India-Pak: ಭಾರತ-ಪಾಕಿಸ್ತಾನ ವಿಶ್ವಕಪ್ ಮ್ಯಾಚ್​ಗೆ ಕೆಲವೇ ಗಂಟೆಯಲ್ಲಿ ಟಿಕೆಟ್ ಸೋಲ್ಡ್ ಔಟ್

ICC T20 World Cup: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ಆನ್ಲೈನ್ನಲ್ಲಿ ಕೆಲವೇ ಗಂಟೆಯಲ್ಲಿ ಎಲ್ಲಾ ಟಿಕೆಟ್ಸ್ ಮಾರಾಟ ಕಂಡಿವೆ. ಅ. 24ರಂದು ದುಬೈನಲ್ಲಿ ಈ ಪಂದ್ಯ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
    ದುಬೈ: ಕ್ರಿಕೆಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಹಿಂದೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪೈಪೋಟಿಯನ್ನೂ ಮೀರಿಸುವಂಥದ್ದು. ಎರಡೂ ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಇದು ಒಂದು ರೀತಿ ಮಾಡು ಇಲ್ಲ ಮಡಿ ಹೋರಾಟದಂತೆ. ಭಯೋತ್ಪಾದನೆಯ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಮಧ್ಯೆ ಇತ್ತೀಚೆಗೆ ಹೆಚ್ಚು ಪಂದ್ಯಗಳು ನಡೆಯುತ್ತಿಲ್ಲ. ಆದರೆ, ವಿಶ್ವಕಪ್​ನಂಥ ಕೆಲ ಜಾಗತಿಕ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಸಂಧಿಸುತ್ತವೆ. ಕ್ರಿಕೆಟ್ ರಸಿಕರಿಗೆ ರಸದೌತಣ ನೀಡುತ್ತವೆ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್-12 ಸುತ್ತಿನಲ್ಲಿ ಒಂದೇ ಗುಂಪಿನಲ್ಲಿವೆ. ಅಕ್ಟೋಬರ್ 24ರಂದು ಎರಡೂ ದೇಶಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್ ಪಂದ್ಯಗಳು ನಡೆಯುತ್ತಿರುವ ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲೇ ಈ ಪಂದ್ಯ ನಡೆಯಲಿದೆ.

    ಈ ಪಂದ್ಯಕ್ಕೆ ಟಿಕೆಟ್ ಸಂಪೂರ್ಣ ಸೋಲ್ಡ್ ಔಟ್ ಆಗಿರುವುದು ತಿಳಿದುಬಂದಿದೆ. ಭಾನುವಾರ ರಾತ್ರಿ ಪ್ಲಾಟಿನಮ್​ಲಿಸ್ಟ್ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ ಪ್ರಾರಂಭ ಮಾಡಲಾಯಿತು. ಕೆಲವೇ ಗಂಟೆಗಳಲ್ಲಿ ಟಿಕೆಟ್​ಗಳೆಲ್ಲವೂ ಸೋಲ್ಡ್ ಔಟ್ ಆಗಿವೆ. ಜನರಲ್, ಜನರಲ್ ಈಸ್ಟ್, ಪ್ರಿಮಿಯಮ್, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಂ ಟಿಕೆಟ್​ಗಳು ಸಂಪೂರ್ಣ ಮಾರಾಟವಾಗಿವೆ. ಟಿಕೆಟ್ ಮಾರಾಟ ಪ್ರಾರಂಭವಾಗುತ್ತಿದ್ದಂತೆಯೇ ಸಾವಿರಾರು ಜನರು ವೆಬ್​ಸೈಟ್​ಗೆ ಭೇಟಿ ನೀಡಿ ಸೀಟ್ ಬುಕ್ ಮಾಡಿದ್ದರು. ಹಲವು ಜನರು ಆನ್​ಲೈನ್​ನಲ್ಲಿ ಕ್ಯೂ ಇದ್ದರಿಂದ ಒಬ್ಬರಿಗೆ ವೇಯ್ಟಿಂಗ್ ಅವಧಿ ಒಂದು ಗಂಟೆಗೂ ಹೆಚ್ಚು ಇತ್ತೆಂದು ಕೆಲ ವರದಿಗಳು ಹೇಳುತ್ತಿವೆ. ಹಲವರಿಗೆ ಗಂಟೆಗಟ್ಟಲೆ ಕಾದರೂ ಟಿಕೆಟ್ ಸಿಕ್ಕಿಲ್ಲ.

    ಭಾನುವಾರ ರಾತ್ರಿ ಟಿಕೆಟ್ ಮಾರಾಟ ಪ್ರಾರಂಭವಾಗಿ ಬೆಳಗ್ಗೆಯಷ್ಟರಲ್ಲಿ ಖಾಲಿ. ಬೆಳಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಟಿಕೆಟ್ ಬಿಕ್ಷೆ ಕೇಳಿಕೊಂಡು ಪೋಸ್ಟ್ ಹಾಕಿದ ನಿದರ್ಶನಗಳಿವೆ. ಯಾರ ಬಳಿಯಾದರೂ ಭಾರತ ಪಾಕಿಸ್ತಾನ ಪಂದ್ಯದ ಟಿಕೆಟ್ ಇದ್ದು ಮಾರಾಟ ಮಾಡಲು ಬಯಸಿದರೆ ದಯವಿಟ್ಟು ತಿಳಿಸಿ ಎಂಬಂಥ ಮನವಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಕ್ಕಿವೆ.

    ಟಿ20 ವಿಶ್ವಕಪ್ ವಿವರ: 

    ಅಕ್ಟೋಬರ್ 17ರಿಂದ ಐಸಿಸಿ ಟಿ20 ವಿಶ್ವಕಪ್ ಪ್ರಾರಂಭವಾಗುತ್ತದೆ. ಮೊದಲ ಸುತ್ತಿನ ಪಂದ್ಯಾವಳಿ ಹಾಗೂ ಸೂಪರ್-12 ಪಂದ್ಯಾವಳಿ ನಡೆಯುತ್ತವೆ. ಟಿ20 ಕ್ರಿಕೆಟ್​ನ ಟಾಪ್-8 ತಂಡಗಳು ನೇರವಾಗಿ ಸೂಪರ್-12 ಹಂತಕ್ಕೆ ಅರ್ಹತೆ ಪಡೆದಿವೆ. ಮೊದಲ ಸುತ್ತಿನಲ್ಲಿ ಎಂಟು ತಂಡಗಳು ಎರಡು ಗುಂಪುಗಳಾಗಿ ಸ್ಪರ್ಧಿಸಲಿದ್ದು, ಅದರಲ್ಲಿ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯುತ್ತವೆ. ಸೂಪರ್-12 ಸುತ್ತಿನಲ್ಲಿ ಮೊದಲೇ ಇದ್ದ 8 ತಂಡಗಳು ಸೇರಿ ಒಟ್ಟು 12 ತಂಡಗಳು ಸೆಣಸುತ್ತವೆ. ಅಲ್ಲಿಯೂ ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಅಕ್ಟೋಬರ್ 23ರಿಂದ ಸೂಪರ್-12 ಹಂತದ ಪಂದ್ಯಗಳು ನಡೆಯುತ್ತವೆ. ಭಾರತ ಮತ್ತು ಪಾಕಿಸ್ತಾನದ ಪಂದ್ಯ ಅಕ್ಟೋಬರ್ 24ರಂದು ಇದೆ. ಭಾರತ ಇರುವ ಎರಡನೇ ಗುಂಪಿನಲ್ಲಿ ಪಾಕಿಸ್ತಾನವಲ್ಲದೇ ನ್ಯೂಜಿಲೆಂಡ್, ಆಫ್ಘಾನಿಸ್ತಾನ ಹಾಗೂ ಮೊದಲ ಸುತ್ತಿನಿಂದ ಬರಲಿರುವ ಎರಡು ತಂಡಗಳು ಇವೆ.

    ಇದನ್ನೂ ಓದಿ: T20 World Cup 2021 Schedule | ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತದ ಪಂದ್ಯಗಳು ಇತ್ಯಾದಿ ಎಲ್ಲಾ ಮಾಹಿತಿ

    ವೆಸ್ಟ್ ಇಂಡೀಸ್ ತಂಡ ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಅಲ್ಲದೆ, ಕೆರಿಬಿಯನ್ನರು ಎರಡು ಬಾರಿ ಈ ಕಪ್ ಎತ್ತಿಹಿಡಿದಿದ್ದಾರೆ. 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಅನ್ನು ಭಾರತ ಜಯಿಸಿತ್ತು. ಅದಾದ ಬಳಿಕ ಭಾರತಕ್ಕೆ ಮತ್ತೆ ಪ್ರಶಸ್ತಿ ಗೆಲ್ಲುವ ಯೋಗ ಸಿಕ್ಕಿಲ್ಲ. 2014ರಲ್ಲಿ ಫೈನಲ್ ತಲುಪಿತ್ತು ಅಷ್ಟೇ. ಭಾರತವಲ್ಲದೇ ಪಾಕಿಸ್ತಾನ, ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳು ಒಮ್ಮೆ ಈ ಟಿ20 ವಿಶ್ವಕಪ್ ಗೆದ್ದಿವೆ.
    Published by:Vijayasarthy SN
    First published: