Fans Depression- ಟೀಮ್ ಇಂಡಿಯಾ ಸೋಲಿಂದ ಖಿನ್ನರಾದ ಫ್ಯಾನ್ಸ್; ಮನಃಶಾಸ್ತ್ರಜ್ಞರಿಂದ ಈ ಸಲಹೆ
T20 World Cup, India vs Pakistan: ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿದೆ. ಇದರಿಂದ ಭಾರತದ ಅಸಂಖ್ಯಾತ ಅಭಿಮಾನಿಗಳಲ್ಲಿ ನಿರಾಸೆ ಮಡುಗಟ್ಟಿದೆ. ಈ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗದಂತೆ ಇರಲು ಮನಃಶಾಸ್ತ್ರಜ್ಞರು ಕೆಲ ಸಲಹೆ ನೀಡಿದ್ಧಾರೆ.
ಭಾರತ ಪಾಕ್ ಪಂದ್ಯ ನಡೆದ ದುಬೈ ಸ್ಟೇಡಿಯಂನಲ್ಲಿ ನೆರೆದ ಟೀಮ್ ಇಂಡಿಯಾ ಅಭಿಮಾನಿಗಳು
ಆಟದಲ್ಲಿ ಸೋಲು ಗೆಲುವು(Win Or lose) ಸಹಜ ಎಂದು ಮಾತಿನಲ್ಲಿ ಹೇಳೋದು ಸಹಜ. ಆದರೆ, ಕ್ರಿಕೆಟ್(Cricket) ಒಂದು ಧರ್ಮವಾಗಿರುವ ಭಾರತದಲ್ಲಿ ನಮ್ಮ ತಂಡ ಸೋತರೆ ಅಭಿಮಾನಿಗಳ ಎದೆ ಧಸಕ್ಕೆನ್ನುವುದು ನಿಜ. ಅದರಲ್ಲೂ ಪಾಕಿಸ್ತಾನ(Pakistan) ವಿರುದ್ಧ ಭಾರತ(India) ಸೋತರೆ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗುತ್ತದೆ. ಸೋಲಿನ ಶಾಕ್(Shock)ನಿಂದ ಹೃದಯ ಸ್ತಂಭನಗೊಂಡ ಘಟನೆಗಳು ಹಲವಿವೆ. ನಿನ್ನೆ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ ಕ್ರಿಕೆಟ್ ಪ್ರೇಮಿಗಳು(Cricket Lovers) ಅತೀವ ನಿರಾಸೆಗೊಂಡಿದ್ಧಾರೆ. ಹಿಂದೆಲ್ಲಾ ಭಾರತ ಕ್ರಿಕೆಟ್ ತಂಡ ಕೆಲ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದರೆ ಆಟಗಾರರ ಮನೆಗಳ ಮೇಲೆ ಕಿಡಿಗೇಡಿಗಳು ದಾಳಿ(Attack) ಮಾಡುವ ಮಟ್ಟಕ್ಕೆ ಅಭಿಮಾನಿಗಳ ಹತಾಶೆ ಅತಿರೇಕ ಮಟ್ಟಕ್ಕೆ ಹೋಗುತ್ತದೆ. ಒಂದು ಆಟದಲ್ಲಿನ ಸೋಲು ಅಭಿಮಾನಿಗಳನ್ನ ಇಷ್ಟು ಹತಾಶೆಗೊಳಿಸಬಲ್ಲುದಾ ಎಂದು ಅಚ್ಚರಿ ಆಗಬಹುದು. ಆದರೆ, ಇದು ನಿಜ ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ನಮ್ಮ ನೆಚ್ಚಿನ ತಂಡ ಸೋತರೆ ಡಿಪ್ರೆಶನ್ ಆಗುತ್ತದೆ ಎನ್ನುವುದು ನಿಜ. ಇಂಥ ಖಿನ್ನತೆಯಿಂದ ನಮಗೆ ಬಹಳ ಹಾನಿಯೂ ಆಗುವ ಅಪಾಯ ಇರುತ್ತದೆ. ಒಂದು ಪಂದ್ಯದ ಫಲಿತಾಂಶದಿಂದ ನಮ್ಮ ಇಡೀ ಜೀವನವೇ ಬಲಿಯಾಗುವ ಸಾಧ್ಯತೆಯೂ ಉಂಟು. ಅದೆಷ್ಟೋ ಜನರು ವರ್ಷಗಟ್ಟಲೆ ಖಿನ್ನತೆಯಿಂದ ಬಳಲಲು ಅವರ ನೆಚ್ಚಿನ ತಂಡದ ಸೋಲೇ ಕಾರಣವಾಗಿದ್ದನ್ನ ತಾನು ಕಂಡಿದ್ಧಾಗಿ ಅಮೆರಿಕದ ಖ್ಯಾತ ಮನಃಶಾಸ್ತ್ರಜ್ಞ ಆಂಥೋನಿ ಸೆಂಟೋರೆ ಹೇಳುತ್ತಾರೆ. ಕ್ರೀಡೆಗೆ ಸಂಬಂಧಿಸಿದ ಈ ಡಿಪ್ರೆಶನ್ನಿಂದ ಹೊರಬರುವ ಕೆಲಸ ಸರಳ ಉಪಾಯಗಳನ್ನೂ ಅವರು ತಿಳಿಸಿಕೊಟ್ಟಿದ್ದಾರೆ.
ಕ್ರೀಡಾ ಖಿನ್ನತೆಯಿಂದ ಹೊರಬರುವ ತಂತ್ರ:
* ಆಟ ಕೇವಲ ಒಂದು ಆಟ ಅಷ್ಟೇ. ನಿಮ್ಮ ಪಾಲಿಗೆ ಅದೇನೂ ಜೀವನವನ್ನೇ ಬದಲಿಸುವ ಬೆಳವಣಿಗೆಯಲ್ಲ. ನಿಮ್ಮ ನೆಚ್ಚಿನ ತಂಡ ಸೋತರೆ ದುಃಖವಾಗುವುದು ಸಹಜ. ಪಂದ್ಯಕ್ಕೆ ಮುನ್ನ ವಿಪರೀತ ಹೈಪ್ ಇದ್ದರಿಂದ ನಿಮ್ಮಲ್ಲಿ ಭಾವಾವೇಶ ಹೆಚ್ಚೇ ಇರುತ್ತದೆ. ಆದರೆ, ಸ್ವಲ್ಪ ರಿಲ್ಯಾಕ್ಸ್ ಆಗಿ ಯೋಚಿಸಿರಿ. ಈ ಫಲಿತಾಂಶ ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ? ಏನೂ ಇಲ್ಲ ಎಂದು ನಿಮಗೇ ಅರಿವಾಗುತ್ತದೆ.
* ನೀವು ಈ ಒಂದು ಪಂದ್ಯ, ಅಥವಾ ಟೂರ್ನಿಗಾಗಿ ಜೀವನಶೈಲಿಯನ್ನೇ ಬದಲಿಸಿಕೊಂಡಿರುತ್ತೀರಿ. ಪಂದ್ಯ ವೀಕ್ಷಿಸಲು ದಿನದ ನಿರ್ದಿಷ್ಟ ಸಮಯವನ್ನ ಮೀಸಲಿಟ್ಟಿರುತ್ತೀರಿ. ಸ್ನೇಹಿತರೊಂದಿಗೆ ಹ್ಯಾಂಗೌಟ್ ಮಾಡುತ್ತಿರುತ್ತೀರಿ. ಆದರೆ, ತಂಡ ಸೋತಾಗ ಎಲ್ಲವೂ ನಿಂತಂತಾಗಿ ನೀವು ವಿಶಣ್ಣಗೊಳ್ಳುವುದು ಸಹಜ. ಅದನ್ನ ನಿವಾರಿಸಲು ನೀವು ಮೊದಲಿನಂತೆಯೇ ಚಟುವಟಿಕೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೇರೆ ಪಂದ್ಯಗಳನ್ನ ಅಥವಾ ಕ್ರೀಡೆಗಳನ್ನ ವೀಕ್ಷಿಸಬಹುದು, ಹೊಸ ಪುಸ್ತಕ ಓದಬಹುದು. ಸ್ನೇಹಿತರು ಮತ್ತು ಕುಟುಂಬದ ಜೊತೆ ಹೊರಗೆ ಹೋಗಬಹುದು. ಹೀಗೆ ನಿಮಗೆ ಸೂಕ್ತವೆನಿಸುವ ಕೆಲ ಚಟುವಟಿಕೆಗಳತ್ತ ಗಮನ ಕೊಡಿ.
* ನಿಮ್ಮ ನೆಚ್ಚಿನ ತಂಡ ಸೋತಾಗ ನಿಮ್ಮಂತೆಯೇ ಬಾಧೆ ಪಟ್ಟಿರುವ ಇನ್ನೊಬ್ಬ ಅಭಿಮಾನಿ ಜೊತೆ ಮಾತನಾಡಿ. ಅವರ ದುಃಖದ ಮಾತುಗಳು ನಿಮ್ಮನ್ನ ಸಂತೈಸಿಸಿ ಡಿಪ್ರೆಶನ್ನಿಂದ ಹೊರಬರಲು ಸಹಾಯ ಮಾಡಬಹುದು.
* ನೆಚ್ಚಿನ ತಂಡ ಸೋತಾಗ ಕೆಲ ದಿನಗಳವರೆಗೆ ದುಃಖ ಇರುವುದು ಬಹಳ ಸಹಜ. ದುಃಖ ಇದೆ ಎಂದು ಪ್ಯಾನಿಕ್ ಆಗಲು ಹೋಗದಿರಿ. ಕೆಲ ದಿನಗಳ ಬಳಿಕ ಈ ಸೋಲಿನ ಕಹಿ ತಾನಾಗೇ ಮರೆತುಹೋಗುತ್ತದೆ. ನಿಮಗೆ ಗೊತ್ತಿಲ್ಲದೇ ನೀವು ವಾಸ್ತವದಲ್ಲಿ ಬದುಕಲು ಆರಂಭಿಸುತ್ತೀರಿ.
* ನಿಮಗೆ ಇವೆಲ್ಲ ಮಾಡಿಯೂ ಖಿನ್ನತೆಯಿಂದ ಹೊರಬರಲು ಕಷ್ಟವಾಗುತ್ತಿದ್ದರೆ ಮನಃಶಾಸ್ತ್ರಜ್ಞರ ಸಹಾಯ ಪಡೆಯಬಹುದು.
ಮಾಹಿತಿ ಕೃಪೆ: Anthony Centore
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ