T20 World Cup- ತಿರುಗಿಬಿದ್ದ ಬಾಂಗ್ಲಾ ಹುಲಿಗಳು; ಸ್ಕಾಟ್ಲೆಂಡ್​ಗೆ ಸತತ 2ನೇ ಗೆಲುವು; ಕುತೂಹಲಕಾರಿ ಸ್ಥಿತಿಯಲ್ಲಿ ಗ್ರೂಪ್ ಎ

Bangladesh registers first win- ವಿಶ್ವಕಪ್​ನಿಂದ ಹೊರಬೀಳುವ ಸ್ಥಿತಿಯಲ್ಲಿದ್ದ ಬಾಂಗ್ಲಾದೇಶ ಇಂದು ಓಮನ್ ಎದುರು ಗೆಲುವು ಸಾಧಿಸಿ ಸೂಪರ್-12 ಪ್ರವೇಶಾವಕಾಶ ಜೀವಂತವಾಗಿರಿಸಿಕೊಂಡಿದೆ. ಇನ್ನೊಂದೆಡೆ ಸ್ಕಾಟ್ಲೆಂಡ್ ಸತತ ಎರಡು ಗೆಲುವು ಪಡೆದು ಉತ್ತಮ ಸ್ಥಿತಿಯಲ್ಲಿದೆ.

ಬಾಂಗ್ಲಾದೇಶ ಕ್ರಿಕೆಟ್ ತಂಡ

ಬಾಂಗ್ಲಾದೇಶ ಕ್ರಿಕೆಟ್ ತಂಡ

  • Share this:
    ಅಲ್ ಅಮೀರತ್, ಅ. 19: ಈ ಪಂದ್ಯ ಸೋತಿದ್ದರೆ ಬಾಂಗ್ಲಾದೇಶ ಟಿ20 ವಿಶ್ವಕಪ್​ನಿಂದ ಹೊರಬೀಳುತ್ತಿತ್ತು. ಈ ಒತ್ತಡದ ಸಂದರ್ಭದಲ್ಲೂ ಬಾಂಗ್ಲಾದೇಶ ಕೆಚ್ಚೆದೆಯ ಆಟವಾಡಿ ಆತಿಥೇಯ ಓಮನ್ ತಂಡವನ್ನು 26 ರನ್​ಗಳಿಂದ ಸೋಲಿಸಿದರು. ಈ ಮೂಲಕ ಸೂಪರ್-12 ಹಂತ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡರು. ಓಮನ್​ನ ಮಸ್ಕಟ್ ನಗರದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ 153 ರನ್​ಗೆ ಪ್ರತಿಯಾಗಿ ಆತಿಥೇಯ ಓಮನ್ ತಂಡದ ಇನ್ನಿಂಗ್ಸ್ 127 ರನ್​ಗೆ ಅಂತ್ಯವಾಯಿತು. ಶಾಕಿಬ್ ಅಲ್ ಹಸನ್ ಬಾಂಗ್ಲಾ ಗೆಲುವಿನ ಪ್ರಮುಖ ರೂವಾರಿಯಾದರು.

    ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಸರಿಯಾಗಿ 20 ಓವರ್​ನಲ್ಲಿ 153 ರನ್​ಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ಮೊಹಮ್ಮದ್ ನಯೀಮ್ 64 ರನ್ ಗಳಿಸಿದರು. ಅವರನ್ನ ಬಿಟ್ಟರೆ ಶಾಕಿಬ್ ಅಲ್ ಹಸನ್ (42) ಮತ್ತು ನಾಯಕ ಮಹಮುದುಲ್ಲಾ (17) ಉತ್ತಮ ಆಟವಾಡಿದರು. ಶಾಕಿಬ್ ಕೇವಲ 29 ಬಾಲ್​ನಲ್ಲಿ 42 ರನ್ ಗಳಿಸಿದರು. ಮೊಹಮ್ಮದ್ ನಯೀಮ್ 50 ಬಾಲ್​ನಲ್ಲಿ 64 ರನ್ ಭಾರಿಸಿದರು. ಬಹುತೇಕ ಇವರಿಬ್ಬರ ಸ್ಫೋಟಕ ಆಟದ ನೆರವಿನಿಂದ ಬಾಂಗ್ಲಾ ಸ್ಕೋರು 150 ರನ್ ಗಡಿದಾಟಲು ಸಾಧ್ಯವಾಯಿತು.

    ಇದಕ್ಕೆ ಪ್ರತಿಯಾಗಿ ಓಮನ್ ತಂಡ 11ನೇ ಓವರ್​ವರೆಗೂ ಉತ್ತಮವಾಗಿ ಚೇಸಿಂಗ್ ನಿಭಾಸಿತು. ಆದರೆ, 12ನೇ ಒವರ್​ನಲ್ಲಿ ನಾಯಕ ಜೀಶನ್ ಮಕ್ಸೂದ್ ಔಟ್ ಆದ ಬಳಿಕ ಓಮನ್ ಪ್ರತಿರೋಧ ಶಮನಗೊಂಡಿತು. ವಿಕೆಟ್​ಗಳು ತರಗೆಲೆಗಳಂತೆ ಉದುರಿದವು. ಪಿಎನ್​ಜಿ ತಂಡದ ಎದುರು ಅಮೋಘ ಬ್ಯಾಟಿಂಗ್ ಆಡಿದ್ದ ಜತೀಂದರ್ ಸಿಂಗ್ 40 ರನ್ ಗಳಿಸಿ ಮಿಂಚಿದರು. ಅವರು ಕ್ರೀಸ್​ನಲ್ಲಿರುವವರೆಗೂ ಓಮನ್ ದೇಶಕ್ಕೆ ಗೆಲುವಿನ ಭರವಸೆ ಇತ್ತು. ಅವರು 4ನೆಯವರಾಗಿ ಔಟಾದ್ ಬಳಿಕ ಓಮನ್ ತಂಡ ಬಹುತೇಕ ಸೋಲಿನ ಸುಳಿಗೆ ಸಿಲುಕಿತು. ಕೊನೆಗೆ 127 ರನ್​ಗೆ ಅದರ ಇನ್ನಿಂಗ್ಸ್ ಕೊನೆಗೊಂಡಿತು.

    ಬಾಂಗ್ಲಾದೇಶಕ್ಕೆ ಈ ವಿಶ್ವಕಪ್​ನಲ್ಲಿ ಇದು ಚೊಚ್ಚಲ ಗೆಲುವು. ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ಎದುರು ಸೋತಿದ್ದ ಬಾಂಗ್ಲಾ ಹುಲಿಗಳಿಗೆ ಈ ವಿಶ್ವಕಪ್​ನಲ್ಲಿ ಜೀವಂತ ಉಳಿಯಬೇಕಿದ್ದರೆ ಈ ಪಂದ್ಯ ಗೆಲ್ಲಲೇ ಬೇಕಿತ್ತು. ಇದೀಗ ಎ ಗುಂಪಿನ ಅಂಕಪಟ್ಟಿಯಲ್ಲಿ ಸ್ಕಾಟ್ಲೆಂಡ್ 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಬಾಂಗ್ಲಾದೇಶ ಮತ್ತು ಓಮನ್ ತಂಡಗಳು ತಲಾ 2 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ.

    ಇದನ್ನೂ ಓದಿ: T20 World Cup: ಗ್ರೂಪ್ ಎ- ಶ್ರೀಲಂಕಾ, ನೆದರ್ಲೆಂಡ್ಸ್, ಐರ್ಲೆಂಡ್, ನಮೀಬಿಯಾ- ತಂಡ, Ranking ಇತ್ಯಾದಿ ವಿವರ

    ಸ್ಕಾಟ್ಲೆಂಡ್​ಗೆ ಸತತ ಎರಡನೇ ಜಯ:

    ಇದಕ್ಕೆ ಮೊದಲು ನಡೆದ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ಸ್ಕಾಟ್ಲೆಂಡ್ 17 ರನ್​ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 9 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಇದಕ್ಕೆ ಪ್ರತಿಯಾಗಿ ಪಿಎನ್​ಜಿ 148 ರನ್​ಗೆ ಆಲೌಟ್ ಆಯಿತು. ಆದರೆ ಪಪುವಾ ತಂಡ ತೋರಿದ ಪ್ರತಿರೋಧ ನಿಜಕ್ಕೂ ಅಚ್ಚರಿ ಮೂಡಿಸಿತು. ಚೇಸಿಂಗ್​ನ ಒಂದು ಹಂತದಲ್ಲಿ 67 ರನ್​ಗೆ 6 ವಿಕೆಟ್ ಕಳೆದುಕೊಂಡಿದ್ದ ಪಿಎನ್​ಜಿ ತಮಡಕ್ಕೆ ನಾರ್ಮನ್ ವನುವಾ, ಕಿಪ್ಲಿನ್ ಡೋರಿಗಾ ಮತ್ತು ಚಾದ್ ಸೋಪರ್ ಅವರು ಜೀವ ತುಂಬಲು ಯತ್ನಿಸಿದರು. 16ನೇ ಓವರ್​ವರೆಗೂ ಪಪುವಾ ತಂಡಕ್ಕೆ ಗೆಲುವು ಕೈಗೆಟಕುವಂತಿತ್ತು. ಆದರೆ, ಸ್ಕೋರು 120 ರನ್ ಆಗಿದ್ದಾಗ ನಾರ್ಮನ್ ಔಟಾದರು. ಅದಾದ ಬಳಿಕ ಪಿಎನ್​ಜಿಯ ಪ್ರತಿಹೋರಾಟ ಮುರುಟಿಬಿದ್ದಿತು. ಸ್ಕಾಟ್ಲೆಂಡ್ ವೇಗಿ ಜೋಷ್ ಡೇವಿ 18 ರನ್​ಗೆ 4 ವಿಕೆಟ್ ಪಡೆದು ಮಿಂಚಿದರು.

    ಅ. 21, ನಿರ್ಣಾಯಕ:

    ಅ. 21ರಂದು ಬಾಂಗ್ಲಾದೇಶ ಮತ್ತು ಪಪುವಾ ನ್ಯೂಗಿನಿಯಾ ಮಧ್ಯೆ ಪಂದ್ಯ ಇದೆ. ಅದೇ ದಿನ ಓಮನ್ ಮತ್ತು ಸ್ಕಾಟ್ಲೆಂಡ್ ಮುಖಾಮುಖಿಯಾಗಲಿವೆ. ಪಿಎನ್​ಜಿ ಎದುರು ಬಾಂಗ್ಲಾದೇಶ ಗೆಲ್ಲುವ ನಿರೀಕ್ಷೆ ಇದೆ. ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವಿನ ಫಲಿತಾಂಶ ಏನಾಗಬಹುದು ಕೂಡ ಕುತೂಹಲ ಮೂಡಿಸಿದೆ. 4 ಅಂಕ ಹೊಂದಿರುವ ಸ್ಕಾಟ್ಲೆಂಡ್ ಸದ್ಯಕ್ಕೆ ಸೂಪರ್-12 ಹಂತ ಪ್ರವೇಶಿಸಲು ಪ್ರಬಲ ಸ್ಥಿತಿಯಲ್ಲಿದೆ.
    Published by:Vijayasarthy SN
    First published: