IND vs SA 2ನೇ ಟೆಸ್ಟ್: ಶಾರ್ದೂಲ್​ಗೆ 7 ವಿಕೆಟ್; ಸೌತ್ ಆಫ್ರಿಕಾಗೆ ಅಲ್ಪ ಮುನ್ನಡೆ; ಕುತೂಹಲ ಹಂತದಲ್ಲಿ ಪಂದ್ಯ

India vs South Africa 2nd Test Match: ಭಾರತದ 202 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಸೌತ್ ಆಫ್ರಿಕಾ 229 ರನ್ ಗಳಿಸಿ 27 ರನ್ ಮುನ್ನಡೆ ಪಡೆಯಿತು. ಇದಕ್ಕೆ ಉತ್ತರವಾಗಿ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿ ಒಟ್ಟಾರೆ 58 ರನ್ ಮುನ್ನಡೆಯಲ್ಲಿದೆ.

ಶಾರ್ದೂಲ್ ಟಾಕೂರ್

ಶಾರ್ದೂಲ್ ಟಾಕೂರ್

  • Share this:
    ಜೋಹಾನ್ಸ್​ಬರ್ಗ್, ಜ. 4: ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಇಲ್ಲಿ ನಿನ್ನೆಯಿಂದ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಬಹಳ ಕುತೂಹಲಕಾರಿ ಹಂತದಲ್ಲಿದೆ. ಭಾರತದ 202 ರನ್​ಗಳ ಮೊದಲ ಇನ್ನಿಂಗ್ಸ್​ಗೆ ಪ್ರತಿಯಾಗಿ ಸೌತ್ ಆಫ್ರಿಕಾದ ಮೊದಲ ಇನ್ನಿಂಗ್ಸ್ 229 ರನ್​ಗೆ ಅಂತ್ಯಗೊಂಡಿತು. ಇದರೊಂದಿಗೆ ಹರಿಣಗಳ ಪಡೆ 27 ರನ್​ಗಳ ಅಲ್ಪ ಮುನ್ನಡೆ ಪಡೆಯಿತು. ನಂತರ ಎರಡನೇ ಇನ್ನಿಂಗ್ಸ್ ನಡೆಸಿದ ಟೀಮ್ ಇಂಡಿಯಾ ಎರಡನೇ ದಿನಾಂತ್ಯಕ್ಕೆ 2 ನಷ್ಟಕ್ಕೆ 85 ರನ್ ಗಳಿಸಿದೆ. ಇನ್ನೂ 8 ವಿಕೆಟ್ ಕೈಲಿದ್ದು ಒಟ್ಟಾರೆ 58 ರನ್​ಗಳ ಮುನ್ನಡೆ ಹೊಂದಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಇದ್ದು ನಾಳೆ ಅಥವಾ ನಾಳಿದ್ದರಲ್ಲಿ ಫಲಿತಾಂಶ ಬರುವ ಸಂಭವ ಇದೆ.

    ಇವತ್ತಿನ ಆಟದಲ್ಲಿ ಗಮನ ಸೆಳೆಯುವಂಥ ಆಟ ಆಡಿದ್ದ ಕೀಗನ್ ಪೀಟರ್ಸನ್, ಟೆಂಬ ಬವುಮ ಮತ್ತು ಶಾರ್ದೂಲ್ ಠಾಕೂರ್. ನಿನ್ನೆ ಮೊದಲ ದಿನಾಂತ್ಯಕ್ಕೆ ಭಾರತದ 202 ರನ್​ಗಳಿಗೆ ಪ್ರತಿಯಾಗಿ 1 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದ್ದ ಸೌತ್ ಆಫ್ರಿಕಾ ಇಂದು ಆಟ ಮುಂದುವರಿಸಿತು. ಡೀನ್ ಎಲ್ಗಾರ್ ಮತ್ತು ಕೀಗ್ ಪೀಟರ್ಸನ್ ಮಧ್ಯೆ 2ನೇ ವಿಕೆಟ್​ಗೆ 74 ರನ್ ಜೊತೆಯಾಟ ಆಡಿ ಸೌತ್ ಆಫ್ರಿಕಾಗೆ ದೊಡ್ಡ ಮೊತ್ತದ ಸ್ಕೋರು ಸಿಗುವ ಕುರುಹು ನೀಡಿದರು. ಎಲ್ಗಾರ್ ಔಟಾದ ಬಳಿಕ ಸೌತ್ ಆಫ್ರಿಕಾಗೆ ಉತ್ತಮ ಜೊತೆಯಾಟ ಬಂದದ್ದು 6ನೇ ವಿಕೆಟ್​ಗೆ ಟೆಂಬ ಬವುಮ ಮತ್ತು ಕೈಲೆ ವೆರೆಯ್ನೆ ನಡುವೆ 60 ರನ್ ಜೊತೆಯಾಟ. ಇದು ಬಿಟ್ಟರೆ ಉಳಿದಂತೆ ಸೌತ್ ಆಫ್ರಿಕಾದ ಸ್ಕೋರು ದೊಡ್ಡ ಮಟ್ಟದಲ್ಲಿ ಉಬ್ಬುವಂತಹ ಜೊತೆಯಾಟ ಬರಲಿಲ್ಲ.

    ಕೀಗನ್ ಪೀಟರ್ಸನ್ ಮತ್ತು ಟೆಂಬ ಬವುಮ ಅರ್ಧಶತಕಗಳನ್ನ ಗಳಿಸಿ ಗಮನ ಸೆಳೆದರು. ಪೀಟರ್ಸನ್ ಬಹಳ ಸಂಯಮದಿಂದ ಬ್ಯಾಟ್ ಮಾಡಿದರು. ಆದರೆ, ಅರ್ಧಶತಕ ಗಳಿಸಿದ ಬಳಿಕ ಶಾರ್ದೂಲ್ ಠಾಕೂರ್ ಅವರ ಆಫ್​ಸೈಡ್ ಎಸೆತವನ್ನ ಅನಗತ್ಯವಾಗಿ ಕೆಣಕಲು ಹೋಗಿ ಔಟಾದರು. ಟೆಂಬಾ ಬವುಮಾ ಭಾರತದ ಬೌಲರ್​ಗಳ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡುವುದನ್ನು ಮುಂದುವರಿಸಿದರು.

    ಭಾರತದ ಶಾರ್ದೂಲ್ ಠಾಕೂರ್ ಅವರೊಬ್ಬರೇ ಬಹುತೇಕ ಏಕಾಂಗಿಯಾಗಿ ಸೌತ್ ಆಫ್ರಿಕಾ ಬ್ಯಾಟುಗಾರರನ್ನ ನಿಯಂತ್ರಣಕ್ಕೆ ತಂದಿದ್ದು. 61 ರನ್​ಗೆ 7 ವಿಕೆಟ್ ಪಡೆದ ಶಾರ್ದೂಲ್ ತಮ್ಮ ಲೈನ್ ಅಂಡ್ ಲೆಂತ್​ನಿಂದ ಸೌತ್ ಆಫ್ರಿಕಾ ಬ್ಯಾಟುಗಾರರನ್ನ ಕಾಡಿದರು.

    27 ರನ್​ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆಡಿದ ಭಾರತ 24 ರನ್ ಸ್ಕೋರ್ ಇದ್ದಾಗ ನಾಯಕ ಕೆ ಎಲ್ ರಾಹುಲ್ ಅವರ ವಿಕೆಟ್ ಕಳೆದುಕೊಂಡಿತು. ಐದು ಓವರ್​ಗಳ ಬಳಿಕ ಮಯಂಕ್ ಅಗರ್ವಾಲ್ ಕೂಡ ಔಟಾದರು. ಮೊದಲ ಇನ್ನಿಂಗ್ಸ್​ನಲ್ಲಿ ಅಮೋಘ ಜೊತೆಯಾಟ ಆಡಿದ್ದ ಇಬ್ಬರು ಬ್ಯಾಟುಗಾರರು ಬೇಗನೇ ನಿರ್ಗಮಿಸಿದರೂ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಉಳಿದ ಎಂಟು ಓವರ್​ಗಳನ್ನ ಸುರಕ್ಷಿತವಾಗಿ ಆಡಿ ದಿನಾಂತ್ಯಗೊಳಿಸಿದರು.

    ನಾಳೆ ಮೂರನೇ ದಿನದಾಟದಲ್ಲಿ ಭಾರತದ ಇನ್ನಿಂಗ್ಸ್ ಎಷ್ಟು ಉದ್ದ ಬೆಳೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಭಾರತ 250 ರನ್ ಗುರಿ ನೀಡಬಲ್ಲುದಾದರೆ ಪಂದ್ಯ ಗೆಲ್ಲುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಪರಿಣಿತರು.

    ಸ್ಕೋರು ವಿವರ (2ನೇ ದಿನಾಂತ್ಯಕ್ಕೆ):

    ಭಾರತ ಮೊದಲ ಇನ್ನಿಂಗ್ಸ್ 63.1 ಓವರ್ 202/10
    (ಕೆಎಲ್ ರಾಹುಲ್ 50, ಆರ್ ಅಶ್ವಿನ್ 46, ಮಯಂಕ್ ಅಗರ್ವಾಲ್ 26, ಗಗನ ಹನುಮ ವಿಹಾರಿ 20, ರಿಷಭ್ ಪಂತ್ 17, ಜಸ್​ಪ್ರೀತ್ ಬುಮ್ರಾ ಅಜೇಯ 14 ರನ್- ಮಾರ್ಕೊ ಜನ್ಸೆನ್ 31/4, ಡುವಾನ್ನೆ ಓಲಿವಿಯರ್ 64/3, ಕಗಿಸೊ ರಬಡ 64/3)

    ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ 79.4 ಓವರ್ 229/10
    (ಕೀಗನ್ ಪೀಟರ್ಸನ್ 62, ಟೆಂಬ ಬವುಮಾ 51, ಡೀನ್ ಎಲ್ಗಾರ್ 28, ಕಲ್ ವೆರೆಯ್ನೆ 21, ಮಾರ್ಕೊ ಜಾನ್ಸೆನ್ 21, ಕೇಶವ್ ಮಹಾರಾಜ್ 21 ರನ್ – ಶಾರ್ದೂಲ್ ಠಾಕೂರ್ 61/7, ಮೊಹಮ್ಮದ್ ಶಮಿ 52/2)

    ಭಾರತ ಎರಡನೇ ಇನ್ನಿಂಗ್ಸ್ 20 ಓವರ್ 85/2
    (ಚೇತೇಶ್ವರ್ ಪೂಜಾರ ಅಜೇಯ 35, ಮಯಂಕ್ ಅಗರ್ವಾಲ್ 23)
    Published by:Vijayasarthy SN
    First published: