Warm Up Matches: ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ; ಇಲ್ಲಿದೆ ಎಲ್ಲ ವಾರ್ಮಪ್ ಮ್ಯಾಚ್​ಗಳ ರಿಸಲ್ಟ್

T20 World Cup, Warm Up Matches Result- ಇಂಗ್ಲೆಂಡ್ ವಿರುದ್ಧ ಭಾರತ 7 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಕೆಎಲ್ ರಾಹುಲ್, ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಆಡಿದ್ದು ವಿಶೇಷ. ಇದೂವರೆಗೂ ನಡೆದ ವಿವಿಧ ವಾರ್ಮಪ್ ಮ್ಯಾಚ್​ಗಳ ಫಲಿತಾಂಶ ಇಲ್ಲಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

 • Share this:
  ದುಬೈ, ಅ. 18: ಐಪಿಎಲ್​ನ ಎರಡನೇ ಲೆಗ್ ಪಂದ್ಯಗಳನ್ನ ಯುಎಇಯಲ್ಲಿ ಆಯೋಜಿಸಿದ್ದು ಭಾರತದ ಟಿ20 ವಿಶ್ವಕಪ್ ತಂಡಕ್ಕೆ ಅನುಕೂಲ ಮಾಡಿಕೊಟ್ಟಿದೆ. ಐಪಿಎಲ್​ನಲ್ಲಿ ಫಾರ್ಮ್​ಗೆ ಬಂದಿದ್ದ ಬಹುತೇಕ ಆಟಗಾರರು ಟಿ20 ವಿಶ್ವಕಪ್​ನಲ್ಲೂ ಆರ್ಭಟಿಸುವ ಸುಳಿವು ನೀಡಿದ್ಧಾರೆ. ಇದು ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವೇದ್ಯವಾಗಿದೆ. ಇಂಗ್ಲೆಂಡ್ ವಿರುದ್ಧ ಭಾರತ 7 ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ವಾರ್ಮಪ್ ಮ್ಯಾಚ್​ನಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 188 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಭಾರತ 6 ಬಾಲ್ ಇರುವಂತೆ ಗುರಿ ತಲುಪಿ ಜಯಭೇರಿ ಭಾರಿಸಿತು.

  ಇಶಾನ್, ರಾಹುಲ್ ಸ್ಫೋಟಕ ಬ್ಯಾಟಿಂಗ್: ಐಪಿಎಲ್​​ನಲ್ಲಿದ್ದ ಅಮೋಘ ಫಾರ್ಮ್ ಅನ್ನು ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಇಬ್ಬರೂ ಇಂದಿನ ಅಭ್ಯಾಸ ಪಂದ್ಯದಲ್ಲಿ ಮುಂದುವರಿಸಿದರು. ಕೆಎಲ್ ರಾಹುಲ್ ಕೇವಲ 24 ಬಾಲ್​ನಲ್ಲಿ 51 ರನ್ ಚಚ್ಚಿದರು. 2021ರ ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಕೆಎಲ್ ರಾಹುಲ್ ಇಂದೂ ಕೂಡ 3 ಸಿಕ್ಸರ್ ಭಾರಿಸಿದರು.

  ಮುಂಬೈ ಇಂಡಿಯನ್ಸ್ ತಂಡದ ಕೊನೆಯ ಕೆಲ ಲೀಗ್ ಪಂದ್ಯಗಳಲ್ಲಿ ಅದ್ವಿತೀಯ ಬ್ಯಾಟಿಂಗ್ ಆಡಿದ್ದ ಇಶಾನ್ ಕಿಶನ್ ಇಂದು ಇಂಗ್ಲೆಂಡ್ ವಿರುದ್ಧ 46 ಬಾಲ್​ನಲ್ಲಿ 70 ರನ್ ಭಾರಿಸಿದರು. ಅವರೂ ಕೂಡ ಮೂರು ಸಿಕ್ಸರ್, 7 ಬೌಂಡರಿ ಹೊಡೆದರು. ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಮಾತ್ರ ಬೇಗನೇ ಔಟಾಗಿದ್ದು.

  ಬೇರ್​ಸ್ಟೋ ಉತ್ತಮ ಆಟ: ಇಂಗ್ಲೆಂಡ್ ಇನ್ನಿಂಗ್ಸಲ್ಲಿ ಜಾನಿ ಬೇರ್​ಸ್ಟೋ, ಮೊಯೀನ್ ಅಲಿ ಮತ್ತು ಲಿಯಾಮ್ ಲಿವಿಂಗ್​ಸ್ಟೋನ್ ಅವರ ಬ್ಯಾಟಿಂಗ್ ಹೈಲೈಟ್ ಎನಿಸಿತು. ಭಾರತದ ಬೌಲರ್​ಗಳ ಪೈಕಿ ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಭುವನೇಶ್ವರ್ ಕುಮಾರ್ ಮತ್ತು ರಾಹುಲ್ ಚಾಹರ್ ದುಬಾರಿ ಎನಿಸಿದರು. ಜಸ್​ಪ್ರೀತ್ ಬುಮ್ರಾ ಮತ್ತು ಆರ್ ಅಶ್ವಿನ್ ಹೆಚ್ಚು ವಿಕೆಟ್ ಪಡೆಯದಿದ್ದರೂ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

  ಭಾರತ ಅ. 24ರಂದು ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ಅದಕ್ಕೆ ಮುನ್ನ ಅ. 20ರಂದು ನಡೆಯುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ ಭಾರತ ಎದಿರುಗೊಳ್ಳಲಿದೆ.

  ಇದನ್ನೂ ಓದಿ: T20 World Cup: ಶ್ರೀಲಂಕಾ, ಐರ್​ಲೆಂಡ್ ತಂಡಗಳಿಗೆ ನಿರಾಯಾಸ ಗೆಲುವು; ಇಲ್ಲಿದೆ ಅಂಕಪಟ್ಟಿ

  ಸ್ಕೋರು ವಿವರ:

  ಇಂಗ್ಲೆಂಡ್ 20 ಓವರ್ 188/5
  (ಜಾನಿ ಬೇರ್​ಸ್ಟೋ 49, ಲಿಯಾಮ್ ಲಿವಿಂಗ್​ಸ್ಟೋನ್ 30, ಮೊಯೀನ್ ಅಲಿ ಅಜೇಯ 43 ರನ್ – ಮೊಹಮ್ಮದ್ ಶಮಿ 40/3

  ಭಾರತ 19 ಓವರ್ 192/3
  (ಇಶಾನ್ ಕಿಶನ್ 70, ಕೆಎಲ್ ರಾಹುಲ್ 51, ರಿಷಭ್ ಪಂತ್ 29 ರನ್)


  ಈ ವಿಶ್ವಕಪ್​ನ ಇದುವರೆಗಿನ ಎಲ್ಲಾ ಅಭ್ಯಾಸ ಪಂದ್ಯಗಳ ಫಲಿತಾಂಶ:

  ಅ. 12:
  1) ಪಪುವಾ ನ್ಯೂ ಗಿನಿಯಾ ವಿರುದ್ಧ ಐರ್​ಲೆಂಡ್​ಗೆ 8 ವಿಕೆಟ್ ಜಯ
  2) ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ 4 ವಿಕೆಟ್ ಜಯ
  3) ನಮೀಬಿಯಾ ವಿರುದ್ಧ ಓಮನ್​ಗೆ 32 ರನ್ ಜಯ
  4) ನೆದರ್​ಲೆಂಡ್ಸ್ ವಿರುದ್ಧ ಸ್ಕಾಟ್​ಲೆಂಡ್​ಗೆ 31 ರನ್ ಜಯ

  ಅ. 14:
  1) ಬಾಂಗ್ಲಾದೇಶ ವಿರುದ್ಧ ಐರ್​ಲೆಂಡ್​ಗೆ 33 ರನ್ ಜಯ
  2) ಓಮನ್ ವಿರುದ್ಧ ನೆದರ್​ಲೆಂಡ್ಸ್​ಗೆ 4 ರನ್ ಜಯ
  3) ನಮೀಬಿಯಾ ವಿರುದ್ಧ ಸ್ಕಾಟ್​ಲೆಂಡ್​ಗೆ 19 ರನ್ ಜಯ
  4) ಪಪುವಾ ನ್ಯೂಗಿನಿಯಾ ವಿರುದ್ಧ ಶ್ರೀಲಂಕಾಗೆ 39 ರನ್ ಜಯ

  ಅ. 18:
  1) ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನಕ್ಕೆ 7 ವಿಕೆಟ್ ಜಯ
  2) ಅಫ್ಘಾನಿಸ್ತಾನ ವಿರುದ್ಧ ಸೌಥ್ ಆಫ್ರಿಕಾಗೆ 41 ರನ್ ಜಯ
  3) ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 3 ವಿಕೆಟ್ ಜಯ
  4) ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ
  Published by:Vijayasarthy SN
  First published: