ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾನಾ ಅವತಾರದಲ್ಲಿ ಕಾಣಿಸಿಕೊಳ್ಳುವುದು ಇದೇನು ಮೊದಲೇನಲ್ಲ. ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಮಯದಲ್ಲಿ ಲಾಂಗ್ ಹೇರ್ ಯಂಗ್ ಬಾಯ್ ಆಗಿದ್ದ ಧೋನಿ, ಆ ಬಳಿಕ ಶಾರ್ಟ್ ಹೇರ್ ಕಟ್ ಮಾಡಿ ಟ್ರೆಂಡ್ ಸೃಷ್ಟಿಸಿದ್ದರು. ಇದಾದ ಬಳಿಕ ಏಕದಿನ ವಿಶ್ವಕಪ್ ಗೆದ್ದ ಬೆನ್ನಲ್ಲೇ ತಲೆ ಬೋಳಿಸಿಕೊಂಡರು ಹೊಸ ಲುಕ್ ನೀಡಿದ್ದರು.
ಹಾಗೆಯೇ ಪ್ರತಿಬಾರಿ ಐಪಿಎಲ್ ಸಮಯದಲ್ಲೂ ವಿಭಿನ್ನ ಕೇಶ ವಿನ್ಯಾಸದೊಂದಿಗೆ ಮಾಹೀ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಗಡ್ಡದ ಲುಕ್ನಲ್ಲೂ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಇದಾಗ್ಯೂ ಈ ಬಾರಿ ಧೋನಿ ವಿಭಿನ್ನ ಗೆಟಪ್ವೊಂದರಲ್ಲಿ ಕಾಣಿಸಿಕೊಂಡಿದ್ದರು. ತಲೆ ಬೋಳಿಸಿಕೊಂಡು ಬೌದ್ಧ ಬಿಕ್ಷುವಿನ ಅವತಾರದಲ್ಲಿದ್ದ ಧೋನಿಯ ಫೋಟೋ ಕೆಲ ದಿನಗಳ ಹಿಂದೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಧೋನಿ ತಮ್ಮ ಕೊನೆಯ ಐಪಿಎಲ್ಗಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೀಗ ಧೋನಿಯ ಹೊಸ ಗೆಟಪ್ ಹಿಂದಿನ ಅಸಲಿಯತ್ತೇನು ಎಂಬುದು ಬಹಿರಂಗವಾಗಿದೆ. ಹೌದು, ಧೋನಿ ಬೌದ್ಧ ಭಿಕ್ಷುವಿನಂತೆ ಬೋಳು ತಲೆಯಲ್ಲಿ ಕಾಣಿಸಿಕೊಂಡಿರುವುದು ಜಾಹೀರಾತಿಗಾಗಿ. ಅದು ಕೂಡ ಐಪಿಎಲ್ ಜಾಹೀರಾತಿಗಾಗಿ ಎಂಬುದು ವಿಶೇಷ.
ಐಪಿಎಲ್ 2021ರ ಹೊಸ ಜಾಹೀರಾತುಗಳು ಬಿಡುಗಡೆಯಾಗಿದೆ. ಒಂದು ಜಾಹೀರಾತಿನಲ್ಲಿ ಮಾಹೀ ಮಾಸ್ಟರ್ ಅವತಾರದಲ್ಲಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಬೌದ್ಧ ಭಿಕ್ಷುವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮಾಸ್ಟರ್ ಜಾಹೀರಾತಿನಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ ಹೇಳಿದರೆ, ಬೌದ್ಧ ಬಿಕ್ಷುವಿನ ಅವತಾರದಲ್ಲಿ ರೋಹಿತ್ ಶರ್ಮಾ ಬಗ್ಗೆ ಕ್ಲಾಸ್ ತೆಗೆಯುತ್ತಾರೆ.
ಹಾಗೆಯೇ ಈ ಜಾಹಿರಾತಿನಲ್ಲಿ ಧೋನಿ, ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮ ಅವರದ್ದು ಅತಿಯಾಸೆ, 4 ಬಾರಿ ಪ್ರಶಸ್ತಿ ಗೆದ್ದಿದ್ದರೂ ಇನ್ನೂ ಬೇಕು ಅಂತಿದ್ದಾರೆ. ಇದು ಕೂಡ ಒಳ್ಳೆಯದು ಎನ್ನುತ್ತಾರೆ. ಇನ್ನೊಂದು ವಿಡಿಯೋದಲ್ಲಿ ಆಕ್ರಮಣಕಾರಿ ಆಟ ಒಳ್ಳೆಯದು ಎನ್ನುವ ಮೂಲಕ ವಿರಾಟ್ ಕೊಹ್ಲಿಯನ್ನು ಪ್ರಸ್ತಾಪಿಸುತ್ತಾರೆ. ಒಟ್ಟಿನಲ್ಲಿ ಧೋನಿಯ ಹೊಸ ಅವತಾರದೊಂದಿಗೆ ಹೊಸ ಜಾಹೀರಾತು ಕೂಡ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ