PAK vs AUS- ದುಬೈನಲ್ಲಿ ವೇಡ್ ಅಲೆ; ಕೆಂಗೆಟ್ಟ ಪಾಕಿಸ್ತಾನ; ಫೈನಲ್​ಗೆ ಆಸ್ಟ್ರೇಲಿಯಾ

T20 World Cup- ಗೆಲ್ಲಲು ಪಾಕಿಸ್ತಾನ ಒಡ್ಡಿದ 177 ರನ್ ಗುರಿಯನ್ನ ಆಸ್ಟ್ರೇಲಿಯಾ ರೋಚಕ ರೀತಿಯಲ್ಲಿ ಚೇಸ್ ಮಾಡಿ ಗೆದ್ದು ಫೈನಲ್ ಪ್ರವೇಶಿಸಿದೆ. ನ. 14ರಂದು ಪ್ರಶಸ್ತಿಗಾಗಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕಾದಾಡಲಿವೆ.

ಆಸ್ಟ್ರೇಲಿಯಾ ಬ್ಯಾಟರ್ಸ್

ಆಸ್ಟ್ರೇಲಿಯಾ ಬ್ಯಾಟರ್ಸ್

 • Share this:
  ದುಬೈ, ನ. 11: ನಿನ್ನೆ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಸೆಮಿಫೈನಲ್ ರೋಚಕವಾಗಿದ್ದರೆ, ಇಂದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಎರಡನೇ ಸೆಮಿಫೈನಲ್ ಪಂದ್ಯ ರಣರೋಚಕವಾಗಿತ್ತು. ದುಬೈನಲ್ಲಿ ಹಸಿರು ಅಲೆಯ ನಡುವೆ ಕಾಂಗರೂಗಳ ತಂಡ ಅಮೋಘ ಪ್ರದರ್ಶನ ನೀಡಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಪಾಕಿಸ್ತಾನದ ಬೆಸ್ಟ್ ಬೌಲರ್ ಶಾಹೀನ್ ಅಫ್ರಿದಿ ಅವರ ಓವರ್​ನಲ್ಲಿ ಸತತ ಮೂರು ಸಿಕ್ಸರ್ ಸಿಡಿಸಿದ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾವನ್ನು ಗೆಲುವಿನ ದಡ ತಲುಪಿಸಿದರು. ಪಾಕಿಸ್ತಾನ ಭರ್ಜರಿಯಾಗಿ ಕೊಟ್ಟ 177 ರನ್ ಗುರಿಯನ್ನು ಆಸ್ಟ್ರೇಲಿಯಾ ಒಂದು ಓವರ್ ಇರುವಂತೆ ಚೇಸ್ ಮಾಡಿತು.

  ಡೇವಿಡ್ ವಾರ್ನರ್, ಮಾರ್ಕಸ್ ಸ್ಟಾಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ಗೆಲುವಿನ ರೂವಾರಿಗಳಾದರು. ಡೇವಿಡ್ ವಾರ್ನರ್ 30 ಬಾಲ್​ನಲ್ಲಿ 49 ರನ್ ಗಳಿಸಿದರೆ ಮಾರ್ಕಸ್ ಸ್ಟಾಯ್ನಿಸ್ 31 ಎಸೆತದಲ್ಲಿ ಅಜೇಯ 40 ರನ್ ಗಳಿಸಿದರು. ಆದರೆ, ಕೊನೆಯಲ್ಲಿ ಹೀರೋ ಎನಿಸಿದ್ದ ಮ್ಯಾಥ್ಯೂ ವೇಡ್. ಇವರು ಕೇವಲ 17 ಬಾಲ್​ನಲ್ಲಿ ಅಜೇಯ 41 ರನ್ ಗಳಿಸಿದರು.

  ಭಾರತ ವಿರುದ್ಧ ಇದೇ ದುಬೈನಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯವಾಡಿ ಗೆದ್ದಿತ್ತು. ಆ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ತಮ್ಮ ಮೊದಲ ಓವರ್​ನಲ್ಲೇ ವಿಕೆಟ್ ಕಿತ್ತು ಭಾರತದ ಜಂಘಾಬಲ ಉಡುಗಿಸಿದ್ದರು. ಆಸ್ಟ್ರೇಲಿಯಾ ವಿರುದ್ಧವೂ ಅವರು ಮೊದಲ ಓವರ್​ನಲ್ಲಿ ವಿಕೆಟ್ ಕಿತ್ತು ಪಾಕಿಸ್ತಾನಕ್ಕೆ ಆರಂಭದಿಂದಲೇ ಗೆಲುವಿನ ವಾಸನೆ ಸಿಗುವಂತೆ ಮಾಡಿದರು. 15 ಓವರ್​ವರೆಗೂ ಪಾಕಿಸ್ತಾನಕ್ಕೆ ಗೆಲುವಿನ ನಿರೀಕ್ಷೆ ದಟ್ಟವಾಗಿತ್ತು. ಆದರೆ, ಮಾರ್ಕಸ್ ಸ್ಟಾಯ್ನಿಸ್ ಮತ್ತು ಮ್ಯಾಥ್ಯೂ ವೇಡ್ ಅಪ್ರತಿಮವಾಗಿ ಚೇಸಿಂಗ್ ನಡೆಸಿದರು. ಬಹಳ ದಿನಗಳ ನಂತರ ತಂಡಕ್ಕೆ ಕಂಬ್ಯಾಕ್ ಮಾಡಿದ ವೇಡ್ ಕೊನೆಕೊನೆಯಲ್ಲಿ ಸಿಕ್ಸರ್ ಮಳೆ ಸುರಿಸಿ ಗೆಲುವಿಗೆ ಪ್ರಮುಖ ಕಾರಣರಾದರು.

  ಆಸ್ಟ್ರೇಲಿಯಾ ಟಾಸ್ ವಿನ್: 

  ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವೇ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಇಂಥದ್ದೊಂದು ಸಂದರ್ಭಕ್ಕೆ ಪಾಕಿಸ್ತಾನ ಈ ಮೊದಲೇ ಸಜ್ಜಾಗಿತ್ತು. ಸೂಪರ್-12 ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಮಾಡುವ ಪ್ರಯೋಗ ಮಾಡಿತು. ಅದರಲ್ಲಿ ಯಶಸ್ವಿಯೂ ಆಯಿತು. ಆಸ್ಟ್ರೇಲಿಯಾ ವಿರುದ್ಧ ಅದೇ ಆತ್ಮವಿಶ್ವಾಸದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ಮಾಡಿತು.

  ಇದನ್ನೂ ಓದಿ: Ajinkya Rahane- ಕಾನ್ಪುರ್ ಟೆಸ್ಟ್ ಪಂದ್ಯಕ್ಕೆ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಕ್ಯಾಪ್ಟನ್?

  ಆರಂಭಿಕ ಬ್ಯಾಟುಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ತಮ್ಮ ಅಮೋಘ ಓಟವನ್ನು ಸೆಮಿಫೈನಲ್​ನಲ್ಲೂ ಮುಂದುವರಿಸಿದರು. ಇಬ್ಬರೂ 10 ಓವರ್​ನಲ್ಲಿ 71 ರನ್ ಜೊತೆಯಾಟ ಆಡಿದರು. ಹಿಂದಿನ ಐದು ಪಂದ್ಯಗಳಲ್ಲೂ ಹೆಚ್ಚು ರನ್ ಗಳಿಸಲು ವಿಫಲರಾಗಿದ್ದ ಫಕರ್ ಜಮಾನ್ ಅವರು ಸೆಮಿಫೈನಲ್​ನಂಥ ದೊಡ್ಡ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದರು.

  ಮೊಹಮ್ಮದ್ ರಿಜ್ವಾನ್ 52 ಬಾಲ್​ನಲ್ಲಿ 67 ರನ್ ಗಳಿಸಿದರು. ಬಾಬರ್ ಅಜಂ 34 ಬಾಲ್​ನಲ್ಲಿ 39 ರನ್ ಪಡೆದರು. ಫಕರ್ ಜಮಾನ್ ಕೇವಲ 32 ಬಾಲ್​ನಲ್ಲಿ 55 ರನ್ ಚಚ್ಚಿದರು. ಕೊನೆಕೊನೆಯಲ್ಲಿ ಜಮಾನ್ ಅವರಿಂದ ಸಿಕ್ಸರ್​ಗಳ ಸುರಿಮಳೆ ಆಯಿತು. 160 ರನ್ ಆಸುಪಾಸಿನ ಸ್ಕೋರ್ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ 176 ರನ್​ಗಳ ಭರ್ಜರಿ ಮೊತ್ತ ಸಿಕ್ಕಿತು. ಆದರೆ, ಆಸ್ಟ್ರೇಲಿಯಾ ಅಂತಿಮವಾಗಿ ಗೆಲುವಿನ ನಗೆ ಬೀರಿತು.

  ಇದನ್ನೂ ಓದಿ: NZ vs ENG- ಮಿಚೆಲ್ ಭರ್ಜರಿ ಆಟ; ನ್ಯೂಜಿಲೆಂಡ್ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ಪ್ರವೇಶ

  ಫೇವರಿಟ್ ತಂಡಗಳು ಔಟ್: 

  ಈ ಟೂರ್ನಿ ಗೆಲ್ಲಲು ಫೇವರಿಟ್ ಎನಿಸಿದ್ದ ಎರಡೂ ತಂಡಗಳು ಸೆಮಿಫೈನಲ್​ನಲ್ಲಿ ಸೋಲನುಭವಿಸಿವೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಟಿ20 ಕ್ರಿಕೆಟ್​ನಲ್ಲಿ ಟಾಪ್-2 ತಂಡಗಳಷ್ಟೇ ಅಲ್ಲ, ಈ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಾಗಿದ್ದವು.

  ಇದೀಗ ಫೈನಲ್ ತಲುಪಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕೂಡ ಕಡುವೈರಿ ತಂಡಗಳಾಗಿದ್ದು, ನ. 14ರಂದು ನಡೆಯುವ ಫೈನಲ್ ಪಂದ್ಯ ಭಾರತ ಪಾಕಿಸ್ತಾನ ಪಂದ್ಯದಷ್ಟೇ ಜಿದ್ದಾಜಿದ್ದಿಯಿಂದ ಕೂಡಿರುತ್ತದೆ.

  ಸ್ಕೋರು ವಿವರ:

  ಪಾಕಿಸ್ತಾನ 20 ಓವರ್ 176/4
  (ಮೊಹಮ್ಮದ್ ರಿಜ್ವಾನ್ 67, ಫಕರ್ ಜಮಾನ್ ಅಜೇಯ 55, ಬಾಬರ್ ಅಜಂ 39 ರನ್- ಮಿಚೆಲ್ ಸ್ಟಾರ್ಕ್ 38/2)

  ಆಸ್ಟ್ರೇಲಿಯಾ 19 ಓವರ್ 177/5
  (ಡೇವಿಡ್ ವಾರ್ನರ್ 49, ಮಿಚೆಲ್ ಮಾರ್ಷ್ 28, ಮಾರ್ಕಸ್ ಸ್ಟಾಯ್ನಿಸ್ ಅಜೇಯ 40, ಮ್ಯಾಥ್ಯೂ ವೇಡ್ ಅಜೇಯ 41 ರನ್- ಶದಾಬ್ ಖಾನ್ 26/4)
  Published by:Vijayasarthy SN
  First published: