T20 World Cup: ಇಂಗ್ಲೆಂಡ್ ಆಯ್ತು ಆಸ್ಟ್ರೇಲಿಯಾವನ್ನೂ ಬಗ್ಗುಬಡಿದ ಭಾರತ

India vs Australia T20 World Cup Warm Up match- ಆಸ್ಟ್ರೇಲಿಯಾದ 152 ರನ್ ಮೊತ್ತವನ್ನು ಭಾರತ 18ನೇ ಓವರ್​ನಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ ಚೇಸ್ ಮಾಡಿತು. ಆರ್ ಅಶ್ವಿನ್ 8 ರನ್​ಗೆ 2 ವಿಕೆಟ್ ಪಡೆದರು. ರೋಹಿತ್ ಶರ್ಮಾ 41 ಬಾಲ್​ನಲ್ಲಿ 60 ರನ್ ಚಚ್ಚಿದರು.

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್

ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್

 • Share this:
  ದುಬೈ, ಅ. 20: ಟಿ20 ವಿಶ್ವಕಪ್​ನ ಪೂರ್ವಬಾವಿಯಾಗಿ ಮೊನ್ನೆ ನಡೆದ ತನ್ನ ಮೊದಲ ವಾರ್ಮಪ್ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡವನ್ನು 7 ವಿಕೆಟ್​ಗಳಿಂದ ಸುಲಭವಾಗಿ ಮಣಿಸಿದ ಟೀಮ್ ಇಂಡಿಯಾ ಇದೀಗ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯವನ್ನೂ ಜಯಿಸಿದೆ. ದುಬೈನ ಐಸಿಸಿ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆದ ವಾರ್ಮ್ ಅಪ್ ಪಂದ್ಯದಲ್ಲಿ ಭಾರತ 9 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಆರ್ ಅಶ್ವಿನ್, ರೋಹಿತ್ ಶರ್ಮಾ ಭಾರತ ತಂಡದ ಗೆಲುವಿನ ಪ್ರಮುಖ ರೂವಾರಿಗಳಾದರು.

  ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 152 ರನ್ ಕಲೆಹಾಕಿತು. ಸ್ಟೀವನ್ ಸ್ಮಿತ್ ಅರ್ಧಶತಕ ಗಳಿಸಿದರು. 48 ಬಾಲ್​ನಲ್ಲಿ ಸ್ಮಿತ್ 57 ರನ್ ಚಚ್ಚಿದರು. ಒಂದು ಹಂತದಲ್ಲಿ 11 ರನ್​ಗೆ 3 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಸ್ಟೀವನ್ ಸ್ಮಿತ್ ಆಸರೆಯಾದರು. ಐಪಿಎಲ್​ನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದ ಗ್ಲೆನ್ ಮ್ಯಾಕ್ಸ್​ವೆಲ್ ಅದೇ ಲಯವನ್ನು ವಿಶ್ವಕಪ್​ನಲ್ಲೂ ಮುಂದುವರಿಸುವ ಸುಳಿವು ನೀಡಿದರು. ಸ್ಟೀವನ್ ಸ್ಮಿತ್ ಜೊತೆಗೆ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಮಾರ್ಕಸ್ ಸ್ಟಾಯ್ನಿಸ್ ಸೇರಿ ಆಸ್ಟ್ರೇಲಿಯಾಗೆ ಉತ್ತಮ ಮೊತ್ತ ಸಿಗುವಂತೆ ಮಾಡಿದರು.

  ಬೌಲಿಂಗ್ ಮಾಡಿದ ಕೊಹ್ಲಿ; ಬೌಲಿಂಗ್ ಮಾಡದ ಹಾರ್ದಿಕ್:

  ಭಾರತದ ಬೌಲರ್​ಗಳ ಪೈಕಿ ಆರ್ ಅಶ್ವಿನ್ ಹೆಚ್ಚು ಗಮನ ಸೆಳೆದರು. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಕೂಡ ಎರಡು ಓವರ್ ಬೌಲ್ ಮಾಡಿದ್ದು ವಿಶೇಷ. ವರುಣ್ ಚಕ್ರವರ್ತಿ, ಶಾರ್ದೂಲ್ ಠಾಕೂರ್ ಮ ತ್ತು ರವೀಂದ್ರ ಜಡೇಜಾ ಅವರು ದುಬಾರಿ ಎನಿಸಿದರೆ ಕೊಹ್ಲಿ ತಮ್ಮ ಎರಡು ಓವರ್​ನಲ್ಲಿ ಕೇವಲ 12 ರನ್ ಬಿಟ್ಟು ಕೊಟ್ಟರು. ಆರ್ ಅಶ್ವಿನ್ 2 ಓವರ್​ನಲ್ಲಿ 8 ರನ್ನಿತ್ತು 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಡೆತ್ ಓವರ್​ನಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿದರು. ರಾಹುಲ್ ಚಾಹರ್ ಕೂಡ ಉತ್ತಮ ಬೌಲಿಂಗ್ ಮಾಡಿದರು. ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲೂ ಬೌಲಿಂಗ್ ಮಾಡಲಿಲ್ಲ.

  ಇದನ್ನೂ ಓದಿ: T20 World Cup- ವಿಶ್ವಕಪ್ ಗೆಲ್ಲಲು ಭಾರತ ಫೇವರಿಟ್ ಅಲ್ಲ ಎಂದ ವಾನ್; ಈ 4 ತಂಡಕ್ಕಿದೆಯಂತೆ ಚಾನ್ಸ್

  ರೋಹಿತ್ ಶರ್ಮಾ ಸೊಗಸಾದ ಬ್ಯಾಟಿಂಗ್:

  ಆಸ್ಟ್ರೇಲಿಯಾದ 152 ರನ್ ಮೊತ್ತವನ್ನು ಭಾರತ ನಿರೀಕ್ಷೆಮೀರಿ ಸುಲಭವಾಗಿ ಚೇಸ್ ಮಾಡಿತು. ಕೆಎಎಲ್ ರಾಹುಲ್ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದರು. ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಬಹಳ ಆಕರ್ಷಕವಾಗಿತ್ತು. ಬಹಳ ಸುಲಭವಾಗಿ ಸಿಕ್ಸರ್ ಬೌಂಡರಿ ಭಾರಿಸುತ್ತಿದ್ದ ರೋಹಿತ್ ಬ್ಯಾಟಿಂಗ್ ನೋಡಲು ಬಹಳ ಸೊಗಸಾಗಿತ್ತು. 60 ರನ್ ಗಳಿಸಿದ ಬಳಿಕ ರೋಹಿತ್ ರಿಟೈರ್ಡ್ ಹರ್ಟ್ ಆಗಿ ಹೋದರು. ಇದರಿಂದ ಹಾರ್ದಿಕ್ ಪಾಂಡ್ಯಗೆ ಒಂದಷ್ಟು ಬ್ಯಾಟಿಂಗ್ ಆಡಲು ಅವಕಾಶ ಸಿಕ್ಕಿತು. ಅಂತಿಮ ಕ್ಷಣದಲ್ಲಿ ಹಾರ್ದಿಕ್ ಕೂಡ ಬ್ಯಾಟಿಂಗ್ ಲಯ ಕಂಡುಕೊಂಡರು. ಸೂರ್ಯ ಕುಮಾರ್ ಯಾದವ್ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದರು.

  ಆಸ್ಟ್ರೇಲಿಯಾ ತಂಡ ಎಂಟು ಆಟಗಾರರಿಂದ ಬೌಲಿಂಗ್ ಮಾಡಿಸಿ ತನ್ನ ಬೌಲಿಂಗ್ ಬಲ ಪರೀಕ್ಷೆ ಮಾಡಿಕೊಂಡಿತು. ಆದರೆ, ಯಾವ ಬೌಲರ್ ಕೂಡ ಭಾರತದ ಬ್ಯಾಟರ್ಸ್ ಅನ್ನು ಕಿಂಚಿತ್ತೂ ಕಾಡಲಿಲ್ಲ.

  ಭಾರತ ಪಾಕಿಸ್ತಾನ ಪಂದ್ಯಕ್ಕೆ ಸಜ್ಜು:

  ಎರಡು ಅಭ್ಯಾಸ ಪಂದ್ಯವನ್ನು ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ಇದೀಗ ಅ. 24ರಂದು ಪಾಕಿಸ್ತಾನ ವಿರುದ್ಧ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ತನ್ನ ಬೌಲರ್ಸ್ ಮತ್ತು ಬ್ಯಾಟರ್ಸ್ ಎಲ್ಲರೂ ಉತ್ತಮ ಫಾರ್ಮ್​ನಲ್ಲಿರುವ ಭಾರತ ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಉಮೇದಿನದಲ್ಲಿದೆ.

  ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತ ಯಾಕೆ ಒಮ್ಮೆಯೂ ಸೋತಿಲ್ಲ: ಸೆಹ್ವಾಗ್ ಬಳಿ ಇದೆ ಉತ್ತರ

  ಸ್ಕೋರು ವಿವರ:

  ಆಸ್ಟ್ರೇಲಿಯಾ 20 ಓವರ್ 152/5

  (ಸ್ಟೀವನ್ ಸ್ಮಿತ್ 57, ಗ್ಲೆನ್ ಮ್ಯಾಕ್ಸ್​ವೆಲ್ 37, ಮಾರ್ಕಸ್ ಸ್ಟಾಯ್ನಿಸ್ ಅಜೇಯ 41 ರನ್ – ಆರ್ ಅಶ್ವಿನ್ 8/2)

  ಭಾರತ 17.5 ಓವರ್ 153/1

  (ರೋಹಿತ್ ಶರ್ಮಾ ಅಜೇಯ 60, ಕೆಎಲ್ ರಾಹುಲ್ 39, ಸೂರ್ಯಕುಮಾರ್ ಯಾದವ್ ಅಜೇಯ 38, ಹಾರ್ದಿಕ್ ಪಾಂಡ್ಯ ಅಜೇಯ 14 ರನ್)
  Published by:Vijayasarthy SN
  First published: