India vs Pak- ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಈ ಆಟಗಾರರು ಆಡಬೇಕು: ತಂಡ ಕಟ್ಟಿದ ಪಾರ್ಥಿವ್ ಪಟೇಲ್

Possible Playing XI of India vs Pakistan Match: ಅಕ್ಟೋಬರ್ 24ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲವೆನ್​ನಲ್ಲಿ ಯಾರಿದ್ದರೆ ಸರಿ ಎಂದು ಪಾರ್ಥಿವ್ ಪಟೇಲ್ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾರ್ಥಿವ್ ಪಟೇಲ್

ಪಾರ್ಥಿವ್ ಪಟೇಲ್

 • Share this:
  ದುಬೈ: ಇದೇ ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಟಿ20 ವಿಶ್ವಕಪ್​ನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಯಾವುದೇ ವಿಶ್ವಕಪ್​ಗಳಲ್ಲಿ ಭಾರತವನ್ನ ಒಮ್ಮೆಯೂ ಸೋಲಿಸಿದ ಪಾಕಿಸ್ತಾನ ಅತೀವ ಒತ್ತಡದಲ್ಲಿದ್ದಂತಿದೆ. ಅಲ್ಲಿನ ಮಾಜಿ ಕ್ರಿಕೆಟಿಗರು ಈ ಬಾರಿ ಭಾರತವನ್ನ ಪಾಕಿಸ್ತಾನ ಸೋಲಿಸೇ ಸೋಲಿಸುತ್ತದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ಧಾರೆ. ಆದರೆ, ಇದೇ ಯುಎಇಯ ಪಿಚ್​ಗಳಲ್ಲಿ ಭಾರತದ ಆಟಗಾರರು ಐಪಿಎಲ್ ಪಂದ್ಯಗಳನ್ನ ಆಡಿ ಪಳಗಿಹೋಗಿದ್ಧಾರೆ. ಹೀಗಾಗಿ, ಭಾರತವೇ ಈ ಪಂದ್ಯ ಗೆಲ್ಲುವ ಫೇವರಿಟ್ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ವಿಶ್ವಕಪ್ ಭಾರತದ ಪಾಲಾಗುತ್ತದೆ ಎಂಬ ಅಭಿಪ್ರಾಯಗಳೂ ಇವೆ.

  ಇದೇನೇ ಇರಲಿ, ಭಾರತ ತಂಡದ 15 ಆಟಗಾರರ ಪೈಕಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಯಾವ್ಯಾವ 11 ಆಟಗಾರರನ್ನ ಆರಿಸುವುದು ಎಂಬ ಪ್ರಶ್ನೆ ಸದ್ಯಕ್ಕೆ ಟೀಮ್ ಇಂಡಿಯಾಗೆ ತಲೆನೋವಾಗಿದೆ. ಬಹುತೇಕ ಎಲ್ಲರೂ ಫಾರ್ಮ್​ನಲ್ಲಿದ್ಧಾರೆ. ದುಬೈನ ಪಿಚ್​ನಲ್ಲಿ ಸರಿಹೊಂದುವ ಆಟಗಾರರು ಹಾಗೂ ಪಾಕಿಸ್ತಾನದ ಶಕ್ತಿಗೆ ಅನುಗುಣವಾಗಿ ಆಟಗಾರರನ್ನ ಪ್ಲೇಯಿಂಗ್ ಇಲವೆನ್​ಗೆ ಆಯ್ಕೆ ಮಾಡಬೇಕಾಗುತ್ತದೆ. ಭಾರತ ಎರಡು ಅಭ್ಯಾಸ ಪಂದ್ಯಗಳನ್ನ ಆಡಿ ತನ್ನೆಲ್ಲಾ ಆಟಗಾರರನ್ನ ಒರೆಗೆ ಹಚ್ಚಿ ನೋಡಿದೆ. ಈಗ ಏನಿದ್ದರೂ ಆಡುವ ಹನ್ನೊಂದರ ತಂಡವನ್ನು ಆಯ್ಕೆ ಮಾಡುವ ಸವಾಲು ಇದೆ. ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಈ ವಿಚಾರದಲ್ಲಿ ತಮ್ಮದೇ ಸಲಹೆ ನೀಡಿದ್ದಾರೆ.

  ರೋಹಿತ್-ರಾಹುಲ್ ಓಪನಿಂಗ್:

  ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರು ಓಪನಿಂಗ್ ಬರುವುದು ಉತ್ತಮ ಎಂಬುದು ಪಟೇಲ್ ಅನಿಸಿಕೆ. ನಾಯಕ ವಿರಾಟ್ ಕೊಹ್ಲಿ ಆರಂಭಿಕರಾಗಿ ಬರುವ ಬದಲು ಫಸ್ಟ್ ಡೌನ್ ಬರಬೇಕು ಎನ್ನುತ್ತಾರೆ ಅವರು. ವಿರಾಟ್ ಕೊಹ್ಲಿ ಕೂಡ ಇದನ್ನ ಸ್ಪಷ್ಟಪಡಿಸಿದ್ದಾರೆ. ತಾನು ಆರಂಭ ಮಾಡುವುದಿಲ್ಲ ಎಂದಿದ್ದಾರೆ.

  ಪಾಂಡ್ಯ ಫಿನಿಶರ್:

  ವಿರಾಟ್ ಕೊಹ್ಲಿ ಬಳಿಕ ನಂಬರ್ 4 ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಆ ಕ್ರಮದಲ್ಲಿ ಬರಬೇಕು. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೂ ಫಿನಿಶರ್ ರೋಲ್​ಗೆ ಹೇಳಿಮಾಡಿಸಿದ್ದಾರೆ ಎಂದು ಪಾರ್ಥಿವ್ ಪಟೇಲ್ ಹೇಳುತ್ತಾರೆ.

  ಭುವಿ ಅಥವಾ ಶಾರ್ದೂಲ್:

  ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಶಕ್ತಿ ತುಂಬಲು ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಇರಬೇಕು. ಬೌಲಿಂಗ್ ಲೈನಪ್​ನಲ್ಲಿ ರವೀಂದ್ರ ಜಡೇಜಾ ಜೊತೆಗೆ ರಾಹುಲ್ ಚಾಹರ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ ಇರಬೇಕು. ಈ ಲೈನಪ್​ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ಅವರಲ್ಲೊಬ್ಬರನ್ನ ಆಯ್ಕೆ ಮಾಡುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು ಎನ್ನುತ್ತಾರೆ ಮಾಜಿ ವಿಕೆಟ್ ಕೀಪರ್ ಕೂಡ ಆದ ಪಾರ್ಥಿವ್ ಪಟೇಲ್.

  ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

  ಇಶಾನ್, ಅಶ್ವಿನ್ ಮಿಸ್ಸಿಂಗ್:

  ಪಾರ್ಥಿವ್ ಪಟೇಲ್ ಅವರ ಇಚ್ಛೆಯ ತಂಡದಲ್ಲಿ ಮಿಸ್ ಆಗಿರುವುದು ಇಶಾನ್ ಕಿಶನ್ ಮತ್ತು ಆರ್ ಅಶ್ವಿನ್. ಐಪಿಎಲ್​ನ ಕೊನೆಯ ಕೆಲ ಪಂದ್ಯಗಳು ಹಾಗೂ ಒಂದು ವಿಶ್ವಕಪ್ ಅಭ್ಯಾಸ ಪಂದ್ಯಗಳಲ್ಲಿ ಇಶಾನ್ ಕಿಶನ್ ಭರ್ಜರಿ ರನ್ ಬೇಟೆ ಮಾಡಿದ್ದಾರೆ. ಐಪಿಎಲ್​ನ ಬಹುತೇಕ ಅವಧಿ ಫಾರ್ಮ್ ಕಳೆದುಕೊಂಡಿದ್ದ ಇಶಾನ್ ಕಿಶನ್ ಸದ್ಯ ಅದ್ಭುತ ಫಾರ್ಮ್​ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಲಯದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರ್ ಅಶ್ವಿನ್ 8 ರನ್​ಗೆ 2 ವಿಕೆಟ್ ಪಡೆದು ತಾನು ಟಿ20 ಕ್ರಿಕೆಟ್​ನಲ್ಲೂ ಪರಿಣಾಮಕಾರಿ ಬೌಲರ್ ಎಂದು ತೋರಿಸಿದ್ಧಾರೆ.

  ಆರಂಭಿಕ ಸ್ಥಾನಕ್ಕೆ ರೋಹಿತ್, ರಾಹುಲ್ ಮತ್ತು ಇಶಾನ್ ಮಧ್ಯೆ ಪೈಪೋಟಿ ಇದೆ. ಮೂವರೂ ಒಳ್ಳೆಯ ಫಾರ್ಮ್​ನಲ್ಲಿರುವುದರಿಂದ ಯಾರನ್ನ ಆಯ್ಕೆ ಮಾಡಬೇಕು ಎಂಬ ಕಠಿಣ ಸವಾಲು ಇದೆ. ಪಾರ್ಥಿವ್ ಅವರು ರೋಹಿತ್ ಮತ್ತು ರಾಹುಲ್​ಗೆ ಮಣೆ ಹಾಕಿದ್ದಾರೆ.

  ಪಾರ್ಥಿವ್ ಪಟೇಲ್ ಇಚ್ಛಿಸುವ ಭಾರತ ತಂಡದ ಪ್ಲೇಯಿಂಗ್ ಇಲವೆನ್: ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಾಹರ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್/ಶಾರ್ದೂಲ್ ಠಾಕೂರ್.
  Published by:Vijayasarthy SN
  First published: