ಕೆರಿಬಿಯನ್ನರ ನಾಡಲ್ಲಿ ಮೆರೆದ ಭಾರತೀಯ ವನಿತೆಯರು; 5-0 ಅಂತರದಿಂದ ಟಿ-20 ಸರಣಿ ವೈಟ್​ವಾಶ್

61 ರನ್​ಗಳ ಭರ್ಜರಿ ಜಯದೊಂದಿಗೆ ಭಾರತದ ಮಹಿಳೆಯರು ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಐದನ್ನೂ ಗೆದ್ದು ಕ್ಲೀನ್​ಸ್ವೀಪ್ ಮಾಡಿಕೊಂಡಿದೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೇದ ಕೃಷ್ಣಮೂರ್ತಿ ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

Vinay Bhat | news18-kannada
Updated:November 21, 2019, 2:04 PM IST
ಕೆರಿಬಿಯನ್ನರ ನಾಡಲ್ಲಿ ಮೆರೆದ ಭಾರತೀಯ ವನಿತೆಯರು; 5-0 ಅಂತರದಿಂದ ಟಿ-20 ಸರಣಿ ವೈಟ್​ವಾಶ್
ಭಾರತ ಮಹಿಳಾ ಕ್ರಿಕೆಟ್ ತಂಡ
  • Share this:
ಬೆಂಗಳೂರು (ನ. 21): ಕೆರಿಬಿಯನ್ ಪ್ರವಾಸ ಬೆಳೆಸಿದ ಭಾರತೀಯ ವನಿತೆಯರು ಭರ್ಜರಿ ಆಟ ಪ್ರದರ್ಶಿಸಿ ವೆಸ್ಟ್​ ಇಂಡೀಸ್​ಗೆ ಶಾಕ್ ನೀಡಿದ್ದಾರೆ. ಏಕದಿನ ಸರಣಿಯನ್ನು 2-1 ರಿಂದ ವಶ ಪಡಿಸಿಕೊಂಡ ಭಾರತ, ಸದ್ಯ ಟಿ-20 ಸರಣಿಯನ್ನೂ 5-0 ಯಿಂದ ವೈಟ್​​ವಾಶ್ ಮಾಡಿ ಮೆರೆದಿದೆ.

ನಿನ್ನೆ ನಡೆದ ಅಂತಿಮ ಐದನೇ ಟಿ-20 ಪಂದ್ಯದಲ್ಲಿ ಭಾರತದ ಮಹಿಳೆಯರು 61 ರನ್​ಗಳ ಭರ್ಜರಿ ಜಯ ಸಾಧಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲೇ ಶಫಾಲಿ ವರ್ಮಾ(9) ಹಾಗೂ ನಾಯಕಿ ಸ್ಮೃತಿ ಮಂದಾನ(7) ವಿಕೆಟ್ ಕಳೆದುಕೊಂಡಿತು.

2020 ಐಪಿಎಲ್​ಗೆ ಒಂದು ಹೊಸ ಫ್ರಾಂಚೈಸಿ ಸೇರ್ಪಡೆ; ಈ ಬಾರಿ ಪ್ರಶಸ್ತಿಗಾಗಿ 9 ತಂಡಗಳ ಕಾದಾಟ?

ಆದರೆ, ನಂತರ ಜೊತೆಯಾದ ರೋಡ್ರಿಗಸ್ ಹಾಗೂ ವೇದ ಕೃಷ್ಣಮೂರ್ತಿ ಅಮೋಘ ಆಟ ಪ್ರದರ್ಶಿಸಿದರು. ವಿಂಡೀಸ್ ಬೌಲರ್​ಗಳ ಬೆವರಿಳಿಸಿದ ಇವರಿಬ್ಬರು ಶತಕದ ಜೊತೆಯಾಟ ಆಡಿ ತಂಡದ ಮೊತ್ತವನ್ನು ಏರಿಸಿದರು.

ಭಾರತ ಇನ್ನಿಂಗ್ಸ್​ನ ಕೊನೆಯ ಓವರ್​ 4ನೇ ಎಸೆತದಲ್ಲಿ 56 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ರೋಡ್ರಿಗಸ್ ಔಟ್ ಆದರು. ವೇದ ಕೃಷ್ಣಮೂರ್ತಿ 48 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಅಜೇಯ 57 ರನ್ ಬಾರಿಸಿದರು. ಅಂತಿಮವಾಗಿ ಭಾರತ 20 ಓವರ್​ಗೆ 3 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿತು.

 IND vs BAN: ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಡೇ ನೈಟ್ ಟೆಸ್ಟ್​; ಪಿಂಕ್ ಬಾಲ್​ ಬಗ್ಗೆ ನಿಮಗೆಷ್ಟು ಗೊತ್ತು?

135 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ವೆಸ್ಟ್​ ಇಂಡೀಸ್ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ವಿಂಡೀಸ್ ಮಹಿಳೆಯರ ಪರ ಕೈಶ್ನಾ ಕ್ನೈಟ್ 22 ಹಾಗೂ ಶೆಮೈನ್ ಕ್ಯಾಂಪ್​ಬೆಲ್ಲೆ 19 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ ಸ್ಕೋರ್ ಎರಡಂಕಿ ದಾಟಲಿಲ್ಲ.

ಪರಿಣಾಮ ವೆಸ್ಟ್​ ಇಂಡೀಸ್ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 73 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಭಾರತ ಪರ ಅನುಜಾ ಪಾಟಿಲ್ 2 ವಿಕೆಟ್ ಕಿತ್ತರೆ, ರಾಧಾ ಯಾದವ್, ಪೂನಮ್ ಯಾದವ್, ಪೂಜಾ ಹಾಗೂ ಹರ್ಲೀನ್ ತಲಾ 1 ವಿಕೆಟ್ ಪಡೆದರು.

61 ರನ್​ಗಳ ಭರ್ಜರಿ ಜಯದೊಂದಿಗೆ ಭಾರತದ ಮಹಿಳೆಯರು ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಐದನ್ನೂ ಗೆದ್ದು ಕ್ಲೀನ್​ಸ್ವೀಪ್ ಮಾಡಿಕೊಂಡಿದೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವೇದ ಕೃಷ್ಣಮೂರ್ತಿ ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

First published: November 21, 2019, 2:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading