ್-ಫಾರ್ಮ್ ಬ್ಯಾಟರ್ಸ್ ಔಟಾದರು.

  ಶಾಹೀನ್ ಬೌಲಿಂಗ್ ಎದುರಿಸುವಾಗ ರಾಹುಲ್ ಮತ್ತು ರೋಹಿತ್ ಮಾಡಿದ ತಪ್ಪುಗಳನ್ನ ಲಕ್ಷ್ಮಣ್ ಎತ್ತಿ ತೋರಿಸಿದ್ದಾರೆ. ಆದರೆ, ಇಬ್ಬರೂ ಕೂಡ ಆಫ್ ಸ್ಟಂಪ್ ಕಡೆ ಕಾಲು ಹಾಕಿ ಆಡಲು ಯತ್ನಿಸಿ ಔಟಾದರು. ಎಡಗೈ ಬೌಲರ್ ಎಸೆಯುವ ಚೆಂಡು ಇನ್​ಸ್ವಿಂಗ್ ಆಗುವುದು ಸಾಮಾನ್ಯ. ಅಂಥ ಎಸೆತವನ್ನ ಎದುರಿಸುವಾಗ ಬ್ಯಾಟುಗಾರನ ಫುಟ್ವರ್ಕ್ ಸರಿಯಾಗಿರಬೇಕು ಎಂದು ಲಕ್ಷ್ಮಣ್ ಹೇಳಿದ್ಧಾರೆ. ಟೀಮ್ ಇಂಡಿಯಾ ಬ್ಯಾಟುಗಾರರು ಈ ನಿಟ್ಟಿನಲ್ಲಿ ವರ್ಕೌಟ್ ಮಾಡುತ್ತಿದ್ದಾರೆಂದು ಸಮಾಧಾನಕರ ವಿಷಯವನ್ನೂ ವಿವಿಎಸ್ ತಿಳಿಸಿದ್ಧಾರೆ.

  ಇದನ್ನೂ ಓದಿ: Ind vs Pak- ನಾನು ಕಂಡ ಅತ್ಯುತ್ತಮ ಎಸೆತಗಳವು: ಆ ಸೂಪರ್ ಓವರ್​ಗೆ ಹೇಡನ್ ಫುಲ್ ಮಾರ್ಕ್ಸ್

  3) ಸಿಂಗಲ್ಸ್​ನತ್ತ ಗಮನ: ಟಿ20 ಕ್ರಿಕೆಟ್ ಅಂದರೆ ಅಕ್ಷರಶಃ ಹೊಡಿಬಡಿ ಆಟ. ಆದರೆ, ಯುಎಇಯಲ್ಲಿರುವ ಪಿಚ್​ಗಳು ಸ್ವಲ್ಪ ಬೇರೆ ತೆರನಾಗಿವೆ. ಇಲ್ಲಿ ಸಿಕ್ಸರ್, ಬೌಂಡರಿ ಭಾರಿಸುವುದು ಅಷ್ಟು ಸುಲಭವಲ್ಲ ಎಂಬುದು ಹಿಂದಿನ ಹಲವು ಪಂದ್ಯಗಳೇ ನಿದರ್ಶನವಾಗಿವೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಿಂಗಲ್ಸ್ ಮೂಲಕ ರನ್ ಗಳಿಸಿದ ರೀತಿಯಲ್ಲಿ ಇತರ ಭಾರತೀಯ ಬ್ಯಾಟರ್ಸ್ ಆಡಬೇಕು. ಆಗ ಸ್ಕೋರ್ ಕೂಡ ಹೆಚ್ಚುತ್ತಾ ಹೋಗುತ್ತದೆ. ಬೌಲರ್ ಮತ್ತು ಫೀಲ್ಡರ್​ಗಳ ಮೇಲೆ ಒತ್ತಡವೂ ಬೀಳುತ್ತದೆ.

  ಸಿಕ್ಸರ್​ಗಳ ಸರದಾರರೇ ಇರುವ ವೆಸ್ಟ್ ಇಂಡೀಸ್ ತಂಡದ ಉದಾಹರಣೆಯನ್ನೇ ನೋಡಿ. ಇದು ಸಿಕ್ಸರ್ ಫಾರ್ಮುಲಾ ಪಾಲಿಸುವ ತಂಡ. ಅಂದರೆ ಒಂದು ಓವರ್​ನಲ್ಲಿ ಒಂದು ಸಿಕ್ಸರ್ ಹೊಡೆದರೆ ಉಳಿದ ಎಸೆತಗಳನ್ನ ಆರಾಮವಾಗಿ ಎದುರಿಸಬಹುದು ಎಂಬ ಲೆಕ್ಕಾಚಾರ ಇರುವ ತಂಡ. ಆದರೆ, ಅದರ ಈ ತಂತ್ರ ಈ ವಿಶ್ವಕಪ್​ನಲ್ಲಿ ವಿಫಲವಾದಂತಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ ತಂಡಗಳ ಬ್ಯಾಟರ್ಸ್ ಹೆಚ್ಚು ಸಿಂಗಲ್ಸ್ ತೆಗೆದುಕೊಂಡೇ ಪಂದ್ಯಗಳನ್ನ ಗೆದ್ದಿದ್ದಾರೆ.
  Published by:Vijayasarthy SN
  First published: