ಮುಂಬೈ: ಅರಬ್ ನಾಡಿನಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 17ರಂದು ಆರಂಭಗೊಳ್ಳಲಿದೆ. ನ. 14ರಂದು ಫೈನಲ್ ನಡೆಯಲಿದೆ. ಕೊರೋನಾ ಕಾರಣದಿಂದ ಭಾರತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಈ ಬಾರಿಯ ಐಪಿಎಲ್ ಪಂದ್ಯಾವಳಿ ಇದೇ ಅರಬ್ ನಾಡಿನಲ್ಲಿ ಮುಂದುವರಿಯಲಿದೆ. ಐಪಿಎಲ್ ಫೈನಲ್ ನಡೆದ ಎರಡೇ ದಿನಕ್ಕೆ ಟಿ20 ವರ್ಲ್ಡ್ ಕಪ್ ಆರಂಭಗೊಳ್ಳುತ್ತಿರುವುದು ಗಮನಾರ್ಹ. ಯುಎಇ ದೇಶದಲ್ಲಿ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಂದು ಪುನಾರಂಭಗೊಂಡು ಅಕ್ಟೋಬರ್ 15ರಂದು ಮುಗಿಯುತ್ತದೆ. ನಂತರ ಅಕ್ಟೋಬರ್ 17ರಂದು ಟಿ20 ವಿಶ್ವಕಪ್ ಶುರುವಾಗುತ್ತದೆ. ಯುಎಇ ದೇಶದ ಅಬು ಧಾಬಿ, ಶಾರ್ಜಾ ಮತ್ತು ದುಬೈ ನಗರ ಹಾಗೂ ಓಮನ್ ದೇಶದ ರಾಜಧಾನಿ ಮಸ್ಕಟ್ ನಗರಗಳಲ್ಲಿ ಟಿ20 ವಿಶ್ವಕಪ್ನ ಪಂದ್ಯಗಳು ಆಯೋಜನೆ ಆಗಲಿವೆ.
ಈ ಬಾರಿ ಟಿ20 ವಿಶ್ವಕಪ್ನಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ. ಟಿ20 ಕ್ರಿಕೆಟ್ನಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಎಂಟು ದೇಶಗಳು ನೇರವಾಗಿ ಸೂಪರ್ 12 ಹಂತ ಪ್ರವೇಶ ಪಡೆಯಲಿವೆ. ಅಂದರೆ, ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಫ್ಘನಿಸ್ತಾನ ತಂಡಗಳು ನೇರವಾಗಿ ಸೂಪರ್ 12 ಹಂತದಿಂದ ಟಿ20 ಅಭಿಯಾನ ಆರಂಭಿಸುತ್ತವೆ.
ಇದನ್ನೂ ಓದಿ: IPL 2021: ಯಾರಿಗೆ ಸಿಗಲಿದೆ KKR ತಂಡದ ನಾಯಕತ್ವ..?
ಈ ಸೂಪರ್ 12 ಹಂತ ಆರಂಭಕ್ಕೂ ಮುನ್ನ ಇತರ ಎಂಟು ತಂಡಗಳು ಮೊದಲ ಸುತ್ತಿನಲ್ಲಿ ಸೆಣಸಲಾಡಲಿವೆ. ಬಾಂಗ್ಲಾದೇಶ, ಶ್ರೀಲಂಕಾ, ಐರ್ಲೆಂಡ್, ನೆದರ್ಲೆಂಡ್ಸ್, ಸ್ಕಾಟ್ ಲೆಂಡ್, ನಮೀಬಿಯಾ, ಓಮನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳ ಮಧ್ಯೆ ಹಣಾಹಣಿಯಾಗಲಿದೆ. ಈ ಎಂಟು ತಂಡಗಳನ್ನ 2 ಗುಂಪುಗಳಾಗಿ ವಿಭಜಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಪ್ರತೀ ಗುಂಪಿನಲ್ಲಿ ಟಾಪ್-2 ಬಂದ ನಾಲ್ಕು ತಂಡಗಳು ಸೂಪರ್ 12ರ ಹಂತಕ್ಕೆ ಅರ್ಹತೆ ಪಡೆಯಲಿವೆ.
ಅಕ್ಟೋಬರ್ 24ರಿಂದ ಸೂಪರ್ 12ರ ಹಂತ ಆರಂಭಗೊಳ್ಳುತ್ತದೆ. ಒಟ್ಟು 30 ಪಂದ್ಯಗಳು ಈ ಹಂತದಲ್ಲಿ ನಡೆಯಲಿವೆ. ಈ ಸೂಪರ್ 12 ಹಂತದಲ್ಲಿ ಒಟ್ಟು 12 ತಂಡಗಳು ಸೆಣಸಲಿವೆ. ಇಲ್ಲಿಯೂ 6 ತಂಡಗಳಂತೆ ಎರಡು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತೀ ಗುಂಪುಗಳಿಂದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ