ದುಬೈ, ಅ. 28: ಡೇವಿಡ್ ವಾರ್ನರ್ ಫಾರ್ಮ್ನಲ್ಲಿಲ್ಲ ಎಂದು ಅಲವತ್ತುಕೊಂಡವರಿಗೆ ಆಸ್ಟ್ರೇಲಿಯಾ ಆಟಗಾರ ತಮ್ಮ ಬ್ಯಾಟ್ ಮೂಲಕವೇ ಭರ್ಜರಿ ಉತ್ತರ ಕೊಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧ ನಡೆದ ಮೊದಲ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ವಾರ್ನರ್ ಪ್ರಮುಖ ಪಾತ್ರ ವಹಿಸಿದ್ದಾರೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಲಂಕಾ ತಂಡವನ್ನು ಆಸ್ಟ್ರೇಲಿಯಾ 7 ವಿಕೆಟ್ಗಳಿಂದ ಸುಲಭವಾಗಿ ಸೋಲಿಸಿ ಸತತ ಎರಡನೇ ಗೆಲುವು ಪಡೆಯಿತು. ಶ್ರೀಲಂಕಾದ 154 ರನ್ ಮೊತ್ತವನ್ನು ಕಾಂಗರೂಗಳ ಪಡೆ ಮೂರು ಓವರ್ ಬಾಕಿ ಇರುವಂತೆ ಚೇಸ್ ಮಾಡಿತು. ಡೇವಿಡ್ ವಾರ್ನರ್ 42 ಬಾಲ್ನಲ್ಲಿ 65 ರನ್ ಗಳಿಸಿ ಗೆಲುವಿನ ರೂವಾರಿ ಎನಿಸಿದರು.
ಡೇವಿಡ್ ವಾರ್ನರ್ ಮತ್ತು ನಾಯಕ ಆರೋನ್ ಫಿಂಚ್ ಇಬ್ಬರೂ ಮೊದಲ ವಿಕೆಟ್ಗೆ 70 ರನ್ ಸೇರಿಸಿದ್ದು ಆಸ್ಟ್ರೇಲಿಯಾದ ಚೇಸಿಂಗ್ ಹಾದಿಯನ್ನ ಸುಲಭಗೊಳಿಸಿತು. ಫಿಂಚ್ ಔಟಾದ ಬೆನ್ನಲ್ಲೇ ಮ್ಯಾಕ್ಸ್ವೆಲ್ ಔಟಾದರೂ ಆಸ್ಟ್ರೇಲಿಯಾದ ಇನ್ನಿಂಗ್ಸ್ ಹಳಿತಪ್ಪದಂತೆ ವಾರ್ನರ್ ನೋಡಿಕೊಂಡರು. ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 3ನೇ ವಿಕೆಟ್ಗೆ 50 ರನ್ ಜೊತೆಯಾಟ ನೀಡಿದರು. ಇದರಿಂದ ಆಸ್ಟ್ರೇಲಿಯಾದ ಗೆಲುವಿನ ಹಾದಿ ಸುಗಮಗೊಂಡಿತು. ಸ್ಟೀವನ್ ಸ್ಮಿತ್ ಕೂಡ ಅಮೋಘ ಆಟ ಆಡಿದರು.
ವಾರ್ನರ್ ಬ್ಯಾಟಿಂಗ್ ಸೊಗಸು:
ಈ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಗೆಲುವಿನ ಜೊತೆಗೆ ಡಬಲ್ ಖುಷಿ ಸಿಕ್ಕಿದ್ದು ಡೇವಿಡ್ ವಾರ್ನರ್ ಮತ್ತೆ ಲಯ ಕಂಡುಕೊಂಡಿದ್ದಕ್ಕೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ಬೆನ್ನೆಲುಬಾಗಿರುವ ವಾರ್ನರ್ ಯುಎಇಯಲ್ಲಿ ಐಪಿಎಲ್ ಹಾಗೂ ವಿಶ್ವಕಪ್ ವಾರ್ಮಪ್ನಲ್ಲಿ ಒಟ್ಟು ನಾಲ್ಕು ಪಂದ್ಯಗಳಿಂದ ಗಳಸಿದ್ದು ಕೇವಲ 3 ರನ್ ಮಾತ್ರ. ಸೌತ್ ಆಫ್ರಿಕಾ ವಿರುದ್ದದ ವಿಶ್ವಕಪ್ ಮ್ಯಾಚ್ನಲ್ಲೂ ಅವರು ಹೆಚ್ಚು ರನ್ ಗಳಿಸಲಿಲ್ಲ. ಹೀಗಾಗಿ, ವಾರ್ನರ್ ಫಾರ್ಮ್ ಕಳೆದುಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಈ ಪಂದ್ಯಕ್ಕೆ ಮುನ್ನ ವಾರ್ನರ್ ತಾನು ಫಾರ್ಮ್ ಕಳೆದುಕೊಂಡಿದ್ದೇನೆಂದು ಯಾರಾದರೂ ಹೇಳಿದರೆ ಅದು ಹಾಸ್ಯಾಸ್ಪದ ಎನಿಸುತ್ತದೆ. ತಾನು ನೆಟ್ನಲ್ಲಿ ಚೆನ್ನಾಗಿ ಆಡುತ್ತಿದ್ದೇನೆ ಎಂದು ಹೇಳಿದ್ದರು. ಹಾಗೆಯೇ ಅವರು ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು. ಇದು ಅವರಿಗೆ ವರ್ಕೌಟ್ ಆದಂತಿದೆ.
ಇದನ್ನೂ ಓದಿ: T20 World Cup- ಗೆಲುವಿನ ಲಯಕ್ಕೆ ಮರಳಲು ಭಾರತ ಏನು ಮಾಡಬೇಕು? ಇಲ್ಲಿವೆ ತಜ್ಞರ ಸಲಹೆಗಳು
ಇದನ್ನೂ ಓದಿ: Ind vs NZ- ನ್ಯೂಜಿಲೆಂಡ್ನ ದೊಡ್ಡ ಶಕ್ತಿ ಯಾವುದು ಗೊತ್ತಾ? ಭಾರತಕ್ಕೆ ಜಹೀರ್ ಎಚ್ಚರಿಕೆ ಕರೆಗಂಟೆ
ಲಂಕಾ ಇನ್ನಿಂಗ್ಸ್ ಹೈಲೈಟ್:
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾದ ಇನ್ನಿಂಗ್ಸಲ್ಲಿ ಎರಡು ಪ್ರಮುಖ ಜೊತೆಯಾಟ ಬಂದಿದ್ದು ಬಿಟ್ಟರೆ ಹೆಚ್ಚು ಹೇಳುವಂತಹದ್ದು ಇರಲಿಲ್ಲ. ಕುಸಾಲ್ ಪರೆರೇರಾ ಮತ್ತು ಚರಿತ್ ಅಸಲಂಕ 2ನೇ ವಿಕೆಟ್ಗೆ 63 ರನ್ ಜೊತೆಯಾಟ ನೀಡಿದರು. ಒಂದು ಹಂತದಲ್ಲಿ 94 ರನ್ಗೆ ಲಂಕಾ 5 ವಿಕೆಟ್ ಕಳೆದುಕೊಂಡಾಗ ದಾಸುನ್ ಶಾನಕ ಮತ್ತು ಭಾನುಕಾ ರಾಜಪಕ್ಸ 6ನೇ ವಿಕೆಟ್ಗೆ 40 ರನ್ ಜೊತೆಯಾ ಕೊಟ್ಟರು. ಹೀಗಾಗಿ, ಲಂಕಾ ಸ್ಕೋರು 150 ರನ್ ಗಡಿದಾಟಲು ಸಾಧ್ಯವಾಯಿತು. ಆದರೆ, ಗೆಲುವಿಗೆ ಅಗತ್ಯ ಇರುವಷ್ಟು ಮೊತ್ತ ಇದಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾರತ ಕೂಡ ಇದೇ ಪಿಚ್ನಲ್ಲಿ ಪಾಕಿಸ್ತಾನ ವಿರುದ್ಧ 151 ರನ್ ಗಳಿಸಿತ್ತು. ಪಾಕಿಸ್ತಾನ ಕೂಡ ನಿರಾಯಾಸವಾಗಿ ಈ ಗುರಿಯನ್ನ ಚೇಸ್ ಮಾಡಿತ್ತು.
ಲಂಕಾಗೆ ಮೊದಲ ಸೋಲು:
ಈ ವಿಶ್ವಕಪ್ನಲ್ಲಿ ಶ್ರೀಲಂಕಾಗೆ ಇದು ಮೊದಲ ಸೋಲಾಗಿದೆ. ಮೊದಲ ಸುತ್ತಿನ ತನ್ನ ಗುಂಪಿನ ಎಲ್ಲಾ ಮೂರು ಪಂದ್ಯಗಳನ್ನ ಗೆದ್ದು ಸೂಪರ್-12 ಹಂತಕ್ಕೆ ಬಂದಿದ್ದ ಶ್ರೀಲಂಕಾ ಈ ಎರಡನೇ ಸುತ್ತಿನಲ್ಲಿ ಬಾಂಗ್ಲಾದೇಶವನ್ನು ಮಣಿಸಿತ್ತು. ಅದು ಲಂಕಾಗೆ ಸಿಕ್ಕ ಸತತ ನಾಲ್ಕನೇ ಗೆಲುವಾಗಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಗೆದ್ದ ಸತತ ಐದನೇ ಗೆಲುವಿನ ಸಂಭ್ರಮ ಪಡುವ ಲಂಕಾ ಆಸೆ ಈಡೇರಲಿಲ್ಲ.
ಇದೇ ವೇಳೆ, ಆಸ್ಟ್ರೇಲಿಯಾಗೆ ಇದು ಸತತ ಎರಡನೇ ಗೆಲುವಾಗಿದೆ. ಈ ಗೆಲುವಿನ ನಂತರ ಆಸ್ಟ್ರೇಲಿಯಾ ತನ್ನ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ
ಮುಂದಿನ ಪಂದ್ಯಗಳು:
ಶ್ರೀಲಂಕಾ ತನ್ನ ಮುಂದಿನ ಪಂದ್ಯವನ್ನು ಅ. 30ರಂದು ಸೌತ್ ಆಫ್ರಿಕಾ ವಿರುದ್ಧ ಶಾರ್ಜಾದಲ್ಲಿ ಆಡಲಿದೆ. ಆಸ್ಟ್ರೇಲಿಯಾ ಕೂಡ ಅದೇ ದಿನದಂದು ದುಬೈ ಪಿಚ್ನಲ್ಲಿ ಇಂಗ್ಲೆಂಡ್ ಅನ್ನು ಎದುರುಗೊಳ್ಳಲಿದೆ. ಇವೆರಡೂ ಪಂದ್ಯಗಳು ಬಹಳ ಮಹತ್ವದ್ದಾಗಿವೆ.
ಸ್ಕೋರು ವಿವರ:
ಶ್ರೀಲಂಕಾ 20 ಓವರ್ 154/6
(ಕುಸಾಲ್ ಪೆರೇರಾ 35, ಚರಿತ್ ಅಸಲಂಕ 35, ಭಾನುಕಾ ರಾಜಪಕ್ಸ ಅಜೇಯ 33 ರನ್ – ಅಡಂ ಜಂಪ 12/2, ಮಿಶೆಲ್ ಸ್ಟಾರ್ಕ್ 27/2, ಪ್ಯಾಟ್ ಕಮಿನ್ಸ್ 34/2)
ಆಸ್ಟ್ರೇಲಿಯಾ 17 ಓವರ್ 155/3
(ಆರೋನ್ ಫಿಂಚ್ 27, ಡೇವಿಡ್ ವಾರ್ನರ್ 65, ಸ್ಟೀವನ್ ಸ್ಮಿತ್ ಅಜೇಯ 28, ಮಾರ್ಕಸ್ ಸ್ಟಾಯ್ನಿಸ್ ಅಜೇಯ 16 ರನ್- ವನಿಂದು ಹಸರಂಗ 22/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ