T20 World Cup- ಪಾಕ್​ಗೆ ಬೆವರಿಳಿಸಿದ ಅಫ್ಘಾನ್; ವೀರೋಚಿತ ಸೋಲುಂಡು ಹೊರಬಿದ್ದ ಬಾಂಗ್ಲಾ

BAN vs WI- ಶಾರ್ಜಾದಲ್ಲಿ ನಡೆದ ಮೊದಲ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ಗೆದ್ದು ಮಾನ ಉಳಿಸಿಕೊಂಡಿತು. ದುಬೈನಲ್ಲಿ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ್ 5 ವಿಕೆಟ್​ಗಳಿಂದ ಮಣಿಸಿತು.

ಪಾಕ್ ಮತ್ತು ಅಫ್ಘಾನ್

ಪಾಕ್ ಮತ್ತು ಅಫ್ಘಾನ್

  • Share this:
    ದುಬೈ/ಶಾರ್ಜಾ, ಅ. 29: ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳನ್ನ ಸೋಲಿಸಿ ಆತ್ಮವಿಶ್ವಾಸದಲ್ಲಿದ್ದ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನ್ ಪ್ರಬಲ ಸವಾಲೊಡ್ಡಿತು. ದುಬೈನಲ್ಲಿ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಾನು ಸೋಲುವ ಮುನ್ನ ಪಾಕಿಸ್ತಾನಕ್ಕೆ ಸಾಕಷ್ಟು ಬೆವರಿಳಿಸುವಲ್ಲಿ ಯಶಸ್ವಿಯಾಯಿತು. ಗೆಲ್ಲಲು 149 ರನ್ ಗುರಿ ಪಡೆದ ಪಾಕಿಸ್ತಾನ 6 ಬಾಲ್ ಬಾಕಿ ಇರುವಂತೆ 5 ವಿಕೆಟ್​​ಗಳಿಂದ ಸೋಲಿಸಿತು. ಸ್ಕೋರ್ ಬೋರ್ಡ್​ನಲ್ಲಿರುವ ಅಂಕಿ ಅಂಶ ಹೇಳುವುದಕ್ಕಿಂತಲೂ ಈ ಗೆಲುವು ಪಡೆಯಲು ಪಾಕಿಸ್ತಾನ ಬಹಳ ಕಷ್ಟಪಡಬೇಕಾಯಿತು. ನ್ಯೂಜಿಲೆಂಡ್ ತಂಡದ ವಿರುದ್ಧ ಸ್ವಲ್ಪದರಲ್ಲಿ ಬಚಾವಾಗಿದ್ದ ಪಾಕಿಸ್ತಾನ ಇದೀಗ ಅಫ್ಘಾನಿಸ್ತಾನ ವಿರುದ್ಧವೂ ಸ್ವಲ್ಪದರಲ್ಲಿ ಬಚಾವಾಯಿತು.

    18 ಓವರ್​ವರೆಗೂ ಅಫ್ಘಾನಿಸ್ತಾನ ಗೆಲುವಿನ ಆಸೆಯಲ್ಲೇ ಇತ್ತು. ಆದರೆ, ಕರೀಮ್ ಜನತ್ ಮಾಡಿದ 19ನೇ ಓವರ್ ಪಾಕಿಸ್ತಾನಕ್ಕೆ ಟ್ವಿಸ್ಟ್ ಕೊಟ್ಟಿತು. ಅಸಿಫ್ ಅಲಿ ಒಂದೇ ಓವರ್​ನಲ್ಲಿ 4 ಸಿಕ್ಸರ್ ಎತ್ತಿ 24 ರನ್ ಗಳಿಸಿ ಅಫ್ಘಾನಿಸ್ತಾದ ಸೋಲಿಗೆ ಕಾರಣರಾದರು. 2 ಓವರ್​ನಲ್ಲಿ 24 ರನ್ ಗಳಿಸಬೇಕಿದ್ದ ಪಾಕಿಸ್ತಾನ ಆ ಒಂದೇ ಓವರಲ್ಲಿ ಗುರಿ ಮುಟ್ಟಿ ಸತತ 3ನೇ ಗೆಲುವು ಪಡೆಯಿತು.

    ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ಆರಂಭದಿಂದಲೇ ನಿರಂತರ ಆಘಾತ ಅನುಭವಿಸುತ್ತಾ ಹೋಯಿತು. ಒಂದು ಹಂತದಲ್ಲಿ 76 ರನ್​ಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಅಫ್ಘಾನ್ ತಂಡಕ್ಕೆ ನಾಯಕ ಮೊಹಮ್ಮದ್ ನಬಿ ಮತ್ತು ಗುಲ್ಬದಿನ್ ನಯೀಬ್ ಇಬ್ಬರೂ 7ನೇ ವಿಕೆಟ್​ಗೆ 7 ಓವರ್​ನಲ್ಲಿ 71 ರನ್​ಗಳ ಮುರಿಯದ ಜೊತೆಯಾಟ ಕೊಟ್ಟರು. ಪರಿಣಾಮವಾಗಿ, ನೂರರೊಳಗೆ ಆಲೌಟ್ ಆಗುವ ಭೀತಿಯಲ್ಲಿದ್ದ ಅಫ್ಘಾನಿಸ್ತಾನ 147 ರನ್ ಪೇರಿಸಲು ಸಾಧ್ಯವಾಯಿತು.

    ಪಾಕಿಸ್ತಾನ ಈ ಗೆಲುವಿನೊಂದಿಗೆ ಸೆಮಿಫೈನಲ್ ಆಸೆ ಪಕ್ಕಾ ಮಾಡಿಕೊಂಡಿದೆ. ಎರಡನೇ ಗುಂಪಿನ ಮೂರು ಅತಿ ಪ್ರಬಲ ತಂಡಗಳನ್ನ ಸೋಲಿಸಿರುವ ಪಾಕಿಸ್ತಾನಕ್ಕೆ ಈಗ ಉಳಿದಿರುವುದು ಸ್ಕಾಟ್ಲೆಂಡ್ ಮತ್ತು ನಮೀಬಿಯಾ ಸವಾಲು ಮಾತ್ರ.

    ವಿಂಡೀಸ್ ಸೆಮಿಫೈನಲ್ ಆಸೆ ಜೀವಂತ; ಬಾಂಗ್ಲಾ ಬಹುತೇಕ ಔಟ್:

    ಇವತ್ತು ಮಧ್ಯಾಹ್ನ ಮೊದಲ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶ ವೀರೋಚಿತ ಸೋಲುಂಡಿತು. ಇದು ಬಾಂಗ್ಲಾದೇಶಕ್ಕೆ ಹ್ಯಾಟ್ರಿಕ್ ಸೋಲು. ವೆಸ್ಟ್ ಇಂಡೀಸ್ ತಂಡಕ್ಕೆ 3ನೇ ಪ್ರಯತ್ನದಲ್ಲಿ ಸಿಕ್ಕ ಮೊದಲ ಗೆಲುವಾಯಿತು. ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ನಿಕೋಲಸ್ ಪೂರನ್ ಮತ್ತು ರೋಸ್ಟನ್ ಚೇಸ್ ಬಿಟ್ಟರೆ ಉಳಿದವರು ವಿಫಲರಾದರು. ಬಾಂಗ್ಲಾ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದರು. ಮುಸ್ತಾಫಿಜುರ್ ದುಬಾರಿ ಎನಿಸಿದ್ದು ಬಿಟ್ಟರೆ ಉಳಿದ ಬಾಂಗ್ಲಾ ಬೌಲರ್​ಗಳು ವಿಂಡೀಸ್ ದಾಂಡಿಗರಿಗೆ ಕಡಿವಾಣ ಹಾಕಿದರು.

    ಆದರೆ, ಗೆಲ್ಲಲು 143 ರನ್​ಗಳ ಸಾಧಾರಣ ಗುರಿ ಬೆನ್ನತ್ತುವ ಹಾದಿಯಲ್ಲಿ ಬಾಂಗ್ಲಾ ಕೊನೆ ಗಳಿಗೆಯಲ್ಲಿ ಯಡವಿತು. 19ನೇ ಓವರ್​ವರೆಗೂ ಬಾಂಗ್ಲಾ ಗೆಲುವಿನ ಆಸೆ ಜೀವಂತವಾಗಿತ್ತು. ಆದರೆ, ಲಿಟಾನ್ ದಾಸ್ 19ನೇ ಓವರ್​ನ ಕೊನೆಯ ಬಾಲ್​ನಲ್ಲಿ ಔಟ್ ಆಗಿದ್ದು ಟ್ವಿಸ್ಟ್ ಕೊಟ್ಟಿತು. ಕೊನೆಯ ಓವರ್​ನಲ್ಲಿ ಬಾಂಗ್ಲಾ ಗೆಲ್ಲಲು 13 ರನ್ ಬೇಕಿತ್ತು. ಆದರೆ, ಸಾಧ್ಯವಾಗಿದ್ದು 9 ರನ್ ಮಾತ್ರ. 3 ರನ್​ನಿಂದ ಬಾಂಗ್ಲಾ ಸೋಲುಂಡಿತು.

    ಬಾಂಗ್ಲಾದೇಶದ ಸೆಮಿಫೈನಲ್ ಆಸೆ ಬಹುತೇಕ ಕಮರಿ ಹೋದಂತೆಯೇ. ಇನ್ನೆರಡು ಪಂದ್ಯ ಗೆದ್ದರೂ ಅದು ಬೇರೆ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇನ್ನು, ವೆಸ್ಟ್ ಇಂಡೀಸ್ ಸೆಮಿಫೈನಲ್ ಆಸೆ ಜೀವಂತವಾಗಿದೆಯಾದರೂ ಆ ಹಾದಿ ಬಹಳ ಕಠಿಣ ಇದೆ.

    ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

    ಸ್ಕೋರು ವಿವರ:

    ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಪಂದ್ಯ:

    ಅಫ್ಘಾನಿಸ್ತಾನ 20 ಓವರ್ 147/6
    (ಮೊಹಮ್ಮದ್ ನಬಿ ಅಜೇಯ 35, ಗುಲ್ಬದಿನ್ ನಯೀಬ್ ಅಜೇಯ 35, ನಜೀಬುಲ್ಲಾ ಜಡ್ರನ್ 22, ಕರೀಮ್ ಜನತ್ 15 ರನ್- ಇಮದ್ ವಾಸಿಂ 25/2)

    ಪಾಕಿಸ್ತಾನ 19 ಓವರ್ 148/5
    (ಬಾಬರ್ ಅಜಂ 51, ಫಕರ್ ಜಮನ್ 30, ಶೋಯಬ್ ಮಲಿಕ್ 19, ಅಸಿಫ್ ಅಲಿ 25 ರನ್- ರಷೀದ್ ಖಾನ್ 26/2)

    -----

    ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪಂದ್ಯ:

    ವೆಸ್ಟ್ ಇಂಡೀಸ್ 20 ಓವರ್ 142/7
    (ನಿಕೋಲಾಸ್ ಪೂರನ್ 40, ರೋಸ್ಟನ್ ಚೇಸ್ 39, ಜೇಸನ್ ಹೋಲ್ಡರ್ ಅಜೇಯ 15 ರನ್- ಶೋರಿಫುಲ್ ಇಸ್ಲಾಮ್ 20/2, ಮಹೆದಿ ಹಸನ್ 27/2, ಮುಸ್ತಾಫಿಜುರ್ ರಹಮಾನ್ 43/2)

    ಬಾಂಗ್ಲಾದೇಶ 20 ಓವರ್ 139/5
    (ಲಿಟಾನ್ ದಾಸ್ 44, ಮಹಮದುಲ್ಲಾ ಅಜೇಯ 31, ಮೊಹಮ್ಮದ್ ನಯೀಮ್ 17 ರನ್)
    Published by:Vijayasarthy SN
    First published: