ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದರು. ಇದರ ಬೆನ್ನಲ್ಲೇ ಜಾಮೀನು ಪಡೆದ ಹೊರಬಂದ ರೈನಾ, ನಡೆದಿರುವ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಾನು ಮುಂಬೈಗೆ ಶೂಟಿಂಗ್ಗಾಗಿ ಬಂದಿದ್ದೆ. ಇದೇ ವೇಳೆ ಸ್ನೇಹಿತರೊಬ್ಬರು ಭೋಜನಕ್ಕಾಗಿ ಆಹ್ವಾನಿಸಿದ್ದರು. ಹೀಗಾಗಿ ಅಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿರುವುದಾಗಿ ರೈನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ನಾನು ಮುಂಬೈಗೆ ಶೂಟಿಂಗ್ಗಾಗಿ ಮುಂಬೈ ಬಂದಿದ್ದರಿಂದ ಇಲ್ಲಿನ ಕೋವಿಡ್ ನಿಯಮಗಳ ಬಗ್ಗೆ ಕೂಡ ಅರಿವಿರಲಿಲ್ಲ. ಶೂಟಿಂಗ್ ಮುಗಿಸಿ ಬೇಗನೆ ದಿಲ್ಲಿಗೆ ಮರಳಬೇಕು ಅಂದುಕೊಂಡಿದ್ದೆ. ಆದರೆ ತಡವಾದ ಕಾರಣ, ಸ್ನೇಹಿತರ ಆಹ್ವಾನ ಕೂಡ ಸ್ವೀಕರಿಸಿದೆ. ಆದರೆ ನಾನು ಸ್ಥಳೀಯ ಸಮಯ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಗಮನಿಸಿರಲಿಲ್ಲ ಎಂದು ರೈನಾ ತಿಳಿಸಿದ್ದಾರೆ.
ಈ ಬಗ್ಗೆ ಅರಿವಾದಾದ ತಕ್ಷಣವೇ ಅಧಿಕಾರಿಗಳು ರೂಪಿಸಿದ ಕಾರ್ಯ ಸೂಚಿಗಳನ್ನು ಪಾಲಿಸಿದ್ದೇನೆ. ಅನಿರೀಕ್ಷಿತವಾಗಿ ನಡೆದಿರುವ ಘಟನೆ ಬಗ್ಗೆ ವಿಷಾದಿಸುತ್ತೇನೆ. ಹಾಗೆಯೇ ಆಡಳಿತ ಮಂಡಳಿ ನಿಗದಿ ಪಡಿಸಿರುವ ನಿಯಮಗಳನ್ನು ಹಾಗೂ ಕಾನೂನುಗಳನ್ನು ಗೌರವದಿಂದ ಪಾಲಿಸುತ್ತೇನೆ. ಅದರಂತೆ ಭವಿಷ್ಯದಲ್ಲೂ ನಡೆದುಕೊಳ್ಳುತ್ತೇನೆ ಎಂದು ಸುರೇಶ್ ರೈನಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ