T20 World Cup: ಲಂಕಾಗೆ ಗೆಲುವು; ವಿಂಡೀಸ್ ಔಟ್; ಸೆಮಿಸ್ ರೇಸ್​ನಲ್ಲಿ ಉಳಿದಿರೋದು ಮೂರೇ ತಂಡ

Sri Lanka beat West Indies; Australia thrashes Bangladesh- ಟಿ20 ವಿಶ್ವಕಪ್​ನ ಮೊದಲ ಗುಂಪಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ ಗೆಲುವು ಪಡೆದಿದೆ. ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ ಭಾರಿಸಿದೆ.

ಶ್ರೀಲಂಕಾ ಆಟಗಾರರು

ಶ್ರೀಲಂಕಾ ಆಟಗಾರರು

 • Share this:
  ಅಬುಧಾಬಿ/ದುಬೈ, ನ. 4: ಹಾಲಿ ಚಾಂಪಿಯನ್ಸ್ ವೆಸ್ಟ್ ಇಂಡೀಸ್ (Defending Champions West Indies) ತಂಡ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಶ್ರೀಲಂಕಾ ವಿರುರದ್ಧ ಸೋಲನುಭವಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಸೆಮಿಫೈನಲ್ ಪ್ರವೇಶಕ್ಕೆ ಇದ್ದ ಒಂದು ಸಣ್ಣ ಕಿಂಡಿಯೂ ಮುಚ್ಚಿಹೋಗಿದೆ. ಇಂದು ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಕೆರಿಬಿಯನ್ನರನ್ನ 20 ರನ್​ಗಳಿಂದ ಸೋಲಿಸಿತು. ಶ್ರೀಲಂಕಾದ 189 ರನ್ ಮೊತ್ತಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್ 169 ರನ್​ಗೆ ಸೀಮಿತಗೊಂಡಿತು. ಆ ಮೊದಲೇ ವಿಶ್ವಕಪ್​ನಿಂದ ಔಟ್ ಆಗಿದ್ದ ಶ್ರೀಲಂಕಾ ತನ್ನ ಜೊತೆಗೆ ವೆಸ್ಟ್ ಇಂಡೀಸ್ ತಂಡವನ್ನೂ ಹೊರನೂಕಿದೆ. ಇವತ್ತಿನ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್​ಗಳಿಂದ ಬಗ್ಗುಬಡಿದ ಆಸ್ಟ್ರೇಲಿಯಾ ತನ್ನ ರನ್ ರೇಟ್ ಅನ್ನು ಉತ್ತಮಪಡಿಸಿಕೊಂಡಿದೆ.

  ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾಗೆ ಇದು ಮಾನ ಉಳಿಸಿಕೊಳ್ಳುವ ಹೋರಾಟವಾಗಿತ್ತು. ತಂಡದ ಬ್ಯಾಟುಗಾರರೂ ಅದಕ್ಕೆ ಸಿದ್ಧವಾಗಿ ಬಂದಿದ್ದಂತಿತ್ತು. ಪಥುಮ್ ನಿಸಾಂಕ, ಕುಸಾಲ್ ಪೆರೇರಾ, ಚರಿತ್ ಅಸಲಂಕಾ, ದಾಸುನ್ ಶಾನಕ ಅವರೆಲ್ಲರೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಿಸಾಂಕ ಮತ್ತು ಅಸಲಂಕ ಇಬ್ಬರೂ ಅರ್ಧಶತಕ ಭಾರಿಸಿದರು. ಮೂರು ಉತ್ತಮ ಜೊತೆಯಾಟಗಳು ಬಂದವು. ಪರಿಣಾಮವಾಗಿ, 170 ರನ್ ಆಸುಪಾಸಿನ ಸ್ಕೋರ್​ನ ನಿರೀಕ್ಷೆಯಲ್ಲಿದ್ದ ಶ್ರೀಲಂಕಾ ಬರೋಬ್ಬರಿ 189 ರನ್ ಭಾರಿಸಿದರು. ಆಗಲೇ ಲಂಕಾ ಬಹುತೇಕ ಗೆಲುವು ಸಾಧಿಸಿತ್ತು.

  ಲಂಕಾ ಗೆಲ್ಲಲು ಒಡ್ಡಿದ 190 ರನ್ ಗುರಿಯನ್ನ ವೆಸ್ಟ್ ಇಂಡೀಸ್ ಮುಟ್ಟುವ ಸಾಧ್ಯತೆ ಕಡಿಮೆಯೇ ಇತ್ತು. ಇಡೀ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಕಂಡಿದ್ದ ಬ್ಯಾಟಿಂಗ್ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ನಿಕೋಲಾಸ್ ಪೂರನ್ ಮತ್ತು ಶಿಮ್ರಾನ್ ಹೆಟ್ಮಯರ್ ಹೊರತುಪಡಿಸಿ ಉಳಿದವರು ಹೇಳಹೆಸರಿಲ್ಲದಂತೆ ಔಟಾಗಿ ಹೋದರು. ಹೆಟ್ಮಯರ್ ಕೊನೆಕೊನೆಯಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದರು. ಅಷ್ಟರೊಳಗೆ ವಿಂಡೀಸ್​ಗೆ ಕಾಲ ಮಿಂಚಿಹೋಗಿತ್ತು. ಹೆಟ್ಮಯರ್ 54 ಬಾಲ್​ನಲ್ಲಿ ಅಜೇಯ 81 ರನ್ ಗಳಿಸಿದರು.

  ಬಾಂಗ್ಲಾಗೆ ದೊಡ್ಡ ಸೋಲುಣಿಸಿದ ಆಸ್ಟ್ರೇಲಿಯಾ; ಐದು ವಿಕೆಟ್ ಕಿತ್ತ ಜಂಪಾ:

  ದುಬೈನಲ್ಲಿ ನಡೆದ ಇವತ್ತಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ನಿರಾಯಾಸ ಗೆಲುವು ಪಡೆಯಿತು. 82 ಎಸೆತ ಬಾಕಿ ಇರುವಂತೆ ಗೆಲುವು ಪಡೆದು ತನ್ನ ನೆಟ್ ರನ್ ರೇಟ್ ಅನ್ನು ಗಮನಾರ್ಹ ರೀತಿಯಲ್ಲಿ ಉತ್ತಮಪಡಿಸಿಕೊಂಡಿತು.

  ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಕೇವಲ 73 ರನ್​ಗೆ ಆಲೌಟ್ ಆಯಿತು. ಸ್ಪಿನ್ನರ್ ಅಡಂ ಜಂಪಾ ಬೌಲಿಂಗ್​ನಲ್ಲಿ ಬಾಂಗ್ಲಾ ಹುಲಿಗಳು ತರಗೆಲೆಗಳಂತೆ ಉದುರಿಹೋದರು. ಮಿಚೆಲ್ ಸ್ಟಾರ್ಕ್ ಮತ್ತು ಜೋಷ್ ಹೇಜಲ್​ವುಡ್ ತಲಾ ಎರಡೆರಡು ವಿಕೆಟ್ ಪಡೆದರು.

  ಇದನ್ನೂ ಓದಿ: Rishabh Single Hand Six- ಒಂದೇ ಕೈಯಲ್ಲಿ ಸಿಕ್ಸರ್; ರಿಷಭ್ ಪಂತ್ ಆಟಕ್ಕೆ ಸಖತ್ ಮೀಮ್ಸ್

  ಬಾಂಗ್ಲಾದೇಶದ ಈ ಅಲ್ಪಮೊತ್ತವನ್ನು ಆಸ್ಟ್ರೇಲಿಯಾ ಕೇವಲ 6.2 ಓವರ್​ನಲ್ಲಿ ಚೇಸ್ ಮಾಡಿ ಗೆದ್ದಿತು. ಆರೋನ್ ಫಿಂಚ್ 20 ಎಸೆತದಲ್ಲಿ 40 ರನ್ ಚಚ್ಚಿದರು. ಬಾಂಗ್ಲಾದೇಶ ಸತತ ಐದು ಸೋಲು ಕಂಡು ನಿರಾಸೆಯೊಂದಿಗೆ ತವರಿಗೆ ಮರಳುವಂತಾಗಿದೆ.

  ಇಂಗ್ಲೆಂಡ್, ಸೌಥ್ ಆಫ್ರಿಕಾ, ಆಸ್ಟ್ರೇಲಿಯಾ ಮಧ್ಯೆ ಸೆಮಿಫೈನಲ್ ರೇಸ್: 

  ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಈಗ ಮೊದಲ ಗುಂಪಿನ ಸ್ಥಿತಿ ಕುತೂಹಲಕಾರಿ ಆಗಿದೆ. ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಗಳು ರೇಸ್​ನಿಂದ ಹೊರಬಿದ್ದಿವೆ. ಈಗ ಉಳಿದಿರುವುದು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಮಾತ್ರ.

  ಇಂಗ್ಲೆಂಡ್ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅದರ ನೆಟ್ ರನ್ ರೇಟ್ 3.183 ಇದೆ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಲಾ 6 ಅಂಕಗಳನ್ನ ಹೊಂದಿವೆ. ಆಸ್ಟ್ರೇಲಿಯಾ ತನ್ನ ಮುಂದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನ ಎದಿರುಗೊಳ್ಳಲಿದೆ. ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ಮುಖಾಮುಖಿಯಾಗಲಿವೆ.

  ಇದನ್ನೂ ಓದಿ: T20 World Cup- ಭಾರತ ಮುಂದಿನ ಪಂದ್ಯಗಳನ್ನ ಎಷ್ಟು ಅಂತರದಿಂದ ಗೆಲ್ಲಬೇಕು? ಇಲ್ಲಿದೆ ಲೆಕ್ಕಾಚಾರ

  ಸೌತ್ ಆಫ್ರಿಕಾ ಸೆಮಿಫೈನಲ್ ತಲುಪಬೇಕಾದರೆ ಎರಡು ದಾರಿ ಇದೆ. ಒಂದು ಅದು ಇಂಗ್ಲೆಂಡ್ ತಂಡವನ್ನು ಭಾರೀ ಅಂತರದಿಂದ ಸೋಲಿಸಿದರೆ ಯಾರ ಸಹಾಯವೂ ಇಲ್ಲದೇ ಸ್ವಂತವಾಗಿ ಸೆಮಿಫೈನಲ್ ತಲುಪಬಹುದು. ನವೆಂಬರ್ 6ರಂದು ಆ ಪಂದ್ಯ ನಡೆಯಲಿದೆ. ಅದೇ ದಿನ ಮೊದಲ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನದ್ದಾಗಿದೆ.

  ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ದೊಡ್ಡ ಅಂತರದಿಂದ ಗೆಲುವು ಸಾಧಿಸಿದರೆ ಸೆಮಿಫೈನಲ್ ಪ್ರವೇಶ ಖಾತ್ರಿ ಆಗುತ್ತದೆ. ಒಂದು ವೇಳೆ ಸೋತರೆ, ಇಂಗ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ಸೋಲುವುದಕ್ಕಾಗಿ ಕಾಯಬೇಕಾಗುತ್ತದೆ.
  Published by:Vijayasarthy SN
  First published: