T20 World Cup- BLMಗೆ ಮಂಡಿಯೂರಲು ಒಪ್ಪದೆ ತಂಡದಿಂದಲೇ ಹೊರನಡೆದ ಡೀಕಾಕ್; ಏನಿದು ಬಿಎಲ್ಎಂ?

BLM Movement: ಸೌತ್ ಆಫ್ರಿಕಾ ಆಟಗಾರ ಕ್ವಿಂಟನ್ ಡೀಕಾಕ್ ವಿಂಡೀಸ್ ವಿರುದ್ಧ ಆಡದೇ ಇರಲು ಕಾರಣ ಬಿಎಲ್ಎಂ. ಅಷ್ಟಕ್ಕೂ ಏನಿದು ಬಿಎಲ್ಎಂ ಆಂದೋಲನ?

ಕ್ವಿಂಟನ್ ಡೀಕಾಕ್

ಕ್ವಿಂಟನ್ ಡೀಕಾಕ್

  • Share this:
    ದುಬೈ: ಇಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಇಂದು ಆಡಬೇಕಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟಾನ್ ಡೀಕಾಕ್ (Quinton de Kock) ತಂಡದಿಂದ ಹೊರನಡೆದರು. ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯ ಆದೇಶವು ಇದಕ್ಕೆ ಕಾರಣವಾಯಿತು. ವಿಶ್ವಾದ್ಯಂತ ಟ್ರೆಂಡಿಂಗ್ ಆಗಿರುವ ಬಿಎಲ್​ಎಂ ಆಂದೋಲನಕ್ಕೆ ಸಾಂಕೇತಿಕವಾಗಿ ಬೆಂಬಲ ಕೊಡಲು ಪಂದ್ಯದ ಆರಂಭಕ್ಕೆ ಮುನ್ನ ಆಟಗಾರರೆಲ್ಲರೂ ಮಂಡಿಯೂರಿ ನಿಲ್ಲಬೇಕು ಎಂದು ಮಂಡಳಿ ಆದೇಶ ಮಾಡಿತ್ತು. ಇದಕ್ಕೆ ಒಪ್ಪದ ಕ್ವಿಂಟಾನ್ ಡೀಕಾಕ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡದೇ ಇರಲು ನಿರ್ಧರಿಸಿದರು.

    ಅಷ್ಟಕ್ಕೂ ಬಿಎಲ್​ಎಂ (BLM) ಅಥವಾ ಬ್ಲ್ಯಾಕ್ ಲೈವ್ಸ್ ಮ್ಯಾಟರ್ (Black Lives Matter) ಎಂಬ ಈ ಆಂದೋಲನಕ್ಕೆ ಸಾಂಕೇತಿಕ ಬೆಂಬಲ ನೀಡುವ ವಿಚಾರವಾಗಿ ಸೌತ್ ಆಫ್ರಿಕಾ ಆಟಗಾರರೊಳಗೇ ಭಿನ್ನಾಭಿಪ್ರಾಯ ಇದೆ. ತಂಡದಲ್ಲಿರುವ ಕಪ್ಪು ವರ್ಣೀಯ ಆಟಗಾರರು ಬಿಎಲ್​ಎಂಗೆ ಸಹಜವಾಗಿಯೇ ಬೆಂಬಲ ನೀಡಿದ್ದಾರೆ. ಆದರೆ, ಬಿಳಿ ವರ್ಣದ ಆಟಗಾರರಲ್ಲಿ ಕೆಲವರು ಬೆಂಬಲ ನೀಡಲು ಉತ್ಸಾಹ ತೋರಿಲ್ಲ.

    ಅಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಂದೋಲನಕ್ಕೆ ಬೆಂಬಲ ನೀಡುವ ಐಚ್ಛಿಕ ಅವಕಾಶವನ್ನು ಆಟಗಾರರಿಗೆ ಕೊಡಲಾಗಿತ್ತು. ದಕ್ಷಿಣ ಆಫ್ರಿಕಾ ತಂಡದ ಕಪ್ಪು ಆಟಗಾರರು ಮಂಡಿಯೂರಿ ಕೈ ಮುಂದಿಟ್ಟು ಸಾಂಕೇತಿಕ ಬೆಂಬಲ ಕೊಟ್ಟರು. ಬಿಳಿ ಆಟಗಾರರು ಮಂಡಿಯೂರದೇ ಕೇವಲ ಕೈ ಮಾತ್ರ ಮುಂದೆ ಚಾಚಿದರು. ಕ್ವಿಂಟಾನ್ ಅದೂ ಕೂಡ ಮಾಡಲಿಲ್ಲ. ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಪ್ರತಿಯೊಬ್ಬ ಆಟಗಾರನೂ ಮಂಡಿಯೂರಿ ಕೈ ಚಾಚಿ ಬೆಂಬಲ ವ್ಯಕ್ತಪಡಿಸಬೇಕು ಎಂದು ಕ್ರಿಕೆಟ್ ಮಂಡಳಿಯಿಂದ ಅಧಿಕೃತ ಸೂಚನೆ ಬಂದಿತ್ತು. ಹೀಗಾಗಿ, ಕ್ವಿಂಟನ್ ಡೀಕಾಕ್ ಪಂದ್ಯದಲ್ಲಿ ಆಡದೇ ಇರಲು ನಿರ್ಧರಿಸಿದರೆನ್ನಲಾಗಿದೆ.

    ಈ ಹಿಂದೆ ಯಾವತ್ತೂ ಕೂಡ ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರರ ಒಗ್ಗಟ್ಟಿನಿಂದ ಬಿಎಲ್​ಎಂಗೆ ಬೆಂಬಲ ನೀಡಿದವರಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರೆಲ್ಲರೂ ಮಂಡಿಯೂರಿ ಬಿಎಲ್​ಎಂ ಆಂದೋಲನಕ್ಕೆ ಬೆಂಬಲ ಕೊಟ್ಟಿದ್ದರು. ಬೇರೆ ಹಲವು ತಂಡಗಳೂ ಕೂಡ ಬೆಂಬಲ ನೀಡಿವೆ. ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಮಾತ್ರ ಭಿನ್ನಾಭಿಪ್ರಾಯ ಇದ್ದರೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಡಿಯೂರಿ ಬೆಂಬಲಿಸುವುದನ್ನು ಕಡ್ಡಾಯಗೊಳಿಸಿತು.

    ಇದನ್ನೂ ಓದಿ: IND vs PAK| ಪಾಕ್ ವಿರುದ್ಧ ಭಾರತಕ್ಕೆ ಸೋಲು; ಸಂಭ್ರಮಾಚರಣೆ ಮಾಡಿದ ಶಿಕ್ಷಕಿ ಅಮಾನತು!

    ಏನಿದು ಬಿಎಲ್​ಎಂ ಆಂದೋಲನ?

    ಬಿಎಲ್​ಎಂ ಎಂದರೆ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಎಂದರ್ಥ. ಕಳೆದ ವರ್ಷ ಅಮೆರಿಕದಲ್ಲಿ ಕಪ್ಪು ವರ್ಣೀಯ ಆರೋಪಿಯೊಬ್ಬರನ್ನು ಅಲ್ಲಿಯ ಪೊಲೀಸರು ರಸ್ತೆಯಲ್ಲೇ ಉಸಿರುಗಟ್ಟಿಸಿ ಸಾಯಿಸಿದ್ದರು. ಆಗ ಈ ಆಂದೋಲನ ಕುಡಿಯೊಡೆದದ್ದು. ಈ ಆಂದೋಲನ ವಿಶ್ವಾದ್ಯಂತ ವಿವಿಧ ರೂಪ ಪಡೆಯುತ್ತಾ ಹೋಗುತ್ತಿದೆ. ವಿಶ್ವದ ವಿವಿಧ ಕ್ರೀಡೆಗಳ ಆಟಗಾರರು ಈ ಆಂದೋಲನಕ್ಕೆ ಸಾಂಕೇತಿಕ ಬೆಂಬಲ ಕೊಡುವ ಪ್ರಕ್ರಿಯೆ ಕೂಡ ಕಳೆದ ವರ್ಷ ಆರಂಭವಾಗಿತ್ತು.

    ಅಮೆರಿಕಕ್ಕೆ ಹೊಂದಿಕೊಂಡಂತಿರುವ ವೆಸ್ಟ್ ಇಂಡೀಸ್ ತಂಡ ಬಿಎಲ್​ಎಂ ಆಂದೋಲನಕ್ಕೆ ನಿಯಮಿತವಾಗಿ ಬೆಂಬಲ ಕೊಡುತ್ತಾ ಬರುತ್ತಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್​ನಂಥ ತಂಡಗಳ ಆಟಗಾರರು ಆಗಾಗ್ಗೆ ಆಟಕ್ಕೆ ಮುನ್ನ ಸಾಂಕೇತಿಕ ಬೆಂಬಲ ತೋರ್ಪಡಿಸುತ್ತಿದ್ದಾರೆ.

    ಇನ್ನು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮುನ್ನ ಭಾರತದ ಆಟಗಾರರೆಲ್ಲರೂ ಮಂಡಿಯೂರಿ ಸಂಪೂರ್ಣವಾಗಿ ಬಿಎಲ್​ಎಂಗೆ ಬೆಂಬಲ ಕೊಟ್ಟಿದ್ದರು. ಆದರೆ, ಪಾಕಿಸ್ತಾನೀಯರು ಎದೆಗೆ ಕೈ ಇಟ್ಟು ಬೆಂಬಲ ಕೊಟ್ಟಿದ್ದರು.
    Published by:Vijayasarthy SN
    First published: