IND vs SA: ಪ್ರಥಮ ಓಡಿಐ- ಬವುಮಾ, ಡುಸೆ ಶತಕ; ಭಾರತ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಜಯ

India vs South Africa 1st ODI match: ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಸೌತ್ ಆಫ್ರಿಕಾ 1-0 ಮುನ್ನಡೆ ಪಡೆದುಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಹರಿಣಗಳ ಪಡೆ 31 ರನ್​ಗಳಿಂದ ನಿರಾಯಾಸ ಗೆಲುವು ಪಡೆಯಿತು.

ವಾನ್ ಡರ್ ಡುಸೆ ಮತ್ತು ಟೆಂಬ ಬವುಮ

ವಾನ್ ಡರ್ ಡುಸೆ ಮತ್ತು ಟೆಂಬ ಬವುಮ

 • Share this:
  ಪಾರ್ಲ್, ಜ. 19: ನಾಯಕ ಟೆಂಬ ಬವುಮಾ ಮತ್ತು ರಸಿ ವಾನ್ ಡರ್ ಡುಸೆ ಅವರಿಬ್ಬರ ಭರ್ಜರಿ ಶತಕದ ನೆರವಿನಿಂದ ಸೌತ್ ಆಫ್ರಿಕಾ ತಂಡ ಭಾರತ ವಿರುದ್ಧದ ಮೊದಲ ಓಡಿಐ ಪಂದ್ಯದಲ್ಲಿ ಜಯಭೇರಿ ಭಾರಿಸಿದೆ. ‘ಗಬ್ಬರ್’ ಶಿಖರ್ ಧವನ್ (Shikhar Dhawan) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಆಕರ್ಷಕ ಪ್ರತಿಹೋರಾಟದ ನಡುವೆಯೂ ಟೀಮ್ ಇಂಡಿಯಾ ಹೆಚ್ಚು ಪ್ರತಿರೋಧ ಒಡ್ಡದೆ ಶರಣಾಗಿದೆ. ಇಂದು ನಡೆದ ಪಂದ್ಯದಲ್ಲಿ ಸೌತ್ ಆಫ್ರಿಕಾ 31 ರನ್​ಗಳಿಂದ ಗೆಲುವು ಸಾಧಿಸಿತು. ಗೆಲ್ಲಲು 28’97 ರನ್ ಗುರಿ ಪಡೆದ ಟೀಮ್ ಇಂಡಿಯಾದ ಚೇಸಿಂಗ್ ಮಾರ್ಗಮಧ್ಯೆ ಹಳಿತಪ್ಪಿ 265 ರನ್ ಸ್ಕೋರ್​ಗೆ ಅಂತ್ಯಗೊಂಡಿತು. ಟೆಸ್ಟ್ ಸರಣಿಯನ್ನ 2-1ರಲ್ಲಿ ಗೆದ್ದಿದ್ದ ಹರಿಣಗಳ ಪಡೆ ಇದೀಗ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ 1-0ಯಿಂದ ಮುನ್ನಡೆ ಪಡೆದುಕೊಂಡಿದೆ.

  ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಬಹಳ ನೀರಸ ಆರಂಭ ಪಡೆಯಿತು. ಒಂದೆಡೆ ನಿಧಾನಗತಿಯಲ್ಲಿ ಇನ್ನಿಂಗ್ಸ್ ಬೆಳೆದರೆ ಮತ್ತೊಂದೆಡೆ ದೊಡ್ಡ ಜೊತೆಯಾಟ ಬರಲಿಲ್ಲ. 18ನೇ ಓವರ್​ನಲ್ಲಿ ಸೌತ್ ಆಫ್ರಿಕಾ 68 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜೊತೆಯಾದ ನಾಯಕ ಟೆಂಬ ಬವುಮ ಮತ್ತು ರಸಿ ವಾನ್ ಡರ್ ಡುಸೆ 4ನೇ ವಿಕೆಟ್​ಗೆ ದಾಖಲೆಯ 204 ರನ್ ಜೊತೆಯಾಟ ಆಡಿದರು. ಒಂದು ಹಂತದಲ್ಲಿ 250 ರನ್ ಗಡಿ ಮುಟ್ಟುವುದು ಕಷ್ಟ ಎನ್ನುವಂತಿದ್ದ ಸಂದರ್ಭದಲ್ಲಿ ಇವರಿಬ್ಬರು ಸೌತ್ ಆಫ್ರಿಕಾ ಇನ್ನಿಂಗ್ಸನ್ನು 300 ರನ್ ಗಡಿ ಸಮೀಪ ಕೊಂಡೊಯ್ದರು.

  ಡುಸೆ ಕೇವಲ 96 ಬಾಲ್​ನಲ್ಲಿ ಅಜೇಯ 129 ರನ್ ಗಳಿಸಿದರು. ನಾಯಕ ಟೆಂಬ ಬವುಮಾ 143 ಬಾಲ್​ನಲ್ಲಿ 110 ರನ್ ಗಳಿಸಿದರು. ಇಬ್ಬರಿಗೂ ಇದು ಎರಡನೇ ಓಡಿಐ ಶತಕ ಆಗಿದೆ. ಈ ಪಿಚ್​ನಲ್ಲಿ ಆಡಲಾದ ಕಳೆದ 16 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಗಳು ಗಳಿಸಿದ ಸರಾಸರಿ ರನ್ 250ಕ್ಕಿಂತ ಕಡಿಮೆ. 250 ಕ್ಕಿಂತ ಹೆಚ್ಚು ಮೊತ್ತದ ಗುರಿಯನ್ನು ಯಾವ ತಂಡವೂ ಚೇಸ್ ಮಾಡಿದ್ದಿಲ್ಲ. ಹೀಗಾಗಿ, ಸೌತ್ ಆಫ್ರಿಕಾ 297 ರನ್ ಗುರಿ ಕೊಟ್ಟಾಗಲೇ ಟೀಮ್ ಇಂಡಿಯಾಗೆ ಗೆಲ್ಲಲು ಕಬ್ಬಿಣದ ಕಡಲೆ ಸಿಕ್ಕಂತಾಗಿತ್ತು.

  ಭಾರತ ಈ ಚೇಸಿಂಗ್​ನ ಆರಂಭದಲ್ಲೇ ನಾಯಕ ಕೆಎಲ್ ರಾಹುಲ್ ಅವರನ್ನ ಕಳೆದುಕೊಂಡಿತು. ಆದರೆ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಬಹಳ ಉತ್ತಮವಾಗಿ ಇನ್ನಿಂಗ್ಸ್ ಕಟ್ಟಿ 92 ರನ್ ಜೊತೆಯಾಟ ಆಡಿದರು. ಈ ವೇಳೆ ಭಾರತ ಈ ದೊಡ್ಡ ಮೊತ್ತವನ್ನು ಚೇಸಿಂಗ್ ಮಾಡಬಹುದು ಎಂದನಿಸಿತ್ತು. ಆದರೆ, ಧವನ್ ನಿರ್ಗಮನದ ಬಳಿಕ ಟೀಮ್ ಇಂಡಿಯಾ ನಿರಂತರವಾಗಿ ವಿಕೆಟ್​ಗಳನ್ನ ಕಳೆದುಕೊಳ್ಳುತ್ತಾ ಹೋಯಿತು. ಧವನ್ 84 ಬಾಲ್​ನಲ್ಲಿ 79 ರನ್ ಗಳಿಸಿದರೆ ವಿರಾಟ್ ಕೊಹ್ಲಿ 63 ಬಾಲ್​ನಲ್ಲಿ 51 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ ಕೂಡ ಅರ್ಧಶತಕ ಗಳಿಸಿ ತಾವು ಉತ್ತಮ ಆಲ್​ರೌಂಡರ್ ಆಗಿ ರೂಪುಗೊಂಡಿರುವುದನ್ನು ಸಾಬೀತು ಮಾಡಿದರು. ಠಾಕೂರ್ ಅವರ ಬ್ಯಾಟಿಂಗ್ ಕಾರಣದಿಂದ ಭಾರತ 50 ಓವರ್​ನಲ್ಲಿ 265 ರನ್ ಮುಟ್ಟಲು ಸಾಧ್ಯವಾಯಿತು.

  ಇದನ್ನೂ ಓದಿ: ‘ಹತ್ತು ಓವರಲ್ಲಿ ಎಲ್ರನ್ನ ಔಟ್ ಮಾಡ್ತೀರಾ?’- ಪಾಕ್ ಕ್ರಿಕೆಟಿಗನಿಗೆ ಕೊಹ್ಲಿ ಡೈಲಾಗ್ ಮೆಲುಕು

  ಈ ಮೂವರನ್ನ ಬಿಟ್ಟರೆ ಉಳಿದವರಿಂದ ಅಂಥ ಆಟ ಬರಲಿಲ್ಲ. ವಿರಾಟ್ ಕೊಹ್ಲಿ ಇದೇ ವೇಳೆ ಕೆಲ ಮಹತ್ವದ ಮೈಲಿಗಲ್ಲು ಮುಟ್ಟಿದರು. ವಿದೇಶದ ಪಿಚ್​ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂದ ದಾಖಲೆ ಅವರದ್ದಾಯಿತು. 5065 ರನ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಕೊಹ್ಲಿ ಮುರಿದರು. ಸಚಿನ್ ಇಷ್ಟು ರನ್ ಗಳಿಸಲು 146 ಇನ್ನಿಂಗ್ಸ್ ತೆಗೆದುಕೊಂಡರೆ ವಿರಾಟ್ ಕೊಹ್ಲಿ ಕೇವಲ 104 ಇನ್ನಿಂಗ್ಸಲ್ಲಿ ಮೈಲುಗಲ್ಲು ದಾಟಿದರು.

  ಹಾಗೆಯೇ, ಸೌತ್ ಆಫ್ರಿಕಾ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರನ್ನ ಹಿಂದಿಕ್ಕಿದರು. ಕೊಹ್ಲಿ ಸೌತ್ ಆಫ್ರಿಕಾ ವಿರುದ್ಧ 1320ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 2001 ರನ್ ಗಳಿಸಿರುವುದು ಇನ್ನೂ ದಾಖಲೆಯಾಗಿ ಉಳಿದಿದೆ. ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

  ಇವತ್ತಿನ ಪಂದ್ಯದಲ್ಲಿ ಭಾರತದ ವೆಂಕಟೇಶ್ ಅಯ್ಯರ್ ಮತ್ತು ಸೌತ್ ಆಫ್ರಿಕಾದ ಮಾರ್ಕೊ ಜನ್ಸೆನ್ ಅವರು ಓಡಿಐ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಇಬ್ಬರೂ ತಮ್ಮ ಚೊಚ್ಚಲ ಪಂದ್ಯದಲ್ಲಿ ಪರಿಣಾಮಕಾರಿ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.

  ಇದನ್ನೂ ಓದಿ: Sania Mirza: ನಿವೃತ್ತಿ ಘೋಷಿಸಿದ ಟೆನಿಸ್​ ತಾರೆ ಸಾನಿಯಾ ಮಿರ್ಜಾ

  ಮುಂದಿನ ಪಂದ್ಯಗಳು:

  ಜನವರಿ 21 ಮತ್ತು 23ರಂದು ಪಾರ್ಲ್ ಮತ್ತು ಕೇಪ್​ಟೌನ್​ನಲ್ಲಿ ಓಡಿಐ ಸರಣಿಯ ಉಳಿದೆರಡು ಪಂದ್ಯಗಳು ನಡೆಯಲಿವೆ.

  ತಂಡಗಳು:

  ಸೌತ್ ಆಫ್ರಿಕಾ ತಂಡ: ಕ್ವಿಂಟನ್ ಡೀಕಾಕ್, ಜೆ ಮಲನ್, ಟೆಂಬ ಬವುಮಾ (ನಾಯಕ), ಏಡನ್ ಮರ್ಕ್ರಂ, ರಸೀ ವಾನ್ ಡರ್ ಡಸೆ, ಡೇವಿಡ್ ಮಿಲ್ಲರ್, ಆಂಡೈಲ್ ಫೆಹ್ಲುಕ್ವಾಯೊ, ಮಾರ್ಕೊ ಜನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್​ಗಿಡಿ, ತಬ್ರೇಜ್ ಶಮ್ಸಿ

  ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬೂಮ್ರಾ, ಯುಜವೇಂದ್ರ ಚಹಲ್.

  ಇದನ್ನೂ ಓದಿ: Unmukt Chand: ಆಸ್ಟ್ರೇಲಿಯಾದ ಬಿಬಿಎಲ್​ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರ ಉನ್ಮುಕ್ತ್ ಚಂದ್

  ಸ್ಕೋರು ವಿವರ:

  ಸೌತ್ ಆಫ್ರಿಕಾ 50 ಓವರ್ 296/4
  (ರಸೀ ವಾನ್ ಡರ್ ಡುಸೆ ಅಜೇಯ 129, ಟೆಂಬ ಬವುಮ 110, ಕ್ವಿಂಟನ್ ಡೀಕಾಕ್ 27 ರನ್- ಜಸ್​ಪ್ರೀತ್ ಬೂಮ್ರಾ 48/2)

  ಭಾರತ 50 ಓವರ್ 265/8
  (ಶಿಖರ್ ಧವನ್ 79, ವಿರಾಟ್ ಕೊಹ್ಲಿ 51, ಶಾರ್ದೂಲ್ ಠಾಕೂರ್ ಅಜೇಯ 50 ರನ್- ಆಂಡಿಲೆ ಫೆಲುಕ್ವಾಯೊ 26/2, ತಬ್ರೇಜ್ ಶಮ್ಸಿ 52/2, ಲುಂಗಿ ಎನ್​ಗಿಡಿ 64/2))
  Published by:Vijayasarthy SN
  First published: