Sunil Gavaskar - ಟೀಮ್ ಇಂಡಿಯಾ ಒಳಗೆ ಬಿರುಕು? ಗವಾಸ್ಕರ್ ಆಕ್ರೋಶದ ಮಾತುಗಳು ಏನು ಹೇಳುತ್ತವೆ?

ಆರ್ ಅಶ್ವಿನ್ ನೇರವಾಗಿ ಮಾತನಾಡುತ್ತಾರೆಂದು ತಂಡದಲ್ಲಿ ಕಡೆಗಣಿಸಲ್ಪಟ್ಟಿದ್ಧಾರೆ. ಟಿ ನಟರಾಜನ್ ಆಯ್ಕೆಯಾಗಿದ್ದ ಸರಣಿ ಮುಗಿದರೂ ಅವರನ್ನ ವಾಪಸ್ ಕಳುಹಿಸದೆ ನೆಟ್ ಬೌಲರ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಸುನೀಲ್ ಗವಾಸ್ಕರ್

ಸುನೀಲ್ ಗವಾಸ್ಕರ್

 • Share this:
  ನವದೆಹಲಿ(ಡಿ. 31): ನೇರ ಮಾತುಗಳಿಗೆ ಹೆಸರಾಗಿರುವ ಸುನೀಲ್ ಗವಾಸ್ಕರ್ ಇದೀಗ ಭಾರತ ಕ್ರಿಕೆಟ್ ತಂಡದೊಳಗಿನ ವಾತಾವರಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಬಗ್ಗೆ ಪರೋಕ್ಷ ದಾಳಿ ವ್ಯಕ್ತಪಡಿಸಿದ ಅವರು ಆರ್. ಅಶ್ವಿನ್, ಟಿ ನಟರಾಜನ್ ಅವರಂಥ ಆಟಗಾರರನ್ನ ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶಪಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಬೇರೆ ಬೇರೆ ಆಟಗಾರರಿಗೆ ಬೇರೆ ಬೇರೆ ನಿಯಮಗಳಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

  ಆರ್ ಅಶ್ವಿನ್ ತಮ್ಮ ನೇರ ನುಡಿಗಳಿಂದಾಗಿ ತಂಡದಲ್ಲಿ ಸ್ಥಾನವಂಚಿತರಾಗುತ್ತಿರುವುದು ದುರದೃಷ್ಟಕರ. ಟಿ ನಟರಾಜನ್​ಗೆ ತನ್ನ ನವಸಂಜಾತ ಮಗಳನ್ನೂ ನೋಡಲು ಅವಕಾಶ ಕೊಟ್ಟಿಲ್ಲ. ಆದರೆ, ತಂಡದ ನಾಯಕ (Virat Kohli) ತನ್ನ ಮಗುವಿನ ಜನನ ಕ್ಷಣ ಕಣ್ತುಂಬಿಸಿಕೊಳ್ಳಲು ಅನುಮತಿ ಪಡೆದು ಸರಣಿ ಮಧ್ಯದಲ್ಲೇ ಹೊರಟುಹೋದರು. ಒಬ್ಬರಿಗೆ ಒಂದು ನಿಯಮ ಇಲ್ಲಿದೆ ಎಂದು ಮಾಜಿ ಟೀಮ್ ಇಂಡಿಯಾ ನಾಯಕರೂ ಆದ ಸುನೀಲ್ ಗವಾಸ್ಕರ್ ಟೀಕಿಸಿದ್ದಾರೆ.

  “ಆರ್ ಅಶ್ವಿನ್ ಅವರ ಬೌಲಿಂಗ್ ಸಾಮರ್ಥ್ಯ ಬಗ್ಗೆ ಕೆಲವರಿಗಷ್ಟೇ ಅನುಮಾನ ಇರಬಹುದು. ಆದರೆ, ಅಶ್ವಿನ್ ಅವರ ನೇರ ಮಾತುಗಳೇ ಅವರಿಗೆ ಮುಳುವಾಗಿದೆ. ತಂಡದ ಮೀಟಿಂಗ್​ಗಳಲ್ಲಿ ಇತರ ಆಟಗಾರರಂತೆ ಗೋಣು ಆಡಿಸದೆ ಅಶ್ವಿನ್ ನೇರವಾಗಿ ಮಾತನಾಡುತ್ತಾರೆ” ಎಂದು ಸ್ಪೋರ್ಟ್ಸ್ ಸ್ಟಾರ್  ನಿಯತಕಾಲಿಕೆಗೆ ಬರೆದ ಲೇಖನದಲ್ಲಿ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: India vs Australia: ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ನಾಯಕತ್ವ: ಟೀಂ ಇಂಡಿಯಾ ಆಟಗಾರರ ಅಭ್ಯಾಸ ಹೀಗಿದೆ ನೋಡಿ

  “ಟೆಸ್ಟ್ ಕ್ರಿಕೆಟ್​ನಲ್ಲಿ 350 ವಿಕೆಟ್ ಮತ್ತು ನಾಲ್ಕು ಶತಕ ಭಾರಿಸಿದ ಒಬ್ಬ ಬೌಲರ್​ನನ್ನು ಯಾವುದೇ ತಂಡವಾದರೂ ಬರಮಾಡಿಕೊಳ್ಳುತ್ತದೆ. ಆದರೂ, ಒಂದು ಪಂದ್ಯದಲ್ಲಿ ಹೆಚ್ಚು ವಿಕೆಟ್ ಪಡೆಯಲಿಲ್ಲವೆಂದು ಕಾರಣವೊಡ್ಡಿ ಅಶ್ವಿನ್ ಅವರನ್ನ ಮುಂದಿನ ಪಂದ್ಯಕ್ಕೆ ಕೈಬಿಡುತ್ತಾರೆ. ಇದೇ ನಿಯಮ ಒಬ್ಬ ಸ್ಥಾಪಿತ ಬ್ಯಾಟುಗಾರನಿಗೆ ಅನ್ವಯ ಆಗುವುದಿಲ್ಲ. ಬ್ಯಾಟುಗಾರ ಒಂದು ಪಂದ್ಯದಲ್ಲ ವಿಫಲವಾದರೆ ಮತ್ತೊಂದು, ಮಗದೊಂದರಂತೆ ಸರಣಿಯಾಗಿ ಅವಕಾಶಗಳು ಸಿಗುತ್ತವೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

  ಟಿ ನಟರಾಜನ್ ಅವರನ್ನ ಅನಗತ್ಯವಾಗಿ ನೆಟ್ ಬೌಲರ್ ಆಗಿ ಮಾತ್ರ ಬಳಸಿಕೊಂಡಿದ್ದಕ್ಕೂ ಸುನೀಲ್ ಗವಾಸ್ಕರ್ ಹರಿಹಾಯ್ದಿದ್ದಾರೆ. “ತಂಡದ ನಿಯಮಗಳ ಬಗ್ಗೆ ಬೇಸರವಾದರೂ ಧ್ವನಿ ಎತ್ತಲು ಸಾಧ್ಯವಾಗದ ಮತ್ತೊಬ್ಬ ಆಟಗಾರ ಟಿ ನಟರಾಜನ್. ಟಿ20 ಕ್ರಿಕೆಟ್​ನಲ್ಲಿ ಪ್ರಶಂಸಾರ್ಹ ರೀತಿಯಲ್ಲಿ ಪದಾರ್ಪಣೆ ಮಾಡಿದ ಎಡಗೈ ಯಾರ್ಕರ್ ಸ್ಪೆಷಲಿಸ್ಟ್ ನಟರಾರನ್ ಐಪಿಎಲ್ ಪ್ಲೇ ಆಫ್ ವೇಳೆಯೇ ತಂದೆಯಾಗಿದ್ದರು. ಆದರೆ ಯುಎಇಯಿಂದ ನೇರವಾಗಿ ಅವರನ್ನ ಆಸ್ಟ್ರೇಲಿಯಾಗೆ ಕರೆದೊಯ್ಯಲಾಯಿತು. ಅಲ್ಲಿ ಅವರ ಅದ್ಭುತ ಪ್ರದರ್ಶನ ಕಂಡ ನಂತರ ಟೆಸ್ಟ್ ಸರಣಿಗೂ ಉಳಿಸಿಕೊಳ್ಳಲಾಯಿತು. ಆದರೆ, ಅವರು ನೆಟ್ ಬೌಲರ್ ಆಗಿ ತಂಡದಲ್ಲಿ ಉಳಿದುಕೊಂಡರು. ಹೇಗಿರಬೇಕು ಊಹಿಸಿ. ಮ್ಯಾಚ್ ವಿನ್ನರ್ ಆಗಿರುವ ಒಬ್ಬ ಬೌಲರ್​ನನ್ನು ನೆಟ್ ಬೌಲರ್ ಆಗಿ ಬಳಸಿಕೊಳ್ಳಲಾಯಿತು. ಸರಣಿ ಮುಗಿಯು ಜನವರಿ ಮೂರನೇ ವಾರದ ನಂತರವಷ್ಟೇ ಅವರು ಮನೆಗೆ ವಾಪಸ್ಸಾಗಿ ತನ್ನ ಮುದ್ದಿನ ಮಗಳನ್ನ ಮೊದಲ ಬಾರಿ ನೋಡುವ ಅವಕಾಶ ಪಡೆಯುತ್ತಾರೆ. ಅದೇ ತಂಡದ ನಾಯಕ ತನ್ನ ಮೊದಲ ಮಗುವನ್ನು ನೋಡಲು ಮೊದಲ ಟೆಸ್ಟ್ ತಂಡದ ನಂತರ ವಾಪಸ್ ಹೋಗುತ್ತಾರೆ. ಇದು ಭಾರತ ಕ್ರಿಕೆಟ್ ತಂಡದ ಪರಿಸ್ಥಿತಿ. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ನಿಯಮ. ನೀವು ನನ್ನ ಮಾತುಗಳನ್ನ ನಂಬದೇ ಹೋದರೆ ರವಿ ಅಶ್ವಿನ್ ಮತ್ತು ಟಿ ನಟರಾಜನ್ ಅವರನ್ನ ಕೇಳಿನೋಡಿ” ಎಂದು ತಮ್ಮ ಲೇಖನದಲ್ಲಿ ಸುನೀಲ್ ಗವಾಸ್ಕರ್ ಬರೆದಿದ್ದಾರೆ.

  ಗವಾಸ್ಕರ್ ಅವರ ಈ ಟೀಕೆಗಳಿಗೆ ವಿರಾಟ್ ಕೊಹ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಿಡಿದೆದ್ದಿದ್ಧಾರೆ.
  Published by:Vijayasarthy SN
  First published: