SMA T20- ಶಾರುಕ್ ಭರ್ಜರಿ ಆಟ; ತಮಿಳುನಾಡು ಟಿ20 ಚಾಂಪಿಯನ್; ಕರ್ನಾಟಕಕ್ಕೆ ವೀರೋಚಿತ ಸೋಲು

Syed Mushtaq Ali Trophy: ಸಾಯಿಕಿಶೋರ್ ಬೌಲಿಂಗ್ ಮತ್ತು ಶಾರುಕ್ ಖಾನ್ ಬ್ಯಾಟಿಂಗ್ ನೆರವಿನಿಂದ ತಮಿಳು ನಾಡು ತಂಡ ಸಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ರೋಚಕ ಗೆಲುವು ಸಾಧಿಸಿ ಚಾಂಪಿಯನ್ ಎನಿಸಿತು.

ಶಾರುಕ್ ಖಾನ್

ಶಾರುಕ್ ಖಾನ್

 • Share this:
  ದೆಹಲಿ, ನ. 22: ತಮಿಳುನಾಡು ತಂಡ (Tamil Nadu Cricket Team) ಸತತ ಎರಡನೇ ಬಾರಿ ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯಾವಳಿಯನ್ನ (Syed Mushtaq Ali Trophy T20) ಜಯಿಸಿದೆ. ಆರ್​ಸಿಬಿ ಹುಡುಗ ಶಾರುಕ್ ಖಾನ್ (Shahrukh Khan) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂದು ನಡೆದ ಫೈನಲ್​ನಲ್ಲಿ ಕರ್ನಾಟಕ (Karnataka Cricket Team) ವಿರುದ್ಧ ತಮಿಳುನಾಡು 4 ವಿಕೆಟ್​ಗಳಿಂದ ರೋಚಕ ಗೆಲುವು ಪಡೆಯಿತು. ಕೊನೆಯ ಬಾಲ್​ನಲ್ಲಿ ಶಾರುಕ್ ಸಿಕ್ಸರ್ ಭಾರಿಸಿ ತಮಿಳುನಾಡಿನ ಗೆಲುವಿಗೆ ಕಾರಣರಾದರು. ತಮಿಳುನಾಡು ತಂಡ ತನ್ನ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು. ಅಲ್ಲದೇ ಇದು ತಮಿಳುನಾಡು ತಂಡಕ್ಕೆ ಮೂರನೇ ಟಿ20 ಪ್ರಶಸ್ತಿಯಾಗಿದೆ. ಅತಿ ಹೆಚ್ಚು ಬಾರಿ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ದಾಖಲೆ ತಮಿಳುನಾಡಿನದ್ದಾಗಿದೆ.

  ಇಂದು ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕದ 151 ರನ್ ಮೊತ್ತವನ್ನು ಚೇಸ್ ಮಾಡಿದ ತಮಿಳುನಾಡು ತಂಡದ ಇನ್ನಿಂಗ್ಸ್ ಭರ್ಜರಿ ಎನ್ನುವಂತಿರಲಿಲ್ಲ. ಶಾರುಕ್ ಖಾನ್ ಪ್ರವೇಶದ ಬಳಿಕ ತಮಿಳುನಾಡು ಚೇಸಿಂಗ್​ವೆ ವೇಗ ಸಿಕ್ಕಿತು. ಶಾರುಕ್ ಕ್ರೀಸ್​ಗೆ ಬಂದಾಗ ತಮಿಳುನಾಡು ತಂಡ 28 ಬಾಲ್​ನಲ್ಲಿ 57 ರನ್ ಗಳಿಸಬೇಕಿತ್ತು. ಸ್ಫೋಟಕ ಬ್ಯಾಟಿಂಗ್​ಗೆ ಹೆಸರಾದ ಶಾರುಕ್ ಮತ್ತೊಮ್ಮೆ ವಿಜೃಂಭಿಸಿದರು. ಕೇವಲ 15 ಬಾಲ್​ನಲ್ಲಿ ಅವರು ಅಜೇಯ 33 ರನ್ ಗಳಿಸಿ ಮ್ಯಾಚ್ ವಿನ್ನರ್ ಪಟ್ಟವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡರು.

  ಕರ್ನಾಟಕದ ಬೌಲರ್ ಕೆ ಸಿ ಕಾರ್ಯಪ್ಪ ಮತ್ತೊಮ್ಮೆ ಗಮನ ಸೆಳೆಯುವ ಪ್ರದರ್ಶನ ನೀಡಿದರಾದರೂ ಪಂದ್ಯ ಗೆಲ್ಲಿಸಿಕೊಡಲು ಆಗಲಿಲ್ಲ.

  ಕರ್ನಾಟಕದ ಬ್ಯಾಟಿಂಗ್ ನಿರಾಸೆ:

  ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಕರ್ನಾಟಕ ನೀರಸ ಆರಂಭ ಪಡೆಯಿತು. ರೋಹನ್ ಕದಮ್, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ 32 ರನ್ ಆಗುವಷ್ಟರಲ್ಲಿ ಔಟಾಗಿ ಪೆವಿಲಿಯನ್ ಸೇರಿಕೊಂಡರು. ನಂತರ ಅಭಿನವ್ ಮನೋಹರ್, ಪ್ರವೀಣ್ ದುಬೆ ಮತ್ತು ಜೆ ಸುಚಿತ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಕರ್ನಾಟಕದ ಸ್ಕೋರು 151 ರನ್ ಗಡಿ ದಾಟಿತು.

  ಇದನ್ನೂ ಓದಿ: IPL 2022- ಐಪಿಎಲ್ ಆಕ್ಷನ್​ನಲ್ಲಿ ಈ ಆಟಗಾರನಿಗೆ ಹೊಸ ದಾಖಲೆ ಬೆಲೆ: ಮಾಜಿ ಕ್ರಿಕೆಟಿಗ ಭವಿಷ್ಯ

  ತಮಿಳುನಾಡಿನ ಎಡಗೈ ಸ್ಪಿನ್ನರ್ ಆರ್ ಸಾಯಿಕಿಶೋರ್ ಅವರ ಗಾಳಕ್ಕೆ ಕರ್ನಾಟಕದ ಬ್ಯಾಟುಗಾರರು ಸಿಲುಕಿ ವಿಲವಿಲ ಒದ್ದಾಡಿದರು. 4 ಓವರ್ ಬೌಲ್ ಮಾಡಿದ ಸಾಯಿ ಕಿಶೋರ್ ಕೇವಲ 12 ರನ್ನಿತ್ತು 3 ವಿಕೆಟ್ ಪಡೆದರು. ತಮಿಳುನಾಡು ಮೂರನೇ ಬಾರಿ ಕಪ್ ಎತ್ತಿಹಿಡಿಯಲು ಸಾಯಿ ಕಿಶೋರ್ ಬೌಲಿಂಗ್ ಮತ್ತು ಶಾರುಕ್ ಖಾನ್ ಬ್ಯಾಟಿಂಗ್ ಪ್ರಮುಖವಾಗಿ ಕಾರಣವಾಯಿತು.

  ಅತಿ ಹೆಚ್ಚು ಬಾರಿ ಚಾಂಪಿಯನ್ ಆಗಿರುವ ತಂಡಗಳು:

  ತಮಿಳುನಾಡು ತಂಡ ಈ ಬಾರಿಯದ್ದು ಸೇರಿ ಒಟ್ಟು 3 ಬಾರಿ ಚಾಂಪಿಯನ್ ಆಗಿದೆ. ಕರ್ನಾಟಕ, ಬಂಗಾಳ, ಗುಜರಾತ್ ಮತ್ತು ಬರೋಡಾ ತಂಡಗಳು ಎರಡೆರಡು ಬಾರಿ ಎಸ್​ಎಂಎ ಟಿ20 ಗೆದ್ದಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪೂರ್ವ ವಲಯಗಳು ತಂಡಗಳು ಒಮ್ಮೊಮ್ಮೆ ಜಯಿಸಿವೆ.

  ಈ ಹಿಂದಿನ ಸೀಸನ್​ನ ವಿಜೇತರು:
  2006: ತಮಿಳುನಾಡು
  2009: ಮಹಾರಾಷ್ಟ್ರ
  2010: ಬಂಗಾಳ
  2011: ಬರೋಡಾ
  2012: ಗುಜರಾತ್
  2013: ಬರೋಡಾ
  2014: ಗುಜರಾತ್
  2015: ಉತ್ತರ ಪ್ರದೇಶ
  2016: ಪೂರ್ವ ವಲಯ
  2017: ದೆಹಲಿ
  2018: ಕರ್ನಾಟಕ
  2019: ಕರ್ನಾಟಕ
  2020: ತಮಿಳುನಾಡು
  2021: ತಮಿಳುನಾಡು

  ಇದನ್ನೂ ಓದಿ: Mahendra Singh Dhoni: ಧೋನಿ ಎಂದರೆ ನನಗಿಷ್ಟ ಎಂದ ತಮಿಳುನಾಡು ಮುಖ್ಯಮಂತ್ರಿ!

  ಸ್ಕೋರು ವಿವರ:

  ಕರ್ನಾಟಕ 20 ಓವರ್ 151/7
  (ಅಭಿನವ್ ಮನೋಹರ್ 46, ಪ್ರವೀಣ್ ದುಬೆ 33, ಕರುಣ್ ನಾಯರ್ 18, ಜೆ ಸುಚಿತ್ 18, ಬಿ ಶರತ್ 16 ರನ್ – ಆರ್ ಸಾಯಿಕಿಶೋರ್ 12/3)

  ತಮಿಳುನಾಡು 20 ಓವರ್ 153/6
  (ಎನ್ ಜಗದೀಸನ್ 41, ಶಾರುಕ್ ಖಾನ್ ಅಜೇಯ 33, ಹರಿ ನಿಶಾಂತ್ 23, ವಿಜಯ್ ಶಂಕರ್ 18 ರನ್- ಕೆ ಸಿ ಕಾರ್ಯಪ್ಪ 23/2)
  Published by:Vijayasarthy SN
  First published: