PAK vs NAM- ಪಾಕಿಸ್ತಾನಕ್ಕೆ ಸತತ 4ನೇ ಗೆಲುವು; ಸೌತ್ ಆಫ್ರಿಕಾ ಸೆಮಿಸ್ ಆಸೆ ಜೀವಂತ

T20 World Cup: PAK vs NAM; SA vs BAN- ಮೊದಲ ಗುಂಪಿನಲ್ಲಿ ಬಾಂಗ್ಲಾದೇಶ ವಿರುದ್ಧ ಸೌತ್ ಆಫ್ರಿಕಾ ಗೆಲುವು ಸಾಧಿಸಿದರೆ ಎರಡನೇ ಗುಂಪಿನಲ್ಲಿ ನಮೀಬಿಯಾ ವಿರುದ್ಧ ಪಾಕಿಸ್ತಾನ್ ಸುಲಭ ಗೆಲುವು ಸಂಪಾದಿಸಿತು.

ಪಾಕಿಸ್ತಾನ್ ಆಟಗಾರರು

ಪಾಕಿಸ್ತಾನ್ ಆಟಗಾರರು

 • Share this:
  ಅಬುಧಾಬಿ, ನ. 2: ಆತ್ಮವಿಶ್ವಾಸ ಎಂದರೆ ಇದೆ. ಟಾಸ್​ನಲ್ಲಿ ಏನೂ ಇಲ್ಲ, ಎಲ್ಲಾ ಮನಃಸ್ಥಿತಿಯ ಮೇಲೆ ಅವಲಂಬಿತ ಎನ್ನುವ ವಾಸ್ತವವನ್ನು ಪಾಕಿಸ್ತಾನ ತೋರಿಸಿಕೊಟ್ಟಿತು. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ಗೆದ್ದಿರುವ ನಿದರ್ಶನದ ಮಧ್ಯೆ ಪಾಕಿಸ್ತಾನ್ ನಮೀಬಿಯಾ ವಿರುದ್ದ ಪಂದ್ಯದಲ್ಲಿ ಟಾಸ್ ಗೆದ್ದೂ ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. 45 ರನ್​ಗಳಿಂದ ಗೆಲುವನ್ನೂ ಸಾಧಿಸಿತು. ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 189 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ನಮೀಬಿಯಾ ಇನ್ನಿಂಗ್ಸ್ 144 ರನ್​ಗೆ ಅಂತ್ಯಗೊಂಡಿತು.

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಾಗ ಪಾಕ್ ನಾಯಕ ಬಾಬರ್ ಅಜಂ ಒಂದು ಮಾತು ಹೇಳಿದ್ದರು: “ನಾವು ಈ ಟೂರ್ನಿಯಲ್ಲಿ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದು ಚೇಸಿಂಗ್ ಮಾಡಿ ಗೆದ್ದಿದ್ದೇವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವೆ. ಮುಂದಿನ ಪಂದ್ಯಗಳಲ್ಲಿ ನಮಗೆ ಮೊದಲು ಬ್ಯಾಟಿಂಗ್ ಮಾಡಬೇಕಾದ ಸಂದರ್ಭ ಬರಬಹುದು. ಅದಕ್ಕೆ ಈ ಪಂದ್ಯದಿಂದಲೇ ಅಣಿಯಾಗಬೇಕು. ಅಲ್ಲದೇ, ನಮ್ಮ ತಂಡದ ಬ್ಯಾಟಿಂಗ್ ಸಾಮರ್ಥ್ಯವನ್ನು ಇನ್ನಷ್ಟು ಒರೆ ಹಚ್ಚಬೇಕಾಗಿದೆ. ಅದಕ್ಕೆ ಮೊದಲು ಬ್ಯಾಟ್ ಮಾಡುತ್ತಿದ್ದೇವೆ”.

  ಇಡೀ ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಅತ್ಯುತ್ತಮ ಆರಂಭ ಒದಗಿಸುತ್ತಿರುವ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಈ ಪಂದ್ಯದಲ್ಲೂ ಅದೇ ಕೆಲಸ ಮಾಡಿದರು ಇಬ್ಬರೂ ಮೊದಲ ವಿಕೆಟ್​ಗೆ 113 ರನ್ ಜೊತೆಯಾಟ ನೀಡಿದರು. ರಿಜ್ವಾನ್ ಅಜೇಯ 79 ಹಾಗೂ ಬಾಬರ್ 70 ರನ್ ಗಳಿಸಿದರು. ಮೊಹಮ್ಮದ್ ಹಫೀಜ್ ಅಜೇಯ 32 ರನ್ ಗಳಿಸಿದರು.

  175 ರನ್ ಮೊತ್ತದ ಗುರಿ ಇಟ್ಟುಕೊಂಡಿದ್ದ ಪಾಕಿಸ್ತಾನಕ್ಕೆ 15 ರನ್ ಹೆಚ್ಚುವರಿ ಸಿಕ್ಕಿತು. ಪಾಕಿಸ್ತಾನ ಒಡ್ಡಿದ 190 ರನ್ ಗುರಿ ನಮೀಬಿಯಾದಂಥ ತಂಡಕ್ಕೆ ಕೈಗೆಟುಕದ ಸವಾಲಾಗಿತ್ತು. ಇಬ್ಬನಿಯ ನಡುವೆಯೂ ಪಾಕ್ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದರು. ನಮೀಬಿಯಾ ತಂಡದ ಬ್ಯಾಟುಗಾರರಿಗೆ ಹೆಚ್ಚು ರನ್ ಗಳಿಸುವ ಅವಕಾಶ ಕೊಡಲಿಲ್ಲ. ಆದರೂ ನಮೀಬಿಯಾ ತನ್ನ ಸೀಮಿತ ಸಾಮರ್ಥ್ಯದ ನಡುವೆಯೂ ಕೆಚ್ಚೆದೆ ಬ್ಯಾಟಿಂಗ್ ಪ್ರದರ್ಶನ ತೋರಿತು. ಡೇವಿಡ್ ವಿಯೆಸ್ ಮತ್ತು ಕ್ರೆಗ್ ವಿಲಿಯಮ್ಸ್ ಅವರಿಬ್ಬರ ಬ್ಯಾಟಿಂಗ್ ನಮೀಬಿಯಾ ಇನ್ನಿಂಗ್ಸ್​ನ ಹೈಲೈಟ್ ಎನಿಸಿತು. ವಿಶ್ವದ ಹಲವು ತಂಡಗಳ ಭಾಗವಾಗಿ ಅನುಭವಿ ಎನಿಸಿರುವ ಡೇವಿಡ್ ವಿಯೆಸ್ ಅವರಂತೂ ನಿರ್ಭೀತಿಯಿಂದ ಆಡಿದರು. 31 ಬಾಲ್​ನಲ್ಲಿ ಅಜೇಯ 43 ರನ್ ಗಳಿಸಿದರು.

  ಪಾಕ್ ಸೆಮಿಫೈನಲ್ ಪ್ರವೇಶ ಖಚಿತ: 

  ಪಾಕಿಸ್ತಾನ್ ಈಗ ಸತತ 4 ಗೆಲುವಿನೊಂದಿಗೆ 8 ಪಾಯಿಂಟ್ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ನಮೀಬಿಯಾ 3 ಪಂದ್ಯಗಳಿಂದ 2 ಅಂಕಗಳನ್ನ ಹೊಂದಿದ್ದು ಸೆಮಿಫೈನಲ್​ಗೆ ತಾತ್ವಿಕವಾಗಿ ಅವಕಾಶ ಇನ್ನೂ ಇದೆ. ಆದರೆ, ವಾಸ್ತವವಾಗಿ ಅಫ್ಘಾನಿಸ್ತಾನ್ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ಸೆಮಿಫೈನಲ್​ಗೆ ಪೈಪೋಟಿ ಇದೆ. ಭಾರತ ಮತ್ತು ನಮೀಬಿಯಾ ತಂಡಗಳಿಗೆ ಕೇವಲ ಔಟ್​ಸೈಡ್ ಚಾನ್ಸ್ ಮಾತ್ರ ಇರುವುದು.

  ಬಾಂಗ್ಲಾ ವಿರುದ್ಧ ಸೌಥ್ ಆಫ್ರಿಕಾಗೆ ಗೆಲುವು:

  ಅಬುಧಾಬಿಯಲ್ಲಿ ನಡೆದ ಮೊದಲ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸೌತ್ ಆಫ್ರಿಕಾ 6 ವಿಕೆಟ್​ಗಳಿಂದ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಕೇವಲ 84 ರನ್​ಗೆ ಆಲೌಟ್ ಆಯಿತು. ಆನ್ರಿಕ್ ನೋರ್ಟಿಯಾ ಅವರ ಮಾರಕ ದಾಳಿಗೆ ಬಾಂಗ್ಲಾ ಹುಲಿಗಳು ಮಂಕಾದವು.

  ಇದನ್ನೂ ಓದಿ: IND vs AFG- ಮೊದಲು ಬ್ಯಾಟಿಂಗ್ ಮಾಡಿಯೇ ಭಾರತವನ್ನು ಸೋಲಿಸಲು ಸಾಧ್ಯ: ಅಫ್ಘಾನಿಸ್ತಾನ್ ವಿಶ್ವಾಸ

  ಬಾಂಗ್ಲಾ ಒಡ್ಡಿದ ಅಲ್ಪಮೊತ್ತದ ಗುರಿಯನ್ನ ಬೆನ್ನತ್ತುವ ಹಾದಿಯಲ್ಲಿ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತಗಳನ್ನ ಅನುಭವಿಸಿತು. ಆದರೆ, ನಾಯಕ ಟೆಂಬಾ ಬವುಮಾ, ವಾನ್ ಡರ್ ಡಸೆನ್ ಅವರು ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿನ ಹಾದಿ ಸುಗಮಗೊಳಿಸಿದರು.

  ಬಾಂಗ್ಲಾದೇಶಕ್ಕೆ ಇದು ಸತತ 4ನೇ ಸೋಲಾಗಿದೆ. ಸೌತ್ ಆಫ್ರಿಕಾ 4 ಪಂದ್ಯಗಳಿಂದ 6 ಅಂಕ ಗಳಿಸಿ ಪಾಯಿಂಟ್ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿದೆ.

  ಈ ಗುಂಪಿನಲ್ಲಿ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದೆ. ಸೌತ್ ಅಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳೂ ಸೆಮಿಫೈನಲ್ ರೇಸ್​ನಲ್ಲಿವೆ. ಶ್ರೀಲಂಕಾ ಮತ್ತು ಬಾಂಗ್ಲಾ ಹೊರಬಿದ್ದಿವೆ. ವೆಸ್ಟ್ ಇಂಡೀಸ್ ತಂಡ 3 ಪಂದ್ಯಗಳಿಂದ 2 ಅಂಕ ಹೊಂದಿದ್ದು ಸೆಮಿಫೈನಲ್ ಪ್ರವೇಶಕ್ಕೆ ಅದೃಷ್ಟ ಮತ್ತು ಪವಾಡದ ನಿರೀಕ್ಷೆಯಲ್ಲಿ ಇದೆ.

  ಸ್ಕೋರು ವಿವರ:

  ಪಾಕಿಸ್ತಾನ್ 20 ಓವರ್ 189/2
  (ಮೊಹಮ್ಮದ್ ರಿಜ್ವಾನ್ ಅಜೇಯ 79, ಬಾಬರ್ ಅಜಂ 70, ಮೊಹಮ್ಮದ್ ಹಫೀಜ್ ಅಜೇಯ 32 ರನ್)

  ನಮೀಬಿಯಾ 20 ಓವರ್ 144/5
  (ಕ್ರೆಗ್ ವಿಲಿಯಮ್ಸ್ 40, ಸ್ಟೀಫನ್ ಬಾರ್ಡ್ 29, ಡೇವಿಡ್ ವಿಯೆಸ್ ಅಜೇಯ 43, ಗೆರಾರ್ಡ್ ಎರಾಸ್ಮಸ್ 15 ರನ್)
  Published by:Vijayasarthy SN
  First published: