IND vs AFG- ಭಾರತಕ್ಕಿಂದು ಅಗ್ನಿಪರೀಕ್ಷೆ; ಅಫ್ಘನ್ನರ ಬಲ ಮತ್ತು ದೌರ್ಬಲ್ಯ ಇದು

T20 World Cup- ಪಾಕಿಸ್ತಾನದ ವಿರುದ್ಧ ಸೋಲುವ ಮುನ್ನ ವೀರೋಚಿತ ಹೋರಾಟ ತೋರಿದ್ದ ಅಫ್ಘಾನಿಸ್ತಾನ್ ಈ ಬಾರಿ ಸೆಮಿಫೈನಲ್ ಹಾದಿಯಲ್ಲಿ ಗಟ್ಟಿ ಹೆಜ್ಜೆಗಳನ್ನ ಹಾಕಿದೆ. ಟಾಸ್ ಗೆದ್ದರೂ ಸೋತರೂ ಭಾರತಕ್ಕೆ ಅಫ್ಘನ್ನರ ಸವಾಲು ಸುಲಭವಂತೂ ಅಲ್ಲ.

ಅಫ್ಘಾನಿಸ್ತಾನ್ ಕ್ರಿಕೆಟ್ ಆಟಗಾರರು

ಅಫ್ಘಾನಿಸ್ತಾನ್ ಕ್ರಿಕೆಟ್ ಆಟಗಾರರು

  • Share this:
ಅಬುಧಾಬಿ, ನ. 03: ಭಾರತ ತಂಡ ಈ ವಿಶ್ವಕಪ್​ನಲ್ಲಿ ಸಂಕಷ್ಟದ ಸ್ಥಿತಿಯಲ್ಲಿರುವುದನ್ನು ಕಂಡು ಯಾರಿಗಾದರೂ ಮರುಕ ಹುಟ್ಟದೇ ಇರದು. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದೇ ಘಟಾನುಘಟಿಗಳಿಂದ ಬಣ್ಣಿತವಾದ ತಂಡ (India was one of the favourites to win T20 World Cup 2021) ಇಂದು ದಯನೀಯ ಪರಿಸ್ಥಿತಿಗೆ ಬಂದು ನಿಂತಿದೆ. ಸೋತದ್ದು ಎರಡನೇ ಪಂದ್ಯವಾದರೂ ಬೆಟ್ಟದಷ್ಟು ಟೀಕೆಗಳು ಎರಗಿ ಬಿದ್ದಿವೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆದ ಸೋಲು ಭಾರತದ ಜಂಘಾಬಲವನ್ನೇ ಉಡುಗಿಸಿಬಿಟ್ಟಿತು. ಅದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಎದ್ದುಗಾಣುತ್ತಿತ್ತು. ಬ್ಯಾಟುಗಾರರು ನ್ಯೂಜಿಲೆಂಡ್ ಬೌಲಿಂಗ್ ದಾಳಿ ಎದುರಿಸಲು ಮಾನಸಿಕವಾಗಿ ಸಿದ್ಧವೇ ಇಲ್ಲದವರಂತೆ ತಿಣುಕಾಡುತ್ತಿದ್ದುದು ಯಾರಿಗಾದರೂ ಗಮನಕ್ಕೆ ಬಂದಿರಬಹುದು. ಇನ್ನು, ಬೌಲರ್​ಗಳಂತೂ ಮೊದಲ ಓವರ್​ನಿಂದಲೇ ಗೆಲುವಿನ ಆಸೆ ಕೈಬಿಟ್ಟಂತಿತ್ತು.

ಈಗ ಅಫ್ಘಾನಿಸ್ತಾನ ವಿರುದ್ಧ ಭಾರತದ ಮೂರನೇ ಪಂದ್ಯ (India vs Afghanistan World Cup Match) ಅಬುಧಾಬಿಯಲ್ಲಿ ಇದೆ. ಸತತ ಎರಡು ಸೋಲುಗಳೊಂದಿಗೆ ಭಾರತದ ವಿಶ್ವಕಪ್​ನಿಂದ ನಿರ್ಗಮನದ ಹಾದಿಯಲ್ಲಿದೆ. ಇವತ್ತು ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಿದರೆ ಸೆಮಿಫೈನಲ್ ಹಾದಿ ಗೋಚರಿಸುತ್ತದೆ. ಸೋತರೆ ಔಟ್.

ಈಗಿನ ಅಫ್ಘಾನಿಸ್ತಾನ ತಂಡ ಐದಾರು ವರ್ಷಗಳ ಹಿಂದಿನ ಅಫ್ಘನ್ ತಂಡದಂತಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲೇ ಅಫ್ಘನ್ನರು ತಮ್ಮ ಶಕ್ತಿ ಎಂಥದ್ದು ಎಂದು ಸಾಬೀತು ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿಯೂ ಅಫ್ಘಾನಿಸ್ತಾನ್ ಕೊನೆಯ ಕೆಲ ಓವರ್​ವರೆಗೂ ಗೆಲುವಿನ ಸನಿಹದಲ್ಲೇ ಇತ್ತು. ಪಂದ್ಯ ಗೆಲ್ಲಲು ಪಾಕಿಸ್ತಾನ ಹರಸಾಹಸ ಮಾಡಬೇಕಾಯಿತು.

ಅಫ್ಘಾನಿಸ್ತಾನ ಬಲ ಇದು:

ಮೊಹಮ್ಮದ್ ನಬಿ ನೇತೃತ್ವದ ಅಫ್ಘಾನಿಸ್ತಾನ ತಂಡದ ಆಟಗಾರರ ಬಾಡಿ ಲಾಂಗ್ವೇಜ್ ಪಾಕಿಸ್ತಾನೀ ಆಟಗಾರರಂತೆಯೇ. ಯಾವುದಕ್ಕೂ ಕೇರ್ ಮಾಡದ ಆತ್ಮವಿಶ್ವಾಸ ತುಂಬಿತುಳುಕುತ್ತಿರುವ ಆಟಗಾರರು. ಬಹಳ ನಿರ್ಭೀತಿಯಿಂದ ಕ್ರಿಕೆಟ್ ಆಡುತ್ತಾರೆ.

ಇದನ್ನೂ ಓದಿ: IND vs AFG- ಮೊದಲು ಬ್ಯಾಟಿಂಗ್ ಮಾಡಿಯೇ ಭಾರತವನ್ನು ಸೋಲಿಸಲು ಸಾಧ್ಯ: ಅಫ್ಘಾನಿಸ್ತಾನ್ ವಿಶ್ವಾಸ

ವಿಶ್ವಶ್ರೇಷ್ಠ ಬೌಲರ್ಸ್: ಅಫ್ಘಾನಿಸ್ತಾನದ ಪ್ರಮುಖ ಶಕ್ತಿ ಅದರ ಬೌಲಿಂಗ್ ಪಡೆ. ರಷೀದ್ ಖಾನ್ ಎಂಥ ಸ್ಪಿನ್ನರ್ ಎಂಬುದು ಐಪಿಎಲ್ ನೋಡಿರುವ ಎಲ್ಲರಿಗೂ ಗೊತ್ತು. ಇವರ ಬಳಿ ಲೆಗ್ ಬ್ರೇಕ್, ಗೂಗ್ಲಿ ಸೇರಿದಂತೆ ವೆರೈಟಿ ಅಸ್ತ್ರಗಳಿವೆ. ಮುಜೀಬ್ ಉರ್ ರಹಮಾನ್ ಕೂಡ ಅಷ್ಟೇ ಮಟ್ಟದ ಪ್ರತಿಭೆ. ಮೊಹಮ್ಮದ್ ನಬಿ ಸಾಂಪ್ರದಾಯಿಕ ಆಫ್ ಸ್ಪಿನ್ನರ್. ಈ ಮೂರು ಸ್ಪಿನ್ ತ್ರಿವಳಿಗಳು ವಿಶ್ವದ ಎಂಥದ್ದೇ ಗಟ್ಟಿ ಬ್ಯಾಟಿಂಗ್ ಪಡೆಯನ್ನ ಛಿದ್ರಗೊಳಿಸಬಲ್ಲರು. ನವೀನ್ ಉಲ್ ಹಕ್ ಮತ್ತು ಹಮೀದ್ ಹಸನ್ ಉತ್ತಮ ವೇಗದ ಬೌಲರ್​ಗಳಾಗಿದ್ದಾರೆ.

ದಿಟ್ಟ ಬ್ಯಾಟರ್ಸ್: ಇನ್ನು, ಅಫ್ಘಾನಿಸ್ತಾನದ ಬ್ಯಾಟುಗಾರರು ಯಾವ ಬೌಲರ್​ಗೂ ಹೆದರುವ ಜಾಯಮಾನದವರಲ್ಲ. ಆರಂಭದಿಂದ ಕೊನೆಯವರೆಗೆ ಬಾಲಂಗೋಚಿಗಳೂ ಸೇರಿ ಎಲ್ಲರೂ ಬ್ಯಾಟ್ ಬೀಸಬಲ್ಲರು. ಸುಮ್ಮಸುಮ್ಮನೆ ಬ್ಯಾಟ್ ಬೀಸುವವರಲ್ಲ ಎಂಬುದು ಇಲ್ಲಿ ಗಮನಾರ್ಹ. ಹೀಗಾಗಿ, ಅಫ್ಘಾನಿಸ್ತಾನ್ ಒಂದು ಪಂದ್ಯದ ಯಾವುದೇ ಸಂದರ್ಭದಲ್ಲಾದರೂ ಎಂಥ ಸಂಕಷ್ಟದಲ್ಲಿದ್ದರೂ ಪುಟಿದೆದ್ದು ನಿಲ್ಲುವ ಕ್ಷಮತೆ ಹೊಂದಿದೆ.

ಅಫ್ಘಾನಿಸ್ತಾನ್ ದೌರ್ಬಲ್ಯ ಇದು:

ಅಫ್ಘಾನಿಸ್ತಾನ್ ಈ ವಿಶ್ವಕಪ್​ನಲ್ಲಿ ಆಡಿರುವ ಮೂರು ಪಂದ್ಯಗಳನ್ನ ಗಮನಿಸಿದರೆ ಒಂದು ಅಂಶ ಕಣ್ಣಿಗೆ ರಾಚುತ್ತದೆ. ಅದೆಂದರೆ ಅಫ್ಘಾನಿಸ್ತಾನದ ಮೇಲಿನ ಕ್ರಮಾಂಕದಲ್ಲಿ ಸ್ಥಿರತೆ ಇಲ್ಲ. ಬಹಳ ಬೇಗ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಹೀಗಾಗಿ, ಕೆಳಗಿನ ಕ್ರಮಾಂಕದವವರ ಮೇಲೆ ಹೆಚ್ಚಿನ ಭಾರ ಬೀಳುತ್ತಿದೆ. ತಂಡದ ಬ್ಯಾಟಿಂಗ್ ಬಹಳ ಡೀಪ್ ಇರುವುದರಿಂದ ಹೀನಾಯ ಸೋಲು ಕಂಡಿಲ್ಲ ಅಷ್ಟೇ.

ಭಾರತಕ್ಕೆ ಇವತ್ತು ಚೇಸಿಂಗ್ ಭಾಗ್ಯ?

ಯುಎಇಯಲ್ಲಿರುವ ಟ್ರೆಂಡ್​ಗೆ ವಿರುದ್ಧವಾಗಿ ಅಫ್ಘಾನಿಸ್ತಾನ್ ಮೊದಲು ಬ್ಯಾಟ್ ಮಾಡಿಯೇ ಎರಡು ಪಂದ್ಯಗಳನ್ನ ಗೆದ್ದಿದೆ. ಭಾರತ ವಿರುದ್ಧವೂ ಅಫ್ಘಾನಿಸ್ತಾನ್ ಮೊದಲು ಬ್ಯಾಟ್ ಮಾಡುವ ಇರಾದೆಯಲ್ಲಿದೆ. ಭಾರತಕ್ಕೆ ಒಂದು ರೀತಿ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದೂ ಹಾಲು ಅನ್ನ ಎಂಬಂತಾಗಿದೆ.

ಇದನ್ನೂ ಓದಿ: Rohit Sharma- ಟಿ20, ಓಡಿಐ ಎರಡೂ ತಂಡಕ್ಕೂ ರೋಹಿತ್ ನಾಯಕ? ದ್ರಾವಿಡ್ ಸಮಾಲೋಚನೆ ನಂತರ ನಿರ್ಧಾರ

ಪಾಕಿಸ್ತಾನ್ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲಲು ಟಾಸ್ ಮತ್ತು ಮೊದಲು ಬ್ಯಾಟಿಂಗ್ ಮಾಡಿದ್ದೇ ಕಾರಣ ಎಂದು ಭಾರತದ ಅನಿಸಿಕೆ. ಆದರೆ, ಟಾಸೇ ಬಾಸ್ ಅಲ್ಲ ಎಂಬುದನ್ನು ಅಫ್ಘಾನಿಸ್ತಾನ್ ಸಾಬೀತು ಮಾಡಿದೆ. ಚೇಸಿಂಗ್ ಮಾಡಿದರಷ್ಟೇ ಗೆಲುವಲ್ಲ, ಮೊದಲು ಬ್ಯಾಟಿಂಗ್ ಮಾಡಿಯೂ ಗೆಲ್ಲಬಹುದು ಎಂದು ಅಫ್ಘಾನಿಸ್ತಾನ್ ತೋರಿಸಿದೆ. ನಿನ್ನೆ ಪಾಕಿಸ್ತಾನ್ ಕೂಡ ನಮೀಬಿಯಾ ವಿರುದ್ಧ ಉದ್ದೇಶಪೂರ್ವಕವಾಗಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದೊಡ್ಡ ಮೊತ್ತ ಕಲೆಹಾಕಿ ನಮೀಬಿಯಾವನ್ನ ಸೋಲಿಸಿತು.

ಮನಸಿನಂತೆ ಮಾದೇವ:

ಐಪಿಎಲ್ ಪಂದ್ಯದ ಒಂದು ಸಂದರ್ಭದಲ್ಲಿ ಇಶಾನ್ ಕಿಶನ್ ಹೇಳಿದ ಮಾತೊಂದನ್ನು ಈಗ ಉಲ್ಲೇಖಿಸುವುದು ಸಂದರ್ಭೋಚಿತ ಎನಿಸುತ್ತದೆ. ಯುಎಇಯ ಮಂದಗತಿ ಪಿಚ್​ಗಳಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಬ್ಯಾಟುಗಾರರು ರನ್ ಗಳಿಸಲು ತಿಣುಕಾಡುತ್ತಿದ್ದರು. ಫಾರ್ಮ್​ನಲ್ಲಿ ಇಲ್ಲದ ಮುಂಬೈ ಇಂಡಿಯನ್ಸ್ ಆಟಗಾರ ಇಶಾನ್ ಕಿಶನ್ ಅವರು ಭರ್ಜರಿ ಆಟ ಆಡಿ ಲಯ ಕಂಡುಕೊಂಡರು. ಆಗ ಅವರು ಹೇಳಿದ್ದಿದು: “ಪಿಚ್​ನಲ್ಲಿ ಏನೂ ಇಲ್ಲ. ಎಲ್ಲ ಇರುವುದು ನಮ್ಮ ಮನಸ್ಸಿನಲ್ಲಿ. ಸಕಾರಾತ್ಮಕ ಧೋರಣೆಯಿಂದ ಆಡಿದರೆ ರನ್ ಗಳಿಸಬಹುದು” ಎಂದಿದ್ದರ. ಅವರ ಈ ಮಾತು ಭಾರತಕ್ಕೆ ಈಗ ಅಕ್ಷರಶಃ ಅನ್ವಯ ಆಗುತ್ತದೆ.

ಆರಂಭಿಕರಾಗಿ ರೋಹಿತ್, ಇಶಾನ್ ಸಾಧ್ಯತೆ:

ಇವತ್ತಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಶರ್ಮಾ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚು. ಕೆಎಲ್ ರಾಹುಲ್ ನಂಬರ್ 4 ಸ್ಥಾನಕ್ಕೆ ಇಳಿಯಬಹುದು. ಸೂರ್ಯಕುಮಾರ್ ಯಾದವ್ ಫಿಟ್ ಆದರೆ ಆಡುತ್ತಾರಾ? ಆಡಿದರೆ ಯಾರ ಬದಲು ಆಡುತ್ತಾರೆ ಎಂಬುದು ಗೊತ್ತಿಲ್ಲ. ಅದು ಬಿಟ್ಟರೆ ತಂಡದಲ್ಲಿ ಮತ್ತು ಕ್ರಮಾಂಕದಲ್ಲಿ ಬೇರೆ ಬದಲಾವಣೆ ಸಾಧ್ಯತೆ ಕಡಿಮೆ.

ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

ತಂಡಗಳು:

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್​ಪ್ರೀತ್ ಬುಮ್ರಾ.

ಅಫ್ಘಾನಿಸ್ತಾನ್ ಸಂಭಾವ್ಯ ತಂಡ: ಹಜ್ರತುಲ್ಲಾ ಜಝೈ, ಮೊಹಮ್ಮದ್ ಶಹಜಾದ್, ರಹಮನುಲ್ಲಾ ಗುರ್ಬಜ್, ಹಷ್ಮತುಲ್ಲಾ ಶಾಹಿದಿ/ಉಸ್ಮಾನ್ ಘನಿ, ಮೊಹಮ್ಮದ್ ನಬಿ, ನಜೀಬುಲ್ಲಾ ಜದ್ರನ್, ಗುಲ್ಬದಿನ್ ನಯೀಬ್, ರಷೀದ್ ಖಾನ್, ಕರೀಮ್ ಜನತ್/ಮುಜೀಬ್ ಉರ್ ರಹಮಾನ್, ನವೀನ್ ಉಲ್ ಹಕ್, ಹಮೀದ್ ಹಸನ್.

ಪಂದ್ಯ ಸಮಯ: ಸಂಜೆ 7:30ಕ್ಕೆ
ಸ್ಥಳ: ಅಬುಧಾಬಿ
Published by:Vijayasarthy SN
First published: