IND vs SA: ಸೌತ್ ಆಫ್ರಿಕಾ ಗೆಲುವಿಗೆ 212 ರನ್ ಗುರಿ; 101/2- ಸೋಲಿನ ಭೀತಿಯಲ್ಲಿ ಭಾರತ

South Africa 101/2, chasing target of 212 runs: ಭಾರತದ ಎರಡನೇ ಇನ್ನಿಂಗ್ಸ್ 198 ರನ್ಗೆ ಅಂತ್ಯವಾಗಿದೆ. ಗೆಲ್ಲಲು 212 ರನ್ ಗುರಿ ಪಡೆದಿರುವ ಸೌತ್ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲ್ಲಲು ಇನ್ನೂ 111 ರನ್ ಅಗತ್ಯವಿದೆ.

ಕೀಗನ್ ಪೀಟರ್ಸನ್

ಕೀಗನ್ ಪೀಟರ್ಸನ್

 • Share this:
  ಕೇಪ್​ಟೌನ್, ಜ. 13: ಸೌತ್ ಆಫ್ರಿಕಾ ನೆಲದಲ್ಲಿ ಮೊತ್ತಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಟೀಮ್ ಇಂಡಿಯಾ ಪ್ರಯತ್ನ ಫಲ ಕೊಡುವುದು ಕಷ್ಟಕರ ಸ್ಥಿತಿ ಎನ್ನುವಂತಾಗಿದೆ. ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 212 ರನ್ ಗುರಿ ಪಡೆದಿರುವ ದಕ್ಷಿಣ ಆಫ್ರಿಕಾ 3ನೇ ದಿನಾಂತ್ಯದಲ್ಲಿ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಗೆಲ್ಲಲು ಅದಕ್ಕೆ ಇನ್ನೂ 111 ರನ್ ಬೇಕಿದ್ದು ಇನ್ನೂ 8 ವಿಕೆಟ್ ಕೈಯಲ್ಲಿದೆ. ಮೊದಲ ಇನ್ನಿಂಗ್ಸ್ ಹೀರೋ ಕೀಗನ್ ಪೀಟರ್ಸನ್ ಅಜೇಯ 48 ರನ್ ಗಳಿಸಿ ಕ್ರೀಸ್​​ನಲ್ಲಿದ್ದಾರೆ. ಇಂದಿನ ಆಟದ ಅಂತ್ಯದಲ್ಲಿ ಡೇಂಜರಸ್ ಬ್ಯಾಟರ್ ಡೀನ್ ಎಲ್ಗಾರ್ ವಿಕೆಟ್ ಪಡೆದ ಸಮಾಧಾನ ಟೀಮ್ ಇಂಡಿಯಾಗೆ ಸಿಕ್ಕಿದೆ.

  ನಿನ್ನೆ ಎರಡನೇ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದ್ದ ಟೀಮ್ ಇಂಡಿಯಾ ಇಂದಿನ ಆಟದ ಆರಂಭದಲ್ಲೇ ಕ್ಷಿಪ್ರವಾಗಿ ಮತ್ತೆರಡು ವಿಕೆಟ್ ಕಳೆದುಕೊಂಡಿತು. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಬೇಗನೇ ನಿರ್ಗಮಿಸಿದರು. ಈ ಸಂಕಷ್ಟದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಜೊತೆಯಾಗಿ ನಿಂತು ಇನ್ನಿಂಗ್ಸ್ ಬೆಳೆಸಿದರು. ಇವರಿಬ್ಬರೂ ಸೇರಿ 5ನೇ ವಿಕೆಟ್​ಗೆ 94 ರನ್ ಜೊತೆಯಾಟ ಆಡಿ ಚೇತರಿಕೆ ನೀಡಿದರು.

  ಮೊದಲ ಇನ್ನಿಂಗ್ಸಲ್ಲಿ 201 ಎಸೆತಗಳಲ್ಲಿ 79 ರನ್ ಗಳಿಸಿ ಸಂಯಮದ ಮೂರ್ತಿಯಾಗಿದ್ದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸಲ್ಲೂ ಅಷ್ಟೇ ಸಂಯಮ ತೋರಿದರು. 29 ರನ್ ಗಳಿಸಲು ಅವರು 143 ರನ್ ಆಡಿದರು.

  ಒಂದೆಡೆ ವಿರಾಟ್ ಕೊಹ್ಲಿ ಹೆಬ್ಬಂಡೆಯಂತೆ ನಿಂತಿದ್ದರೆ ಮತ್ತೊಂದೆಡೆ ರಿಷಭ್ ಪಂತ್ ಉತ್ಸಾಹಪೂರ್ಣ ಆಟ ಆಡಿದರು. ಕೊಹ್ಲಿ ಉಪಸ್ಥಿತಿಯಲ್ಲಿ ಪಂತ್ ಆಟದ ಲಯವೇ ಬೇರೆ. ಆಕರ್ಷಕ ಶಾಟ್​ಗಳನ್ನ ಆಡಿದ ಪಂತ್ ಮಿಂಚಿನಂತೆ ರನ್ ಗಳಿಸಿದರು. ಕೊಹ್ಲಿ ನಿರ್ಗಮನದ ಬಳಿಕ ರಿಷಭ್ ಪಂತ್ ಅವರಿಗೆ ಸೂಕ್ತ ಜೊತೆಗಾರ ಸಿಗಲಿಲ್ಲ. ರನ್ ಗತಿ ಇನ್ನಷ್ಟು ಹೆಚ್ಚಿಸಿದ ಅವರು 139 ಬಾಲ್​ನಲ್ಲಿ ಶತಕವನ್ನೂ ಪೂರೈಸಿದರು. ಇದು ಅವರ 4ನೇ ಟೆಸ್ಟ್ ಶತಕವಾಗಿದೆ. ಕುತೂಹಲವೆಂದರೆ ಅವರ ನಾಲ್ಕು ಟೆಸ್ಟ್ ಶತಕಗಳಲ್ಲಿ ಮೂರು ವಿದೇಶದ ಪಿಚ್​ಗಳಲ್ಲೇ ಬಂದಿದೆ.

  ಇದನ್ನೂ ಓದಿ: Mayank Agarwal: ಮಯಂಕ್ ಬ್ಯಾಟಿಂಗ್​ನಲ್ಲಿ ತಾಂತ್ರಿಕ ದೋಷ; ವಿದೇಶದ ಪಿಚ್​ಗಳಲ್ಲಿ ಕಷ್ಟ: ಅಜಿತ್ ಅಗರ್ಕರ್

  ಇವರ ಆಟದ ಫಲವಾಗಿ ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್ 198 ರನ್ ಸ್ಕೋರ್​ವರೆಗೂ ಮುಂದುವರಿಯಿತು. ಮಾರ್ಕೊ ಜನ್ಸೆನ್ 4 ವಿಕೆಟ್ ಪಡೆದರೆ ಕಗಿಸೊ ರಬಡ ಮತ್ತು ಲುಂಗಿ ಎನ್​ಗಿಡಿ ತಲಾ 3 ವಿಕೆಟ್ ಪಡೆದು ಗಮನ ಸೆಳೆದರು. ಈ ಮೂವರು ಬೌಲರ್​ಗಳ ಪೈಕಿ ಅತಿ ಹೆಚ್ಚು ಮಾರಕ ಎನಿಸಿದ್ದು ರಬಡ ಅವರೆಯೇ.

  ಗೆಲ್ಲಲು 212 ರನ್ ಗುರಿ ಪಡೆದ ಸೌತ್ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಏಡನ್ ಮರ್ಕ್ರಮ್ ಅವರು 8ನೇ ಓವರ್​ನಲ್ಲಿ ಮೊಹಮ್ಮದ್ ಶಮಿ ಎಸೆತಕ್ಕೆ ಔಟಾದಾಗ ಭಾರತ ತಂಡದ ಪಾಳಯದಲ್ಲಿ ಮಿಂಚಿನ ಸಂಚಾರ ಆಯಿತು. ಆದರೆ ಈ ಖುಷಿ ಸಾಕಷ್ಟು ಕಾಲ ಇರಲಿಲ್ಲ. ನಾಯಕ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ ಅವರಿಬ್ಬರು 2ನೇ ವಿಕೆಟ್​ಗೆ 78 ರನ್ ಜೊತೆಯಾಟ ಆಡಿದರು. ದಿನದ ಕೊನೆಯಲ್ಲಿ ಬುಮ್ರಾ ಅವರು ಎಲ್ಗರ್ ವಿಕೆಟ್ ಪಡೆದದ್ದು ಭಾರತಕ್ಕೆ ತುಸು ನಿರಾಳ ತಂದಿತು.

  ನಾಳೆ ನಾಲ್ಕನೇ ದಿನದಾಟದ ಮೊದಲ ಸೆಷನ್​ನಲ್ಲೇ ಫಲಿತಾಂಶ ಬರುವ ಸಂಭವ ಇದೆ. ಕೀಗನ್ ಪೀಟರ್ಸನ್ ಅಜೇಯ 48 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಅವರು ಈ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ಧಾರೆ. ಅವರು ಮತ್ತು ಟೆಂಬಾ ಬವುಮಾ ಈ ಇಬ್ಬರು ಬ್ಯಾಟುಗಾರರೂ ಅಮೋಘ ಫಾರ್ಮ್​ನಲ್ಲಿದ್ಧಾರೆ. ನಾಳೆಯ ಫಲಿತಾಂಶವು ಇವರಿಬ್ಬರ ಆಟದ ಮೇಲೆ ಅವಲಂಬಿತವಾಗಿದೆ. ಪೀಟರ್ಸನ್ ಮತ್ತು ಬವುಮಾ ನಾಳೆ ಹೆಚ್ಚು ರನ್ ಗಳಿಸದಂತೆ ನೋಡಿಕೊಂಡರೆ ಭಾರತಕ್ಕೆ ಗೆಲುವಿನ ಅವಕಾಶ ಇದೆ.

  ಇದನ್ನೂ ಓದಿ: IPL 2022: ಶ್ರೀಲಂಕಾ ಅಥವಾ ಸೌತ್ ಆಫ್ರಿಕಾದಲ್ಲಿ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಯೋಜನೆ

  ಸ್ಕೋರು ವಿವರ (3ನೇ ದಿನಾಂತ್ಯಕ್ಕೆ):

  ಭಾರತ ಮೊದಲ ಇನ್ನಿಂಗ್ಸ್ 77.3 ಓವರ್ 223/10

  ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ 76.3 ಓವರ್ 210/10

  ಭಾರತ ಎರಡನೇ ಇನ್ನಿಂಗ್ಸ್ 67.3 ಓವರ್ 198/10
  (ರಿಷಭ್ ಪಂತ್ ಅಜೇಯ 100, ವಿರಾಟ್ ಕೊಹ್ಲಿ 29 ರನ್ – ಮಾರ್ಕೊ ಜನ್ಸೆನ್ 36/4, ಲುಂಗಿ ಎನ್​ಗಿಡಿ 21/3, ಕಗಿಸೊ ರಬಡ 53/3)

  ಸೌತ್ ಆಫ್ರಿಕಾ ಎರಡನೇ ಇನ್ನಿಂಗ್ಸ್ 29.4 ಓವರ್ 101/2
  (ಕೀಗನ್ ಪೀಟರ್ಸನ್ ಅಜೇಯ 48, ಡೀನ್ ಎಲ್ಗರ್ 30 ರನ್)

  ಸೌತ್ ಆಫ್ರಿಕಾಗೆ ಗೆಲ್ಲಲು ಇರುವ ಗುರಿ 212 ರನ್​ಗಳು. ಇನ್ನೂ 111 ರನ್ ಗಳಿಸಬೇಕಿದೆ.
  Published by:Vijayasarthy SN
  First published: