ದುಬೈ, ಅ. 23: ಮೆಂಟಾರ್ ಆಗಿ ಎಂಎಸ್ ಧೋನಿ ಉಪಸ್ಥಿತಿ ಇರುವುದು ಟೀಮ್ ಇಂಡಿಯಾದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಹಲವು ಆಟಗಾರರೇ ಇದನ್ನ ಬಹಿರಂಗವಾಗಿ ಒಪ್ಪಿಕೊಂಡಿದ್ಧಾರೆ. ಆಟಗಾರನಾಗಿದ್ದಾಗ ಮತ್ತು ನಾಯಕನಾಗಿದ್ದಾಗ ಮೈದಾನದಲ್ಲಿ ಒತ್ತಡದ ಸಂದರ್ಭಗಳನ್ನ ಸಮರ್ಪಕವಾಗಿ ನಿಭಾಯಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಈಗ ಮೆಂಟಾರ್ ಆಗಿಯೂ ತಂಡದ ಆಟಗಾರರ ಅಗತ್ಯತೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅಂತೆಯೇ, ಯಾವ ರೂಪದಲ್ಲಾದರೂ ಧೋನಿ ಇದ್ದರೆ ಆಟಗಾರರಿಗೆ ಆತ್ಮವಿಶ್ವಾಸ ಹೆಚ್ಚೇ ಮೂಡುತ್ತದೆ. ಟಿ20 ವಿಶ್ವಕಪ್ನ ಸೂಪರ್-12 ಹಂತದಲ್ಲಿರುವ ಟೀಮ್ ಇಂಡಿಯಾದ ಬ್ಯಾಟುಗಾರರ ಅಭ್ಯಾಸಕ್ಕೆ ನೆಟ್ ಬೌಲರ್ಸ್ ತುಸು ಅಗತ್ಯ. ಆದರೆ, ಎಂಟು ನೆಟ್ ಬೌಲರ್ಸ್ ಪೈಕಿ ನಾಲ್ವರು ತಮ್ಮ ತವರಿಗೆ ವಾಪಸ್ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮೆಂಟರ್ ಎಂಎಸ್ ಧೋನಿ ಅವರೇ ಖುದ್ದಾಗಿ ಥ್ರೋಡೌನ್ ಕೆಲಸದಲ್ಲಿ ತೊಡಗಿ ಆಟಗಾರರಿಗೆ ಸಹಾಯವಾಗುತ್ತಿದ್ಧಾರೆ.
ಭಾರತದಲ್ಲಿ ಈಗ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿರುವ ಹಿನ್ನೆಲೆಯಲ್ಲಿ, ಯುಎಇಯಲ್ಲಿ ಟೀಮ್ ಇಂಡಿಯಾ ಜೊತೆಗೆ ನೆಟ್ ಬೌಲರ್ಸ್ ಆಗಿದ್ದ ಇದ್ದ ಕರ್ನಾಟಕದ ಕೆ ಗೌತಮ್ ಸೇರಿದಂತೆ ನಾಲ್ವರು ಬೌಲರ್ಗಳು ತವರಿಗೆ ಹೋಗಿ ತಮ್ಮ ತಮ್ಮ ರಾಜ್ಯಗಳ ತಂಡಗಳನ್ನ ಸೇರಿಕೊಳ್ಳಲಿದ್ದಾರೆ. ಹೀಗಾಗಿ, ಭಾರತಕ್ಕೆ ನೆಟ್ ಬೌಲರ್ಗಳ ಕೊರತೆ ಇದೆ. ಈಗ ಬ್ಯಾಟ್ಸ್ಮನ್ಗಳಿಗೆ ನೆಟ್ ಪ್ರಾಕ್ಟೀಸ್ ಮಾಡಲು ಥ್ರೋ ಡೌನ್ ಸ್ಪೆಷಲಿಸ್ಟ್ಗಳ ಸೇವೆಯನ್ನೇ ನೆಚ್ಚಿಕೊಳ್ಳುವಂತಾಗಿದೆ. ಟೀಮ್ ಇಂಡಿಯಾ ಜೊತೆ ಥ್ರೋಡೌನ್ ಸ್ಪೆಷಲಿಸ್ಟ್ಸ್ ಬೆಂಗಳೂರು ಹುಡುಗ ರಾಘವೇಂದ್ರ, ನುವಾನ್ ಮತ್ತು ದಯಾನಂದ್ ಅವರಿದ್ದಾರೆ. ಈಗ ಈ ಹುಡುಗರ ಜೊತೆಗೆ ಧೋನಿ ಕೂಡ ಆ ಕೆಲಸಕ್ಕೆ ಸೇರಿಕೊಂಡಿದ್ದಾರೆ. ನೆಟ್ನಲ್ಲಿ ಬ್ಯಾಟ್ಸ್ಮನ್ಗೆ ಚೆಂಡು ಥ್ರೋ ಮಾಡುವ ಕೆಲಸವನ್ನೂ ಧೋನಿ ಮಾಡುತ್ತಿದ್ಧಾರೆ. ಬಿಸಿಸಿಐ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಧೋನಿ ಥ್ರೋ ಮಾಡುತ್ತಿರುವ ಫೋಟೋಗಳನ್ನ ಪೋಸ್ಟ್ ಮಾಡಿದೆ.
ಯಾರಿದ್ದರು ನೆಟ್ ಬೌಲರ್ಸ್?:
ಕರ್ನಾಟಕದ ಅಲ್ರೌಂಡರ್ ಕೃಷ್ಣಪ್ಪ ಗೌತಮ್, ಕೆಕೆಆರ್ ತಂಡದ ಹೊಸ ಆಲ್ರೌಂಡ್ ಸ್ಟಾರ್ ವೆಂಕಟೇಶ್ ಅಯ್ಯರ್, ಕರಣ್ ಶರ್ಮಾ ಮತ್ತು ಶಹಬಾಜ್ ಅಹ್ಮದ್ ಅವರು ಟೀಮ್ ಇಂಡಿಯಾಗೆ ನೆಟ್ ಬೌಲಿಂಗ್ ಮೂಲಕ ಸಹಾಯ ಮಾಡುತ್ತಿದ್ದರು. ಇವರಲ್ಲಿ ವೆಂಕಟೇಶ್ ಅಯ್ಯರ್ ಮತ್ತು ಶಹಬಾಜ್ ಅಹ್ಮದ್ ಫಾಸ್ಟ್ ಬೌಲರ್ಸ್ ಆಗಿದ್ದರೆ, ಕೆ ಗೌತಮ್ ಮತ್ತು ಕರಣ್ ಶರ್ಮಾ ಸ್ಪಿನ್ನರ್ಸ್ ಆಗಿದ್ದಾರೆ. ಈ ನಾಲ್ವರು ಬೌಲರ್ಸ್ ಈಗಾಗಲೇ ತಂತಮ್ಮ ತವರು ರಾಜ್ಯಗಳಿಗೆ ವಾಪಸ್ಸಾಗಿದ್ದಾರೆ.
ಈಗ ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ ಮತ್ತು ಲುಕ್ಮನ್ ಮೆರಿವಾಲ ಮಾತ್ರ ಟೀಮ್ ಇಂಡಿಯಾ ಜೊತೆ ಉಳಿದುಕೊಂಡಿದ್ಧಾರೆ.
ಇದನ್ನೂ ಓದಿ: Emotion- ಮಗಳನ್ನ ನೋಡಿ ತುಂಬಾ ದಿನ ಆಯ್ತು… ಲಂಕಾ ತಂಡ ತೊರೆಯಲಿರುವ ಜಯವರ್ದನೆ
ವಿಶ್ವಕಪ್ ಇದ್ದರೂ ನೆಟ್ ಬೌಲರ್ಸ್ ಮರಳಿಸಿದ್ದು ಯಾಕೆ?
ಭಾರತ ತಂಡದ ವಿಶ್ವಕಪ್ ಅಭಿಯಾನ ನಾಳೆ (ಭಾನುವಾರ) ಆರಂಭವಾಗುತ್ತದೆ. ನಾಳೆಯಿಂದ ಭಾರತಕ್ಕೆ ನೆಟ್ ಪ್ರಾಕ್ಟೀಸ್ ಮಾಡಲು ಹೆಚ್ಚು ಅವಕಾಶ ಸಿಗುವುದಿಲ್ಲ. ಹೀಗಾಗಿ, ಹೆಚ್ಚು ನೆಟ್ ಬೌಲರ್ಸ್ ಅಗತ್ಯತೆ ಬೀಳುವುದಿಲ್ಲ. ಮೇಲಾಗಿ, ಯುಎಇಯ ಸುಡು ಬಿಸಿಲಿನಲ್ಲಿ ನೆಟ್ ಪ್ರಾಕ್ಟೀಸ್ಗೆ ಸ್ಪಿನ್ನರ್ಗಳ ಅವಶ್ಯಕತೆ ಇಲ್ಲವೆನ್ನಲಾಗುತ್ತಿದೆ. ಹೀಗಾಗಿ, ನಾಲ್ವರು ಫಾಸ್ಟ್ ಬೌಲರ್ಗಳನ್ನ ಮಾತ್ರ ಇರಿಸಿಕೊಂಡು ಉಳಿದವರನ್ನ ವಾಪಸ್ ಕಳುಹಿಸಲಾಗಿದೆ.
ಭಾರತದಲ್ಲಿ ಮುಷ್ತಾಕ್ ಅಲಿ ಟಿ20 ಟೂರ್ನಿ ಇರುವುದರಿಂದ ಈ ಬೌಲರ್ಗಳು ನೆಟ್ ಪ್ರಾಕ್ಟೀಸ್ಗಿಂತ ಹೆಚ್ಚಾಗಿ ಪಂದ್ಯಗಳನ್ನಾಡುವುದು ಒಳ್ಳೆಯದು. ಈ ಕಾರಣಕ್ಕೆ ನಾಲ್ವರನ್ನ ಬಿಟ್ಟು ಕಳುಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ