IND vs AFG- ಮೊದಲು ಬ್ಯಾಟಿಂಗ್ ಮಾಡಿಯೇ ಭಾರತವನ್ನು ಸೋಲಿಸಲು ಸಾಧ್ಯ: ಅಫ್ಘಾನಿಸ್ತಾನ್ ವಿಶ್ವಾಸ

T20 World Cup: ಭಾರತದ ವಿರುದ್ಧ ಅಫ್ಘಾನಿಸ್ತಾನಕ್ಕೆ ಗೆಲ್ಲಲು ಸಾಧ್ಯವಿದೆ. ಒಳ್ಳೆಯ ಮೊತ್ತ ಕಲೆಹಾಕಿದರೆ ಅಫ್ಘಾನಿಸ್ತಾನದ ಬೌಲರ್ಸ್ ಮತ್ತು ಫೀಲ್ಡರ್ಸ್ ಗೆಲುವು ತಂದುಕೊಡಬಲ್ಲರು ಎಂದು ಅಫ್ಘಾನ್ ವೇಗಿ ಹಮೀದ್ ಹಸನ್ ಹೇಳಿದ್ದಾರೆ.

ಹಮೀದ್ ಹಸನ್

ಹಮೀದ್ ಹಸನ್

 • Share this:
  ಅಬುಧಾಬಿ, ನ. 02: ಟಿ20 ವಿಶ್ವಕಪ್​ನ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಅಫ್ಘಾನಿಸ್ತಾನ್ ತಂಡಕ್ಕೆ ನಾಳೆ ಬುಧವಾರ ಭಾರತದ ವಿರುದ್ಧ ಮಹತ್ವದ ಪಂದ್ಯ ಇದೆ. ಭಾರತಕ್ಕಿಂತ ಅಫ್ಘಾನಿಸ್ತಾನಕ್ಕೆ ಸೆಮಿಫೈನಲ್ ಸಾಧ್ಯತೆ ದಟ್ಟವಾಗಿದೆ. ಸತತ ಎರಡು ಸೋಲುಗಳಿಂದ ಮಾನಸಿಕವಾಗಿ ಜರ್ಝರಿತಗೊಂಡಿರುವ ಭಾರತದ ಮೇಲೆ ಏರಿ ಹೋಗಲು ಅಫ್ಘಾನಿಸ್ತಾನ ತವಕದಿಂದಿದೆ. ಮೂರು ಪಂದ್ಯಗಳಿಂದ ನಾಲ್ಕು ಅಂಕ ಹೊಂದಿರುವ ಅಫ್ಘಾನಿಸ್ತಾನ್ ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನಕ್ಕಿಂತ ಕೆಳಗೆ ಎರಡನೇ ಸ್ಥಾನದಲ್ಲಿದೆ. ಎರಡು ಪಂದ್ಯ ಗೆದ್ದ ಆತ್ಮವಿಶ್ವಾಸದಲ್ಲಿರುವ ಅಫ್ಘಾನಿಸ್ತಾನ್ ತಂಡಕ್ಕೆ ಭಾರತವನ್ನ ಸೋಲಿಸಲು ಇದು ಸಕಾಲವಾಗಿದೆ.

  ಆದರೆ, ಯುಎಇಯ ಪಿಚ್​ಗಳಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸುತ್ತದೆ. ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ಗೆದ್ದಿರುವುದು. ಆದರೆ, ಮೊದಲು ಬ್ಯಾಟ್ ಮಾಡಿಯೂ ಗೆದ್ದಿರುವ 3 ತಂಡಗಳಲ್ಲಿ ಅಫ್ಘಾನಿಸ್ತಾನವೂ ಒಂದು. ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಮೊದಲು ಬ್ಯಾಟ್ ಮಾಡಿಯೇ ಗೆದ್ದಿದೆ. ಈಗ ಭಾರತ ವಿರುದ್ಧವೂ ಅದು ಮೊದಲು ಬ್ಯಾಟಿಂಗ್ ಮಾಡಿ ಗೆಲ್ಲುವ ಉತ್ಸಾಹದಲ್ಲಿದೆ.

  “ಭಾರತ ವಿರುದ್ಧ ನಮಗೆ ಒಳ್ಳೆಯ ಅವಕಾಶ ಇದೆ. ಉತ್ತಮ ಮೊತ್ತ ಕಲೆಹಾಕಿದರೆ ನಮ್ಮ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಭಾರತವನ್ನು ಸೋಲಿಸಬಲ್ಲೆವು” ಎಂದು ಅಫ್ಘಾನಿಸ್ತಾನದ ಬೌಲರ್ ಹಮೀದ್ ಹಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಪೂರ್ಣ ಪ್ರಯತ್ನ ಹಾಕುತ್ತೇವೆ:

  “ಭಾರತ ವಿರುದ್ಧ ನಾವು ಹೇಗೆ ಆಡುತ್ತೇವೆ ಎಂಬುದು ವಿಕೆಟ್ ಮೇಲೆ ಅವಲಂಬಿತವಾಗಿದೆ. ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ ನಾವು ಯೋಜನೆ ಹಾಕುತ್ತೇವೆ. ಆಟಕ್ಕಿಂತ ಮುಂಚೆ ಏನನ್ನೂ ಹೇಳಲು ಆಗುವುದಿಲ್ಲ. ಆದರೆ, ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಂತೂ ಆಡುತ್ತೇವೆ. ಸ್ಪಿನ್ನರ್​ಗಳಾಗಲೀ ವೇಗದ ಬೌಲರ್​ಗಳಾಗಲೀ ಪೂರ್ಣ ಪ್ರಯತ್ನವಂತೂ ಹಾಕುತ್ತೇವೆ” ಎಂದು ಹಮೀದ್ ಹಸನ್ ಹೇಳಿದ್ಧಾರೆ.

  ಇದನ್ನೂ ಓದಿ: T20 World Cup- ಭಾರತದ ಆಟಗಾರರಲ್ಲಿ ಮೊದಲ ಬಾರಿಗೆ ಭಯ ಕಂಡೆ: ವಿವಿಎಸ್ ಲಕ್ಷ್ಮಣ್

  ಸೆಮಿಸ್ ಗುರಿ:

  “ಪ್ರತೀ ಪಂದ್ಯದತ್ತ ನಮ್ಮ ಗಮನ ಇದೆ. ಸೆಮಿಫೈನಲ್ ಪ್ರವೇಶಿಸುವುದು ನಮ್ಮ ಉದ್ದೇಶ… ಅಫ್ಘಾನಿಸ್ತಾನದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಈ ಮೂರೂ ವಿಭಾಗಗಳಲ್ಲೂ ನಾವು ಬೆಳವಣಿಗೆ ಕಂಡಿದ್ದೇವೆ. ಅತ್ಯುತ್ತಮ ಸ್ಪಿನ್ನರ್​​ಗಳು ತಂಡದಲ್ಲಿದ್ದಾರೆ. ಈಗ ಪರಿಪೂರ್ಣ ತಂಡ ಎನಿಸಿದ್ದೇವೆ” ಎಂದು 34 ವರ್ಷದ ಹಮೀದ್ ಹೇಳಿಕೊಂಡಿದ್ದಾರೆ.

  ಮಿಡಲ್ ಆರ್ಡರ್ ಉತ್ತಮವಾಗಿದೆ:

  “ನಮ್ಮ ಟಾಪ್ ಆರ್ಡರ್ ನೋಡಿದರೆ ಕೆಲವೊಮ್ಮೆ ಚೆನ್ನಾಗಿ ಆಡಿದ್ದಾರೆ, ಕೆಲವೊಮ್ಮೆ ಆಡಿಲ್ಲ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟುಗಾರರು ರನ್ ಗಳಿಸುತ್ತಿದ್ದಾರೆ. ಈ ವಿಶ್ವಕಪ್​ನಲ್ಲಿ ನಾವು ಯಾವ ಪಂದ್ಯದಲ್ಲೂ ಆಲೌಟ್ ಆಗಿಲ್ಲ. ಐದು ಅಥವಾ ಆರು ಬ್ಯಾಟರ್ಸ್ ಮಾತ್ರ ಔಟ್ ಆಗಿದ್ದಾರೆ. ನಮ್ಮ ತಂಡದಲ್ಲಿ ಒಂಬತ್ತನೇ ಆಟಗಾರನವರೆಗೂ ಬ್ಯಾಟ್ ಮಾಡುತ್ತೇವೆ. ಇವರೆಲ್ಲರೂ ಶಾಟ್ ಹೊಡೆಯಬಲ್ಲರು. ರಷೀದ್ ಖಾನ್ ಕೂಡ ಇನ್ನೂ ಬ್ಯಾಟಿಂಗ್ ಮಾಡಿಲ್ಲ” ಎಂದು ವೇಗದ ಬೌಲರ್ ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: Yuvraj Shock- ದೈವ ನಿರ್ಣಯ; ಯುವರಾಜ್ ಸಿಂಗ್ ಕ್ರಿಕೆಟ್ ಅಖಾಡಕ್ಕೆ ಮರಳಲು ನಿರ್ಧಾರ

  ಭಾರತ-ಅಫ್ಘಾನ್ ಪಂದ್ಯ ನಾಳೆ:

  ನಾಳೆ ಬುಧವಾರ ಅಬುಧಾಬಿಯಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ ಸವಾಲು ಹಾಕಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗುತ್ತದೆ. ಟೂರ್ನಿಗೆ ಮುನ್ನ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿದ್ದ ಭಾರತ ಈಗ ಮಾನಸಿಕವಾಗಿ ದುರ್ಬಲಗೊಂಡಂತಂತಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಟಗಾರರಲ್ಲಿ ಆತ್ಮವಿಶ್ವಾಸದ ಕೊರತೆ ಕಾಣುತ್ತಿತ್ತು. ನಿರೀಕ್ಷಿಸಿದ ರೀತಿಯಲ್ಲಿ ಪ್ರತಿರೋಧ ತೋರದೇ ಸೋಲಪ್ಪಿತು.

  ಈಗ ಅಫ್ಘಾನಿಸ್ತಾನ ವಿರುದ್ದವೂ ಭಾರತ ಗೆಲ್ಲುವ ಫೇವರಿಟ್ ಆಗಿಲ್ಲ ಎಂಬುದು ಗಮನಾರ್ಹ ವಿಷಯ. ಈ ವಿಶ್ವಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ್ ಪಾಕಿಸ್ತಾನ ವಿರುದ್ಧ ಸೋಲುವ ಮುನ್ನ ವೀರೋಚಿತ ಹೋರಾಟವನ್ನಂತೂ ತೋರಿತು.
  Published by:Vijayasarthy SN
  First published: