ಭಾರತ ಟಿ20 ತಂಡಕ್ಕೆ ಕ್ಯಾಪ್ಟನ್, ಇಬ್ಬರು ವೈಸ್ ಕ್ಯಾಪ್ಟನ್ಸ್ ಹೆಸರು ಮುಂದಿಟ್ಟ ಗವಾಸ್ಕರ್

Sunil Gavaskar- ಈ ವಿಶ್ವಕಪ್ ಆಗಿ ಒಂದು ವರ್ಷಕ್ಕೆ ಇನ್ನೊಂದು ಟಿ20 ವಿಶ್ವಕಪ್ ಬರುವುದರಿಂದ ಈಗಲೇ ಟಿ20 ತಂಡಕ್ಕೆ ನಾಯಕತ್ವ ಬದಲಾವಣೆ ಆಗುವುದು ಸೂಕ್ತ. ಒಬ್ಬನೇ ನಾಯಕನ ನೇತೃತ್ವದಲ್ಲಿ ಎರಡು ವಿಶ್ವಕಪ್ ಆಡಿದರೆ ಅನುಕೂಲ ಜಾಸ್ತಿ ಎಂದಿದ್ದಾರೆ ಸುನೀಲ್ ಗವಾಸ್ಕರ್.

ಸುನೀಲ್ ಗವಾಸ್ಕರ್

ಸುನೀಲ್ ಗವಾಸ್ಕರ್

 • Cricketnext
 • Last Updated :
 • Share this:
  ದುಬೈ: ವಿರಾಟ್ ಕೊಹ್ಲಿ ಅವರು ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಟಿ20 ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಈಗಾಗಲೇ ಟಿ20 ತಂಡಕ್ಕೆ ಭವಿಷ್ಯದ ನಾಯಕ ಯಾರಾಗಬಹುದೆಂದು ಸಾಕಷ್ಟು ಮಂದಿ ಸಲಹೆಗಳನ್ನ ನೀಡುತ್ತಿದ್ದಾರೆ. ಬಹುತೇಕ ಮಾಜಿ ಆಟಗಾರರು ಟಿ20 ತಂಡದಲ್ಲಿ ವಿರಾಟ್ ಕೊಹ್ಲಿಯ ಕ್ಯಾಪ್ಟನ್ಸಿ ಸ್ಥಾನವನ್ನು ರೋಹಿತ್ ಶರ್ಮಾ ತುಂಬುವುದು ಸೂಕ್ತ ಎಂದಿದ್ಧಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಹಲವು ಬಾರಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಐದು ಬಾರಿ ಐಪಿಎಲ್ ಪ್ರಶಸ್ತಿಯತ್ತ ಮುನ್ನಡೆಸಿದ್ಧಾರೆ. ಅವರು ಕ್ಯಾಪ್ಟನ್ಸಿಗೆ ಸಿದ್ಧವಾಗಿರುವ ಆಟಗಾರ. ಅವರೇ ಸೂಕ್ತ ಎಂಬುದು ಹಲವರ ಅಭಿಪ್ರಾಯ. ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಕೂಡ ಇದೇ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ.

  34 ವರ್ಷದ ರೋಹಿತ್ ಶರ್ಮಾ ಅವರು ಈ ವಿಶ್ವಕಪ್​ನಿಂದಲೇ ಭಾರತ ಟಿ20 ತಂಡದ ನಾಯಕರಾಗಬೇಕು. ಆಸ್ಟ್ರೇಲಿಯಾದಲ್ಲಿ 2022ರಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವನ್ನು ಅವರು ಮುನ್ನಡೆಸಬೇಕು ಎಂದು ಭಾರತದ ಸರ್ವಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರೆನಿಸಿರುವ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ಧಾರೆ. ಈ ಟಿ20 ವಿಶ್ವಕಪ್​ಗೂ ರೋಹಿತ್ ಶರ್ಮಾ ನಾಯಕರಾಗುವುದು ಉತ್ತಮ ಎಂಬುದು ಅವರ ಅನಿಸಿಕೆ. ಯಾಕೆಂದರೆ ಒಂದು ವರ್ಷದ ಅಂತರದಲ್ಲಿ ಎರಡು ವಿಶ್ವಕಪ್ ನಡೆಯುವುದರಿಂದ ಮುಂದಿನ ತಿಂಗಳು ಆರಂಭಗೊಳ್ಳುವ ಟಿ20 ವಿಶ್ವಕಪ್​ನಿಂದಲೇ ರೋಹಿತ್ ಶರ್ಮಾ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಬೇಕು. ಒಂದು ವರ್ಷದ ಅಂತರದಲ್ಲಿ ಇಬ್ಬಿಬ್ಬರು ನಾಯಕರು ತಂಡವನ್ನು ಮುನ್ನಡೆಸುವುದಕ್ಕಿಂತ ಒಬ್ಬನೇ ನಾಯಕನಿರುವುದು ಒಳ್ಳೆಯದು. ಹೀಗಾಗಿ, ರೋಹಿತ್ ಶರ್ಮಾ ಈ ವಿಶ್ವಕಪ್​ನಿಂದಲೇ ಟೀಮ್ ಇಂಡಿಯಾ ನಾಯಕರಾಗಲಿ ಎಂದು ಸುನೀಲ್ ಗವಾಸ್ಕರ್ ವಿಶ್ಲೇಷಿಸಿದ್ದಾರೆ.

  ಉಪನಾಯಕನ ಸ್ಥಾನಕ್ಕೆ ಕನ್ನಡಿಗನ ಹೆಸರು:

  ಭಾರತ ಟಿ20 ಕ್ರಿಕೆಟ್ ತಂಡಕ್ಕೆ ಉಪನಾಯಕರಾಗಬಲ್ಲರಂಥ ಇಬ್ಬರು ಆಟಗಾರರ ಹೆಸರನ್ನು ಗವಾಸ್ಕರ್ ಮುಂದಿಟ್ಟಿದ್ದಾರೆ. ಅದರಲ್ಲಿ ಒಬ್ಬ ಕನ್ನಡಿಗನ ಹೆಸರೂ ಇದೆ. ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಲ್ಲೊಬ್ಬರು ವೈಸ್ ಕ್ಯಾಪ್ಟನ್ ಆಗುವುದು ಸೂಕ್ತ ಎಂದಿದ್ಧಾರೆ ಗವಾಸ್ಕರ್. ಸದ್ಯ ಕೆಎಲ್ ರಾಹುಲ್ ಅವರು ಪಂಜಾಬ್ ಕಿಂಗ್ಸ್ ಹಾಗೂ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ಧಾರೆ. ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ಕೊಹ್ಲಿಗೆ ವೈಸ್ ಕ್ಯಾಪ್ಟನ್ ಆಗಿರುವುದು ರೋಹಿತ್ ಶರ್ಮಾ. ಇವರು ನಾಯಕರಾಗಿ ಬಡ್ತಿ ಹೊಂದಿದರೆ ಕೆ ಎಲ್ ರಾಹುಲ್ ಅಥವಾ ರಿಷಭ್ ಪಂತ್ ಉಪನಾಯಕರಾಗಬಹುದು ಎಂಬುದು ಗವಾಸ್ಕರ್ ಅಭಿಪ್ರಾಯ.

  ಇದನ್ನೂ ಓದಿ: RCB vs RR- ರಾಯಲ್ಸ್ ವಿರುದ್ಧ ಆರ್​ಸಿಬಿಗೆ 7 ವಿಕೆಟ್ ಭರ್ಜರಿ ಜಯ; ಮ್ಯಾಕ್ಸ್​ವೆಲ್, ಭರತ್ ಅಮೋಘ ಬ್ಯಾಟಿಂಗ್

  ಐಪಿಎಲ್ 2021 ಟೂರ್ನಿ ಮುಗಿದ ಕೂಡಲೇ ಟಿ20 ವಿಶ್ವಕಪ್ ಕೂಟ ಪ್ರಾರಂಭವಾಗುತ್ತದೆ. ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಯುಎಇ ಮತ್ತು ಓಮನ್​ನಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಭಾರತ ತಂಡವನ್ನ ಈಗಾಗಲೇ ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಟಿ20 ಗೆಲ್ಲಲು ಅಡಿ ಇಡುತ್ತಿದೆ. ಆದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನ ತ್ಯಜಿಸುವುದಾಗಿ ಘೋಷಣೆ ಮಾಡಿದ್ಧಾರೆ. ಮುಂಬರುವ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾದ ಟಿ20 ತಂಡದ ಕ್ಯಾಪ್ಟನ್ಸಿಗೆ ವಿದಾಯ ಹೇಳಲಿದ್ಧಾರೆ.

  ಕೊಹ್ಲಿ ಈಗಾಗಲೇ ಕ್ಯಾಪ್ಟನ್ಸಿಯಿಂದ ಹಿಂದೆ ಸರಿಯುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ವೇಳೆ ತಂಡದ ಆಟಗಾರರ ಮೇಲೆ ಅವರ ಹಿಡಿತ ಕೈತಪ್ಪುವ ಆತಂಕ ಇದೆ. ಹೀಗಾಗಿ, ಈ ವಿಶ್ವಕಪ್​ನಲ್ಲೇ ನಾಯಕ ಸ್ಥಾನದ ಬದಲಾವಣೆ ಆಗುವುದು ಸೂಕ್ತ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ. ಈಗ ಸುನೀಲ್ ಗವಾಸ್ಕರ್ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
  Published by:Vijayasarthy SN
  First published: