Video- ಕಾಲಿನ ಶೂನಿಂದ ಬಿಯರ್ ಕುಡಿದ ಆಸ್ಟ್ರೇಲಿಯಾ ಕ್ರಿಕೆಟಿಗರು; ಇದೆಂಥ ಸೆಲಬ್ರೇಷನ್..!

T20 World Cup: ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಂಭ್ರಮಾಚರಣೆಯ ಭಾಗವಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಶೂಗೆ ಬಿಯರ್ ತುಂಬಿಸಿ ಕುಡಿದು ಕುಣಿದು ಕುಪ್ಪಳಿಸಿದ್ದಾರೆ. ಈ ರೀತಿ ಶೂನಲ್ಲಿ ಡ್ರಿಂಕ್ಸ್ ಮಾಡುವುದು ಅದೃಷ್ಟವೆಂಬ ನಂಬಿಕೆ ಅಲ್ಲಿದೆ.

ಆಸ್ಟ್ರೇಲಿಯಾ ಆಟಗಾರರು ಶೂನಿಂದ ಡ್ರಿಂಕ್ಸ್ ಮಾಡುತ್ತಿರುವುದು

ಆಸ್ಟ್ರೇಲಿಯಾ ಆಟಗಾರರು ಶೂನಿಂದ ಡ್ರಿಂಕ್ಸ್ ಮಾಡುತ್ತಿರುವುದು

 • Share this:
  ದುಬೈ: ನಿನ್ನೆ ನ್ಯೂಜಿಲೆಂಡ್ ವಿರುದ್ಧ ಗೆದ್ದು ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಎತ್ತಿಹಿಡಿದು (Australia the new T20 World Cup champions) ಐತಿಹಾಸಿಕ ಸಾಧನೆ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟಿಗರು ರಾತ್ರಿಯಿಡೀ ಭರ್ಜರಿ ಪಾರ್ಟಿ ಮಾಡಿದ್ದಾರೆ. ನಮಗೆ ಅತಿರೇಕ ಎನಿಸುವ, ಹುಚ್ಚಾಟದಂತೆ ತೋರುವ ಸಂಭ್ರಮಾಚರಣೆಗಳನ್ನ ಮಾಡಿದ್ದಾರೆ. ವಿಶ್ವಕಪ್ ಗೆದ್ದ ಖುಷಿಯಲ್ಲಿದ್ದ ಆಟಗಾರರು ಶೂನಿಂದ ಬಿಯರ್ ಕುಡಿದು (Drinking beer from Shoe) ಮಜಾ ಮಾಡಿದ್ದಾರೆ. ಈ ದೃಶ್ಯಗಳ ವಿಡಿಯೋವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC- ಐಸಿಸಿ) ಇಂದು ಸೋಮವಾರ ತನ್ನ ಸೋಲಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

  ಈ ವಿಡಿಯೋದಲ್ಲಿ ಮೂವರು ಆಸ್ಟ್ರೇಲಿಯನ್ ಕ್ರಿಕೆಟಿಗರು ಶೂನಿಂದ ಬಿಯರ್ ಕುಡಿದು ಖುಷಿ ಪಡುತ್ತಿರುವುದನ್ನು ಕಾಣಬಹುದು. ಪಾಕಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಲಿನ ಹೀರೋ ಎನಿಸಿದ್ದ ಮ್ಯಾಥ್ಯೂ ವೇಡ್ (Matthew Wade) ಅವರು ಮೊದಲು ಈ ಹುಚ್ಚಾಟ ಪ್ರಾರಂಭಿಸಿದ್ದು. ತಮ್ಮ ಎಡಕಾಲಿನ ಶೂವನ್ನು ಕಳಚಿ ಅದಕ್ಕೆ ಬಿಯರ್ ತುಂಬಿಸಿ ಕುಡಿದರು. ಅಲ್ಲೇ ಇದ್ದ ಮಾರ್ಕಸ್ ಸ್ಟಾಯ್ನಿಸ್ (Marcus Stoinis) ಅವರು ಆ ಶೂ ಪಡೆದು ಅದರ ಮೇಲೆಲ್ಲಾ ಬಿಯರ್ ಸಿಂಪಡಿಸಿ ನಂತರ ಶೂನೊಳಗೆ ಬಿಯರ್ ತುಂಬಿಸಿ ಕುಡಿದರು. ನಂತರದ್ದು ನಾಯಕ ಆರೋನ್ ಫಿಂಚ್ (Aaron Finch) ಸರದಿ.

  ಬಳಿಕ ಮ್ಯಾಥ್ಯೂ ವೇಡ್ ತಮ್ಮ ಶೂವನ್ನು ವಾಪಸ್ ಪಡೆದು ಕಾಲಿಗೆ ಹಾಕಿಕೊಂಡು ಕುಣಿಯುವುದನ್ನು ಮುಂದುವರಿಸಿದರು. ಆಸ್ಟ್ರೇಲಿಯಾದ ಇತರ ಆಟಗಾರರು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಭಾನುವಾರ ರಾತ್ರಿಯಿಡೀ ಕಾಂಗರೂಗಳ ತಂಡದ ಆಟಗಾರರಿಗೆ ಪಾರ್ಟಿಯೋ ಪಾರ್ಟಿ.


  ಶೂನಿಂದ ಡ್ರಿಂಕ್ಸ್ ಕುಡಿಯುವುದು ಸಂಪ್ರದಾಯ:

  ಯಾವುದೇ ದೊಡ್ಡ ಪಾರ್ಟಿ ಇದ್ದರೆ ಆಸ್ಟ್ರೇಲಿಯಾದಲ್ಲಿ ಈ ರೀತಿ ಶೂನಿಂದ ಡ್ರಿಂಕ್ಸ್ ಕುಡಿಯುವುದು ಸಂಪ್ರದಾಯವಾಗಿ ಬಂದುಬಿಟ್ಟಿದೆ. ಇದರಿಂದ ಸಂಪತ್ತು, ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕೆ Shoey ಎಂದು ಬಣ್ಣಿಸುತ್ತಾರೆ.

  ಆಸ್ಟ್ರೇಲಿಯಾ ನೂತನ ಟಿ20 ಚಾಂಪಿಯನ್:

  ಸಾಂಪ್ರದಾಯಿಕ 50 ಓವರ್ ಕ್ರಿಕೆಟ್​ನ ವಿಶ್ವಕಪ್ ಅನ್ನು ಐದು ಬಾರಿ ಗೆದ್ದಿರುವ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆದ್ದದ್ದು ಇದೇ ಮೊದಲು. ಸೂಪರ್-12 ಹಂತದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು, ಸ್ವಲ್ಪ ಅದೃಷ್ಟದ ನೆರವಿನಿಂದ ಸೆಮಿಫೈನಲ್ ತಲುಪಿದ್ದ ಆಸ್ಟ್ರೇಲಿಯಾ ತಂಡ ನಾಕೌಟ್ ಹಂತದಲ್ಲಿ ತನ್ನ ಉಗ್ರ ರೂಪವನ್ನು ತೋರಿತು.

  ಸೆಮಿಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ರೋಚಕ ಗೆಲುವು ಪಡೆಯಿತು. ಪಂದ್ಯದ ಮುಕ್ಕಾಲು ಅವಧಿ ಪಾಕಿಸ್ತಾನವೇ ಮೇಲುಗೈ ಸಾಧಿಸಿದ್ದರೂ ಆಸ್ಟ್ರೇಲಿಯಾ ಕೊನೆಯ ಕೆಲ ಓವರ್​ಗಳಲ್ಲಿ ಗೆಲುವಿನ ಹಳಿ ಬದಲಿಸಿತು. ಮ್ಯಾಥ್ಯೂ ವೇಡ್ ಆರ್ಭಟಕ್ಕೆ ಪಾಕಿಸ್ತಾನೀಯರು ಸೋಲೊಪ್ಪಬೇಕಾಯಿತು.

  ಇದನ್ನೂ ಓದಿ: Matthew Wade: ಮರಗೆಲಸದಿಂದ ವಿಶ್ವಕಪ್​ನವರೆಗೆ..ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ವೇಡ್ ಕಥೆ ಗೊತ್ತಾ?

  ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ತುಸು ನಿರಾಯಾಸ ಗೆಲುವು ಪಡೆಯಿತು. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ಅದ್ಭುತ ಆಟವನ್ನು ಮಂಕಾಗಿಸುವ ರೀತಿಯಲ್ಲಿ ಡೇವಿಡ್ ವಾರ್ನರ್, ಮಾರ್ಕಸ್ ಸ್ಟಾಯ್ನಿಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಆಡಿ ಪರ್ಫೆಕ್ಟ್ ಆಗಿ ಚೇಸಿಂಗ್ ನಿಭಾಯಿಸಿದರು.

  ಟಾಸೇ ಬಾಸ್:

  ಧೈರ್ಯಶಾಲಿಗಳಿಗೆ ಲಕ್ ಹೆಚ್ಚು ಎನ್ನುತ್ತಾರಲ್ಲ ಹಾಗೆ, ಆಸ್ಟ್ರೇಲಿಯಾ ತಂಡಕ್ಕೆ ಈ ವಿಶ್ವಕಪ್​ನಲ್ಲಿ ಟಾಸ್ ರೂಪದಲ್ಲಿ ಅದೃಷ್ಟ ಕುಲಾಯಿಸಿದಂತಿತ್ತು. ನಾಯಕ ಆರೋನ್ ಫಿಂಚ್ ತಮ್ಮ ಬ್ಯಾಟಿಂಗ್​ನಲ್ಲಿ ಆರ್ಭಟ ಇಲ್ಲದೇ ಹೋದರೂ ಟಾಸ್​ನಲ್ಲಿ ಮಿಂಚಿದರು. ಏಳು ಪಂದ್ಯಗಳಲ್ಲಿ ಅವರು ಟಾಸ್ ಸೋತದ್ದು ಒಮ್ಮೆ ಮಾತ್ರ.

  ಇದನ್ನೂ ಓದಿ: New Zealand- ಮನುಷ್ಯರಿಗಿಂತ ಕುರಿಗಳೇ ಹೆಚ್ಚು; ನ್ಯೂಜಿಲೆಂಡ್ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳು

  ಯುಎಇಯಲ್ಲಿ ನಡೆದ ಪಂದ್ಯಗಳಲ್ಲಿ ಟಾಸ್ ಬಹಳ ಪ್ರಮುಖ ಪಾತ್ರ ವಹಿಸಿದ್ದು ಅಂಕಿ ಅಂಶಗಳಿಂದ ಸಾಬೀತಾಗಿದೆ. ದುರ್ಬಲ ತಂಡಗಳ ಮೇಲೆ ಪ್ರಬಲ ತಂಡಗಳು ಟಾಸ್ ಸೋತರೂ ಗೆಲುವು ಪಡೆದದ್ದು ಬಿಟ್ಟರೆ ಉಳಿದಂತೆ ಸಮಬಲದ ತಂಡಗಳ ನಡುವಿನ ಸ್ಪರ್ಧೆಯಲ್ಲಿ ಹೆಚ್ಚಿನ ಬಾರಿ ಟಾಸ್ ನಿರ್ಣಾಯಕ ಎನಿಸಿತು. ಪಾಕಿಸ್ತಾನ ತಂಡ ಸೂಪರ್-12 ಹಂತದಲ್ಲಿ ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆದ್ದಿತಾದರೂ ಸೆಮಿಫೈನಲ್​ನಲ್ಲಿ ಕಾಂಗರೂಗಳ ಎದುರು ಟಾಸ್ ಮತ್ತು ಮ್ಯಾಚ್ ಎರಡನ್ನೂ ಸೋತಿತು.

  ಫೈನಲ್ ಪಂದ್ಯದ ಆತಿಥ್ಯ ವಹಿಸಿದ್ದ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಗಳ ಪೈಕಿ ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ತಂಡ ಸೋತಿದ್ದು ಒಮ್ಮೆ ಮಾತ್ರ. ಅದೂ ದುರ್ಬಲ ಸ್ಕಾಟ್​ಲೆಂಡ್ ತಂಡ. ಉಳಿದಂತೆ ಟಾಸ್ ಗೆದ್ದವರೇ ವಿಜಯಶಾಲಿಗಳಾಗಿದ್ದಾರೆ.
  Published by:Vijayasarthy SN
  First published: