India vs Australia: ಮತ್ತೊಮ್ಮೆ ಮೋಸದಾಟಕ್ಕೆ ಮುಂದಾದ ಸ್ಟೀವ್ ಸ್ಮಿತ್: ವಿಡಿಯೋ ವೈರಲ್..!

ಟೀಮ್ ಇಂಡಿಯಾವನ್ನು ಮೋಸದ ಮೂಲಕ ಸೋಲಿಸಲು ಆಸ್ಟ್ರೇಲಿಯನ್ನರು ಯತ್ನಿಸಿದ್ದಾರೆ ಎಂಬ ಕೂಗುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ಮತ್ತೊಮ್ಮೆ ಮೋಸದಾಟದ ಮೂಲಕ ಸ್ಟೀವ್ ಸ್ಮಿತ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

steve smith

steve smith

  • Share this:
    ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಪಂದ್ಯ ಗೆಲ್ಲಲು ಮತ್ತೊಮ್ಮೆ ಕೀಳುಮಟ್ಟಕ್ಕೆ ಇಳಿದಿರುವ ಘಟನೆ ಬೆಳಕಿಗೆ ಬಂದಿದೆ. ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ ಪಂದ್ಯದ ಅಂತಿಮ ದಿನ ಪ್ರಕರಣ ನಡೆದಿದೆ. ಅಂತಿಮ ದಿನ ಟೀಮ್​ ಇಂಡಿಯಾಗೆ ಗೆಲ್ಲಲು 309 ರನ್​ಗಳ ಅವಶ್ಯಕತೆಯಿತ್ತು. ಅತ್ತ ಭಾರತದ ಪರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. 3 ಸಿಕ್ಸರ್, 13 ಬೌಂಡರಿಗಳೊಂದಿಗೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ಒಂದು ಹಂತದಲ್ಲಿ ಆಸ್ಟ್ರೇಲಿಯನ್ನರಿಗೆ ನಡುಕ ಹುಟ್ಟಿಸಿದ್ದರು.

    ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತವನ್ನು ಭಾರತ ಎಲ್ಲಿ ಬೆನ್ನತ್ತಿ ಬಿಡುತ್ತದೋ ಅಂಬ ಅಂಜಿಕೆ ಆಸೀಸ್ ಆಟಗಾರರಲ್ಲಿ ಶುರುವಾಗಿತ್ತು. ಇದೇ ವೇಳೆ ಡ್ರಿಂಕ್ಸ್ ಬ್ರೇಕ್ ನೀಡಲಾಗಿತ್ತು. ಈ ಸಂದರ್ಭವನ್ನು ಬಳಸಿಕೊಂಡ ಸ್ಟೀವ್ ಸ್ಮಿತ್ ಕ್ರೀಸ್​ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ರಿಷಭ್ ಪಂತ್ ತಮ್ಮ ಬ್ಯಾಟಿಂಗ್ ಲಯವನ್ನು ಕಾಪಾಡಿಕೊಳ್ಳಲು ಹಾಕಿದ ಗಾರ್ಡ್​ ಲೈನ್ (ಸ್ಟ್ರೈಕಿಂಗ್ ಲೈನ್) ಅನ್ನು ಅಳಿಸಿ ಬೇರೆ ಲೈನ್ ಎಳೆಯುವ ಪ್ರಯತ್ನವನ್ನು ಸ್ಮಿತ್ ಮಾಡಿದ್ದರು.

    ಪಂತ್ ಡ್ರಿಂಕ್ಸ್ ಬ್ರೇಕ್ ಬಳಿಕ ಬ್ಯಾಟಿಂಗ್ ಮಾಡುವಾಗ ತಮ್ಮ ಅಳೆಯ ಲೈನ್ ದಿಕ್ಕು ತಪ್ಪಿಸಿ, ಬೇರೆ ಲೈನ್​ನಲ್ಲಿಟ್ಟು ಬ್ಯಾಟ್ ಬೀಸಲಿ ಎಂಬುದು ಸ್ಮಿತ್ ಅವರ ಉದ್ದೇಶವಾಗಿತ್ತು. ಆದರೆ ಸ್ಮಿತ್ ಸ್ಟ್ರೈಕಿಂಗ್ ಲೈನ್​ಗಳನ್ನು ಅಳಿಸಿಹಾಕುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.

    ಟೀಮ್ ಇಂಡಿಯಾವನ್ನು ಮೋಸದ ಮೂಲಕ ಸೋಲಿಸಲು ಆಸ್ಟ್ರೇಲಿಯನ್ನರು ಯತ್ನಿಸಿದ್ದಾರೆ ಎಂಬ ಕೂಗುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ ಮತ್ತೊಮ್ಮೆ ಮೋಸದಾಟದ ಮೂಲಕ ಸ್ಟೀವ್ ಸ್ಮಿತ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏಕೆಂದರೆ 2018 ರಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ಸ್ಮಿತ್ ಅವರು ಪಂದ್ಯ ಗೆಲ್ಲುವ ಉದ್ದೇಶದಿಂದಲೇ ಬಾಲ್ ಟ್ರಾಪಿಂಗ್ ಮಾಡಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ 1 ವರ್ಷ ನಿಷೇಧಕ್ಕೊಳಗಾಗಿದ್ದರು. ಇದಾಗಿ ಮತ್ತೆ ತಂಡಕ್ಕೆ ಮರಳಿದ ಸ್ಟೀವ್ ಸ್ಮಿತ್ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಐಸಿಸಿ ಮತ್ತೊಮ್ಮೆ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.



    ಇದಾಗ್ಯೂ ಬಾರ್ಡರ್ – ಗವಾಸ್ಕರ್ ಸರಣಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಆಸ್ಟ್ರೇಲಿಯಾ ನೀಡಿದ್ದ 407 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ಹನುಮಾ ವಿಹಾರಿ ಹಾಗೂ ಆರ್. ಅಶ್ವಿನ್ ಕ್ರಿಸ್ ಕಚ್ಚಿ ನಿಂತರೆ, ರಿಷಭ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಆಟದ ಪರಿಣಾಮ ರಹಾನೆ ಪಡೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಟೆಸ್ಟ್​ ಆಸೀಸ್ ಜಯಿಸಿದರೆ, ಎರಡನೇ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಹೀಗಾಗಿ ಸರಣಿ ಸಮಬಲದಿಂದಲೆ ಕೂಡಿದೆ. ಅಂತಿಮ ನಾಲ್ಕನೇ ಟೆಸ್ಟ್​ ಪಂದ್ಯ ಇನ್ನಷ್ಟು ಕುತೂಹಲ ಕೆರಳಿಸಿದೆ.
    Published by:zahir
    First published: