AFG vs SCO- ಸ್ಕಾಟ್ಲೆಂಡ್​ಗೆ ಸೂಪರ್ ಥಂಡಾ ಕೊಟ್ಟ ಅಫ್ಘನ್ನರು; 130 ರನ್​ಗಳ ದೊಡ್ಡ ಗೆಲುವು

T20 World Cup, Afghanistan beat Scotland- ಅಫ್ಘಾನಿಸ್ತಾನದ 190 ರನ್​ಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಸ್ಕಾಟ್ಲೆಂಡ್ ಇನ್ನಿಂಗ್ಸ್ 60 ರನ್​ಗೆ ಮುಗಿಯಿತು. ಮುಜೀಬುರ್ ರಹಮಾನ್ 5 ಮತ್ತು ರಷೀದ್ ಖಾನ್ 4 ವಿಕೆಟ್ ಕಬಳಿಸಿದರು.

ಅಫ್ಘಾನಿಸ್ತಾನ್ ಆಟಗಾರರು

ಅಫ್ಘಾನಿಸ್ತಾನ್ ಆಟಗಾರರು

  • Share this:
    ಶಾರ್ಜಾ, ಅ. 25: ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಪ್ರಧಾನ ಹಂತಕ್ಕೆ ಬಂದಿರುವ ಸ್ಕಾಟ್ಲೆಂಡ್ ತಂಡಕ್ಕೆ ಅಫ್ಘಾನಿಸ್ತಾನ ಮೊದಲ ಪಂದ್ಯದಲ್ಲೇ ಸೋಲಿನ ಕಹಿ ಉಣಿಸಿದೆ. ಸತತ ಮೂರು ಪಂದ್ಯಗಳನ್ನ ಗೆದ್ದು ಸೂಪರ್-12 ಹಂತಕ್ಕೆ ಬಂದ ಸ್ಕಾಟ್ಲೆಂಡ್ ತಂಡವನ್ನು ಅಫ್ಘನ್ನರು ಚಿಂದಿ ಉಡಾಯಿಸಿದ್ದಾರೆ. ಅಫ್ಘಾನಿಸ್ತಾನದ ಬ್ಯಾಟಿಂಗ್ ಮತ್ತು ಬೌಲಿಂಗ್​ನ ಶಕ್ತಿ ಪ್ರದರ್ಶನದ ಎದುರು ಸ್ಕಾಟ್​ಲೆಂಡ್ ಧೂಳೀಪಟವಾಯಿತು. ಇಂದು ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ 130 ರನ್​ಗಳಿಂದ ಅಮೋಘ ಗೆಲುವು ಸಾಧಿಸಿತು.

    ಗೆಲ್ಲಲು 191 ರನ್​ಗಳ ಬೃಹತ್ ಮೊತ್ತದ ಸವಾಲು ಪಡೆದ ಸ್ಕಾಟ್​ಲೆಂಡ್ ಒಂದಿಷ್ಟೂ ಪ್ರತಿರೋಧ ತೋರದೆ 60 ರನ್​ಗೆ ಆಲೌಟ್ ಆಗಿ ಸೋಲಪ್ಪಿತು. ಅಫ್ಘನ್ನರ ಸ್ಪಿನ್ ಕರಾಮತ್ತಿಗೆ ಸ್ಕಾಟ್ಲೆಂಡ್ ಬ್ಯಾಟರ್ಸ್ ಬಳಿ ಉತ್ತರವೇ ಇರಲಿಲ್ಲ. ಮುಜೀಬ್ ಉರ್ ರಹಮಾನ್ ಮತ್ತು ರಷೀದ್ ಖಾನ್ ದಾಳಿಗೆ ಸ್ಕಾಟ್ಲೆಂಡಿಗರು ತರಗೆಲೆಗಳಂತೆ ಉದುriಹೋದರು. ಮುಜೀಬ್ ಉರ್ ರಹಮಾನ್ 20 ರನ್​ಗೆ 5 ವಿಕೆಟ್ ಕಬಳಿಸಿದರು. ರಷೀದ್ ಖಾನ್ ಕೇವಲ 9 ರನ್​ಗೆ 4 ವಿಕೆಟ್ ಪಡೆದರು.

    ಸ್ಕಾಟ್ಲೆಂಡ್ ತಂಡದ ಇನ್ನಿಂಗ್ಸಲ್ಲಿ ಆರಂಭಿಕ ಆಟಗಾರ ಜಾರ್ಜ್ ಮುನ್ಸೇ 25 ರನ್ ಗಳಿಸಿದ್ದು ಬಿಟ್ಟರೆ ಉಳಿದವರೆಲ್ಲರೂ ವಿಫಲರಾದರು. ನಾಲ್ವರು ಪ್ರಮುಖ ಬ್ಯಾಟರ್ಸ್ ಶೂನ್ಯ ಸಂಪಾದನೆ ಮಾಡಿದರು. ಮೊದಲ ವಿಕೆಟ್​ಗೆ 28 ರನ್ ಜೊತೆಯಾಟ ಬಂದದ್ದೇ ಸ್ಕಾಟ್ಲೆಂಡ್ ಭಾಗ್ಯ.

    ಇದಕ್ಕೆ ಮುನ್ನ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡದ ಬ್ಯಾಟರ್ಸ್ ಅಮೋಘ ಪ್ರದರ್ಶನ ನೀಡಿದರು. ಹಜ್ರತುಲ್ಲಾ ಜಝೈಯ್, ರಹಮನುಲ್ಲಾ ಗುರ್ಬಜ್ ಮತ್ತು ನಜಿಬುಲ್ಲಾ ಝದ್ರನ್ ಉತ್ತಮ ಬ್ಯಾಟಿಂಗ್ ನಡೆಸಿದರು. ಇವರ ಪೈಕಿ ಝಡ್ರಾನ್ 34 ಎಸೆತದಲ್ಲಿ 59 ರನ್ ಗಳಿಸಿದ ಪರಿಣಾಮ ಅಫ್ಘಾನಿಸ್ತಾನ 190 ರನ್​ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಈ ದೊಡ್ಡ ಗುರಿಯನ್ನ ಸ್ಕಾಟ್ಲೆಂಡ್ ಚೇಸ್ ಮಾಡುವ ಯಾವ ನಿರೀಕ್ಷೆಯೂ ಇರಲಿಲ್ಲ.

    ಇದನ್ನೂ ಓದಿ: T20 Wold Cup- ಕೊಹ್ಲಿಗೂ ಹೆದರಲ್ಲ, ಬಾಬರ್​ಗೂ ಹೆದರಲ್ಲ: ತೊಡೆತಟ್ಟಿದ ಸ್ಕಾಟ್ಲೆಂಡ್ ಆಟಗಾರ

    ದೊಡ್ಡ ತಂಡಗಳನ್ನ ಹಣಿಯುತ್ತೇವೆ ಎಂದಿದ್ದ ಸ್ಕಾಟ್ಲೆಂಡ್:

    ಮೊದಲ ಸುತ್ತಿನ ಗ್ರೂಪ್ ಪಂದ್ಯದಲ್ಲಿ ಸತತ ಮೂರು ಪಂದ್ಯಗಳನ್ನ ಸ್ಕಾಟ್ಲೆಂಡ್ ಗೆದ್ದು ನಂಬರ್ ಒನ್ ತಂಡವಾಗಿ ಸೂಪರ್-12 ಹಂತಕ್ಕೆ ಬಂದಿತ್ತು. ತನ್ನ ಗುಂಪಿನಲ್ಲಿ ಬಾಂಗ್ಲಾದೇಶ ತಂಡವನ್ನ ಸೋಲಿಸಿ ಮೀಸೆ ತಿರುವಿತ್ತು. ಸೂಪರ್-12 ಹಂತದಲ್ಲಿ ಭಾರತಕ್ಕೂ ಹೆದರಲ್ಲ, ಪಾಕಿಸ್ತಾನಕ್ಕೂ ಹೆದರಲ್ಲ. ಯಾವುದಾದರೂ ತಂಡವನ್ನ ಸೋಲಿಸಿಯೇ ತೀರುತ್ತೇವೆ ಎಂದು ಆ ತಂಡದ ಆಟಗಾರರು ಹೇಳಿದ್ದರು. ಈಗ ಸೂಪರ್-12 ಹಂತದಲ್ಲಿ ಅಫ್ಘಾನಿಸ್ತಾನದ ಕೈಲಿ ಹೀನಾಯ ಸೋಲುಂಡಿದೆ.

    ಅಫ್ಘಾನ್, ಸ್ಕಾಟ್ಲೆಂಡ್ ಮುಂದಿನ ಪಂದ್ಯ:

    ಮೊದಲ ಪಂದ್ಯದಲ್ಲೇ ಸೋತು ಸುಣ್ಣವಾದ ಸ್ಕಾಟ್​ಲೆಂಡ್ ತಂಡ ಅ. 27ರಂದು ನಮೀಬಿಯಾ ತಂಡವನ್ನ ಎದಿರುಗೊಳ್ಳಲಿದೆ. ಅಫ್ಘಾನಿಸ್ತಾನ ತನ್ನ ಮುಂದಿನ ಪಂದ್ಯವನ್ನು ಅ. 29ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.

    ತಂಡಗಳು:

    ಅಫ್ಘಾನಿಸ್ತಾನ್ ತಂಡ: ಹಜ್ರತುಲ್ಲಾ ಜಝೈ, ಮೊಹಮ್ಮದ್ ಶಹಜಾದ್, ರಹಮನುಲ್ಲಾ ಗುರ್ಬಜ್, ನಜೀಬುಲ್ಲಾ ಜದ್ರನ್, ಮೊಹಮ್ಮದ್ ನಬಿ, ಅಸ್ಗರ್ ಅಫ್ಘನ್, ಗುಲ್ಬದಿನ್ ನಯೀಬ್, ಕರೀಮ್ ಜನತ್, ರಷೀದ್ ಖಾನ್, ನವೀನ್-ಉಲ್-ಹಖ್, ಮುಜೀಬ್ ಉರ್ ರಹಮಾನ್.

    ಸ್ಕಾಟ್ಲೆಂಡ್ ತಂಡ: ಜಾರ್ಜ್ ಮುನ್ಸೀ, ಕೈಲ್ ಕೋಚರ್, ಕಲುಮ್ ಮಕ್​ಲಿಯೋಡ್, ರಿಚೀ ಬೆರಿಂಗ್ಟನ್, ಮ್ಯಾಥ್ಯೂ ಕ್ರಾಸ್, ಮೈಕೇಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಶರಿಫ್, ಬ್ರಾಡ್ ವೀಲ್.

    ಇದನ್ನೂ ಓದಿ: MS Dhoni Prediction- ಎಂಎಸ್ ಧೋನಿ ನುಡಿದ ಭವಿಷ್ಯ ಐದು ವರ್ಷ ಬಳಿಕ ನಿಜ ಆಯ್ತು

    ಸ್ಕೋರು ವಿವರ:

    ಅಫ್ಘಾನಿಸ್ತಾನ್ 20 ಓವರ್ 190/4
    (ನಜೀಬುಲ್ಲಾ ಜಡ್ರನ್ 59, ರಹಮನುಲ್ಲಾ ಗುರ್ಬಜ್ 46, ಹಜ್ರತುಲ್ಲಾ ಜಝೈ 44, ಮೊಹಮ್ಮದ್ ಶಹಜಾದ್ 22 ರನ್ – ಸಫ್ಯಾನ್ ಶರೀಫ್ 33/2)

    ಸ್ಕಾಟ್​ಲೆಂಡ್ 10.1 ಓವರ್ 60/10
    (ಜಾರ್ಜ್ ಮುನ್ಸೇ 25, ಕ್ರಿಸ್ ಗ್ರೀವ್ಸ್ 12, ಕೈಲ್ ಕೋಚರ್ 10 ರನ್ – ಮುಜೀಬ್ ಉರ್ ರಹಮಾನ್ 20/5, ರಷೀದ್ ಖಾನ್ 9/4)
    Published by:Vijayasarthy SN
    First published: