ವಿರಾಟ್ ಕೊಹ್ಲಿ ನೀಡಿದ್ದ ಆವತ್ತಿನ ಒಂದು ಹೇಳಿಕೆ ಯಡವಟ್ಟಾಗಿರಬಹುದು: ಗವಾಸ್ಕರ್

Sunil Gavaskar on Virat Kohli: ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವದಿಂದ ಹಿಂದೆ ಸರಿಯುವುದಾಗಿ ಯುಎಇಯಲ್ಲಿ ವಿರಾಟ್ ಕೊಹ್ಲಿ ಹೇಳಿದ್ದರು. ಅವರ ಹೇಳಿಕೆ ನೀಡಿದ ರೀತಿಯಲ್ಲಿ ಯಡವಟ್ಟಾಗಿರಬಹುದು ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಮುಂಬೈ, ಡಿ. 15: ವಿರಾಟ್ ಕೊಹ್ಲಿ ಟಿ20 ತಂಡದ ನಾಯಕ ಸ್ಥಾನವನ್ನು ತ್ಯಜಿಸುವುದಾಗಿ ಹೇಳಿದಾಗ ಟೀಮ್ ಇಂಡಿಯಾದಲ್ಲಿ (Indian Cricket Team) ಬೇರಾವುದೇ ಹೊಯ್ದಾಟ ಮುಂದಿನ ದಿನಗಳಲ್ಲಿ ಬರದೇ ಇರಬಹುದು ಎಂಬ ಭಾವನೆ ಇತ್ತು. ಆದರೆ, ಸೌತ್ ಆಫ್ರಿಕಾ ಸರಣಿಗೆ ಮುನ್ನ ಓಡಿಐ ತಂಡದ ನಾಯಕ ಸ್ಥಾನವನ್ನೂ ವಿರಾಟ್ ಕೊಹ್ಲಿಯಿಂದ ಕಸಿದು ರೋಹಿತ್ ಶರ್ಮಾಗೆ ಕೊಡಲಾಯಿತು. ಇದು ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅನುಮಾನ ದಟ್ಟಗೊಳ್ಳಲು ಕಾರಣವಾಯಿತು. ಓಡಿಐ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ (Virat Kohli) ಅಪಾರ ಯಶಸ್ಸು ಗಳಿಸಿದ್ದರು. ಟೀಮ್ ಇಂಡಿಯಾ ಅನೇಕ ಬಾರಿ ಸೀಮೋಲಂಘನ ಮಾಡಲು ಕಾರಣವಾಗಿದ್ದರು. ಅವರಿಂದ ನಾಯಕತ್ವ ಕಸಿಯುವುದಕ್ಕೆ ಬಿಸಿಸಿಐಗೆ ಸಿಕ್ಕ ಕಾರಣ ಏನು ಎಂಬುದು ಹಲವರಿಗೆ ಯಕ್ಷ ಪ್ರಶ್ನೆ ಆಗಿದೆ. ಮಾಜಿ ಆಟಗಾರ ಸುನೀಲ್ ಗವಾಸ್ಕರ್ (Sunil Gavaskar) ಈ ಯಕ್ಷ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.

ಸುನೀಲ್ ಗವಾಸ್ಕರ್ ಪ್ರಕಾರ, ಯುಎಇಯಲ್ಲಿ ನಡೆದ ಒಂದು ವಿದ್ಯಮಾನ ವಿರಾಟ್ ಕೊಹ್ಲಿಯ ನಾಯಕತ್ವಕ್ಕೆ ಸಂಚಕಾರ ತಂದಿರುವ ಸಾಧ್ಯತೆ ಇದೆಯಂತೆ. ಐಪಿಎಲ್ ಟೂರ್ನಿಗೆ ಮುನ್ನ ವಿರಾಟ್ ಕೊಹ್ಲಿ ತಾನು ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ತಿಳಿಸಲು ನೀಡಿದ್ದ ಹೇಳಿಕೆಯಿಂದ ಯಡವಟ್ಟಾಗಿರಬಹುದು ಎಂದು ಗವಾಸ್ಕರ್ ಸಂದೇಹಿಸಿದ್ದಾರೆ.

“ನಾನು ಟೆಸ್ಟ್ ಮತ್ತು ಓಡಿಐನಲ್ಲಿ ಭಾರತ ತಂಡದ ನಾಯಕನಾಗಿ ಮುಂದುವರಿಯುತ್ತೇನೆ, ಇದು ನನಗೆ ನೆನಪಿರುವ ಹಾಗೆ ವಿರಾಟ್ ಕೊಹ್ಲಿ ನೀಡಿದ್ದ ಆವತ್ತಿನ ಹೇಳಿಕೆಯಲ್ಲಿ ಇದ್ದ ಒಂದು ಸಾಲು. ಇದರ ಬದಲು ಅವರು, ನಾನು ಟೆಸ್ಟ್ ಮತ್ತು ಓಡಿಐನಲ್ಲಿ ನಾಯಕನಾಗಲು ಲಭ್ಯ ಇದ್ದೇನೆ ಎಂದು ಹೇಳಬಹುದಿತ್ತು” ಎಂದು ಸುನೀಲ್ ಗವಾಸ್ಕರ್ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ರೋಹಿತ್ ಜೊತೆ ಮುನಿಸು ಇಲ್ಲ ಅಂತ ನಂಗೂ ಹೇಳಿ ಹೇಳಿ ಸಾಕಾಗಿದೆ: ವಿರಾಟ್ ಕೊಹ್ಲಿ

“ಟೆಸ್ಟ್ ಮತ್ತು ಓಡಿಐಗೆ ತಾನೇ ನಾಯಕ ಎಂದು ಅವರೇ ನಿರ್ಧರಿಸಿದಂತೆ ತೋರಿತ್ತು ಆ ಹೇಳಿಕೆ. ಇದರಿಂದ ಬಿಸಿಸಿಐನಲ್ಲಿನ ಕೆಲ ಅಧಿಕಾರಿಗಳಿಗೆ ಇರಿಸುಮುರುಸು ಆಗಿರಬಹುದು… ವಿರಾಟ್ ಕೊಹ್ಲಿ ಅವರು ತಮ್ಮ ಹೇಳಿಕೆಯನ್ನು ಸರಿಯಾದ ರೀತಿಯಲ್ಲಿ ಕೊಡಬಹುದಾಗಿತ್ತು” ಎಂದು ಮಾಜಿ ಟೀಮ್ ಇಂಡಿಯಾ ಕ್ಯಾಪ್ಟನ್ ಆದ ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಪ್ರತಿಕ್ರಿಯೆ:

ಓಡಿಐ ತಂಡದ ನಾಯಕತ್ವ ಕಳೆದುಕೊಂಡ ಬಳಿಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, ತಮ್ಮನ್ನ ಓಡಿಐ ಕ್ಯಾಪ್ಟನ್ಸಿಯಿಂದ ತೆಗೆಯುವಾಗ ಒಂದೂವರೆ ಗಂಟೆ ಮುಂಚೆಯಷ್ಟೇ ಮಾಹಿತಿ ನೀಡಲಾಗಿದೆ. ಅದಕ್ಕಿಂತ ಮುಂಚೆ ಯಾರೂ ತನ್ನನ್ನ ಸಂಪರ್ಕಿಸಿ ಮಾತನಾಡಿಲ್ಲ. ಟೆಸ್ಟ್ ತಂಡದ ಆಯ್ಕೆ ಬಗ್ಗೆ ಮಾತನಾಡಿ, ಓಡಿಐ ನಾಯಕತ್ವ ನಿಮ್ಮ ಬಳಿ ಇರುವುದಿಲ್ಲ ಎಂದಷ್ಟೇ ನನಗೆ ತಿಳಿಸಲಾಯಿತು ಎಂದು ವಿವರಿಸಿದ್ಧಾರೆ.

ನಾನು ಟಿ20 ತಂಡದ ನಾಯಕತ್ವ ತ್ಯಜಿಸುವ ನಿರ್ಧಾರದ ಬಗ್ಗೆ ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತನಾಡಿದ್ದೆ. ಆಗ ಓಡಿಐ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರಿಯಲು ಬಯಸುವುದಾಗಿ ನನ್ನ ಅಭಿಪ್ರಾಯವನ್ನ ತಿಳಿಸಿದ್ದೆ. ನಾನು ಟಿ20 ನಾಯಕ ಸ್ಥಾನ ಬಿಡುವ ನಿರ್ಧಾರಕ್ಕೆ ಯಾವ ಅಪಸ್ವರವೂ ಬಂದಿರಲಿಲ್ಲ ಎಂದು ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಅಲ್ಲ, ರೋಹಿತ್ ಅಲ್ಲ, ನಟ ಅಕ್ಷಯ್ ಕುಮಾರ್​ಗೆ ಇಷ್ಟವಾದ ಇಬ್ಬರು ಕ್ರಿಕೆಟಿಗರು ಇವರು

ಕೆಲ ದಿನಗಳ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿ, ವಿರಾಟ್ ಕೊಹ್ಲಿಗೆ ಟಿ20 ನಾಯಕತ್ವ ಬಿಡಬೇಡಿ ಎಂದು ವೈಯಕ್ತಿಕವಾಗಿ ತಿಳಿಸಿದ್ದೆ. ಆದರೂ ಆ ಮಾತು ಕೇಳದೇ ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದರು. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಎರಡು ತಂಡಗಳಿಗೆ ಬೇರೆ ಬೇರೆ ಕ್ಯಾಪ್ಟನ್ ಇದ್ದರೆ ಸರಿ ಇರುವುದಿಲ್ಲ. ಒಬ್ಬರೇ ನಾಯಕನಾಗಿರಲಿ ಎಂಬ ಕಾರಣಕ್ಕೆ ರೋಹಿತ್ ಶರ್ಮಾಗೆ ಟಿ20 ಮತ್ತು ಓಡಿಐ ನಾಯಕತ್ವ ವಹಿಸಲಾಯಿತು ಎಂದು ತಿಳಿಸಿದ್ದರು.

ಈಗ ವಿರಾಟ್ ಕೊಹ್ಲಿ ನೀಡಿರುವ ಇವತ್ತಿನ ಹೇಳಿಕೆ ಬೇರೆಯದೇ ಮಾಹಿತಿ ಹೇಳುತ್ತಿದೆ.
Published by:Vijayasarthy SN
First published: