Video: 41ರ ಹರೆಯದ ಹಿರಿಯ ವೇಗಿ ದಾಳಿಗೆ ನಲುಗಿದ ಬಲಿಷ್ಠ ಮುಂಬೈ..!

santha moorthy

santha moorthy

ನಾನು 17-18 ನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದೇನೆ. ಈಗಲೂ ಕೂಡ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಉತ್ಸಾಹವಿದೆ. ಹಾಗಾಗಿ ನನಗೆ ವಯಸ್ಸು ಎಂಬುದು ದೊಡ್ಡ ವಿಷಯವಲ್ಲ ಎಂದು ಸಾಂತ ಮೂರ್ತಿ ಹೇಳುತ್ತಾರೆ.

  • Share this:

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡ ಹೀನಾಯ ಸೋಲು ಅನುಭವಿಸಿದೆ. ಗ್ರೂಪ್-ಇ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೇರಿ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಮುಂಬೈಗೆ ಆರಂಭಿಕ ಆಘಾತ ನೀಡುವಲ್ಲಿ 41 ವರ್ಷದ ಹಿರಿಯ ವೇಗಿ ಸಾಂತ ಮೂರ್ತಿ ಯಶಸ್ವಿಯಾದರು.


39 ರನ್​ ಆಗುವಷ್ಟರಲ್ಲಿ ಪ್ರಮುಖ 4 ವಿಕೆಟ್ ಉರುಳಿಸಿದ ಸಾಂತ ಮೂರ್ತಿ ಮುಂಬೈಗೆ ಶಾಕ್ ನೀಡಿದ್ದರು. ಅತ್ತ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಅರವಿಂದ್ ರಾಜ್ ಕೂಡ 2 ವಿಕೆಟ್ ಉರುಳಿಸಿದರು. ಪುದುಚೇರಿ ಬೌಲರುಗಳ ದಾಳಿಗೆ ತರಗೆಲೆಯಂತೆ ಉರುಳಿದ ಮುಂಬೈ ಬ್ಯಾಟ್ಸ್​ಮನ್​ಗಳು ಅಂತಿಮವಾಗಿ 19 ಓವರ್​ಗೆ 94 ರನ್​ಗಳಿಸಿ ಸರ್ವಪತನ ಕಂಡಿತು. ಪುದುಚೇರಿ ಪರ ಕರಾರುವಾಕ್ ದಾಳಿ ನಡೆಸಿದ ಸಾಂತ ಮೂರ್ತಿ 4 ಓವರ್​ನಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಉರುಳಿಸಿ ಮಿಂಚಿದರು.


ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಪುದುಚೇರಿ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಕಾರ್ತಿಕ್ (26) ಹಾಗೂ ರೋಹಿತ್ (18) ಯಶಸ್ವಿಯಾದರು. ಮೊದಲ ವಿಕೆಟ್​ಗೆ 45 ರನ್ ಕಲೆಹಾಕಿದ ಈ ಜೋಡಿ ಗೆಲುವಿನ ದೂರವನ್ನು ಕಡಿಮೆಗೊಳಿಸಿದರು. ಅಂತಿಮವಾಗಿ 4 ವಿಕೆಟ್ ಕಳೆದುಕೊಂಡು ಪುದುಚೇರಿ 19 ಓವರ್​ನಲ್ಲಿ ಗುರಿ ಮುಟ್ಟಿತು. ಈ ಸೋಲಿನೊಂದಿಗೆ ಮುಂಬೈ ತಂಡದ ನಾಕೌಟ್ ಕನಸು ಕೂಡ ಛಿದ್ರವಾಗಿದೆ.




ಯಾರು ಈ ಸಾಂತ ಮೂರ್ತಿ?
ಸಾಂತ ಮೂರ್ತಿ ಕಳೆದ ವರ್ಷವಷ್ಟೇ ಪುದುಚೇರಿ ಪರ ಪ್ರಥಮ ದರ್ಜೆ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಅಂದರೆ ತಮ್ಮ 40 ವಯಸ್ಸಿನಲ್ಲಿ ಕ್ರಿಕೆಟ್ ವೃತ್ತಿಜೀವನವನ್ನು ಆರಂಭಿಸಿದ್ದರು. ಇದೀಗ 41ನೇ ವಯಸ್ಸಿನಲ್ಲಿ 5 ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ತಮಿಳುನಾಡು ಪ್ರೀಮಿಯರ್ ಲೀಗ್‌ನ ಕಾರೈಕುಡಿ ಕಲೈ ತಂಡದ ಭಾಗವಾಗಿದ್ದರು.


ಸದ್ಯ ಪುದುಚೇರಿಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಆಗಿ ಕೆಲಸ ಮಾಡುತ್ತಿರುವ ಸಾಂತ ಮೂರ್ತಿ, ಜೊತೆಗೆ ಸ್ಪೋರ್ಟ್ಸ್ ಶಾಪ್​ವೊಂದನ್ನು ಕೂಡ ನಡೆಸುತ್ತಿದ್ದಾರೆ.

top videos


    ನಾನು 17-18 ನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದೇನೆ. ಈಗಲೂ ಕೂಡ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಉತ್ಸಾಹವಿದೆ. ಹಾಗಾಗಿ ನನಗೆ ವಯಸ್ಸು ಎಂಬುದು ದೊಡ್ಡ ವಿಷಯವಲ್ಲ ಎಂದು ಸಾಂತ ಮೂರ್ತಿ ಹೇಳುತ್ತಾರೆ. ಒಟ್ಟಿನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ 41 ರ ಸಾಂತ ಮೂರ್ತಿ ಮುಂದಿನ ಐಪಿಎಲ್ ಹರಾಜನ್ನು ಎದುರು ನೋಡುತ್ತಿದ್ದಾರೆ. ಅವರೆಲ್ಲಾ ಕನಸು ನನಸಾಗಲಿ ಎಂದು ಹಾರೈಸೋಣ.

    First published: