ICC Team- ಟೂರ್ನಿಯ ಅತ್ಯುತ್ತಮ ಆಟಗಾರರಿರುವ ತಂಡ ಪ್ರಕಟಿಸಿದ ಐಸಿಸಿ; ಬಾಬರ್ ಅಜಂ ಕ್ಯಾಪ್ಟನ್

T20 World Cup 2021- ನಿನ್ನೆ ಮುಕ್ತಾಯಗೊಂಡ ಟಿ20 ವಿಶ್ವಕಪ್ 2021 ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನ ಪರಿಗಣಿಸಿ ಐಸಿಸಿ ಈ ಟೂರ್ನಿಯ ತಂಡವನ್ನು ಘೋಷಿಸಿದೆ. ಇದರಲ್ಲಿ ಭಾರತೀಯರು ಒಬ್ಬರೂ ಇಲ್ಲ.

ಬಾಬರ್ ಅಜಂ

ಬಾಬರ್ ಅಜಂ

 • Share this:
  ದುಬೈ, ನ. 15: ಟಿ20 ವಿಶ್ವಕಪ್ 2021 ಪಂದ್ಯಾವಳಿ (T20 World Cup 2021) ಹಲವು ರೋಚಕ ತಿರುವುಗಳು, ಆರ್ಭಟಗಳ ಮಧ್ಯೆ ಅಂತ್ಯಗೊಂಡಿದೆ. 16 ತಂಡಗಳು ಟಿ20 ವಿಶ್ವಚಾಂಪಿಯನ್ ಪಟ್ಟಕ್ಕೆ ಹಣಾಹಣಿ ನಡೆಸಿದವು. ಅಂತಿಮವಾಗಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್ ಆಯಿತು. ಟಿ20 ಕ್ರಿಕೆಟ್​ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನ ಬದಿಗೊತ್ತಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಫೈನಲ್ ತಲುಪಿದ್ದವು. ಕಾಂಗರೂಗಳ ಪಡೆ (Australia is T20 World Champions) ತನ್ನ ನೆರೆ ದೇಶದ ಕಡುವೈರಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಭಾರತ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ತಂಡಗಳು ಸೆಮಿಫೈನಲ್ ತಲುಪಲು ವಿಫಲವಾದವು. ಇದೇ ವೇಳೆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಟಗಾರರನ್ನ ಆಯ್ದುಕೊಂಡು ಐಸಿಸಿ ಟೂರ್ನಿಯ ಟೀಮ್ ಅನ್ನು ಪ್ರಕಟಿಸಿದೆ. ಪಾಕಿಸ್ತಾನದ ನಾಯಕ ಬಾಬರ್ ಅಜಂ (Babar Azam) ಅವರು ಐಸಿಸಿ ಟೀಮ್​ಗೂ ಕ್ಯಾಪ್ಟನ್ ಆಗಿದ್ದಾರೆ.

  ಆಸ್ಟ್ರೇಲಿಯಾದ ಮೂವರು ಆಟಗಾರರು ಈ 11 ಮಂದಿಯ ತಂಡದಲ್ಲಿದ್ದಾರೆ. ಇಂಗ್ಲೆಂಡ್​ನಿಂದ ಇಬ್ಬರು ಆಟಗಾರರು ಇದ್ದಾರೆ. ಸೆಮಿಫೈನಲ್ ತಲುಪಲು ವಿಫಲವಾಗಿದ್ದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾದಿಂದಲೂ ತಲಾ ಇಬ್ಬರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿಂದ ಒಬ್ಬ ಆಟಗಾರರು ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ ಅವರು ಹನ್ನೊಂದರ ತಂಡದಲ್ಲಿದ್ದರೆ, ಶಾಹೀನ್ ಅಫ್ರಿದಿ 12ನೇ ಆಟಗಾರರಾಗಿ ಆಯ್ಕೆ ಆಗಿದ್ಧಾರೆ.

  ಬಾಬರ್ ಕ್ಯಾಪ್ಟನ್ಸಿಗೆ ಮೆಚ್ಚುಗೆ: 

  ಪಾಕಿಸ್ತಾನದ ಬಾಬರ್ ಅಜಂ ಅವರ ಕ್ಯಾಪ್ಟನ್ಸಿ ಬಹಳಷ್ಟು ಚರ್ಚೆಗೆ ಹಾಗೂ ಪ್ರಶಂಸೆಗೆ ಪಾತ್ರವಾಗಿದೆ. ಪಂದ್ಯದ ವೇಳೆ ಬಹಳ ಕೂಲ್ ಆಗಿರುವ ಬಾಬರ್, ತಮ್ಮ ಆಟಗಾರರನ್ನ ನಿಭಾಯಿಸುವ ಮತ್ತು ಹುರಿದುಂಬಿಸುವ ರೀತಿಯು ಮೆಚ್ಚುಗೆಗೆ ಪಾತ್ರವಾಗಿದೆ. ಎದುರಾಳಿ ಬ್ಯಾಟುಗಾರರನ್ನ ಕೆಡವಲು ಅವರು ಪ್ಲಾನ್ ಮಾಡುವ ರೀತಿಯೂ ಎಲ್ಲರ ಗಮನ ಸೆಳೆದಿದೆ. ಹೀಗಾಗಿ ಅವರನ್ನ ಐಸಿಸಿ ವಿಶ್ವಕಪ್ ಟೀಮ್​ನ ಕ್ಯಾಪ್ಟನ್ ಆಗಿ ಆರಿಸಲಾಗಿದೆ.

  ಬ್ಯಾಟುಗಾರರು: 

  ಡೇವಿಡ್ ವಾರ್ನರ್ ಮತ್ತು ಜೋಸ್ ಬಟ್ಲರ್ ಅವರು ಆರಂಭಿಕ ಆಟಗಾರರಾಗಿದ್ದಾರೆ. ಪಾಕ್ ತಂಡದಲ್ಲಿ ಓಪನಿಂಗ್ ಮಾಡುವ ಬಾಬರ್ ಅಜಂ ಅವರನ್ನ ನಂಬರ್ 3 ಸ್ಥಾನಕ್ಕೆ ಫಿಕ್ಸ್ ಮಾಡಲಾಗಿದೆ. ಚರತ್ ಅಸಲಂಕಾ ಮತ್ತು ಏಡನ್ ಮಾರ್ಕ್ರಮ್ ನಂತರದ ಪೊಸಿಶನ್​ಗೆ ಬರುತ್ತಾರೆ.

  ಇಬ್ಬರು ಆಲ್​ರೌಂಡರ್ಸ್: 

  ಈ ತಂಡದಲ್ಲಿ ಇಬ್ಬರು ಆಲ್​ರೌಂಡರ್ಸ್ ಇದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೀ ಆಟಗಾರರಾಗಿದ್ದ ಇಂಗ್ಲೆಂಡ್​ನ ಮೊಯೀನ್ ಅಲಿ ಅವರೊಬ್ಬ ಆಲ್​ರೌಂಡರ್. ಹಾಗೆಯೇ, ಆರ್​ಸಿಬಿ ತಂಡದಲ್ಲಿದ್ದು ಯುಎಇಯಲ್ಲಿ ಒಂದೂ ಐಪಿಎಲ್ ಪಂದ್ಯ ಆಡದ ಹಸರಂಗ ಅವರು ಇನ್ನೊಬ್ಬ ಆಲ್​ರೌಂಡರ್. ಇವರಿಬ್ಬರು ಸ್ಪಿನ್ ಬೌಲಿಂಗ್ ಆಲ್​ರೌಂಡರ್​ಗಳಾದರೆ ಅಡಂ ಜಂಪಾ ಪೂರ್ಣಪ್ರಮಾಣದ ಸ್ಪಿನ್ನರ್ ಆಗಿ ತಂಡದಲ್ಲಿದ್ದಾರೆ.

  ಜೋಷ್ ಹೇಜಲ್​ವುಡ್, ಟ್ರೆಂಟ್ ಬೌಲ್ಟ್ ಮತ್ತು ಆನ್ರಿಕ್ ನೋರ್ಟಿಯಾ ಅವರನ್ನು ವೇಗದ ಬೌಲಿಂಗ್ ಕಾಂಬಿನೇಶನ್ ಆಗಿ ಐಸಿಸಿ ತಂಡಕ್ಕೆ ಆಯ್ಕೆ ಮಾಡಲಾಗಿದೆ.


  ಭಾರತದವರು ಒಬ್ಬರೂ ಇಲ್ಲ:

  ಈ ವಿಶ್ವಕಪ್​ನಲ್ಲಿ ಭಾರತ ತಂಡದಿಂದ ಯಾವೊಬ್ಬ ಆಟಗಾರನೂ ಗಮನ ಸೆಳೆಯುವ ಪ್ರದರ್ಶನ ನೀಡಿಲ್ಲ. ಬ್ಯಾಟುಗಾರರಾಗಲೀ, ಬೌಲರ್​ಗಳಾಗಲೀ ಛಾಪು ಮೂಡಿಸುವಂಥ ಆಟವನ್ನು ತೋರಲಿಲ್ಲ. ಹೀಗಾಗಿ, ಮೋಸ್ ವ್ಯಾಲ್ಯುವಬಲ್ ಟೀಮ್​ಗೆ ಭಾರತದ ಕ್ರಿಕೆಟಿಗರು ಆಯ್ಕೆ ಆಗಿಲ್ಲ.

  ಇದನ್ನೂ ಓದಿ: Video- ಕಾಲಿನ ಶೂನಿಂದ ಬಿಯರ್ ಕುಡಿದ ಆಸ್ಟ್ರೇಲಿಯಾ ಕ್ರಿಕೆಟಿಗರು; ಇದೆಂಥ ಸೆಲಬ್ರೇಷನ್..!

  ಆಯ್ಕೆಗಾರರು ಯಾರು?

  ಹಿರಿಯ ಕ್ರೀಡಾ ಪತ್ರಕರ್ತರು ಮತ್ತು ವೀಕ್ಷಕವಿವರಣೆಗಾರರಿರುವ ತೀರ್ಪುಗಾರರ ತಂಡ ಈ ಆಯ್ಕೆ ಮಾಡಿದೆ. ಇಯಾನ್ ಬಿಷಪ್, ನಟಾಲೀ ಜರ್ಮನೋಸ್, ಶೇನ್ ವ್ಯಾಟ್ಸನ್, ಲಾರೆನ್ಸ್ ಬೂತ್ ಮತ್ತು ಶಾಹಿದ್ ಹಷ್ಮಿ ಈ ಐವರು ತೀರ್ಪುಗಾರರಾಗಿದ್ದಾರೆ. ಇವರ ಪೈಕಿ ಇಯಾನ್ ಬಿಷಪ್ ಮತ್ತು ಶೇನ್ ವ್ಯಾಟ್ಸನ್ ಅವರು ಮಾಜಿ ಕ್ರಿಕೆಟಿಗರಾಗಿದ್ದಾರೆ. ಲಾರೆನ್ಸ್ ಬೂತ್ ಮತ್ತು ಶಾಹಿದ್ ಹಷ್ಮಿ ಕ್ರಿಕೆಟ್ ವರದಿಗಾರರಾಗಿ ಅನುಭವ ಹೊಂದಿದ್ಧಾರೆ. ಇವರ ಪೈಕಿ ಏಕೈಕ ಮಹಿಳೆಯಾಗಿರುವ ಲಾರೆನ್ಸ್ ಬೂತ್ ಅವರು ಕ್ರಿಕೆಟ್ ಅಷ್ಟೇ ಅಲ್ಲ ವಿವಿಧ ಕ್ರೀಡೆಗಳಲ್ಲೂ ತೊಡಗಿಸಿಕೊಂಡಿದ್ಧಾರೆ.

  ಇದನ್ನೂ ಓದಿ: Matthew Wade: ಮರಗೆಲಸದಿಂದ ವಿಶ್ವಕಪ್​ವರೆಗೆ..ಆಸ್ಟ್ರೇಲಿಯಾ ಕ್ರಿಕೆಟಿಗ ಮ್ಯಾಥ್ಯೂ ವೇಡ್ ಕಥೆ ಗೊತ್ತಾ?

  ಆಯ್ಕೆಗಾರರು ಹೇಳುವುದೇನು?

  ಇಂಥ ಕಠಿಣ ಸ್ಪರ್ಧಾತ್ಮಕ ಟೂರ್ನಿಯಿಂದ ಈ ತಂಡವನ್ನು ಆಯ್ಕೆ ಮಾಡುವುದು ಬಹಳ ಕಷ್ಟವಾಯಿತು. ಸೂಪರ್ 12 ಹಂತದಿಂದ ಫೈನಲ್​ವರೆಗಿನ ಪಂದ್ಯಗಳ ಪ್ರದರ್ಶವನ್ನೇ ಪ್ರಮುಖವಾಗಿ ಪರಿಗಣಿಸಲಾಗಿದೆ…. ಯಾವುದೇ ತಂಡವನ್ನ ಆಯ್ಕೆ ಮಾಡಬೇಕಾದರೆ ವಿಭಿನ್ನ ಅಭಿಪ್ರಾಯ, ಚರ್ಚೆಗಳು ನಡೆಯುತ್ತವೆ. ನಾವೂ ಕೂಡ ಯಾವುದೇ ಚರ್ಚೆಗೂ ಅವಕಾಶ ಕೊಟ್ಟಿದ್ದೇವೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಹಾಗೂ ತೀರ್ಪುಗಾರ ಮಂಡಳಿ ಸದಸ್ಯ ಇಯಾನ್ ಬಿಷಪ್ ಹೇಳಿದ್ದಾರೆ.

  ಟಿ20 ವಿಶ್ವಕಪ್ ಟೂರ್ನಿಯ ಐಸಿಸಿ ಟೀಮ್:

  ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಜೋಸ್ ಬಟ್ಲರ್ (ಇಂಗ್ಲೆಂಡ್ ವಿ.ಕೀ.), ಬಾಬರ್ ಅಜಂ (ಪಾಕಿಸ್ತಾನ- ನಾಯಕ), ಚರಿತ್ ಅಸಲಂಕಾ (ಶ್ರೀಲಂಕಾ), ಏಡನ್ ಮಾರ್ಕ್ರಮ್ (ಸೌತ್ ಆಫ್ರಿಕಾ), ಮೊಯೀನ್ ಅಲಿ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ಅಡಂ ಜಂಪಾ (ಆಸ್ಟ್ರೇಲಿಯಾ), ಜೋಷ್ ಹೇಜಲ್​ವುಡ್ (ಆಸ್ಟ್ರೇಲಿಯಾ), ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), ಆನ್ರಿಕ್ ನೋರ್ಟಿಯಾ (ಸೌತ್ ಆಫ್ರಿಕಾ).
  12ನೆ ಆಟಗಾರ: ಶಾಹೀನ್ ಅಫ್ರಿದಿ (ಪಾಕಿಸ್ತಾನ)
  Published by:Vijayasarthy SN
  First published: