India vs Pak- ಭಾರತ ವಿರುದ್ಧ ಗೆದ್ದರೆ ಪಾಕಿಸ್ತಾನ ಕ್ರಿಕೆಟಿಗರಿಗೆ ಸಿಗಲಿದೆ ಬಂಪರ್ ಕೊಡುಗೆ

Pakistan Players Match Fee- ಆರ್ಥಿಕವಾಗಿ ದುರ್ಬಲವಾಗಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇದೀಗ ವಿಶ್ವಕಪ್​ನಲ್ಲಿ ಆಟಗಾರರನ್ನ ಉತ್ತೇಜಿಸಲು ನಿರ್ಧರಿಸಿದೆ. ನಿರ್ದಿಷ್ಟ ಪಂದ್ಯಗಳಲ್ಲಿ ಪಾಕ್ ಗೆದ್ದರೆ ಆಟಗಾರರಿಗೆ ಹಲವು ಪಟ್ಟು ಸಂಭಾವನೆ ಹೆಚ್ಚಳವಾಗಲಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ

ಪಾಕಿಸ್ತಾನ ಕ್ರಿಕೆಟ್ ತಂಡ

  • Share this:
    ದುಬೈ: ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಒಮ್ಮೆಯೂ ಗೆಲ್ಲದ ಪಾಕಿಸ್ತಾನ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ದಾಖಲೆ ಬದಲಿಸಿದ್ದೇ ಆದಲ್ಲಿ ಭರ್ಜರಿ ಕೊಡುಗೆಗಳು ಕಾದಿವೆ. ಭಾರತ ವಿರುದ್ಧ ಗೆದ್ದರೆ ಮಾತ್ರವಲ್ಲ, ವಿಶ್ವದ ನಂಬರ್ ಒನ್ ಟಿ20 ತಂಡವನ್ನು ಸೋಲಿಸಿದರೆ ಬೇರೆ ಕೊಡುಗೆ ಪಾಕಿ ಆಟಗಾರರಿಗೆ ಸಿಗುತ್ತದೆ. ಹಾಗೆಯೇ ವಿಶ್ವಕಪ್ ಎತ್ತಿಹಿಡಿದರೆ ಬಂಪರ್ ಗಿಫ್ಟ್​ಗಳು ಪಾಕ್ ತಂಡಕ್ಕೆ ದೊರಕಲಿವೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮಾಮೂಲಿ ಪಂದ್ಯಕ್ಕೆ ದೊರೆಯುವ ಮ್ಯಾಚ್ ಫೀಗಿಂತ ದುಪ್ಪಟ್ಟು, ಹಲವು ಪಟ್ಟು ಹೆಚ್ಚು ಸಂಭಾವನೆಯನ್ನ ಕೊಡಲಾಗುತ್ತದೆಯಂತೆ.

    ಪಾಕಿಸ್ತಾನೀ ಕ್ರಿಕೆಟಿಗರ ಸಂಭಾವನೆ ಎಷ್ಟು?: ಪಾಕಿಸ್ತಾನ ಕ್ರಿಕಟ್ ಮಂಡಳಿಯ ಗುತ್ತಿಗೆ ಪಡೆದಿರುವ ಒಬ್ಬ ಕ್ರಿಕೆಟಿಗ ಪ್ರತೀ ಮ್ಯಾಚ್​ಗೆ ಪಡೆಯುವ ಸಂಭಾವನೆ 3,38,250 ಪಾಕಿಸ್ತಾನೀ ರೂ ಆಗಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅದು 1.45 ಲಕ್ಷ ರೂ ಆಗುತ್ತದೆ.

    ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಗೆದ್ದರೆ ಪಾಕಿಸ್ತಾನೀ ಆಟಗಾರರಿಗೆ ಸಿಗುವ ಸಂಭಾವನೆ ಎಷ್ಟು?:

    ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದರೆ ಆಟಗಾರರ ಸಂಭಾವನೆಯಲ್ಲಿ ಶೇ. 50ರಷ್ಟು ಏರಿಕೆ ಆಗಲಿದೆಯಂತೆ. ಅಂದರೆ, ಸುಮಾರು 75 ಸಾವಿರ ರೂಪಾಯಿ (ಭಾರತದ ಕರೆನ್ಸಿ ಲೆಕ್ಕ) ಹೆಚ್ಚುವರಿ ಹಣ ಸಿಗುತ್ತದೆ. ಭಾರತ ವಿರುದ್ಧ ಗೆದ್ದ ಆ ಮ್ಯಾಚ್​ನಲ್ಲಿ ಪ್ರತೀ ಆಟಗಾರರಿಗೆ 1.45 ಲಕ್ಷ ರೂ ಬದಲು 2.20 ಲಕ್ಷ ರೂ ಸಿಗುತ್ತದೆ.

    ಟಿ20 ಕ್ರಿಕೆಟ್​ನಲ್ಲಿ ನಂಬರ್ ಒನ್ ತಂಡದ ವಿರುದ್ಧ ಗೆದ್ದರೆ ಸಿಗುವ ಸಂಭಾವನೆ ಎಷ್ಟು?:

    ಇಂಗ್ಲೆಂಡ್ ತಂಡ ಸದ್ಯ ವಿಶ್ವದ ನಂಬರ್ ಒನ್ ಟಿ20 ತಂಡವಾಗಿದೆ. ಈ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವನ್ನು ಪಾಕಿಸ್ತಾನ ಸೋಲಿಸಿದರೆ ಶೇ. 50ರಷ್ಟು ಹೆಚ್ಚು ಸಂಭಾವನೆ ಸಿಗುತ್ತದೆ. ಭಾರತವನ್ನು ಸೋಲಿಸಿದರೆ ಸಿಗುವಷ್ಟೇ ಮೊತ್ತವನ್ನು ಇಂಗ್ಲೆಂಡ್ ಮಣಿಸಿದಾಗ ಪಾಕ್ ಕ್ರಿಕೆಟಿಗರಿಗೆ ಸಿಗುತ್ತದೆ. ಆದರೆ, ಸೂಪರ್-12 ಹಂತದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಬೇರೆ ಬೇರೆ ಗುಂಪುಗಳಲ್ಲಿವೆ. ಅವು ಸಂಧಿಸಬೇಕಾದರೆ ಸೆಮಿಫೈನಲ್ ಅಥವಾ ಫೈನಲ್ ತಲುಪಬೇಕು.

    ಟಿ20 ವಿಶ್ವಕಪ್ ಗೆದ್ದರೆ ಪಾಕ್ ಕ್ರಿಕೆಟಿಗರಿಗೆ ಸಿಗುವ ಸಂಭಾವನೆ ಎಷ್ಟು?

    ಟಿ20 ವಿಶ್ವಕಪ್ ಗೆದ್ದರೆ ಪಾಕಿಸ್ತಾನ ತಂಡದ ಆಟಗಾರರಿಗೆ ಮೂರು ಪಟ್ಟು ಹೆಚ್ಚು ಸಂಭಾವನೆ ಸಿಗುತ್ತದೆ. ಅಂದರೆ ಸುಮಾರು 6 ಲಕ್ಷ ರೂಪಾಯಿ ಸಿಗುತ್ತದೆ. ಆದರೆ, ವಿಶ್ವಕಪ್ ಗೆದ್ದರೆ ಐಸಿಸಿಯಿಂದಲೇ 1.6 ಮಿಲಿಯನ್ ಡಾಲರ್ ಹಣ ಪಾಕ್ ಕ್ರಿಕೆಟ್​ಗೆ ಸಂದಾಯವಾಗುತ್ತದೆ. ಅಂದರೆ, 12 ಕೋಟಿ ರೂ ದೊರೆಯುತ್ತದೆ.

    ಇದನ್ನೂ ಓದಿ: England beat WI- ಮೊಯೀನ್, ರಷೀದ್ ಅಮೋಘ ಆಟ; ವಿಂಡೀಸ್ ವಿರುದ್ಧ ಇಂಗ್ಲೆಂಡ್ ಜಯಭೇರಿ

    ಪಾಕ್ ಕ್ರಿಕೆಟ್ ಆರ್ಥಿಕವಾಗಿ ದುಃಸ್ಥಿತಿಯಲ್ಲಿದೆ:

    ಪಾಕಿಸ್ತಾನದ ಕ್ರಿಕೆಟ್ ಮಂಡಳಿ ನಮ್ಮ ಭಾರತದ ಬಿಸಿಸಿಐನಷ್ಟು ಆರ್ಥಿಕವಾಗಿ ಸುದೃಢವಾಗಿಲ್ಲ. ತಂಡಕ್ಕೆ ಹಣದ ಹರಿವು ಬಹಳ ಕಡಿಮೆ ಇದೆ. ಐಪಿಎಲ್​ನಂತಹ ಟೂರ್ನಿಗಳನ್ನ ನಡೆಸಿದರೂ ಹಣ ಹುಟ್ಟುತ್ತಿಲ್ಲ. ಪಾಕಿಸ್ತಾನ ಕ್ರಿಕೆಟಿಗರಿಗೆ ಸರಿಯಾದ ಸಂಭಾವನೆ ಕೊಡಲೂ ಹಣದ ತಾಪತ್ರಯ ಅದಕ್ಕಿದೆ.

    ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜ ಈ ವಿಚಾರವಾಗಿ ಮಾತನಾಡಿ, ಪಾಕ್ ಕ್ರಿಕೆಟ್ ಈಗ ಭಾರತದ ಹಣದ ಮೇಲೆ ಅವಲಂಬನೆಯಾಗಿದೆ ಎಂದು ಅಲವತ್ತುಕೊಂಡಿದ್ದರು.

    ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಯುತ್ತಿರುವುದೇ ಐಸಿಸಿ ನೀಡುವ ದೇಣಿಗೆಯಿಂದ. ಐಸಿಸಿಗೆ ಹಣ ಹೆಚ್ಚಾಗಿ ಬರುವುದು ಬಿಸಿಸಿಐನಿಂದ. ಹೀಗಾಗಿ, ಒಂದು ವೇಳೆ ಭಾರತ ಸರ್ಕಾರ ಐಸಿಸಿಗೆ ಹಣ ನೀಡುವುದನ್ನು ನಿಲ್ಲಿಸಿದರೆ ಪಾಕಿಸ್ತಾನ ಕ್ರಿಕೆಟ್​ಗೆ ಹಣದ ಬರುವುದು ನಿಂತೇ ಹೋಗುತ್ತದೆ ಎಂದು ಪಿಸಿಬಿ ಅಧ್ಯಕ್ಷರು ಹತಾಶೆ ವ್ಯಕ್ತಪಡಿಸಿದ್ದರು.

    ಹಾಗೆಯೇ, ಪಾಕಿಸ್ತಾನ ತಂಡಕ್ಕೆ ಹಣದ ಸಹಾಯ ಮಾಡಲು ಒಬ್ಬ ಉದ್ಯಮಿ ಮುಂದೆ ಬಂದಿದ್ಧಾರೆ ಎಂದೂ ರಮೀಜ್ ರಾಜಾ ಹೇಳಿದ್ದರು.

    ಇಂದು ಭಾರತ-ಪಾಕ್ ಪಂದ್ಯ: ದುಬೈನಲ್ಲಿ ಇಂದು ಭಾನುವಾರ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೈ ವೋಲ್ಟೇಜ್ ಪಂದ್ಯ ಇದೆ. ಸಂಜೆ 7:30ಕ್ಕೆ ಮ್ಯಾಚ್ ಪ್ರಾರಂಭವಾಗುತ್ತದೆ.
    Published by:Vijayasarthy SN
    First published: