IND vs NZ- ನ್ಯೂಜಿಲೆಂಡ್ ವಿರುದ್ಧವೂ ಭಾರತಕ್ಕೆ ಹೀನಾಯ ಸೋಲು; ಅಫ್ಘನ್ನರಿಗೆ ಮತ್ತೊಂದು ಜಯ

T20 World Cup 2021: ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್​ಗಳಿಂದ ಸೋಲನುಭವಿಸಿತು. ಅಬುಧಾಬಿಯಲ್ಲಿ ನಮೀಬಿಯಾ ವಿರುದ್ಧ ಅಫ್ಘಾನಿಸ್ತಾನ 62 ರನ್​ಗಳಿಂದ ಜಯಭೇರಿ ಭಾರಿಸಿತು.

ನ್ಯೂಜಿಲೆಂಡ್ ಕ್ರಿಕೆಟ್ ಬ್ಯಾಟರ್

ನ್ಯೂಜಿಲೆಂಡ್ ಕ್ರಿಕೆಟ್ ಬ್ಯಾಟರ್

 • Share this:
  ದುಬೈ/ಅಬುಧಾಬಿ, ಅ. 31: ಟಾಸ್ ಸೋಲು, ಕಳಪೆ ಬ್ಯಾಟಿಂಗ್ ಕಾರಣದಿಂದ ಟೀಮ್ ಇಂಡಿಯಾ ಮತ್ತೊಂದು ಹೀನಾಯ ಸೋಲು ಅಪ್ಪಿತು. ದುಬೈ ಇಂಟರ್​ನ್ಯಾಷನಲ್ ಗ್ರೌಂಡ್​ನಲ್ಲಿ ಅ. 24ರಂದು ಪಾಕಿಸ್ತಾನ ವಿರುದ್ಧ ಇವೇ ಕಾರಣದಿಂದ ಭಾರೀ ಸೋಲನುಭವಿಸಿದ್ದ ಭಾರತ ತಂಡ ಇಂದು ಅದೇ ಪಿಚ್​ನಲ್ಲಿ ನ್ಯೂಜಿಲೆಂಡ್ ಎದುರು ಇನ್ನೂ ಹೀನಾಯ ಸೋಲುಂಡಿತು. ನ್ಯೂಜಿಲೆಂಡ್ ತಂಡ 8 ವಿಕೆಟ್​ಗಳಿಂದ ಭಾರತವನ್ನು ಪರಾಭವಗೊಳಿಸಿತು. ಟಿ20 ವಿಶ್ವಕಪ್​ನ ಎರಡನೇ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಭಾರತ ಕೇವಲ 110 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ 33 ಎಸೆತ ಬಾರಿ ಇರುವಂತೆ ಭರ್ಜರಿ ಜಯಭೇರಿ ಭಾರಿಸಿತು. ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಸೋತಿದ್ದ ನ್ಯೂಜಿಲೆಂಡ್​ಗೆ ಇದು ಟೂರ್ನಿಯಲ್ಲಿ ಮೊದಲ ಗೆಲುವು.

  ಭಾರತ ಈ ಪಂದ್ಯದಲ್ಲಿ ಎರಡು ಬದಲಾವಣೆ ಮಾಡಿತು. ಸೂರ್ಯಕುಮಾರ್ ಅವರಿಗೆ ಗಾಯದ ಸಮಸ್ಯೆಯಾದ್ದರಿಂದ ಇಶಾನ್ ಕಿಶನ್ ಅವರನ್ನ ಆಡಿಸಲಾಯಿತು. ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್​ಗೆ ಅವಕಾಶ ಕೊಡಲಾಯಿತು. ಈ ಎರಡೂ ಬದಲಾವಣೆಗಳಿಂದ ಭಾರತಕ್ಕೆ ತೃಣಮಾತ್ರವೂ ವರ್ಕೌಟ್ ಆಗಲಿಲ್ಲ. ಇಶಾನ್ ಕಿಶನ್ ಕೇವಲ 4 ರನ್​ಗೆ ಔಟ್ ಆದರು. ಶಾರ್ದೂಲ್ ಠಾಕೂರ್ ಹಾಕಿದ 9 ಎಸೆತದಲ್ಲಿ 17 ರನ್ನಿತ್ತು ದುಬಾರಿ ಎನಿಸಿದರು. ಬ್ಯಾಟಿಂಗ್​ನಲ್ಲೂ ಅವರಿಂದ ಬಂದದ್ದು ಸೊನ್ನೆ ರನ್.

  ಭಾರತದ ಪ್ರಯೋಗ ವಿಫಲ:

  ಇನ್ನಿಂಗ್ಸ್ ಓಪನ್​ಗೆ ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಕಳುಹಿಸಿವ ಪ್ರಯೋಗ ವಿಫಲವಾಯಿತು. ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಒಂದಷ್ಟು ರನ್ ಗಳಿಸಿದ ಕಾರಣ ಭಾರತದ ಸ್ಕೋರ್ ನೂರರ ಗಡಿ ದಾಟಲು ಸಾಧ್ಯವಾಯಿತು. 6ನೇ ವಿಕೆಟ್​ಗೆ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಗಳಿಸಿದ 24 ರನ್​ಗಳು ಇನ್ನಿಂಗ್ಸ್​ನ ಗರಿಷ್ಠ ಜೊತೆಯಾಟ ಎನಿಸಿತು.

  ಭಾರತ ಒಡ್ಡಿದ 111 ರನ್​ಗಳ ಸುಲಭ ಗುರಿಯನ್ನ ನ್ಯೂಜಿಲೆಂಡ್ ತೀರಾ ಸುಲಭವಾಗಿ ಮುಟ್ಟಿತು. ಡರಿಲ್ ಮಿಚೆಲ್ ಮತ್ತು ಕೇನ್ ವಿಲಿಯಮ್ಸನ್ ಬಹಳ ಸರಾಗವಾಗಿ ರನ್ ಗಳಿಸಿ ಕಿವೀಸ್ ಪಡೆಗೆ ಚೊಚ್ಚಲ ಗೆಲುವು ತಂದಿತ್ತರು.

  ಇದನ್ನೂ ಓದಿ: ವಿಶ್ವಕಪ್ ಮಧ್ಯದಲ್ಲೇ ಕ್ರಿಕೆಟ್​ಗೆ ಅಫ್ಘಾನ್ ವಿದಾಯ; ನಮೀಬಿಯಾ ಆಟಗಾರರಿಂದ ಗಾರ್ಡ್ ಆಫ್ ಆನರ್

  ಭಾರತಕ್ಕೆ ಸೆಮಿಫೈನಲ್ ಆಸೆ ಕ್ಷೀಣ:

  ಈ ಸೋಲಿನೊಂದಿಗೆ ಭಾರತಕ್ಕೆ ಸೆಮಿಫೈನಲ್ ಸಾಧ್ಯತೆ ಕ್ಷೀಣಿಸಿದೆ. ಸತತ ಎರಡು ಪಂದ್ಯ ಸೋತಿರುವ ಭಾರತ ಈಗ ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನ ಗೆಲ್ಲುವುದು ಅನಿವಾರ್ಯವಾಗಿದೆ. ಒಂದು ವೇಳೆ ಗೆದ್ದರೂ ಸೆಮಿಫೈನಲ್ ಪ್ರವೇಶ ಖಚಿತ ಎಂದು ಹೇಳಲು ಅಸಾಧ್ಯ. ಬೇರೆ ಪಂದ್ಯಗಳ ಫಲಿತಾಂಶದ ಮೇಲೆ ಭಾರತದ ಹಣೆಬರಹ ನಿರ್ಧಾರವಾಗುತ್ತದೆ.

  ನಮೀಬಿಯಾ ವಿರುದ್ಧ ಅಫ್ಘಾನಿಸ್ತಾನಕ್ಕೆ ಗೆಲುವು:

  ಇದಕ್ಕೆ ಮುನ್ನ ಎರಡನೇ ಗುಂಪಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಅಫ್ಘಾನಿಸ್ತಾನ 62 ರನ್​ಗಳಿಂದ ಸೋಲಿಸಿತು. ಅಫ್ಘಾನಿಸ್ತಾನ ಗೆಲ್ಲಲು ಒಡ್ಡಿದ 161 ರನ್​ಗಳ ಪ್ರಬಲ ಸವಾಲನ್ನ ಬೆನ್ನತ್ತಲು ವಿಫಲವಾದ ನಮೀಬಿಯಾದ ಇನ್ನಿಂಗ್ಸ್ 98 ರನ್​​ಗೆ ಅಂತ್ಯಗೊಂಡಿತು. ಅಗ್ರಕ್ರಮಾಂಕದ ಇಬ್ಬರು ಬ್ಯಾಟರ್ಸ್ ಸೇರಿ ಮೂರು ವಿಕೆಟ್ ಪಡೆದು ನಮೀಬಿಯಾ ಚೇಸಿಂಗ್​ಗೆ ಕತ್ತರಿ ಹಾಕಿದ ನವೀನ್ ಉಲ್ ಹಕ್ ಅವರಿಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿತು.

  ಅಫ್ಘಾನಿಸ್ತಾನದ ಸೆಮಿಫೈನಲ್ ಕನಸು ಜೀವಂತ:

  ಅಫ್ಘಾನಿಸ್ತಾನ ಈ ಗೆಲುವಿನೊಂದಿಗೆ ಸೆಮಿಫೈನಲ್ ಆಸೆಯನ್ನ ಸ್ವಲ್ಪ ಗಟ್ಟಿಗೊಳಿಸಿಕೊಂಡಿದೆ. 3 ಪಂದ್ಯಗಳಿಂದ 4 ಅಂಕ ಹೊಂದಿರುವ ಅಫ್ಘನ್ನರು ಎರಡನೇ ಸ್ಥಾನದಲ್ಲಿದ್ದಾರೆ. ಬಹಳ ಅಪಾಯಕಾರಿ ತಂಡವಾಗಿ ರೂಪುಗೊಂಡಿರುವ ಅಫ್ಘಾನಿಸ್ತಾನ ನ. 3ರಂದು ಭಾರತಕ್ಕೆ ಪ್ರಬಲ ಸವಾಲೊಡ್ಡಲಿದೆ.

  ಇದನ್ನೂ ಓದಿ: Babar Azam- ಅಲ್ಲಿ ವೆಂಟಿಲೇಟರ್​ನಲ್ಲಿ ಅಮ್ಮ; ಇಲ್ಲಿ ವಿಶ್ವಕಪ್; ಸಂಕಷ್ಟದಲ್ಲೂ ದೃತಿಗೆಡದ ಬಾಬರ್

  ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಸತತ ಮೂರು ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಅಫ್ಘಾನಿಸ್ತಾನ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ನಮೀಬಿಯಾ ತಲಾ 2 ಅಂಕಗಳೊಂದಿಗೆ 3 ಮತ್ತು 4ನೇ ಸ್ಥಾನದಲ್ಲಿವೆ. ಕೊನೆಯ ಎರಡು ಸ್ಥಾನಗಳನ್ನ ಭಾರತ ಮತ್ತು ಸ್ಕಾಟ್ಲೆಂಡ್ ಆಕ್ರಮಿಸಿಕೊಂಡಿವೆ. ಪಾಕಿಸ್ತಾನಕ್ಕೆ ಒಂದು ಸೆಮಿಫೈನಲ್ ಸ್ಥಾನ ಖಚಿತವೆಂದಿಟ್ಟುಕೊಂಡರೆ ಮತ್ತೊಂದು ಸೆಮಿಫೈನಲ್ ಸ್ಥಾನಕ್ಕೆ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಮಧ್ಯೆ ಪೈಪೋಟಿ ಏರ್ಪಡಬಹುದು. ಅಫ್ಘಾನಿಸ್ತಾನ ವಿರುದ್ಧ ಭಾರತವೇನಾದರೂ ಗೆದ್ದರೆ ಭಾರತವೂ ರೇಸ್​ಗೆ ಸೇರಿಕೊಳ್ಳುತ್ತದೆ.

  ಸ್ಕೋರು ವಿವರ:

  ಭಾರತ 20 ಓವರ್ 110/7
  (ರವೀಂದ್ರ ಜಡೇಜಾ ಅಜೇಯ 26, ಹಾರ್ದಿಕ್ ಪಾಂಡ್ಯ 23, ಕೆಎಲ್ ರಾಹುಲ್ 18, ರೋಹಿತ್ ಶರ್ಮಾ 14 ರನ್- ಟ್ರೆಂಟ್ ಬೌಲ್ಟ್ 20/3, ಈಶ್ ಸೋಧಿ 17/2)

  ನ್ಯೂಜಿಲೆಂಡ್ 14.3 ಓವರ್ 111/2
  (ಮಾರ್ಟಿನ್ ಗಪ್ಟಿಲ್ 20, ಡರಿಲ್ ಮಿಶೆಲ್ 49, ಕೇನ್ ವಿಲಿಯಮ್ಸನ್ 32 ಅಜೇಯ ರನ್)
  Published by:Vijayasarthy SN
  First published: