SA vs ENG: ಆರ್​ಸಿಬಿ ಆಲ್ರೌಂಡರ್​ನ ಸ್ಫೋಟಕ ಆಟ; ಥ್ರಿಲ್ಲಿಂಗ್ ಪಂದ್ಯದಲ್ಲಿ ಇಂಗ್ಲೆಂಡ್​ಗೆ ರೋಚಕ ಜಯ!

South Africa vs England T20I: ಇಂಗ್ಲೆಂಡ್ 2 ರನ್​ಗಳ ರೋಚಕ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಅಂತಿಮ ನಿರ್ಣಾಯಕ ಪಂದ್ಯ ಫೆಬ್ರವರಿ 16 ರಂದು ನಡೆಯಲಿದೆ.

Vinay Bhat | news18-kannada
Updated:February 15, 2020, 12:10 PM IST
SA vs ENG: ಆರ್​ಸಿಬಿ ಆಲ್ರೌಂಡರ್​ನ ಸ್ಫೋಟಕ ಆಟ; ಥ್ರಿಲ್ಲಿಂಗ್ ಪಂದ್ಯದಲ್ಲಿ ಇಂಗ್ಲೆಂಡ್​ಗೆ ರೋಚಕ ಜಯ!
ಮೊಯೀನ್ ಅಲಿ.
  • Share this:
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಟಿ-20 ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಕೇವಲ 2 ರನ್​ಗಳಿಂದ ಸೋಲುಕಂಡಿದ್ದ ಕ್ರಿಕೆಟ್ ಜನಕರು, ನಿನ್ನೆ ನಡೆದ 2ನೇ ಥ್ರಿಲ್ಲಿಂಗ್ ಪಂದ್ಯದಲ್ಲಿ ಎರಡು ರನ್​ಗಳಿಂದ ರೋಚಕ ಗೆಲುವು ಸಾಧಿಸಿದ್ದಾರೆ.

ಡರ್ಬನ್‌ನ ಕಿಂಗ್ಸ್‌ಮೇಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಟಿ-20 ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಜೋಸ್ ಬಟ್ಲರ್(2) ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​ಗೆ ಜೇಸನ್ ರಾಯ್ ಹಾಗೂ ಜಾನಿ ಬೈರ್​ಸ್ಟೋ ಸ್ಫೋಟಕ ಆಟವಾಡಿದರು.

 




IPL 2020: ಒಬ್ಬೊಬ್ಬ ಆಟಗಾರನಿಗೆ RCB ಈ ಬಾರಿ ನೀಡುತ್ತಿರುವ ಹಣ ಕೇಳಿದ್ರೆ ಶಾಕ್ ಆಗ್ತೀರಾ!

ರಾಯ್ 29 ಎಸೆತಗಳಲ್ಲಿ 40 ರನ್ ಬಾರಿಸಿದರೆ, ಬೈರ್​ಸ್ಟೋ 17 ಎಸೆತಗಳಲ್ಲಿ 35 ರನ್ ಸಿಡಿಸಿದರು. ನಾಯಕ ಇಯಾನ್ ಮಾರ್ಗನ್ 24 ಎಸೆತಗಳಲ್ಲಿ 27 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಬೆನ್ ಸ್ಟೋಕ್ಸ್​ ಹಾಗೂ ಆರ್​ಸಿಬಿ ಆಲ್ರೌಂಡರ್ ಆಟಗಾರ ಮೊಯೀನ್ ಅಲಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು.

ಅದರಲ್ಲು ಮನಬಂದಂತೆ ಬ್ಯಾಟ್ ಬೀಸಿದ ಅಲಿ ಕೇವಲ 11 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ 39 ರನ್ ಚಚ್ಚಿದರು. ಈ ಮೂಲಕ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಬೆನ್ ಸ್ಟೋಕ್ಸ್​ 30 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರು.

ಇಂಗ್ಲೆಂಡ್ ತಂಡ ಅಂತಿಮವಾಗಿ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ದ. ಆಫ್ರಿಕಾಕ್ಕೆ ತೆಂಬಾ ಬವುಮಾ ಹಾಗೂ ನಾಯಕ ಕ್ವಿಂಟನ್ ಡಿಕಾಕ್ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಕೇವಲ 8 ಓವರ್ ಆಗುವ ಹೊತ್ತಿಗೆ ತಂಡದ ಮೊತ್ತವನ್ನು 90ಕ್ಕೆ ತಂದಿಟ್ಟಿತು.

 



IPL 2020: ಮಾರ್ಚ್ 29ಕ್ಕೆ ಆರಂಭವಾಗಲ್ಲ ಈ ಬಾರಿಯ ಐಪಿಎಲ್; ಕಾರಣವೇನು ಗೊತ್ತಾ..?

ಡಿಕಾಕ್ 22 ಎಸೆತಗಳಲ್ಲಿ 8 ಸಿಕ್ಸರ್ ಬಾರಿಸಿ 65 ರನ್ ಚಚ್ಚಿದರೆ, ಬವುಮಾ 31 ರನ್ ಗಳಿಸಿದರು. ಡೇವಿಡ್ ಮಿಲ್ಲರ್ 21 ರನ್ ಗಳಿಸಿ ಔಟ್ ಆದರು. ಈ ಸಂದರ್ಭ ದಿಢೀರ್ 2 ವಿಕೆಟ್ ಕಳೆದುಕೊಂಡು ಹರಿಣಗಳು ಸಂಕಷ್ಟಕ್ಕೆ ಸಿಲುಕಿದರು.

ಆದರೆ, ರಾಸ್ಸಿ ವಂಡರ್ ಡಸ್ಸೆನ್ ಹಾಗೂ ಡ್ವೇನ್ ಪ್ರೆಟೋರಿಯಸ್ ಜೊತೆಯಾಟ ತಂಡದ ಗೆಲುವವನ್ನು ಮತ್ತೆ ಚಿಗುರಿಸಿತು. ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿತು. ಕೊನೆಯ ಓವರ್​ನಲ್ಲಿ ಆಫ್ರಿಕಾಕ್ಕೆ ಗೆಲ್ಲಲು 15 ರನ್​ಗಳ ಅವಶ್ಯಕತೆಯಿತ್ತು.

ಪ್ರೆಟೋರಿಯಸ್ 20ನೇ ಓವರ್​ನ 2ನೇ ಎಸೆತದಲ್ಲಿ ಸಿಕ್ಸ್ ಹಾಗೂ 3ನೇ ಎಸೆತದಲ್ಲಿ ಬೌಂಡರಿ ಮತ್ತು 4ನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ಕೊನೆಯ 2 ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆಯಿತ್ತು. ಆದರೆ, ಟಾಮ್ ಕುರ್ರನ್ ಅವರ ಕೊನೆಯ ಎರಡೂ ಎಸೆತದಲ್ಲಿ ಆಫ್ರಿಕಾ 2 ವಿಕೆಟ್ ಕಳೆದುಕೊಂಡಿತು. 25 ರನ್​ಗೆ ಪ್ರೆಟೋರಿಯಸ್ ಔಟ್ ಆದರೆ, 20ನೇ ಓವರ್​ನ ಕೊನೆಯ ಎಸೆತದಲ್ಲಿ ಫಾರ್ಟುನ್ ಸೊನ್ನೆ ಸುತ್ತಿದರು.

 



New Zealand XI vs India: ಭಾರತೀಯ ಬೌಲರ್​ಗಳ ಮಾರಕ ದಾಳಿ; ನ್ಯೂಜಿಲೆಂಡ್ 235 ರನ್​ಗೆ ಆಲೌಟ್!

ಡಸ್ಸೆನ್ 26 ಎಸೆತಗಳಲ್ಲಿ 46 ರನ್ ಗಳಿಸಿ ಅಜೇಯರಾಗಿ ಉಳಿದರು. ದ. ಆಫ್ರಿಕಾ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿ ಸೋಲಿಗೆ ಶರಣಾಯಿತು.

ಇಂಗ್ಲೆಂಡ್ 2 ರನ್​ಗಳ ರೋಚಕ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಅಂತಿಮ ನಿರ್ಣಾಯಕ ಪಂದ್ಯ ಫೆಬ್ರವರಿ 16 ರಂದು ನಡೆಯಲಿದೆ.
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ