news18-kannada Updated:January 14, 2021, 8:32 PM IST
Devdutt Padikkal
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡ ತ್ರಿಪುರಾ ವಿರುದ್ಧ ಜಯಭೇರಿ ಬಾರಿಸಿದೆ. ಬೆಂಗಳೂರಿನ ಆಲೂರಿನ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ತ್ರಿಪುರಾ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ದೇವದತ್ ಪಡಿಕ್ಕಲ್ ಹಾಗೂ ರೋಹನ್ ಕದಂ ಕರ್ನಾಟಕಕ್ಕೆ ಭರ್ಜರಿ ಆರಂಭ ಒದಗಿಸಿದರು.
7 ಓವರ್ನಲ್ಲೇ ತಂಡದ ಮೊತ್ತವನ್ನು 50ರ ಗಡಿದಾಟಿಸಿದ ಈ ಜೋಡಿ ಮೊದಲ ವಿಕೆಟ್ಗೆ 62 ರನ್ಗಳನ್ನು ಕಲೆಹಾಕಿದರು. ಇದೇ ವೇಳೆ ರೋಹನ್ ಕದಂ 31 ರನ್ಗಳೊಂದಿಗೆ ಪೆವಿಲಿಯನ್ ಕಡೆ ಮುಖ ಮಾಡಿದರು. ಬಳಿಕ ಬಂದ ನಾಯಕ ಕರುಣ್ ನಾಯರ್ ಬಂದ ವೇಗದಲ್ಲೇ 5 ರನ್ಗಳಿಸಿ ಹಿಂತಿರುಗಿದರು.
ಇನ್ನು ಶ್ರೀಜಿತ್ 11 ರನ್ಗಳಿಸಿದರೆ, ಅರವಿಂದ್ ಜೋಷಿ 12 ರನ್ ಬಾರಿಸಿದರು. ಮತ್ತೊಂದೆಡೆ ಏಕಾಂಗಿಯಾಗಿ ತಂಡದ ಮೊತ್ತವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡ ಪಡಿಕ್ಕಲ್ 9 ಬೌಂಡರಿ ಹಾಗೂ 4 ಸಿಕ್ಸರ್ಗಳನ್ನು ಸಿಡಿಸಿದರು. ಅಲ್ಲದೆ ನಿಗದಿತ 20 ಓವರ್ನಲ್ಲಿ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 167ಕ್ಕೆ ತಂದು ನಿಲ್ಲಿಸಿದರು. ಆರಂಭಿಕರಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದ ದೇವದತ್ ಪಡಿಕ್ಕಲ್ 67 ಎಸೆತಗಳಲ್ಲಿ 99 ರನ್ ಬಾರಿಸುವ ಮೂಲಕ ರನ್ನಿಂದ ಶತಕ ವಂಚಿತರಾದರು.
ಇನ್ನು ಸ್ಪರ್ಧಾತ್ಮಕ ಗುರಿ ಪಡೆದ ತ್ರಿಪುರಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕರ್ನಾಟಕ ಬೌಲರುಗಳು ಯಶಸ್ವಿಯಾದರು. ತಂಡದ ಮೊತ್ತ 35 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಉರುಳಿಸಿ ಮೇಲುಗೈ ಸಾಧಿಸಿದರು. ಈ ಹಂತದಲ್ಲಿ ಜೊತೆಗೂಡಿದ ನಾಯಕ ಮಣಿಶಂಕರ್ ಹಾಗೂ ರಜತ್ ಡೇ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಅಷ್ಟೇ ಅಲ್ಲದೆ ಕರ್ನಾಟಕ ಬೌಲರುಗಳನ್ನು ದಂಡಿಸಿದ ಈ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಹಂತದಲ್ಲಿ 33 ಎಸೆತಗಳಲ್ಲಿ ಮಣಿಶಂಕರ್ 61 ರನ್ ಬಾರಿಸಿದರೆ, ರಜತ್ 29 ಎಸೆತಗಳಲ್ಲಿ 44 ರನ್ ಸಿಡಿಸಿದರು. ಅಂತಿಮ ಹಂತದಲ್ಲಿ ಕರ್ನಾಟಕ ಬೌಲರುಗಳ ಸಾಂಘಿಕ ದಾಳಿ ನಡೆಸಿದರು. ಪರಿಣಾಮ ತ್ರಿಪುರಾ 4 ವಿಕೆಟ್ ನಷ್ಟಕ್ಕೆ 154 ರನ್ ಅಷ್ಟೇ ಗಳಿಸಲು ಶಕ್ತರಾದರು. ಅಲ್ಲದೆ ಕರ್ನಾಟಕ ತಂಡ 10 ರನ್ಗಳ ರೋಚಕ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ 3 ಪಂದ್ಯಗಳಲ್ಲಿ ಕರ್ನಾಟಕ 2 ಜಯ ಸಾಧಿಸಿದೆ. ಶನಿವಾರ ನಡೆಯಲಿರುವ 4ನೇ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್ ತಂಡವನ್ನು ಎದುರಿಸಲಿದೆ.
Published by:
zahir
First published:
January 14, 2021, 8:32 PM IST