news18-kannada Updated:December 18, 2020, 6:16 PM IST
Steve Smith
ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕ ಘಟದತ್ತ ಮುಖ ಮಾಡಿದೆ. ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 244 ರನ್ಗೆ ಆಲೌಟ್ ಆಗಿ ನಿರಾಸೆ ಮೂಡಿಸಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡವನ್ನು 191 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಬೇಗನೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಇದುವೇ ಆಸ್ಟ್ರೇಲಿಯಾ ಪಾಲಿಗೆ ಮುಳುವಾಯಿತು.
ತಂಡದಲ್ಲಿ ಅನುಭವಿ ಬ್ಯಾಟ್ಸ್ಮನ್ಗಳ ಅನುಪಸ್ಥಿತಿಯಿದ್ದ ಕಾರಣ ಸ್ಮಿತ್ ಮೇಲೆ ಹೆಚ್ಚಿನ ಜವಾಬ್ದಾರಿಯಿತ್ತು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 28 ಎಸೆತಗಳ ಕಾಲ ಕ್ರೀಸ್ ಕಚ್ಚಿ ನಿಂತಿದ್ದರು. ಆದರೆ 29ನೇ ಎಸೆತದಲ್ಲಿ ಆರ್. ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ಸ್ಟೀವ್ ಸ್ಮಿತ್ ಗಳಿಸಿದ್ದು ಕೇವಲ 1 ರನ್ ಮಾತ್ರ. ಇದರೊಂದಿಗೆ ಸ್ಮಿತ್ರನ್ನು ಅತೀ ಕಡಿಮೆ ಮೊತ್ತಕ್ಕೆ ಔಟ್ ಮಾಡಿದ ಟೀಮ್ ಇಂಡಿಯಾ ಬೌಲರ್ ಎಂಬ ಹೆಗ್ಗಳಿಕೆ ಅಶ್ವಿನ್ ಪಾತ್ರರಾದರು.
ಇದುವರೆಗೆ ಭಾರತ ವಿರುದ್ಧ 21 ಇನಿಂಗ್ಸ್ ಆಡಿರುವ ಸ್ಮಿತ್ 5 ರನ್ಗಿಂತ ಕಡಿಮೆ ಮೊತ್ತಕ್ಕೆ ಔಟ್ ಆಗಿರಲಿಲ್ಲ. ಅದರಲ್ಲೂ 2013 ರಲ್ಲಿ ಮೊಹಾಲಿಯಲ್ಲಿ ನಡೆದ ಟೆಸ್ಟ್ನಲ್ಲಿ ಸ್ಮಿತ್ ಮೊದಲ ಬಾರಿಗೆ 5 ರನ್ಗೆ ಔಟ್ ಆಗಿದ್ದರು. ಇದೀಗ ಭಾರತದ ವಿರುದ್ದ 1 ರನ್ಗೆ ವಿಕೆಟ್ ಒಪ್ಪಿಸಿದರು. ಇದು ಕಳೆದ 50 ಇನಿಂಗ್ಸ್ಗಳಲ್ಲಿ ಸ್ಟೀವ್ ಸ್ಮಿತ್ ಬಾರಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ.
ಭಾರತದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ದಾಖಲೆ ಹೊಂದಿರುವ ಸ್ಮಿತ್ 10 ಪಂದ್ಯಗಳಲ್ಲಿ 1429 ರನ್ ದಾಖಲಿಸಿದ್ದಾರೆ. ಇದರಲ್ಲಿ 10 ಶತಕಗಳನ್ನು ಬಾರಿಸಿರುವುದು ವಿಶೇಷ. ಸದ್ಯ ಅಡಿಲೇಡ್ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಉಭಯ ತಂಡಗಳು ಬ್ಯಾಟಿಂಗ್ನಲ್ಲಿ ಮುಗ್ಗರಿಸಿದೆ. ಹೀಗಾಗಿ 2ನೇ ಇನಿಂಗ್ಸ್ನಲ್ಲಿ ರೋಚಕ ಹೋರಾಟ ಕಂಡು ಬರುವ ಸಾಧ್ಯತೆಯಿದೆ.
Published by:
zahir
First published:
December 18, 2020, 6:16 PM IST