ಅಬುಧಾಬಿ: ಶ್ರೀಲಂಕಾ ಕ್ರಿಕೆಟ್ ತಂಡ ಸೂಪರ್-12 ಹಂತ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಲಂಕಾ ಸಿಂಹಗಳು ಐರ್ಲೆಂಡ್ ತಂಡವನ್ನು 70 ರನ್ಗಳಿಂದ ಬಗ್ಗುಬಡಿದಿವೆ. ಗೆಲ್ಲಲು 171 ರನ್ ಗುರಿ ಪಡೆದ ಐರ್ಲೆಂಡ್ ತಂಡದ ಇನ್ನಿಂಗ್ಸ್ 101 ರನ್ಗೆ ಅಂತ್ಯಗೊಂಡಿತು. ನಾಯಕ ಆಂಡಿ ಬಾಲ್ಬರ್ನೀ ಮತ್ತು ಕರ್ಟಿಸ್ ಕ್ಯಾಂಫರ್ ನಡುವೆ 4ನೇ ವಿಕೆಟ್ಗೆ 53 ರನ್ ಜೊತೆಯಾಟ ಬಂದದ್ದು ಬಿಟ್ಟರೆ ಐರ್ಲೆಂಡ್ ಚೇಸಿಂಗ್ನಲ್ಲಿ ಯಾವ ಶಕ್ತಿಯೂ ಇರಲಿಲ್ಲ. ಲಂಕನ್ನರ ಬೌಲಿಂಗ್ ದಾಳಿಗೆ ಐರ್ಲೆಂಡ್ ಬ್ಯಾಟರ್ಸ್ ಬಳಿ ಉತ್ತರ ಇರಲಿಲ್ಲ.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿತು. 8 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಗೆ ಹೋಗಿತ್ತು. ಜೋಷ್ ಲಿಟಲ್ 2 ಬಾಲ್ಗೆ 2 ವಿಕೆಟ್ ಪಡೆದು ಅಪಾಯಕಾರಿ ಎನಿಸಿದ್ದರು. ಆಗ ಆರ್ಸಿಬಿ ಆಟಗಾರ ವನಿಂದು ಹಸರಂಗ ಮತ್ತು ಪಥುಮ್ ನಿಸಾಂಕ ಇಬ್ಬರೂ ಅರ್ಧಶತಕ ಗಳಿಸಿದ್ದಲ್ಲದೆ 4ನೇ ವಿಕೆಟ್ಗೆ 123 ರನ್ ಜೊತೆಯಾಟ ಆಡಿದರು. ಆ ಸಂದರ್ಭದಲ್ಲಿ ಶ್ರೀಲಂಕಾ 180 ರನ್ ಗಡಿ ದಾಟುವ ಕುರುಹು ತೋರಿತ್ತು. ಆದರೆ, ಹಸರಂಗ ಔಟಾದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್ಸ್ ಹೆಚ್ಚು ರನ್ ಗಳಿಸಲಿಲ್ಲ. ದಾಸುನ್ ಶಾಣಕ ಕೊನೆಕೊನೆಯಲ್ಲಿ ಮಿಂಚಿನ ಆಟವಾಡಿದ್ದರಿಂದ ಲಂಕಾ ಸ್ಕೋರು 170 ರನ್ ಗಡಿ ದಾಟಲು ಸಾಧ್ಯವಾಯಿತು.
ಶುಕ್ರವಾರ ಐರ್ಲೆಂಡ್ ಮತ್ತು ನಮೀಬಿಯಾ ಮಧ್ಯೆ ಡೂ ಆರ್ ಡೈ ಮ್ಯಾಚ್:
ಶ್ರೀಲಂಕಾಗೆ ಇದು ಸತತ ಎರಡನೇ ಗೆಲುವಾಗಿದೆ. ಭರ್ಜರಿ ರನ್ ರೇಟ್ ಜೊತೆಗೆ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಲಂಕಾ ಸೂಪರ್-12 ಹಂತ ಪ್ರವೇಶಿಸುವುದು ಖಚಿತವಾಗಿದೆ. ಶುಕ್ರವಾರ ನಡೆಯುವ ಕೊನೆಯ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ಎದುರು ಶ್ರೀಲಂಕಾ ಸೋತರೂ ಸೂಪರ್-12 ಪ್ರವೇಶಕ್ಕೆ ಅಡ್ಡಿ ಇರುವುದಿಲ್ಲ. ಇನ್ನೊಂದೆಡೆ ಐರ್ಲೆಂಡ್ ಮತ್ತು ನಮೀಬಿಯಾ ಮಧ್ಯೆ ಪೈಪೋಟಿ ಇದ್ದು, ಅವರಿಬ್ಬರಲ್ಲಿ ಗೆದ್ದವರು ಸೂಪರ್-12 ಹಂತ ಪ್ರವೇಶಿಸಲಿದ್ದಾರೆ.
ನೆದರ್ಲೆಂಡ್ಸ್ಗೆ ಸೋಲುಣಿಸಿದ ನಮೀಬಿಯಾ:
ದಕ್ಷಿಣ ಆಫ್ರಿಕಾ ಮೂಲದ ಡೇವಿಡ್ ವಿಯೆಸ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ನಮೀಬಿಯಾ ತಂಡ ಈ ವಿಶ್ವಕಪ್ನಲ್ಲಿ ಚೊಚ್ಚಲ ಗೆಲುವು ಪಡೆದಿದೆ. ಆಮದು ಆಟಗಾರರನ್ನೇ ಹೆಚ್ಚಾಗಿ ಹೊಂದಿರುವ ನಮೀಬಿಯಾ ಇಂದು ನೆದರ್ಲೆಂಡ್ಸ್ ತಂಡದ ವಿರುದ್ಧ 6 ವಿಕೆಟ್ಗಳಿಂದ ಜಯಭೇರಿ ಭಾರಿಸಿತು. ಗೆಲ್ಲಲು ಪಡೆದ 165 ರನ್ ಗುರಿಯನ್ನು ನಮೀಬಿಯಾ ಒಂದು ಓವರ್ ಬಾಕಿ ಇರುವಂತೆ ಮುಟ್ಟಿತು. ಡೇವಿಡ್ ವಿಯೆಸೆ ಅಜೇಯ 66 ರನ್ ಗಳಿಸಿ ತಮ್ಮ ತಂಡಕ್ಕೆ ಗೆಲುವಿನ ಪತಾಕೆ ಹಾರಿಸಿದರು. ಕ್ರೆಗ್ ವಿಲಿಯಮ್ಸ್ ಹೊರತುಪಡಿಸಿ ಇಂದು ಕ್ರೀಸಿಗೆ ಬಂದ ಎಲ್ಲಾ ನಮೀಬಿಯಾ ಬ್ಯಾಟರ್ಸ್ ಗೆಲುವಿಗೆ ತಮ್ಮದೇ ಕಾಣಿಕೆ ನೀಡಿದರು.
ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ
ಇದಕ್ಕೆ ಮುನ್ನ ಮ್ಯಾಕ್ಸ್ ಓಡೌಡ್ ಅವರ ಭರ್ಜರಿ ಅರ್ಧಶತಕ ಹಾಗೂ ಕಾಲಿನ್ ಅಕರ್ಮಾನ್ ಮತ್ತು ಸ್ಕಾಟ್ ಎಡ್ವರ್ಡ್ಸ್ ಅವರ ಬ್ಯಾಟಿಂಗ್ ನೆರವಿನಿಂದ ನೆದರ್ಲೆಂಡ್ಸ್ 164 ರನ್ ಸೇರಿಸಿತಾದರೂ ನಮೀಬಿಯಾವನ್ನು ನಿಯಂತ್ರಿಸಲು ಅದು ಸಾಕಾಗಲಿಲ್ಲ. ನೆದರ್ಲ್ಯಾಂಡ್ಸ್ ತಂಡಕ್ಕೆ ಇದು ಸತತ ಎರಡನೇ ಸೋಲಾಗಿದೆ.
ನಾಳೆ (ಅ. 21) ಗ್ರೂಪ್ ಬಿ ಪಂದ್ಯಗಳು:
ನಾಳೆ ಬಿ ಗುಂಪಿನ ಕೊನೆಯ ಸುತ್ತಿನ ಪಂದ್ಯಗಳು ನಡೆಯಲಿವೆ. ಮಸ್ಕಟ್ನ ಅಲ್ ಅಮೇರಾತ್ನಲ್ಲಿ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗುವ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಪಪುವಾ ನ್ಯೂಗಿನಿಯಾ ಮಧ್ಯೆ ಹಣಾಹಣಿ ಇದೆ. ಸಂಜೆ ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಗುಂಪಿನಲ್ಲಿ ಪಿಎನ್ಜಿ ತಂಡ ಈಗಾಗಲೇ ವಿಶ್ವಕಪ್ನಿಂದ ಹೊರಬೀಳುವುದು ಖಚಿತವಾಗಿದೆ. ಸ್ಕಾಟ್ಲೆಂಡ್, ಓಮನ್ ಮತ್ತು ಬಾಂಗ್ಲಾದೇಶ ಮಧ್ಯೆ ಸೂಪರ್-12 ಹಂತ ಪ್ರವೇಶಿಸಲು ಪೈಪೋಟಿ ಇದೆ.
ಸ್ಕಾಟ್ಲೆಂಡ್ ತಂಡ 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೂ ಸೂಪರ್-12 ಪ್ರವೇಶ ಖಚಿತವಾಗಿಲ್ಲ. ನಾಳೆ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಗೆದ್ದರೆ ಸೂಪರ್-12 ಪ್ರವೇಶ ಖಚಿತವಾಗುತ್ತದೆ. ಸ್ಕಾಟ್ಲೆಂಡ್ ಮತ್ತು ಓಮನ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡವೂ ಸೂಪರ್-12 ಪ್ರವೇಶಿಸುವುದು ಖಚಿತ. ಒಂದು ವೇಳೆ ಬಾಂಗ್ಲಾದೇಶ ಪಿಎನ್ಜಿ ಎದುರು ಸೋತರೆ ಆಗ ರನ್ ರೇಟ್ ಲೆಕ್ಕಾಚಾರ ಗಣನೆಗೆ ಬರುತತದೆ.
ಇದನ್ನೂ ಓದಿ: T20 World Cup: ಗ್ರೂಪ್ ಎ- ಶ್ರೀಲಂಕಾ, ನೆದರ್ಲೆಂಡ್ಸ್, ಐರ್ಲೆಂಡ್, ನಮೀಬಿಯಾ- ತಂಡ, Ranking ಇತ್ಯಾದಿ ವಿವರ
ಸ್ಕೋರು ವಿವರ:
ಶ್ರೀಲಂಕಾ-ಐರ್ಲೆಂಡ್ ಸ್ಕೋರು ವಿವರ:
ಶ್ರೀಲಂಕಾ 20 ಓವರ್ 171/7
(ವನಿಂದು ಹಸರಂಗ 71, ಪಥುಮ್ ನಿಸಾಂಕ 61, ದಸುನ್ ಶಾನಕ ಅಜೇಯ 21 ರನ್- ಜೋಶ್ ಲಿಟಲ್ 23/4, ಮಾರ್ಕ್ ಅಡೇರ್ 35/2)
ಐರ್ಲೆಂಡ್ 18.3 ಓವರ್ 101/10
(ಆಂಡಿ ಬಾಲರ್ಬರ್ನೀ 41, ಕರ್ಟಿಸ್ ಕ್ಯಾಂಫರ್ 24 ರನ್ – ಮಹೀಶ್ ತೀಕ್ಷಣ 17/3, ಲಾಹಿರು ಕುಮಾರ 22/2, ಚಮಿಕಾ ಕರುಣಾರತ್ನೆ 27/2)
ನೆದರ್ಲೆಂಡ್ಸ್-ನಮೀಬಿಯಾ ಸ್ಕೋರು ವಿವರ:
ನೆದರ್ಲೆಂಡ್ಸ್ 20 ಓವರ್ 164/4
(ಮ್ಯಾಕ್ಸ್ ಓಡೌಡ್ 70, ಕಾಲಿನ್ ಅಕರ್ಮಾನ್ 35, ಸ್ಕಾಟ್ ಎಡ್ವರ್ಡ್ಸ್ ಅಜೇಯ 21, ಸ್ಟೀಫನ್ ಮೈಬುರ್ಗ್ 17 ರನ್ – ಜೇನ್ ಫ್ರೈಲಿಂಕ್ 36/2)
ನಮೀಬಿಯಾ 19 ಓವರ್ 166/4
(ಡೇವಿಡ್ ವಿಯೆಸ್ ಅಜೇಯ 66, ಗೆರಾರ್ಡ್ ಎರಾಸ್ಮಸ್ 32, ಸ್ಟೀಫನ್ ಬಾರ್ಡ್ 19, ಜೇನ್ ಗ್ರೀನ್ 15, ಜೆ ಸ್ಮಿಟ್ ಅಜೇಯ 14 ರನ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ