T20 World Cup: ಸೆಮಿಫೈನಲ್ ಫಿಕ್ಸ್- ಪಾಕ್ vs ಆಸ್ಟ್ರೇಲಿಯಾ; ಇಂಗ್ಲೆಂಡ್ vs ನ್ಯೂಜಿಲೆಂಡ್

PAK vs AUS; ENG vs NZ semifinals in T20 World Cup- ಸ್ಕಾಟ್ಲೆಂಡ್ ವಿರುದ್ಧ ಪಾಕಿಸ್ತಾನ್ ಗೆಲ್ಲುವುದರೊಂದಿಗೆ ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗುವ ತಂಡಗಳು ಯಾವ್ಯಾವೆಂದು ಸ್ಪಷ್ಟವಾಗಿದೆ.

ಪಾಕಿಸ್ತಾನ್ ಬ್ಯಾಟರ್ಸ್

ಪಾಕಿಸ್ತಾನ್ ಬ್ಯಾಟರ್ಸ್

  • Share this:
    ಅಬುಧಾಬಿ, ನ. 7: ಟಿ20 ವಿಶ್ವಕಪ್​ನ ಸೂಪರ್-12 ಹಂತದ ಪಂದ್ಯಗಳು (T20 World Cup 2021 Super-12 round matches) ಮುಗಿಯುವ ಒಂದು ದಿನ ಮೊದಲು ಸೆಮಿಫೈನಲ್ ಯಾರೆಂದು ಖಚಿತವಾಗಿದೆ. ಮಧ್ಯಾಹ್ನ ಅಫ್ಘಾನಿಸ್ತಾನ್ ವಿರುದ್ಧ ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿತು. ಅದಕ್ಕೆ ಮೊದಲು ಪಾಕಿಸ್ತಾನ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳೂ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದ್ದವು.

    ಇಂದು ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಪಾಕಿಸ್ತಾನ್ ನಿರೀಕ್ಷಿತ ಗೆಲುವು ಸಾಧಿಸಿದ ಬಳಿಕ ಸೆಮಿಫೈನಲ್​ನಲ್ಲಿ ಯಾರ್ಯಾರು ಮುಖಾಮುಖಿ ಆಗಲಿದ್ದಾರೆ ಎಂಬುದು ಫಿಕ್ಸ್ ಆಗಿದೆ. ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲೆರಡು ಸ್ಥಾನ ಪಡೆದರೆ, ಎರಡನೇ ಗುಂಪಿನಲ್ಲಿ ಪಾಕಿಸ್ತಾನ ಅಗ್ರಸ್ಥಾನವನ್ನೂ, ನ್ಯೂಜಿಲೆಂಡ್ ಎರಡನೇ ಸ್ಥಾನವನ್ನೂ ಪಡೆದವು.

    ಸೆಮಿಫೈನಲ್​ನಲ್ಲಿ ಹಣಾಹಣಿ ನಡೆಸುವ ತಂಡಗಳು:

    1) ಮೊದಲ ಸೆಮಿಫೈನಲ್: ಇಂಗ್ಲೆಂಡ್ vs ನ್ಯೂಜಿಲೆಂಡ್
    ದಿನ: ನ. 10, ಸ್ಥಳ ಅಬುಧಾಬಿ

    2) ಎರಡನೇ ಸೆಮಿಫೈನಲ್: ಪಾಕಿಸ್ತಾನ್ vs ಆಸ್ಟ್ರೇಲಿಯಾ.
    ದಿನ: ನ. 11, ಸ್ಥಳ: ದುಬೈ

    ಈ ಎರಡೂ ಪಂದ್ಯಗಳು ಸಂಜೆ 7:30ಕ್ಕೆ ಆರಂಭಗೊಳ್ಳುತ್ತವೆ.

    ಸ್ಕಾಟ್​ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು:

    ಅಫ್ಘಾನಿಸ್ತಾನ್ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಿದ ಬೆನ್ನಲ್ಲೇ ನಡೆದ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಪಾಕಿಸ್ತಾನ್ 72 ರನ್​ಗಳಿಂದ ಬಗ್ಗುಬಡಿಯಿತು. ಗೆಲ್ಲಲು ಪಾಕಿಸ್ತಾನ್ ಒಡ್ಡಿದ 190 ರನ್​ಗಳ ಬೃಹತ್ ಗುರಿಯನ್ನ ಬೆನ್ನತ್ತಿದ ಸ್ಕಾಟ್​ಲೆಂಡ್ ಯಾವ ಹಂತದಲ್ಲೂ ಗೆಲುವಿನ ನಿರೀಕ್ಷೆ ಹುಟ್ಟಿಸಲಿಲ್ಲ. ರಿಚೀ ಬೆರಿಂಗ್ಟನ್ ಹೊರತುಪಡಿಸಿ ಉಳಿದ ಸ್ಕಾಟ್ಲೆಂಡ್ ಬ್ಯಾಟರ್ಸ್ ಪಾಕಿಸ್ತಾನದ ಪ್ರಖರ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಲು ವಿಫಲರಾದರು.

    ಶೋಯಬ್ ಮಲಿಕ್ ಸ್ಫೋಟಕ ಬ್ಯಾಟಿಂಗ್:

    ಪಾಕಿಸ್ತಾನ್ ತಂಡವೇ ಟಾಸ್ ಗೆದ್ದರೂ ಸತತ ಎರಡನೇ ಬಾರಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಮೀಬಿಯಾ ವಿರುದ್ಧವೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಸೆಮಿಫೈನಲ್​ಗೆ ಮುನ್ನ ತನ್ನ ಬ್ಯಾಟಿಂಗ್ ಶಕ್ತಿ ಮತ್ತು ಬೌಲಿಂಗ್ ಶಕ್ತಿಯನ್ನ ಒರೆಗೆ ಹಚ್ಚುವ ಪ್ರಯತ್ನ ಮಾಡಿತು. ಅದರಲ್ಲಿ ಯಶಸ್ವಿಯೂ ಆಯಿತು.

    ಇದನ್ನೂ ಓದಿ: T20 World Cup- ನ್ಯೂಜಿಲೆಂಡ್​ಗೆ ಗೆಲುವು; ಸೆಮಿಸ್ ರೇಸ್​ನಿಂದ ಭಾರತ ಔಟ್; ನಾಳೆ ಮ್ಯಾಚ್ ಡಮ್ಮಿ

    ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅವರ ಆರಂಭಿಕ ಜೊತೆಯಾಟ ಈ ಪಂದ್ಯದಲ್ಲಿ ಹೆಚ್ಚು ಹೊತ್ತು ಮುಂದುವರಿಯಲಿಲ್ಲ. ಆದರೆ, ಬಾಬರ್ ಅಜಂ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದರು. ಪಾಕಿಸ್ತಾನದ ಮಧ್ಯಮ ಕ್ರಮಾಂಕ ಮತ್ತೊಮ್ಮೆ ತನ್ನ ಅಮೋಘ ಆಟ ಗಮನ ಸೆಳೆಯಿತು. ಶೋಯಬ್ ಮಲಿಕ್ ಮತ್ತು ಮೊಹಮ್ಮದ್ ಹಫೀಜ್ ಸ್ಫೋಟಕ ಬ್ಯಾಟಿಂಗ್ ಆಡಿದರು. ಅನುಭವಿ ಶೋಯಬ್ ಮಲಿಕ್ ಸಿಕ್ಸರ್​ಗಳ ಸುರಿಮಳೆಗೈದರು. 6 ಸಿಕ್ಸರ್ ಚಚ್ಚಿದ ಅವರು 18 ಬಾಲ್​ನಲ್ಲಿ ಅರ್ಧಶತಕ ಗಳಿಸಿದರು. ಪರಿಣಾಮವಾಗಿ ಪಾಕಿಸ್ತಾನ್ 189 ರನ್​ಗಳ ಬೃಹತ್ ಮೊತ್ತ ಪೇರಿಸಿ ಸ್ಕಾಟ್​ಲೆಂಡ್​ಗೆ ಗೆಲುವು ಕೈಗೆಟುಕದಂತೆ ಮಾಡಿತು.

    ಭಾರತ-ನಮೀಬಿಯಾ ಪಂದ್ಯ ಬರೀ ಹೆಸರಿಗಷ್ಟೇ:

    ಸೆಮಿಫೈನಲ್ ಪ್ರವೇಶಿಸುವ ತಂಡಗಳು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯ ಕೇವಲ ನಾಮಕಾವಸ್ತೆಯದ್ದಾಗಿದೆ. ಇಂದು ಅಫ್ಘಾನಿಸ್ತಾನ್ ವಿರುದ್ಧ ನ್ಯೂಜಿಲೆಂಡ್ ಸೋತಿದ್ದರೆ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯಕ್ಕೆ ಕುತೂಹಲ ಉಳಿದುಕೊಳ್ಳುತ್ತಿತ್ತು. ಭಾರತಕ್ಕೆ ಸೆಮಿಫೈನಲ್ ತಲುಪುವ ಅವಕಾಶ ಸಿಗುತ್ತಿತ್ತು. ಆದರೆ, ಭಾರತ ತನ್ನ ಮೊದಲೆರಡು ಪಂದ್ಯ ಸೋತಿದ್ದು ಅದಕ್ಕೆ ಮುಳುವಾಗಿ ಪರಿಣಮಿಸಿತು.

    ಸ್ಕೋರು ವಿವರ:

    ಪಾಕಿಸ್ತಾನ್ 20 ಓವರ್ 189/4
    (ಬಾಬರ್ ಅಜಂ 66, ಶೋಯಬ್ ಮಲಿಕ್ 54, ಮೊಹಮ್ಮದ್ ಹಫೀಜ್ 31, ಮೊಹಮ್ಮದ್ ರಿಜ್ವಾನ್ 15 ರನ್- ಕ್ರಿಸ್ ಗ್ರೀವ್ಸ್ 43/2)

    ಸ್ಕಾಟ್​ಲೆಂಡ್ 20 ಓವರ್ 117/6
    (ರಿಚೀ ಬೆರಿಂಗ್ಟನ್ ಅಜೇಯ 54, ಜಾರ್ಜ್ ಮುನ್ಸೀ 17, ಮೈಕೇಲ್ ಲೀಸ್ಕ್ 14 ರನ್ - ಶದಾಬ್ ಖಾನ್ 14/2)
    Published by:Vijayasarthy SN
    First published: