Australia Champions- ಆಸ್ಟ್ರೇಲಿಯಾ ಹೊಸ ಟಿ20 ವಿಶ್ವ ಚಾಂಪಿಯನ್ಸ್; ಕಿವೀಸ್ ಪಡೆಗೆ ನಿರಾಸೆ

T20 World Cup: ನ್ಯೂಜಿಲೆಂಡ್ ತಂಡ ಗೆಲ್ಲಲು ನೀಡಿದ 173 ರನ್ ಸವಾಲನ್ನು ಆಸ್ಟ್ರೇಲಿಯಾ 8 ವಿಕೆಟ್​ಗಳಿಂದ ಹಿಮ್ಮೆಟ್ಟಿಸಿತು. ಇದರೊಂದಿಗೆ ಕಾಂಗರೂಗಳ ಪಡೆ ಮೊದಲ ಬಾರಿಗೆ ಟಿ20 ವಿಶ್ವಕಪ್ ಜಯಿಸಿ ಸಂಭ್ರಮಿಸಿತು.

ಆಸ್ಟ್ರೇಲಿಯಾ ಬ್ಯಾಟುಗಾರರು

ಆಸ್ಟ್ರೇಲಿಯಾ ಬ್ಯಾಟುಗಾರರು

  • Share this:
    ದುಬೈ, ನ. 14: ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ತಂಡವಲ್ಲ ಎಂದು ವಿಶ್ವಕಪ್​ಗೆ (T20 World Cup 2021) ಮುನ್ನ ಹಣೆಪಟ್ಟಿ ಕಟ್ಟಿಸಿಕೊಂಡಿದ್ದ ಆಸ್ಟ್ರೇಲಿಯಾ (Australia Cricket Team) ಎಲ್ಲ ನಿರೀಕ್ಷೆಗಳನ್ನ ಮೀರಿ ವಿಶ್ವ ಚಾಂಪಿಯನ್ ಎನಿಸಿದೆ. ಇಂದು ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ ನ್ಯೂಜಿಲೆಂಡ್ (New Zealand Cricket Team) ತಂಡದ ಪೈಪೋಟಿಯನ್ನ ಬದಿಗೊತ್ತಿ ಕಪ್ ಎತ್ತಿಹಿಡಿಯಿತು. ಕಿವೀಸ್ ಪಡೆಯನ್ನ 8 ವಿಕೆಟ್​ಗಳಿಂದ ಸೋಲಿಸಿ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಜಯಿಸಿತು. ನ್ಯೂಜಿಲೆಂಡ್ ತಂಡ ಗಳಿಸಿದ ಉತ್ತಮ ಎನಿಸುವ 172 ರನ್ ಮೊತ್ತವನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (David Warner), ಮಿಚೆಲ್ ಮಾರ್ಷ್ (Mitchell Marsh), ಗ್ಲೆನ್ ಮ್ಯಾಕ್ಸ್​​ವೆಲ್ (Glenn Maxwell) ಪರ್ಫೆಕ್ಟ್ ಆಗಿ ಚೇಸಿಂಗ್ ಮಾಡಿದರು. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಗಳಿಸಿದ ಅದ್ಭುತ ಇನ್ನಿಂಗ್ಸ್ ಅನ್ನು ಆಸ್ಟ್ರೇಲಿಯನ್ನರು ತಮ್ಮ ಚೇಸಿಂಗ್​ನಲ್ಲಿ ಮಂಕಾಗಿಸಿದರು.

    ಮೂರನೇ ಓವರ್​ನಲ್ಲಿ ನಾಯಕ ಆರೋನ್ ಫಿಂಚ್ ಔಟಾದರೂ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ 2ನೇ ವಿಕೆಟ್​ಗೆ 92 ರನ್ ಜೊತೆಯಾಟ ಆಡುವ ಮೂಲಕ ಆಸ್ಟ್ರೇಲಿಯಾದ ಚೇಸಿಂಗ್​ಗೆ ಒಳ್ಳೆಯ ಬುನಾದಿ ಹಾಕಿದರು. ನಂತರ ಮಿಚೆಲ್ ಮಾರ್ಷಲ್ ಮತ್ತು ಗ್ಲೆನ್ ಮಾರ್ಷಲ್ ಜೊತೆಗೂಡಿ ಆಸ್ಟ್ರೇಲಿಯಾಗೆ ಐತಿಹಾಸಿಕ ಗೆಲುವು ದಕ್ಕುವಂತೆ ಮಾಡಿದರು.

    ಇದಕ್ಕೆ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ನಾಯಕ ಕೇನ್ ವಿಲಿಯಮ್ಸನ್ 48 ಬಾಲ್​ನಲ್ಲಿ 85 ರನ್ ಗಳಿಸಿದ್ದು ನ್ಯೂಜಿಲೆಂಡ್ ಇನ್ನಿಂಗ್ಸ್​ನ ಹೈಲೈಟ್. ಆದರೆ, ನ್ಯೂಜಿಲೆಂಡ್ ಗಳಿಸಿದ ಈ ಸ್ಕೋರು ಆಸ್ಟ್ರೇಲಿಯಾಗೆ ಪ್ರಬಲ ಸವಾಲಾಗಲಿಲ್ಲ.

    ಅತಿ ವೇಗದ ಅರ್ಧಶತಕದ ದಾಖಲೆ ಮುರಿದ ಇಬ್ಬರು:

    ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 32 ಬಾಲ್​ನಲ್ಲಿ ಅರ್ಧಶತಕ ಗಳಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಕಂಡ ಅತಿ ವೇಗದ ಅರ್ಧಶತಕ ಎಂಬ ದಾಖಲೆ ಬರೆದರು. ನಂತರ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಆ ದಾಖಲೆ ಮುರಿದರು. ಅವರು 31 ಬಾಲ್​ನಲ್ಲಿ ಅರ್ಧಶತಕ ಭಾರಿಸಿದರು. 2009ರ ಫೈನಲ್​ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ 33 ಬಾಲ್​ನಲ್ಲಿ ಗಳಿಸಿದ್ದ ಅರ್ಧಶತಕದ ದಾಖಲೆಯನ್ನ ಇಬ್ಬರೂ ಮುರಿದರು.

    ಇದನ್ನೂ ಓದಿ: Earthquake- ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಪಂದ್ಯಕ್ಕೆ ಮುನ್ನ ಅರಬ್ ನಾಡಲ್ಲಿ ಪ್ರಬಲ ಭೂಕಂಪ

    ಇದೂವರೆಗೂ ಟಿ20 ವಿಶ್ವಕಪ್ ಗೆದ್ದಿರುವ ತಂಡಗಳು:
    1) 2007: ಭಾರತ
    2) 2009: ಪಾಕಿಸ್ತಾನ್
    3) 2010: ಇಂಗ್ಲೆಂಡ್
    4) 2012: ವೆಸ್ಟ್ ಇಂಡೀಸ್
    5) 2014: ಶ್ರೀಲಂಕಾ
    6) 2016: ವೆಸ್ಟ್ ಇಂಡೀಸ್
    7) 2021: ಆಸ್ಟ್ರೇಲಿಯಾ

    ಐಸಿಸಿ ವಿಶ್ವಕಪ್​ಗಳನ್ನ ಆಸ್ಟ್ರೇಲಿಯಾ ಗೆದ್ದಿರುವುದು: ಕಾಂಗರೂಗಳ ಪಡೆ 50 ಓವರ್ ಪಂದ್ಯಗಳ ವಿಶ್ವಕಪ್ ಅನ್ನು ಐದು ಬಾರಿ ಗೆದ್ದಿದೆ.1987, 1999, 2003, 2007, 2015ರ ವಿಶ್ವಕಪ್​ಗಳನ್ನ ಜಯಿಸಿದೆ. ಈಗ ಟಿ20 ವಿಶ್ವಕಪ್ ಅನ್ನು ಮೊದಲ ಬಾರಿಗೆ ಗೆದ್ದಿದೆ. ಇದೂ ಸೇರಿ ಒಟ್ಟು ಆರು ಐಸಿಸಿ ವಿಶ್ವಕಪ್​ಗಳನ್ನ ಗೆದ್ದಂತಾಗಿದೆ.

    ಇತ್ತ ನ್ಯೂಜಿಲೆಂಡ್ ತಂಡಕ್ಕೆ ಒಂದೂ ವಿಶ್ವಕಪ್ ದಕ್ಕಿಲ್ಲ ಎನ್ನುವ ನಿರಾಸೆ ಮುಂದುವರಿದಿದೆ.

    ಇದನ್ನೂ ಓದಿ: Maxwell-Vini Raman: ಗ್ಲೆನ್ ಮ್ಯಾಕ್ಸ್​ವೆಲ್ ಮದುವೆಯಾಗುತ್ತಿರುವ ವಿನಿ ರಾಮನ್ ಯಾರು? ಇಲ್ಲಿದೆ ಮಾಹಿತಿ

    ಸ್ಕೋರು ವಿವರ:

    ನ್ಯೂಜಿಲೆಂಡ್ 20 ಓವರ್ 172/4
    (ಕೇನ್ ವಿಲಿಯಮ್ಸನ್ 85, ಮಾರ್ಟಿನ್ ಗಪಟ್ಟಿಲ್ 28, ಗ್ಲೆನ್ ಫಿಲಿಪ್ಸ್ 18 ರನ್ – ಜೋಶ್ ಹೇಜಲ್​ವುಡ್ 16/3)

    ಆಸ್ಟ್ರೇಲಿಯಾ 18.5 ಓವರ್ 173/2
    (ಮಿಚೆಲ್ ಮಾರ್ಶ್ ಅಜೇಯ 77, ಡೇವಿಡ್ ವಾರ್ನರ್ 53, ಗ್ಲೆನ್ ಮ್ಯಾಕ್ಸ್​ವೆಲ್ ಅಜೇಯ 28 ರನ್ – ಟ್ರೆಂಟ್ ಬೌಲ್ಟ್ 18/2)
    Published by:Vijayasarthy SN
    First published: