4 Balls 4 Wickets- ಕರ್ಟಿಸ್ ಡಬಲ್ ಹ್ಯಾಟ್ರಿಕ್; 4 ಬಾಲ್​ಗೆ 4 ವಿಕೆಟ್ ಪಡೆದವರ ಪಟ್ಟಿ

T20 World Cup: ನೆದರ್ಲೆಂಡ್ಸ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐರ್ಲೆಂಡ್​ನ ವೇಗದ ಬೌಲರ್ ಕರ್ಟಿಸ್ ಕ್ಯಾಂಫರ್ ಡಬಲ್ ಹ್ಯಾಟ್ರಿಕ್ ಪಡೆದಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಆಟಗಾರನೆನಿಸಿದ್ಧಾರೆ.

ಐರ್​ಲೆಂಡ್ ಕ್ರಿಕೆಟ್ ತಂಡ

ಐರ್​ಲೆಂಡ್ ಕ್ರಿಕೆಟ್ ತಂಡ

 • Share this:
  ಅಬುಧಾಬಿ: ಐರ್​ಲೆಂಡ್ ವೇಗದ ಬೌಲರ್ ಕರ್ಟಿಸ್ ಕ್ಯಾಂಫರ್ ನಿನ್ನೆ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕರ್ಟಿಸ್ ಕ್ಯಾಂಫರ್ ಹ್ಯಾಟ್ರಿಕ್ ಜೊತೆಗೆ ಡಬಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. 4 ಬಾಲ್​ನಲ್ಲಿ 4 ವಿಕೆಟ್ ಕಿತ್ತಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ.

  ಐರ್​ಲೆಂಡ್​ನ ಮತ್ತೊಬ್ಬ ವೇಗದ ಬೌಲರ್ ಮಾರ್ಕ್ ಅಡೇರ್ 4 ಓವರ್​ನಲ್ಲಿ 9 ರನ್​ಗೆ 3 ವಿಕೆಟ್ ಪಡೆದರು. ಇವರಿಬ್ಬರ ಬೌಲಿಂಗ್ ಆರ್ಭಟಕ್ಕೆ ಸಿಲುಕಿ ನೆದರ್​ಲೆಂಡ್ಸ್ 106 ರನ್​ಗೆ ಆಲೌಟ್ ಆಯಿತು. ನಂತರ ಐರ್​ಲೆಂಡ್ ತಂಡ ಈ ಅಲ್ಪಮೊತ್ತವನ್ನು ಸುಲಭವಾಗಿ ಚೇಸ್ ಮಾಡಿ ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿತು.

  22 ವರ್ಷದ ಕರ್ಟಿಸ್ ಕ್ಯಾಂಫರ್ ತಮ್ಮ ಎರಡನೇ ಓವರ್​ನಲ್ಲಿ ಈ ಸಾಧನೆ ಮಾಡಿದರು. 2 ವಿಕೆಟ್ ನಷ್ಟಕ್ಕೆ 50 ರನ್ ಗಡಿ ದಾಟಿದ್ದ ನೆದರ್​ಲೆಂಡ್ಸ್ ದಿಢೀರ್ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಗೆ ಸಿಲುಕಿತು. ಕ್ಯಾಂಪರ್ ಕಿತ್ತ ವಿಕೆಟ್​ಗಳಲ್ಲಿ ರಯಾನ್ ಟೆನ್ ಡಾಶ್ಕಟೆ, ಸ್ಕಾಟ್ ಎಡ್ವರ್ಡ್ಸ್, ವ್ಯಾನ್ ಡರ್ ಮೆರ್ವೆ ಅವರಂಥ ಪ್ರಬಲ ಬ್ಯಾಟರ್ಸ್ ಇದ್ದಾರೆ.

  ದಕ್ಷಿಣ ಆಫ್ರಿಕಾ ಮೂಲದ ಕರ್ಟಿಸ್ ಕ್ಯಾಂಪರ್ ಕಳೆದ ವರ್ಷವಷ್ಟೇ ಐರ್​ಲೆಂಡ್ ದೇಶಕ್ಕೆ ವಲಸೆ ಹೋಗಿದ್ದರು. ಇವರ ಆಗಮನದಿಂದ ಐರ್​ಲೆಂಡ್ ತಂಡದ ಶಕ್ತಿ ಇನ್ನಷ್ಟು ಹೆಚ್ಚಾದಂತಾಗಿದೆ.

  ಇದನ್ನೂ ಓದಿ: T20 World Cup- ಡೆಲಿವರಿ ಬಾಯ್ ಆಗಿದ್ದ ಕ್ರಿಸ್ ಗ್ರೀವ್ಸ್ ಈಗ ಟಿ20 ವಿಶ್ವಕಪ್​ನಲ್ಲಿ ಮ್ಯಾಚ್ ವಿನ್ನರ್

  ನಾಲ್ಕು ಬಾಲ್​ಗೆ ನಾಲ್ಕು ವಿಕೆಟ್ ಪಡೆದವರು:

  1) ಲಸಿತ್ ಮಾಲಿಂಗ, ಶ್ರೀಲಂಕಾ ಕ್ರಿಕೆಟಿಗ,
  (2007ರ ಟಿ20 ವಿಶ್ವಕಪ್​ನಲ್ಲಿ ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹಾಗು 2019ರಲ್ಲಿ ಪಲ್ಲೆಕೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ.)

  2) ರಷೀದ್ ಖಾನ್, ಅಫ್ಘಾನಿಸ್ತಾನ ಕ್ರಿಕೆಟಿಗ
  (2019ರಲ್ಲಿ ಭಾರತದ ಡೆಹ್ರಾಡೂನ್​ನಲ್ಲಿ ಐರ್​ಲೆಂಡ್ ವಿರುದ್ಧದ ಪಂದ್ಯದಲ್ಲಿ)

  3) ಕರ್ಟಿಸ್ ಕ್ಯಾಂಫರ್, ಐರ್​ಲೆಂಡ್ ಕ್ರಿಕೆಟಿಗ
  (2021ರ ಟಿ20 ವಿಶ್ವಕಪ್​ನಲ್ಲಿ ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ)

  ಕರ್ಟಿಸ್ ಕ್ಯಾಂಫರ್ ದಾಖಲೆಗಳು:

  1) ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಬೌಲರ್ ಎನಿಸಿದ್ದಾರೆ. ಆಸ್ಟ್ರೇಲಿಯಾದ ಬ್ರೆಟ್ ಲೀ 2007ರಲ್ಲಿ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು.

  2) ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್ ಪಡೆದ ಐರ್​ಲೆಂಡ್​ನ ಮೊದಲ ಕ್ರಿಕೆಟಿಗ.

  3) ಸತತ ನಾಲ್ಕು ಎಸೆತಗಳಲ್ಲಿ ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿದ್ದಾರೆ.

  ಲಂಕಾ ಬೌಲರ್ಸ್ ಕರಾಮತ್ತು:

  ಇದೇ ಜಾವೇದ್ ಶೇಖ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ತಂಡ 39 ಎಸೆತ ಬಾಕಿ ಇರುವಂತೆ ನಮೀಬಿಯಾದ ಸವಾಲನ್ನ ಹಿಮ್ಮೆಟ್ಟಿಸಿತು. ಮೊದಲು ಬ್ಯಾಟ್ ಮಾಡಿದ ನಮೀಬಿಯಾ 96 ರನ್ ಮಾತ್ರ ಗಳಿಸಲು ಶಕ್ಯವಾಯಿತು. 20 ಓವರ್ ಪೂರ್ತಿ ಆಡಲೂ ಅದಕ್ಕೆ ಸಾಧ್ಯವಾಗಲಿಲ್ಲ. ಕ್ರೆಗ್ ವಿಲಿಯಮ್ಸ್ 29 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಎನಿಸಿತು. ಶ್ರೀಲಂಕಾದ ವೇಗದ ಬೌಲರ್ ಲಾಹಿರು ಕುಮಾರ, ಸ್ಪಿನ್ನರ್ಸ್ ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ಅವರ ಮಾರಕ ಬೌಲಿಂಗ್​ಗೆ ನಮೀಬಿಯಾ ಬ್ಯಾಟರ್ಸ್ ತರಗೆಲೆಗಳಂತೆ ಉದುರಿದರು.

  ಇದಕ್ಕೆ ಪ್ರತಿಯಾಗಿ ಚೇಸಿಂಗ್ ಆರಂಭಿಸಿದ ಲಂಕಾ 26 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಅವಿಷ್ಕಾ ಫರ್ನಾಂಡೋ ಮತ್ತು ಭನುಕ ರಾಜಪಕ್ಸ ತಂಡವನ್ನ ಗೆಲುವಿನ ದಡ ಮುಟ್ಟಿಸಿದರು.

  ಇದನ್ನೂ ಓದಿ: Warm Up Matches: ಇಂಗ್ಲೆಂಡ್ ವಿರುದ್ಧ ಭಾರತ ಜಯಭೇರಿ; ಇಲ್ಲಿದೆ ಎಲ್ಲ ವಾರ್ಮಪ್ ಮ್ಯಾಚ್​ಗಳ ರಿಸಲ್ಟ್

  ಗ್ರೂಪ್ ಬಿ ಪಂದ್ಯಗಳು:

  ನಿನ್ನೆ ನಡೆದ ಗ್ರೂಪ್ ಬಿ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲಿನ ಕಹಿ ಉಂಡಿತ್ತು. ಸ್ಕಾಟ್​ಲೆಂಡ್ ತಂಡ ಬಾಂಗ್ಲಾ ಹುಲಿಗಳನ್ನ ರೋಚಕವಾಗಿ ಮಣಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಆತಿಥೇಯ ಓಮನ್ ತಂಡ ಪಪುವಾ ನ್ಯೂಗಿನಿಯಾವನ್ನು ಸುಲಭವಾಗಿ ಸೋಲಿಸಿತು. ನಾಳೆ ಇದೇ ಗುಂಪಿನಲ್ಲಿ ಓಮನ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಹಣಾಹಣಿ ನಡೆಸಲಿವೆ.

  ಸ್ಕೋರು ವಿವರ:

  ನೆದರ್​ಲೆಂಡ್ಸ್ vs ಐರ್​ಲೆಂಡ್ ಪಂದ್ಯ:

  ನೆದರ್​ಲೆಂಡ್ಸ್ 20 ಓವರ್ 106/10
  (ಮ್ಯಾಕ್ಸ್ ಒಡೌಡ್ 51, ಪೀಟರ್ ಸೀಲರ್ 21 ರನ್- ಕರ್ಟಿಸ್ ಕ್ಯಾಂಫರ್ 26/4, ಮಾರ್ಕ್ ಅಡೇರ್ 9/3)

  ಐರ್​ಲೆಂಡ್ 15.1 ಓವರ್ 107/3
  (ಪೌಲ್ ಸ್ಟರ್ಲಿಂಗ್ ಅಜೇಯ 30, ಗರೆತ್ ಡೆಲಾನಿ 44 ರನ್)
  Published by:Vijayasarthy SN
  First published: