SMAT T20- ನ. 4ರಿಂದ ಮುಷ್ತಾಕ್ ಅಲಿ ಟಿ20; ಕರ್ನಾಟಕ ತಂಡ, ನಾಯಕ, ಹಿಂದಿನ ಸಾಧನೆ ಇತ್ಯಾದಿ ವಿವರ

Syed Mushtaq Ali T20: ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕ ತಂಡ ನವೆಂಬರ್ 4ರಿಂದ ಅಭಿಯಾನ ಪ್ರಾರಂಭಿಸಲಿದೆ. ಇಲೈಟ್ ಬಿ ಗುಂಪಿನಲ್ಲಿರುವ ಕರ್ನಾಟಕಕ್ಕೆ ಪ್ರಬಲ ತಂಡಗಳ ಸವಾಲು ಇದೆ.

ಕರ್ನಾಟಕ ಕ್ರಿಕೆಟ್ ತಂಡ

ಕರ್ನಾಟಕ ಕ್ರಿಕೆಟ್ ತಂಡ

 • Share this:
  ಬೆಂಗಳೂರು: ಐಪಿಎಲ್ ನಂತರ ಆಟಗಾರರ ಎದೆ ಬಡಿತ ಹೆಚ್ಚಿಸುವ ಟಿ20 ಟೂರ್ನಿ ಎಂದರೆ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ (Syed Mushtaq Ali Trophy T20 Cricket Tournament). ಈ ಟ್ವೆಂಟಿ20 ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. 2021ನೇ ಸಾಲಿನ ಸಯದ್ ಮುಷ್ತಾಕ್ ಅಲಿ ಟೂರ್ನಿ (SMAT T20) ನವೆಂಬರ್ 4ರಂದು ಆರಂಭವಾಗುತ್ತದೆ. ದೇಶದ ಒಟ್ಟು 39 ತಂಡಗಳು ಈ ಟಿ20 ಕ್ರಿಕೆಟ್ ಹಬ್ಬದಲ್ಲಿ ಪಾಲ್ಗೊಳ್ಳಲಿವೆ.

  ಭಾರತದಲ್ಲಿ ಬಿಸಿಸಿಐ ಮಾನ್ಯತೆ ಪಡೆದ ರಾಷ್ಟ್ರೀಯ ಟಿ20 ಟೂರ್ನಿ ಸಯದ್ ಮುಷ್ತಾಕ್ ಅಲಿ ಟ್ರೋಫಿಯಾಗಿದೆ. ವಿಜಯ್ ಹಜಾರೆ ಟ್ರೋಫಿ ಅಧಿಕೃತ 50 ಓವರ್​ಗಳ ಟೂರ್ನಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಸಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಯಿತು. ಐಪಿಎಲ್ ಸ್ಟಾರ್ ಮನೀಶ್ ಪಾಂಡೆ ಅವರು ರಾಜ್ಯದ ತಂಡದ ನಾಯಕರಾಗಿದ್ದಾರೆ. ವರ್ಷದ ಬಳಿಕ ಅವರ ನೇತೃತ್ವದಲ್ಲಿ ಕರ್ನಾಟಕ ತಂಡ ಅದೃಷ್ಟಪರೀಕ್ಷೆ ನಡೆಸಲಿದೆ.

  ಕರುಣ್ ನಾಯರ್ ಅವರು ಕಳೆದ ವರ್ಷ ಕರ್ನಾಟಕ ತಂಡದ ನಾಯಕರಾಗಿದ್ದರು. ಕಳೆದ ವರ್ಷದ ಟಿ20 ಟೂರ್ನಿಯಲ್ಲಿ ಕರ್ನಾಟಕ ಕ್ವಾರ್ಟರ್ ಫೈನಲ್​ವರೆಗೂ ಮುನ್ನಡೆದಿತ್ತು. ಅದಕ್ಕೆ ಮುನ್ನ ಸತತ ಎರಡು ವರ್ಷ ಕರ್ನಾಟಕ ಈ ಚುಟುಕು ಕ್ರಿಕೆಟ್ ಟೂರ್ನಿಯನ್ನ ಜಯಿಸಿತ್ತು. ಸಯದ್ ಮುಷ್ತಾಕ್ ಅಲಿ ಟ್ರೋಫಿಯನ್ನ ಸತತ ಎರಡು ವರ್ಷ ಗೆದ್ದದ್ದು ಕರ್ನಾಟಕ ತಂಡ ಮಾತ್ರವೇ.

  2021 SMAT T20 ಟೂರ್ನಿ ವಿವರ:

  ಟೂರ್ನಿ ಆರಂಭ: ನವೆಂಬರ್ 4

  ಒಟ್ಟು ತಂಡಗಳು: 39

  ಗುಂಪುಗಳು: ಇಲೈಟ್ ವಿಭಾಗದಲ್ಲಿ 5 ಗುಂಪು ಹಾಗೂ ಪ್ಲೇಟ್ ವಿಭಾಗದಲ್ಲಿ 1 ಗುಂಪು. ಇಲೈಟ್​ನ ಒಂದು ಗುಂಪಿನಲ್ಲಿ 6 ತಂಡಗಳು ಇವೆ. ಪ್ಲೇಟ್ ಗುಂಪಿನಲ್ಲಿ 9 ತಂಡಗಳು ಇವೆ.

  ಒಟ್ಟು 16 ತಂಡಗಳು ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸುತ್ತವೆ.

  ಪ್ರೀಕ್ವಾರ್ಟರ್​ಫೈನಲ್ ಪಂದ್ಯಗಳು: ನ. 16

  ಕ್ವಾರ್ಟರ್ ಫೈನಲ್ ಪಂದ್ಯಗಳು: ನ. 18

  ಸೆಮಿಫೈನಲ್ ಪಂದ್ಯಗಳು: ನ. 20

  ಫೈನಲ್: ನ. 22

  ಇದನ್ನೂ ಓದಿ: IPL- 150 ದೇಶಗಳ ಜಿಡಿಪಿಗಿಂತಲೂ ಹೆಚ್ಚು ಸಿರಿವಂತರು ಐಪಿಎಲ್ ಹೊಸ ತಂಡದ ಮಾಲೀಕರು

  ಕರ್ನಾಟಕ ಯಾವ ಗುಂಪಿನಲ್ಲಿದೆ?: ಕರ್ನಾಟಕ ಇಲೈಟ್ ಬಿ ಗುಂಪಿನಲ್ಲಿದೆ. ಇದೇ ಗುಂಪಿನಲ್ಲಿ ಮುಂಬೈ, ಛತ್ತೀಸ್​ಗಡ, ಸರ್ವಿಸಸ್, ಬರೋಡ ಮತ್ತು ಬಂಗಾಳ ತಂಡಗಳೂ ಇವೆ. ಎಲ್ಲಾ ತಂಡಗಳೂ ಬಲಿಷ್ಠವಾಗಿವೆ.

  ಕರ್ನಾಟಕದ ಪ್ರಮುಖ ಆಟಗಾರರು: ಕರ್ನಾಟಕ ತಂಡದಲ್ಲಿ ಕೆಎಲ್ ರಾಹುಲ್ ಅವರು ಉಪಸ್ಥಿತರಿರುವುದಿಲ್ಲ. ರಾಹುಲ್ ವಿಶ್ವಕಪ್​ನಲ್ಲಿ ಆಡುತ್ತಿರುವುದರಿಂದ ಅವರು ಲಭ್ಯ ಇಲ್ಲ. ಉಳಿದಂತೆ ಮನೀಶ್ ಪಾಂಡೆ, ಮಯಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕೆವಿ ಸಿದ್ಧಾರ್ಥ್, ಕರುಣ್ ನಾಯರ್ ಪ್ರಮುಖ ಬ್ಯಾಟರ್ಸ್ ಆಗಿದ್ಧಾರೆ. ಪ್ರಸಿದ್ಧ್ ಕೃಷ್ಣ, ಕೆ ಗೌತಮ್, ಶ್ರೇಯಸ್ ಗೋಪಾಲ್, ಜೆ ಸುಚಿತ್, ವೈಶಾಖ್ ಪ್ರಮುಖ ಬೌಲರ್ ಎನಿಸಿದ್ಧಾರೆ. ನಿಹಾಲ್ ಉಲ್ಲಾಳ, ಅಭಿನವ್ ಮನೋಹರ್, ವಿದ್ಯಾಧರ್ ಪಟೇಲ್ ಮೊದಲಾದ ಪ್ರತಿಭೆಗಳ ಸಂಗಮವಾಗಿರುವ ಕರ್ನಾಟಕ ತಂಡ ಈ ಟೂರ್ನಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದೆನಿಸಿದೆ.

  ಕರ್ನಾಟಕ ತಂಡದ ಪಂದ್ಯಗಳು:

  1) ನ. 4: ಕರ್ನಾಟಕ vs ಮುಂಬೈ

  2) ನ. 5: ಕರ್ನಾಟಕ vs ಛತ್ತೀಸ್​ಗಡ್

  3) ನ. 6: ಕರ್ನಾಟಕ vs ಸರ್ವಿಸಸ್

  4) ನ. 8: ಕರ್ನಾಟಕ vs ಬರೋಡ

  5) ನ. 9: ಕರ್ನಾಟಕ vs ಬಂಗಾಳ

  ಇದನ್ನೂ ಓದಿ: SA vs WI- ಹರಿಣಗಳ ದಾಳಿಗೆ ವಿಂಡೀಸ್ ಧೂಳೀಪಟ; ಒಂದೇ ವಿಕೆಟ್ ಪಡೆದರೂ ನೋರ್ಟಿಯಾ ಪಂದ್ಯಶ್ರೇಷ್ಠ

  ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡ:

  ಮನೀಶ್ ಪಾಂಡೆ (ನಾಯಕ), ಮಯಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕೆವಿ ಸಿದ್ಧಾರ್ಥ್, ರೋಹನ್ ಕದಂ, ಅನಿರುದ್ಧ ಜೋಷಿ, ಅಭಿನವ್ ಮನೋಹರ್, ಕರುಣ್ ನಾಯರ್, ಶರತ್ ಬಿಆರ್, ನಿಹಾಲ್ ಉಲ್ಲಾಳ, ಶ್ರೇಯಸ್ ಗೋಪಾಲ್, ಕೆ ಗೌತಮ್, ಜಗದೀಶ ಸುಚಿತ್, ಪವನ್ ದುಬೇ, ಕೆಸಿ ಕಾರ್ಯಪ್ಪ, ಪ್ರಸಿದ್ಧ್ ಕೃಷ್ಣ, ಪ್ರತೀಕ್ ಜೈನ್, ವೈಶಾಖ್ ವಿಜಯಕುಮಾರ್, ಎಂಬಿ ದರ್ಶನ್, ವಿದ್ಯಾಧರ್ ಪಟೇಲ್.

  ಕೋಚಿಂಗ್ ತಂಡ:
  ಮುಖ್ಯ ಕೋಚ್: ಯೆರೇಗೌಡ್
  ಬೌಲಿಂಗ್ ಕೋಚ್: ಎಸ್ ಅರವಿಂದ್
  ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ

  ವಿಜಯ್ ಹಜಾರೆ ಟ್ರೋಫಿ: ಟಿ20 ಟೂರ್ನಿ ಬಳಿಕ 50 ಓವರ್ ಕ್ರಿಕೆಟ್​ನ ವಿಜಯ್ ಹಜಾರೆ ಟ್ರೋಫಿ ಟೂರ್ನಿ ನಡೆಯಲಿದೆ. ಇದು ಡಿಸೆಂಬರ್ 8ರಿಂದ 29ರವರೆಗೆ ನಡೆಯಲಿದೆ. ಮುಂಬೈ ತಂಡ ಹಾಲಿ ಚಾಂಪಿಯನ್ ಆಗಿದೆ. ವಿಜಯ್ ಹಜಾರೆ ಟ್ರೋಫಿಗೆ ಕೆಎಲ್ ರಾಹುಲ್ ಲಭ್ಯ ಇರಲಿದ್ದಾರೆ.
  Published by:Vijayasarthy SN
  First published: