• Home
  • »
  • News
  • »
  • sports
  • »
  • Cricket World Cup 2019, SA vs BAN: ದಾಖಲೆಯೊಂದಿಗೆ ಬಾಂಗ್ಲಾ ವಿಶ್ವಕಪ್ ಆರಂಭ; ಆಫ್ರಿಕಾಗೆ ಸತತ ಎರಡನೇ ಸೋಲು!

Cricket World Cup 2019, SA vs BAN: ದಾಖಲೆಯೊಂದಿಗೆ ಬಾಂಗ್ಲಾ ವಿಶ್ವಕಪ್ ಆರಂಭ; ಆಫ್ರಿಕಾಗೆ ಸತತ ಎರಡನೇ ಸೋಲು!

ಸಂಭ್ರಮದಲ್ಲಿ ಬಾಂಗ್ಲಾದೇಶ ತಂಡದ ಆಟಗಾರರು

ಸಂಭ್ರಮದಲ್ಲಿ ಬಾಂಗ್ಲಾದೇಶ ತಂಡದ ಆಟಗಾರರು

ICC Cricket World Cup 2019: 21 ರನ್​ಗಳ ಗೆಲುವಿನೊಂದಿಗೆ ಬಾಂಗ್ಲಾದೇಶ ವಿಶ್ವಕಪ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಅಲ್ಲದೆ 50 ಓವರ್​ಗಳಲ್ಲಿ 330 ರನ್ ಕಲೆಹಾಕುವ ಮೂಲಕ ದಾಖಲೆ ಮಾಡಿದೆ.

  • News18
  • Last Updated :
  • Share this:

ಬೆಂಗಳೂರು (ಜೂ. 02): ಲಂಡನ್​ನ ಓವಲ್ ಮೈದಾನದಲ್ಲಿ ನಡೆದ ವಿಶ್ವಕಪ್​ನ ಐದನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 21 ರನ್​ಗಳ ಗೆಲುವು ಸಾಧಿಸಿದೆ. ಉಭಯ ತಂಡಗಳು ಕೊನೆಯ ಓವರ್​ವರೆಗೂ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರಾದರು ಅಂತಿಮವಾಗಿ ಡುಪ್ಲೆಸಿಸ್ ಸತತ ಎರಡನೇ ಸೋಲುಂಡರೆ, ಬಾಂಗ್ಲಾ ದಾಖಲೆ ಬರೆದ ಪಂದ್ಯದಲ್ಲೇ ಜಯ ಕಂಡಿದೆ.

ಗೆಲ್ಲಲು 331 ರನ್​ಗಳ ಕಠಿಣ ಗುರಿ ಪಡೆದಿದ್ದ ಆಫ್ರಿಕಾಕ್ಕೆ ಓಪನರ್​ಗಳು ಉತ್ತಮ ಆರಂಭ ಒದಗಿಸಿಲ್ಲ. 23 ರನ್​ ಗಳಿಸಿರುವಾಗ ಕ್ವಿಂಟನ್ ಡಿಕಾಕ್ ಅನಗತ್ಯ ರನ್ ಕಲೆಹಾಕಲೋಗಿ ರನೌಟ್​ಗೆ ಬಲಿಯಾಗ ಬೇಕಾಯಿತು. 2ನೇ ವಿಕೆಟ್​ಗೆ ಆ್ಯಡೆನ್ ಮರ್ಕ್ರಮ್​ ಜೊತೆಯಾದ ನಾಯಕ ಫಾಫ್ ಡುಪ್ಲೆಸಿಸ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು, 53 ರನ್​ಗಳ ಜೊತೆಯಾಟ ನೀಡಿದರು. ಚೆನ್ನಾಗಿಯೆ ಆಡುತ್ತಿದ್ದ ಮರ್ಕ್ರಮ್ 45 ರನ್ ಗಳಿಸಿ ಶಕಿಬ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರೆ, ಡುಪ್ಲೆಸಿಸ್ ಅರ್ಧಶತಕ ಬಾರಿಸಿ 62 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಈ ಸಂದರ್ಭ ಒಂದಾದ ಡೇವಿಡ್ ಮಿಲ್ಲರ್ ಹಾಗೂ ರಾಸ್ಸಿ ಡಸ್ಸೆನ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಬಾಂಗ್ಲಾ ಕಳಪೆ ಫೀಲ್ಡಿಂಗ್​ ಅನ್ನು ಚೆನ್ನಾಗಿಯೆ ಉಪಯೋಗಿಸಿಕೊಂಡ ಇವರು ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಆದರೆ, ಮಿಲ್ಲರ್ 38 ರನ್ ಗಳಿಸಿರುವಾಗ ಔಟ್ ಆಗಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್​​ನಂತಾಯಿತು.

ಇದನ್ನೂ ಓದಿ: ವಿಶ್ವಕಪ್​​ನಲ್ಲೂ ಸ್ಮಿತ್-ವಾರ್ನರ್​ಗೆ ಅವಮಾನ; ಬಾಲ್ ಟೆಂಪರಿಂಗ್ ಬಗ್ಗೆ ಹೀಯಾಳಿಸಿದ ಅಭಿಮಾನಿಗಳು!

ಮಿಲ್ಲರ್ ಬೆನ್ನಲ್ಲೆ 41 ರನ್ ಗಳಿಸಿದ್ದ ಡಸ್ಸೆನ್ ಕೂಡ ಔಟ್ ಆಗಿ ಆಘಾತ ನೀಡಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಜೆ ಪಿ ಡುಮಿನಿ 37 ಎಸೆತಗಳಲ್ಲಿ 45 ರನ್ ಬಾರಿಸಿದರಾದರು ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಆಫ್ರಿಕಾ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 309 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಪರ ಮುಸ್ತಫಿಜುರ್ ರೆಹ್ಮಾನ್ 3 ವಿಕೆಟ್ ಕಿತ್ತರೆ, ಸೈಫುದ್ದಿನ್ 2, ಮೇಹಿದಿ ಹಸನ್ ಹಾಗೂ ಶಕಿಬ್ ತಲಾ 1 ವಿಕೆಟ್ ಪಡೆದರು.

21 ರನ್​ಗಳ ಗೆಲುವಿನೊಂದಿಗೆ ಬಾಂಗ್ಲಾದೇಶ ವಿಶ್ವಕಪ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ. ಅಲ್ಲದೆ 50 ಓವರ್​ಗಳಲ್ಲಿ 330 ರನ್ ಕಲೆಹಾಕುವ ಮೂಲಕ ದಾಖಲೆ ಮಾಡಿದೆ. ಏಕದಿನ ಪಂದ್ಯಗಳಲ್ಲಿ ಈವರೆಗೆ ಬಾಂಗ್ಲಾದೇಶ ಕಲೆಹಾಕಿದ ಗರಿಷ್ಠ ಮೊತ್ತ ಇದಾಗಿದೆ.

 ಇದಕ್ಕೂ ಮುನ್ನ ಟಾಸ್ ಗೆದ್ದ ದ. ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆದುಕೊಂಡಿತಾದರು ದಿಢೀರ್ 2 ವಿಕೆಟ್ ಕಳೆದುಕೊಂಡಿದೆ.

ಓಪನರ್​ಗಳಾದ ತಮಿಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ ಪವರ್ ಪ್ಲೇ ಓವರ್​ ಅನ್ನು ಚೆನ್ನಾಗಿಯೆ ಉಪಯೋಗಿಸಿಕೊಂಡರು. ಸೌಮ್ಯ ಬೌಂಡರಿಗಳ ಮಳೆ ಸುರಿಸಿದರೆ, ತಮಿಮ್ ಸಾತ್ ನೀಡಿದರು. ಮೊದಲ ವಿಕೆಟ್​ಗೆ ಈ ಜೋಡಿ ಬಿರುಸಿನ ಆಟ ಪ್ರದರ್ಶಿಸಿದ 8 ಓವರ್​ ಆಗುವ ಹೊತ್ತಿಗೆನೆ ತಂಡದ ಮೊತ್ತವನ್ನು 60ಕ್ಕೆ ತಂದಿಟ್ಟರು. ಆದರೆ, ಈ ಸಂದರ್ಭ ತಮಿಮ್ 29 ಬಾಲ್​ಗಳಲ್ಲಿ 16 ರನ್​ಗಳಿಗೆ ಔಟ್ ಆದರೆ, ಸರ್ಕಾರ್ 30 ಎಸೆತಗಳಲ್ಲಿ 42 ರನ್ ಬಾರಿಸಿ ಮೊರೀಸ್​ಗೆ ವಿಕೆಟ್ ಒಪ್ಪಿಸಿದರು.

ಈ ಸಂದರ್ಭ ಜೊತೆಯಾದ ಶಕಿಬ್ ಅಲ್ ಹಸನ್ ಹಾಗೂ ಮುಷ್ಫಿಕರ್ ರಹೀಮ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ನಿಧಾನಗತಿಯಲ್ಲಿ ಇನ್ನಿಂಗ್ಸ್​ ಕಟ್ಟಿದ ಈ ಜೋಡಿ ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಕ್ರೀಸ್ ಕಚ್ಚಿ ಬ್ಯಾಟ್ ಬೀಸಿದ ಇವರು ತಂಡದ ರನ್ ಗತಿಯನ್ನು ಏರಿಸಿ 142 ರನ್​ಗಳ ಅಮೋಘ ಜೊತೆಯಾಟ ನೀಡಿದರು. ಶಕಿಬ್ ಅಲ್ ಹಸನ್, ಇಮ್ರಾನ್ ತಾಹಿರ್ ಬೌಲಿಂಗ್​ನಲ್ಲಿ 75 ರನ್​ಗೆ ಔಟ್ ಆದರೆ, ರಹೀಮ್ 78 ರನ್​ಗೆ ಔಟ್ ಆಗಿ ಬಾಂಗ್ಲಾ ಮೊತ್ತವನ್ನು 250ಕ್ಕೆ ತಂದಿಟ್ಟರು.

ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನ ತಂಡದ ನಾಯಕನೇ ಇಂಜುರಿಗೆ ತುತ್ತಾದರೆ ಟೀಂ ಇಂಡಿಯಾ ಸ್ಥಿತಿ ಏನು?

ಕೊನೆ ಹಂತದಲ್ಲಿ ಮೊಹಮ್ಮದುಲ್ಲಾ(46*) ಹಾಗೂ ಮೊಸದ್ದಿಕ್(26) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಅಂತಿಮ 5 ಓವರ್​ಗಳಲ್ಲಿ 59 ರನ್​ ಚಚ್ಚಿದರು. ಪರಿಣಾಮ ಬಾಂಗ್ಲಾದೇಶ 50 ಓವರ್​ಗೆ 6 ವಿಕೆಟ್ ಕಳೆದುಕೊಂಡು 330 ರನ್ ಕಲೆಹಾಕಿತು. ಜೊತೆಗೆ ಏಕದಿನ ಕ್ರಿಕೆಟ್​​ನಲ್ಲೇ ಗರಿಷ್ಠ ರನ್ ಕಲೆಹಾಕಿದ ದಾಖಲೆ ಮಾಡಿತು. ಆಫ್ರಿಕಾ ಪರ ಇಮ್ರಾನ್ ತಾಹಿರ್, ಕ್ರಿಸ್ ಮೊರೀಸ್ ಹಾಗೂ ಫೆಹ್ಲುಕ್ವಾಯೊ ತಲಾ 2 ವಿಕೆಟ್ ಕಿತ್ತರು.

ಬಾಂಗ್ಲಾದೇಶ ಗರಿಷ್ಠ ಏಕದಿನ ರನ್:

330-6 vs ದ. ಆಫ್ರಿಕಾ, ಓವಲ್, 2019

329-6 vs ಪಾಕಿಸ್ತಾನ, ಡಾಕಾ, 2015

326-3 vs ಪಾಕಿಸ್ತಾನ, ಡಾಕಾ, 2014

ವಿಶ್ವಕಪ್​ನಲ್ಲಿ ಬಾಂಗ್ಲಾದೇಶ:

330-6 vs ದ. ಆಫ್ರಿಕಾ, ಓವಲ್, 2019

322-4 vs ಸ್ಕಾಟ್ಲೆಂಡ್, ನೆಲ್ಸನ್​, 2015

288-7 vs ನ್ಯೂಜಿಲೆಂಡ್, ಹ್ಯಾಮಿಲ್ಟನ್, 2015

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು