Eng vs SL- ಬಟ್ಲರ್ ಶತಕ, ಲಂಕಾ ಮೇಲೆ ಇಂಗ್ಲೆಂಡ್ ಜಯಭೇರಿ; ಸೆಮಿಫೈನಲ್ ಪ್ರವೇಶ

T20 World Cup, England vs Sri Lanka- ಇಂಗ್ಲೆಂಡ್ ತಂಡದ 163 ರನ್​ಗೆ ಪ್ರತಿಯಾಗಿ ಶ್ರೀಲಂಕಾ ಇನ್ನಿಂಗ್ಸ್ 137 ರನ್ಗೆ ಮುಗಿಯಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡ

ಇಂಗ್ಲೆಂಡ್ ಕ್ರಿಕೆಟ್ ತಂಡ

  • Share this:
    ಶಾರ್ಜಾ, ನ. 01: ವಿಶ್ವದ ನಂಬರ್ ಒನ್ ಟಿ20 ತಂಡ ಹಾಗೂ ಈಗ ನಡೆಯುತ್ತಿರುವ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿರುವ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ ಮಾಡಿದೆ. ಸೂಪರ್-12 ಸುತ್ತಿನಲ್ಲಿ ಸತತ ನಾಲ್ಕನೇ ಗೆಲುವು ಪಡೆದಿದೆ. ಇಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಜಯಭೇರಿ ಭಾರಿಸಿತು. ಇಂಗ್ಲೆಂಡ್ ಗೆಲ್ಲಲು ಒಡ್ಡಿದ 164 ರನ್ ಗುರಿಯನ್ನ ಬೆನ್ನತ್ತಿದ ಲಂಕಾ ಸಿಂಹಗಳು ಗೆಲುವಿಗೆ ಬಹಳ ಪ್ರಯತ್ನ ನಡೆಸಿದರು. ಆರಂಭಿಕ ಆಘಾತ ಅನುಭವಿಸಿದರೂ ಸುಲಭವಾಗಿ ಸೋಲಪ್ಪಲಿಲ್ಲವಾದರೂ ಅಂತಿಮವಾಗಿ 26 ರನ್​ಗಳಿಂದ ಪರಾಭವಗೊಂಡಿತು. ಇಂಗ್ಲೆಂಡ್ ತಂಡ ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ ಖಚಿತಗೊಂಡಿತು.

    ಇಂಗ್ಲೆಂಡ್ ಗೆಲುವಿನಲ್ಲಿ ಜೋಸ್ ಬಟ್ಲರ್ ಪಾತ್ರ ಮುಖ್ಯವಾಯಿತು. ವಿಕೆಟ್ ಕೀಪರ್ ಬ್ಯಾಟರ್ ಜೋಸ್ ಬಟ್ಲರ್ ಶತಕ ಈ ಪಂದ್ಯದ ಹೈಲೈಟ್ ಆಯಿತು. ಇಯಾನ್ ಮಾರ್ಗನ್ ಕೂಡ ಫಾರ್ಮ್​ಗೆ ಬಂದದ್ದು ಇಂಗ್ಲೆಂಡ್ ತಂಡಕ್ಕೆ ಡಬಲ್ ಸ್ವೀಟ್ ಸಿಕ್ಕಂತಾಯಿತು.

    ಬಟ್ಲರ್ ಆಟದ ಸೊಬಗು:

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿತು. 35 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಜೋಸ್ ಬಟ್ಲರ್ ದೃತಿಗೆಡಲಿಲ್ಲ. ಅವರು ಮತ್ತು ನಾಯಕ ಇಯಾನ್ ಮಾರ್ಗನ್ 4ನೇ ವಿಕೆಟ್​ಗೆ 112 ರನ್ ಜೊತೆಯಾಟ ಆಡಿದರು. ಜೋಸ್ ಬಟ್ಲರ್ ಅಕ್ಷರಶಃ ಸ್ಫೋಟಕ ಆಟವಾಡಿದರು. ಕೇವಲ 67 ಬಾಲ್​ನಲ್ಲಿ ಅವರು 101 ರನ್ ಗಳಿಸಿ ಕೊನೆಯವರೆಗೂ ಉಳಿದರು. ಇವರ ಅಮೋಘ ಬ್ಯಾಟಿಂಗ್​ನಿಂದಾಗಿ ಇಂಗ್ಲೆಂಡ್ 163 ರನ್ ಗಳಿಸಲು ಶಕ್ಯವಾಯಿತು.

    ಜೋಸ್ ಬಟ್ಲರ್ ಅವರದ್ದು ಇದು ಚೊಚ್ಚಲ ಟಿ20 ಶತಕವಾಗಿದೆ. ಈ ಟಿ20 ವಿಶ್ವಕಪ್​ನಲ್ಲಿ ಬಂದ ಮೊದಲ ಶತಕವೂ ಇದಾಗಿದೆ.

    ಇದನ್ನೂ ಓದಿ: Stats- ಟಾಸ್ ಮುಖ್ಯವಾಯ್ತಾ? ಟಿ20 ವಿಶ್ವಕಪ್​ನಲ್ಲಿ ಮೊದಲು ಬ್ಯಾಟ್ ಮಾಡಿ ಗೆದ್ದವರು ಎಷ್ಟು?

    ಬೃಹತ್ ಮೊತ್ತವನ್ನು ಚೇಸ್ ಮಾಡಿದ ಶ್ರೀಲಂಕಾ ಕೂಡ ಆರಂಭಿಕ ಆಘಾತ ಅನುಭವಿಸಿತು. ಆದರೆ,  ಇಂಗ್ಲೆಂಡ್​ನಂತೆ ಚೇತರಿಸಿಕೊಳ್ಳದ ಲಂಕನ್ನರು 11ನೇ ಓವರ್​ವರೆಗೂ ವಿಕೆಟ್ ಕಳೆದುಕೊಳ್ಳುತ್ತಾ ಹೋದರು. 76 ರನ್​ಗೆ 5 ವಿಕೆಟ್ ಕಳೆದುಕೊಂಡ ಶ್ರೀಲಂಕಾ ಸೋಲಿನ ಸುಳಿಗೆ ಸಿಲುಕಿತು. ಆದರೆ, ನಾಯಕ ದಾಸುನ್ ಶಾನಕ ಮತ್ತು ವನಿಂದು ಹಸರಂಗ ಲಂಕಾ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. ವಾತಾವರಣದ ತೇವಾಂಶವು ಇಂಗ್ಲೆಂಡ್ ಬೌಲರ್​ಗಳ ಕೆಲಸವನ್ನು ಕಠಿಣಗೊಳಿಸಿತು.

    ಹಸರಂಗ ವಿಕೆಟ್ ಟರ್ನಿಂಗ್ ಪಾಯಿಂಟ್:

    ಹಸರಂಗ ಮತ್ತು ಶಾನಕ ಅವರು 6ನೇ ವಿಕೆಟ್​ಗೆ 53 ರನ್ ಜೊತೆಯಾಟ ನೀಡಿದರು. ಈ ಪಂದ್ಯವನ್ನು ಅವರಿಬ್ಬರೂ ಇಂಗ್ಲೆಂಡ್​ನಿಂದ ಕಸಿದು ಹೋಗುತ್ತಾರೆಂದು ಭಾವಿಸುವಷ್ಟರಲ್ಲಿ ಹಸರಂಗ ಔಟಾದರು. ಬೌಂಡರಿ ಗೆರೆಯಲ್ಲಿ ಇಂಗ್ಲೆಂಡ್ ಫೀಲ್ಡರ್​​ಗಳು ಅದ್ಭುತವಾಗಿ ಹಿಡಿದ ಕ್ಯಾಚ್​ಗೆ ಹಸರಂಗ ಬಲಿಯಾದರು. ಅಲ್ಲಿಂದ ಇಂಗ್ಲೆಂಡ್ ಕಡೆಗೆ ಪಂದ್ಯ ಮತ್ತೆ ವಾಲಿತು. ನಾಯಕ ಶಾನಕ ದುರದೃಷ್ಟಕರ ರೀತಿಯಲ್ಲಿ ರನ್ ಔಟ್ ಆದರು. ಬಳಿಕ ಲಂಕಾದ ಚೇಸಿಂಗ್ ಹಾದಿ ತೀರಾ ಜಟಿಲಗೊಂಡಿತು.

    ಇಂಗ್ಲೆಂಡ್ ಈ ಗೆಲುವಿನೊಂದಿಗೆ 4 ಪಂದ್ಯಗಳಿಂದ 8 ಅಂಕ ಗಳಿಸಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಶ್ರೀಲಂಕಾ ತಂಡದ ಸೆಮಿಫೈನಲ್ ಆಸೆ ಬಹುತೇಕ ಕಮರಿದಂತಾಗಿದೆ.

    ಇದನ್ನೂ ಓದಿ: T20 World Cup: ಸೆಮಿಫೈನಲ್ ಪ್ರವೇಶಿಸಲು ಭಾರತಕ್ಕೆ ಇರೋದು ಇದೊಂದೇ ಲೆಕ್ಕಾಚಾರ

    ಮುಂದಿನ ಪಂದ್ಯಗಳು:

    ಶ್ರೀಲಂಕಾ ತನ್ನ ಮುಂದಿನ ಪಂದ್ಯವನ್ನು ಅಬುಧಾಬಿಯಲ್ಲಿ ನವೆಂಬರ್ 4ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಇಂಗ್ಲೆಂಡ್ ತಂಡಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಇದೆ. ನವೆಂಬರ್ 6ರಂದು ಸೌತ್ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಆಡಲಿದೆ. ಈ ಪಂದ್ಯ ಶಾರ್ಜಾದಲ್ಲಿ ನಡೆಯಲಿದೆ.

    ಸ್ಕೋರು ವಿವರ:

    ಇಂಗ್ಲೆಂಡ್ 20 ಓವರ್ 163/4
    (ಜೋಸ್ ಬಟ್ಲರ್ ಅಜೇಯ 101, ಇಯಾನ್ ಮಾರ್ಗನ್ 40 ರನ್- ವನಿಂದು ಹಸರಂಗ 21/3)

    ಶ್ರೀಲಂಕಾ 19 ಓವರ್ 137/10
    (ಚರಿತ್ ಅಸಲಂಕಾ 21, ಭನುಕ ರಾಜಪಕ್ಸ 26, ವನಿಂದು ಹಸರಂಗ 34, ದಾಸುನ್ ಶಾನಕ 26 ರನ್- ಅದಿಲ್ ರಶೀದ್ 19/2)
    Published by:Vijayasarthy SN
    First published: