ಐಪಿಎಲ್ ಸೀಸನ್ 13ನಲ್ಲಿನ ಭರ್ಜರಿ ಪ್ರದರ್ಶನ ಟಿ. ನಟರಾಜನ್ ಅವರ ವೃತ್ತಿಜೀವನವನ್ನೇ ಬದಲಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ನೆಟ್ ಬೌಲರ್ ಆಗಿ ಸ್ಥಾನ ಪಡೆದಿದ್ದ ನಟರಾಜನ್ ಬಳಿಕ ಗಾಯಾಳು ವರುಣ್ ಚಕ್ರವರ್ತಿ ಸ್ಥಾನದಲ್ಲಿ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದರು. ಇದಾದ ಬಳಿಕ ಟಿ20 ತಂಡದಲ್ಲೂ ಸ್ಥಾನ ಪಡೆದು ತಮ್ಮ ಯಾರ್ಕರ್ ಎಸೆತಗಳ ಮೂಲಕ ಎಲ್ಲರ ಗಮನ ಸೆಳೆದರು.
ಏಕದಿನ ಹಾಗೂ ಟಿ20 ಪಾದರ್ಪಣೆ ಬಳಿಕ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ನೆಟ್ ಬೌಲರ್ ಆಗಿ ಉಳಿದಿದ್ದ ನಟರಾಜನ್ ಇದೀಗ ಟೆಸ್ಟ್ ತಂಡದಲ್ಲೂ ಪದಾರ್ಪಣೆ ಮಾಡಿದ್ದಾರೆ. ಗಾಯಾಳು ಜಸ್ಪ್ರೀತ್ ಬುಮ್ರಾ ಅವರ ಸ್ಥಾನದಲ್ಲಿ 4ನೇ ಟೆಸ್ಟ್ ಪಂದ್ಯದಲ್ಲಿ ನಟರಾಜನ್ ಕಣಕ್ಕಿಳಿದಿದ್ದಾರೆ. ಅಲ್ಲದೆ ಮೊದಲ ದಿನದಾಟದ ಅಂತ್ಯದೊಳಗೆ 2 ಪ್ರಮುಖ ವಿಕೆಟ್ ಕಬಳಿಸಿ ಟೆಸ್ಟ್ ವಿಕೆಟ್ ಖಾತೆಯನ್ನು ತೆರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಕಣಕ್ಕಿಳಿಯುವುದರೊಂದಿಗೆ ಒಂದೇ ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಮೂರು ಫಾರ್ಮಾಟ್ನಲ್ಲೂ ಪಾದರ್ಪಣೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಟಿ. ನಟರಾಜನ್ ಭಾಜರಾಗಿದ್ದಾರೆ.
ಇದಕ್ಕೂ ಮುನ್ನ ಡಿ.2 ರಂದು ಕ್ಯಾನ್ಬೆರಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ನಟರಾಜನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದರು. ಈ ಪಂದ್ಯದಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ 3 ಟಿ20 ಪಂದ್ಯಗಳ ಮೂಲಕ 6 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಇದೀಗ ಟೆಸ್ಟ್ ಪಾದರ್ಪಣೆ ಮಾಡುವ ಮೂಲಕ ತಂಗರಸು ನಟರಾಜನ್ ಹೊಸ ಇತಿಹಾಸ ಬರೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ