NZ vs ENG- ಮಿಚೆಲ್ ಭರ್ಜರಿ ಆಟ; ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್ ಪ್ರವೇಶ; ಇಂಗ್ಲೆಂಡ್​ಗೆ ನಿರಾಸೆ

T20 World Cup: ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ತಂಡದ 166 ರನ್ ಮೊತ್ತವನ್ನು ನ್ಯೂಜಿಲೆಂಡ್ 6 ಎಸೆತ ಇರುವಂತೆ ಚೇಸ್ ಮಾಡಿತು. ಟಿ20 ವಿಶ್ವಕಪ್​ನಲ್ಲಿ ಮೂರನೇ ಬಾರಿ ಫೈನಲ್ ತಲುಪಿದೆ.

ಡರಿಲ್ ಮಿಚೆಲ್

ಡರಿಲ್ ಮಿಚೆಲ್

  • News18
  • Last Updated :
  • Share this:
    ಅಬುಧಾಬಿ, ನ. 10: ಟಿ20 ವಿಶ್ವಕಪ್​ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡ (New Zealand reach T20 World Cup final) ಫೈನಲ್ ಹಂತ ಪ್ರವೇಶಿಸಿದೆ. ಇಂದು ನಡೆದ ಜಿದ್ದಾಜಿದ್ದಿನ ಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನು ನ್ಯೂಜಿಲೆಂಡ್ 5 ವಿಕೆಟ್​​ಗಳಿಂದ ಸೋಲಿಸಿತು. ಇಂಗ್ಲೆಂಡ್ ತಂಡದ 166 ರನ್​ಗಳ ಉತ್ತಮ ಮೊತ್ತವನ್ನು ನ್ಯೂಜಿಲೆಂಡ್ ರೋಚಕವಾಗಿ ಚೇಸ್ ಮಾಡಿ ಗೆದ್ದಿತು. ಡೆರಿಲ್ ಮಿಚೆಲ್ ಅಮೋಘ ಆಟವಾಡಿ ನ್ಯೂಜಿಲೆಂಡ್ ತಂಡಕ್ಕೆ ಐತಿಹಾಸಿಕ ಗೆಲುವು ಪ್ರಾಪ್ತವಾಗಲು ಪ್ರಮುಖ ಪಾತ್ರ ವಹಿಸಿದರು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ಚೇಸಿಂಗ್​ನಲ್ಲಿ ಕಿವೀಸ್ ಪಡೆ ಅಂತಿಮವಾಗಿ ಗೆಲುವಿನ ದಡ ಮುಟ್ಟಿತು.

    ಗೆಲ್ಲಲು ಇಂಗ್ಲೆಂಡ್ ಒಡ್ಡಿದ 167 ರನ್ ಗುರಿ ತುಸು ಕಠಿಣವೇ ಇತ್ತು. ಆದರೆ, ತೇವದ ಕಾರಣ ಇಂಗ್ಲೆಂಡ್ ತಂಡದ ಬೌಲಿಂಗ್ ತನ್ನ ಮೊನಚು ಕಳೆದುಕೊಂಡಿತ್ತು. ಆದರೂ 13 ರನ್ ಆಗುವಷ್ಟರಲ್ಲಿ ನ್ಯೂಜಿಲೆಂಡ್ ತಂಡದ 2 ವಿಕೆಟ್ ವಿಕೆಟ್ ಕಬಳಿಸಿತ್ತು. ಪಂದ್ಯ ಇಂಗ್ಲೆಂಡ್ ಪರ ವಾಲಿದಂತಿತ್ತು. ಈ ಸಂದರ್ಭದಲ್ಲಿ ಡರಿಲ್ ಮಿಚೆಲ್ ಮತ್ತು ಡೆವೋನ್ ಕಾನ್​ವೇ ಅವರು ನ್ಯೂಜಿಲೆಂಡ್ ಚೇಸಿಂಗ್​ಗೆ ಭಾರೀ ಪುಷ್ಟಿ ಕೊಟ್ಟರು. ನ್ಯೂಜಿಲೆಂಡ್ ಗೆಲುವಿನತ್ತ ಸಾಗಿತ್ತು.

    ಈ ಸಂದರ್ಭದಲ್ಲಿ ಸ್ಕೋರು 95 ರನ್ ಇದ್ದಾಗ ಕಾನ್ವೇ ಔಟಾದರು. ಅದಾಗಿ ಸ್ವಲ್ಪ ಹೊತ್ತಿಗೆ ಗ್ಲೆನ್ ಫಿಲಿಪ್ಸ್ ಕೂಡ ಔಟಾದರು. ಆಗ ಪಂದ್ಯ ಮತ್ತೆ ಇಂಗ್ಲೆಂಡ್ ಕಡೆ ತಿರುಗಿದಂತಿತ್ತು. ಬಳಿಕ ಮಿಚೆಲ್ ಮತ್ತು ಜೇಮ್ಸ್ ನೀಶಮ್ ಜೊತೆಯಾಗಿ ನಿಂತರು. ನೀಶಮ್ ಕೇವಲ 11 ಬಾಲ್​​ನಲ್ಲಿ 27 ರನ್ ಚಚ್ಚಿ ತಂಡವನ್ನ ಗೆಲುವಿನ ಸಮೀಪ ಕೊಂಡೊಯ್ದರು. ನೀಶಮ್ ಔಟಾದ ಬಳಿಕ ಮಿಚೆಲ್ ಅವರು ಮತ್ತಷ್ಟು ಅವಘಡಕ್ಕೆ ಆಸ್ಪದ ಕೊಡದೇ ಗೆಲುವಿನ ರನ್ ಗಳಿಸಿದರು. ಡರಿಲ್ ಮಿಚೆಲ್ 47 ಬಾಲ್​ನಲ್ಲಿ 72 ರನ್ ಗಳಿಸಿ ಅಜೇಯರಾಗಿ ಉಳಿದಿರು. ಅವರಿಗೆ ಪಂದ್ಯಶ್ರೇಷ್ಠ ಗೌರವವೂ ಸಿಕ್ಕಿತು.

    ಇದಕ್ಕೆ ಮುನ್ನ ಟಾಸ್ ಸೋತ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸಬೇಕಾಯಿತು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಇಂಗ್ಲೆಂಡ್ ತಂಡದ ಇನ್ನಿಂಗ್ಸ್​ಗೆ ವೇಗ ಸಿಕ್ಕಿದ್ದು ಮೊಯೀನ್ ಅಲಿ ಪ್ರವೇಶಿಸಿದ ಮೇಲೆ. ತಂಡದ ಸ್ಕೋರು 53 ರನ್ ಇದ್ದಾಗ ಜೋಸ್ ಬಟ್ಲರ್ ಔಟಾದ ಬಳಿಕ ಕ್ರೀಸ್​ಗೆ ಬಂದ ಮೊಯೀನ್ ಅಲಿ ತಮ್ಮ ಭರ್ಜರಿ ಫಾರ್ಮ್ ಅನ್ನು ಮುಂದುವರಿಸಿದರು. ಡೇವಿಡ್ ಮಲನ್ ಮತ್ತು ಮೊಯೀನ್ ಅಲಿ ಇಬ್ಬರೂ 3ನೇ ವಿಕೆಟ್​ಗೆ 7 ಓವರ್​ನಲ್ಲಿ 63 ರನ್ ಜೊತೆಯಾಟ ನೀಡಿದರು.

    ಇದನ್ನೂ ಓದಿ: Ravi Shastri- ಗೆಲ್ಲಲು ಯತ್ನಿಸದೆಯೇ ಸೋತೆವು, ಆಟಗಾರರಲ್ಲಿ ಆ ಅಂಶವೇ ಇರಲಿಲ್ಲ: ರವಿಶಾಸ್ತ್ರಿ

    ನಂತರ ಲಿಯಾಮ್ ಲಿವಿಂಗ್​ಸ್ಟೋನ್ ಜೊತೆಯೂ ಮೊಯೀನ್ ಅಲಿ ಮಹತ್ವದ ಜೊತೆಯಾಟದಲ್ಲಿ ಭಾಗಿಯಾದರು. ಅವರು 37 ಎಸೆತದಲ್ಲಿ ಅಜೇಯ 51 ರನ್ ಗಳಿಸಿದ ಪರಿಣಾಮ ಇಂಗ್ಲೆಂಡ್ ತಂಡ 166 ರನ್ ಮೊತ್ತ ಗಳಿಸಲು ಸಾಧ್ಯವಾಯಿತು. ಆದರೆ, ನ್ಯೂಜಿಲೆಂಡ್ ತಂಡ 6 ಎಸೆತ ಬಾಕಿ ಇರುವಂತೆ ಗೆಲುವು ಪಡೆಯಿತು. ಇದರೊಂದಿಗೆ ವಿಶ್ವದ ನಂಬರ್ ಒನ್ ಟಿ20 ತಂಡವಾದ ಇಂಗ್ಲೆಂಡ್ ತಂಡದ ವಿಶ್ವಕಪ್ ಪ್ರಯಾಣ ಅಂತ್ಯವಾಯಿತು.

    ಪಾಕಿಸ್ತಾನ್-ಆಸ್ಟ್ರೇಲಿಯಾ ಮಧ್ಯೆ ಮತ್ತೊಂದು ಸೆಮಿಫೈನಲ್:

    ನಾಳೆ ಗುರುವಾರ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಮಧ್ಯೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೇ ಸೋಲರಿಯದ ಸರದಾರರಾಗಿರುವ ಪಾಕಿಸ್ತಾನ ತಂಡಕ್ಕೆ ಆಸ್ಟ್ರೇಲಿಯಾ ಕಠಿಣ ಸವಾಲು ಒಡ್ಡುವ ನಿರೀಕ್ಷೆ ಇದೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯ ಸಂಜೆ 7:30ಕ್ಕೆ ಆರಂಭವಾಗುತ್ತದೆ.

    ಸ್ಕೋರು ವಿವರ:

    ಇಂಗ್ಲೆಂಡ್ 20 ಓವರ್ 166/4
    (ಮೊಯೀನ್ ಅಲಿ ಅಜೇಯ 51, ಡೇವಿಡ್ ಮಲನ್ 41, ಜೋಸ್ ಬಟ್ಲರ್ 29, ಲಿಯಾಮ್ ಲಿವಿಂಗ್​ಸ್ಟೋನ್ 17 ರನ್)

    ನ್ಯೂಜಿಲೆಂಡ್ 19 ಓವರ್ 167/5
    (ಡರಿಲ್ ಮಿಚೆಲ್ ಅಜೇಯ 72, ಡೆವೋನ್ ಕಾನ್​ವೇ 46, ಜೀಮ್ಸ್ ನೀಶಮ್ 27 ರನ್- ಲಿಯಾಮ್ ಲಿವಿಂಗ್​ಸ್ಟೋನ್ 22/2, ಕ್ರಿಸ್ ವೋಕ್ಸ್ 36/2)
    Published by:Vijayasarthy SN
    First published: