T20 World Cup- ಮ್ಯಾಜಿಕ್ ಓಟ ಮುಂದುವರಿಸಿದ ನಮೀಬಿಯಾ; ಸ್ಕಾಟ್ಲೆಂಡ್, ಬಾಂಗ್ಲಾಗೆ ಸತತ 2 ಸೋಲು

Namibia beat Scotland; England beat Bangladesh- ಮೊದಲ ಗುಂಪಿನಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದರೆ, ಎರಡನೇ ಗುಂಪಿನಲ್ಲಿ ಸ್ಕಾಟ್ಲೆಂಡ್ ತಂಡವನ್ನು ನಮೀಬಿಯಾ ಪರಾಭವಗೊಳಿಸಿದೆ.

ನಮೀಬಿಯಾ ಕ್ರಿಕೆಟ್ ತಂಡ

ನಮೀಬಿಯಾ ಕ್ರಿಕೆಟ್ ತಂಡ

 • Share this:
  ಅಬುಧಾಬಿ, ಅ. 27: ಆಫ್ರಿಕಾ ಖಂಡದ ಪುಟ್ಟ ದೇಶವಾದ ನಮೀಬಿಯಾ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರೀ ಅಚ್ಚರಿ ಹುಟ್ಟಿಸಿರುವ ಕ್ರಿಕೆಟ್ ತಂಡವಾಗಿದೆ. ಹಲವು ವರ್ಷಗಳ ಬಳಿಕ ವಿಶ್ವಕಪ್​ವೊಂದರಲ್ಲಿ ಆಡುವ ಭಾಗ್ಯ ಪಡೆದ ನಮೀಬಿಯಾ ಮೊದಲ ಬಾರಿಗೆ ಪ್ರಧಾನ ಹಂತಕ್ಕೇರಿತು. ಅಲ್ಲಿ ಮೊದಲ ಪಂದ್ಯದಲ್ಲೇ ಗೆಲುವಿನ ಸಂಭ್ರಮ ಪಡೆಯಿತು. ಇಂದು ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ನಮೀಬಿಯಾ 4 ವಿಕೆಟ್​ಗಳಿಂದ ಸೋಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿತು. ಇದಕ್ಕೆ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್ ಅಮೋಘ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತನ್ನ ಮೊದಲ ಗುಂಪಿನಲ್ಲಿ ಟಾಪರ್ ಆಗಿ ಸ್ಥಾನ ಭದ್ರ ಮಾಡಿಕೊಂಡಿದೆ.

  ಸ್ಕಾಟ್ಲೆಂಡ್ ವಿರುದ್ಧ ನಮೀಬಿಯಾದ ಗೆಲುವಿನ ಸೂತ್ರಧಾರ ರುಬೆನ್ ಟ್ರಂಪಲ್ಮನ್. ಇವರ ಮಾರಕ ದಾಳಿಗೆ ಸಿಕ್ಕು ಆರಂಭಿಕ ಆಘಾತ ಅನುಭವಿಸಿದ ಸ್ಕಾಟ್ಲೆಂಡ್ ತಂಡ ನಂತರ ಚೇತರಿಸಿಕೊಳ್ಳಲಾಗದೇ 20 ಓವರ್​ನಲ್ಲಿ ಕೇವಲ 109 ರನ್​ಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು. ಮೈಕೇಲ್ ಲೀಸ್ಕ್ ಮತ್ತು ಕ್ರಿಸ್ ಗ್ರೀವ್ಸ್ 6ನೇ ವಿಕೆಟ್​ಗೆ 39 ರನ್ ಜೊತೆಯಾಟ ಆಡದೇ ಹೋಗಿದ್ದರೆ ಸ್ಕಾಟ್ಲೆಂಡ್ ನೂರು ರನ್ ಗಡಿ ಮುಟ್ಟುವುದೂ ಕಷ್ಟವಾಗುತ್ತಿತ್ತು.

  ನಮೀಬಿಯಾ ತಂಡ ಈ ಅಲ್ಪಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದು ಎಂಬ ನಿರೀಕ್ಷೆ ಇದ್ದರೂ ಕೊನೆ ಕೊನೆಯಲ್ಲಿ ಅಲ್ಲಲ್ಲಿ ಚೇಸಿಂಗ್​ನಲ್ಲಿ ಎಡವಿತು. ಆದರೆ, ಜೋನಾಥನ್ ಸ್ಮಿಟ್ ಅವರ ಅಮೋಘ ಬ್ಯಾಟಿಂಗ್​ನಿಂದಾಗಿ ನಮೀಬಿಯಾ ಐತಿಹಾಸಿಕ ಗೆಲುವು ಪಡೆಯುವಲ್ಲಿ ಯಶಸ್ವಿಯಾಯಿತು.

  ಇದನ್ನೂ ಓದಿ: David Warner- ಕಾಂಕ್ರೀಟ್ ಪಿಚ್​ನಲ್ಲಿ ಡೇವಿಡ್ ವಾರ್ನರ್ ಪ್ರಾಕ್ಟೀಸ್; ಸಿಂಥೆಟಿಕ್ ಟ್ರ್ಯಾಕ್​ನಿಂದ ಏನು ಲಾಭ?

  ಮೊದಲ ಸುತ್ತಿನಲ್ಲಿ ಸತತ ಮೂರು ಪಂದ್ಯಗಳನ್ನ ಗೆದ್ದು ತಾನು ದೊಡ್ಡ ದೊಡ್ಡ ತಂಡಗಳಿಗೆ ಹೆದರುವುದಿಲ್ಲ ಎಂದು ತೊಡೆತಟ್ಟಿದ್ದ ಸ್ಕಾಟ್ಲೆಂಡ್ ತಂಡ ಈಗ ನಮೀಬಿಯಾ ಎದುರು ಸೋತು ಸುಣ್ಣವಾಗಿದೆ.

  ಬಾಂಗ್ಲಾ ವಿರುದ್ಧ ಇಂಗ್ಲೆಂಡ್​ಗೆ ಜಯ:

  ಇಂದಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್ ತಂಡ 8 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಬಾಂಗ್ಲಾದೇಶದ 124 ರನ್​ಗಳ ಅಲ್ಪ ಮೊತ್ತವನ್ನು ಇಂಗ್ಲೆಂಡ್ 15ನೇ ಓವರ್​ನಲ್ಲಿ ಚೇಸ್ ಮಾಡಿತು. ಜೇಸನ್ ರಾಯ್ ಕೇವಲ 38 ಬಾಲ್​ನಲ್ಲಿ 61 ರನ್ ಭಾರಿಸಿದರು. ವಿಶ್ವದ ನಂಬರ್ ಒನ್ ಟಿ20 ಬ್ಯಾಟರ್ ಡೇವಿಡ್ ಮಲನ್ ಅಜೇಯ 28 ರನ್ ಗಳಿಸಿ ಇಂಗ್ಲೆಂಡ್ ತಂಡದ ಗೆಲುವನ್ನು ಸುಲಭಗೊಳಿಸಿದರು.

  ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಆರಂಭಿಕ ಆಘಾತಕ್ಕೊಳಗಾಗಿ 26 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಬಳಿಕ ಮುಷ್ಫಿಕುರ್ ರಹೀಮ್ ಮತ್ತು ಮಹಮುದುಲ್ಲಾ, ಹಾಗೂ ಅಂಂತ್ಯದಲ್ಲಿ ನುಸುಮ್ ಅಹಮದ್, ನೂರುಲ್ ಹಸನ್ ಅವರು ಒಂದಷ್ಟು ರನ್ ಕಲೆಹಾಕಿದ ಕಾರಣ ಬಾಂಗ್ಲಾ ಸ್ಕೋರು 124 ರನ್ ಮುಟ್ಟಲು ಸಾಧ್ಯವಾಯಿತು. ಆದರೆ, ಇಂಗ್ಲೆಂಡ್ ತಂಡಕ್ಕೆ ಈ ಅಲ್ಪ ಮೊತ್ತ ಸುಲಭ ತುತ್ತಾಯಿತು.

  ಇದನ್ನೂ ಓದಿ: T20 Rankings: ಇಂಗ್ಲೆಂಡ್, ಮಲನ್, ಶಮ್ಸಿ, ಶಾಕಿಬ್ ನಂ.1; ಭಾರತದ ಟಿ20 ಟಾಪರ್ಸ್ ಯಾರು? ಇಲ್ಲಿದೆ ಪಟ್ಟಿ

  ಮುಂದಿನ ಪಂದ್ಯಗಳು:

  ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯವನ್ನು ಅ. 29ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಇಂಗ್ಲೆಂಡ್​ನ ಮುಂದಿನ ಪಂದ್ಯ ಅ. 30ರಂದು ಆಸ್ಟ್ರೇಲಿಯಾ ವಿರುದ್ಧ ಇದೆ.

  ಇನ್ನು, ನಮೀಬಿಯಾ ತಂಡ ತನ್ನ ಮುಂದಿನ ಪಂದ್ಯವನ್ನು ಅ. 31ರಂದು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಸ್ಕಾಟ್​ಲೆಂಡ್​ನ ಮುಂದಿನ ಪಂದ್ಯ ನ. 5ರಂದು ಭಾರತದ ವಿರುದ್ಧ ಇದೆ.

  ನಾಳೆಯ (ಅ. 28) ಪಂದ್ಯ:

  ನಾಳೆ ಗುರುವಾರ ಒಂದೇ ಪಂದ್ಯ ಇದೆ. ಮೊದಲ ಗುಂಪಿನಲ್ಲಿರುವ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸೂಪರ್-12 ಹಂತದಲ್ಲಿ ತಲಾ ಒಂದೊಂದು ಪಂದ್ಯವನ್ನ ಗೆದ್ದಿವೆ. ಲಂಕನ್ನರು ಬಾಂಗ್ಲಾವನ್ನು ಮಣಿಸಿದ್ದರೆ, ಆಸ್ಟ್ರೇಲಿಯನ್ನರು ಸೌತ್ ಆಫ್ರಿಕಾವನ್ನು ಪರಾಭವಗೊಳಿಸಿದ್ದರು. ಈ ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ತಂಡ ಸತತ ಎರಡು ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದೆ.
  Published by:Vijayasarthy SN
  First published: