IND vs SA: ದಕ್ಷಿಣ ಆಫ್ರಿಕಾಗೆ ಸರಣಿ ಜಯ, ಭಾರತಕ್ಕೆ ಐತಿಹಾಸಿಕ ಗೆಲುವಿಲ್ಲದೆ ನಿರಾಸೆ

India vs South Africa 3rd test match: ಭಾರತ 223 ಮತ್ತು 198 ರನ್; ಸೌತ್ ಆಫ್ರಿಕಾ 210 ಮತ್ತು 212/3. ಮೂರನೇ ಪಂದ್ಯವನ್ನ 7 ವಿಕೆಟ್​ಗಳಿಂದ ಗೆದ್ದ ಸೌತ್ ಆಫ್ರಿಕಾ ಪಾಲಾಯಿತು ಟೆಸ್ಟ್ ಸರಣಿ.

ಸೌತ್ ಆಫ್ರಿಕಾ ಕ್ರಿಕೆಟ್ ತಂಡ

ಸೌತ್ ಆಫ್ರಿಕಾ ಕ್ರಿಕೆಟ್ ತಂಡ

  • Share this:
    ಕೇಪ್​ಟೌನ್, ಜ. 14: ಸೌತ್ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಅಪೂರ್ವ ಅವಕಾಶ ಭಾರತದ ಕೈತಪ್ಪಿದೆ. ಇಂದು ನಡೆದ ಟೆಸ್ಟ್ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯವನ್ನ ಸೌತ್ ಆಫ್ರಿಕಾ 7 ವಿಕೆಟ್​ಗಳಿಂದ ಗೆದ್ದಿತು. ಗೆಲುವಿಗೆ ಪಡೆದಿದ್ದ 212 ರನ್ ಗುರಿಯನ್ನ ಹರಿಣಗಳ ಪಡೆ ನಿರಾಯಸವಾಗಿ ಮುಟ್ಟಿ ವಿಜೃಂಬಿಸಿತು. ಕೀಗನ್ ಪೀಟರ್ಸನ್, ವಾನ್ ಡರ್ ಡುಸೆನ್ ಮತ್ತು ಟೆಂಬ ಬವುಮಾ ಅವರು ಭಾರತಕ್ಕೆ ಗೆಲುವು ಕೈಗೆಟುದಂತೆ ನೋಡಿಕೊಂಡರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನ ಸೌತ್ ಆಫ್ರಿಕಾ 2-1ರಿಂದ ತನ್ನದಾಗಿಸಿಕೊಂಡಿತು.

    ನಿನ್ನೆ 3ನೇ ದಿನಾಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದ್ದ ಸೌತ್ ಆಫ್ರಿಕಾ ಇಂದು ಕೇವಲ ಒಂದು ವಿಕೆಟ್ ಮಾತ್ರ ಕಳೆದುಕೊಂಡಿತು. ಶತಕದ ಹಾದಿಯಲ್ಲಿದ್ದ ಕೀಗನ್ ಪೀಟರ್ಸನ್ 82 ರನ್ ಗಳಿಸಿದ್ದಾಗ ಔಟಾದರು. ಅದು ಬಿಟ್ಟರೆ ಸೌತ್ ಆಫ್ರಿಕಾಗೆ ಇವತ್ತಿನ ಚೇಸ್ ಬಹಳ ನಿರಾಯಾಸವಾಗಿತ್ತು. ದಿನದ ಆರಂಭದ ಕೆಲ ಓವರ್​ಗಳು ಕಾಡಿದವರಾದರೂ ಉಳಿದಂತೆ ಸೌತ್ ಆಫ್ರಿಕನ್ ಬ್ಯಾಟರ್ಸ್ ಬಹಳ ಸಮರ್ಥವಾಗಿ ಭಾರತೀಯ ಬೌಲಿಂಗ್ ದಾಳಿಯನ್ನ ಎದುರಿಸಿದರು.

    ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 223 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸೌತ್ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸಲ್ಲಿ 210 ರನ್​ಗೆ ಆಲೌಟ್ ಆಯಿತು. 13 ರನ್ ಮುನ್ನಡೆ ಪಡೆದ ಭಾರತ ಎರಡನೇ ಇನ್ನಿಂಗ್ಸಲ್ಲಿ ರಿಷಭ್ ಪಂತ್ ಅಜೇಯ ಶತಕದ ಹೊರತಾಗಿಯೂ ಕೇವಲ 198 ರನ್ ಗಳಿಸಿತು. ಗೆಲ್ಲಲು ಭಾರತ ಒಡ್ಡಿದ 212 ರನ್ ಗುರಿ ಸೌತ್ ಆಫ್ರಿಕಾಗೆ ಕಬ್ಬಿಣದ ಕಡಲೆ ಎನಿಸಲಿಲ್ಲ.

    ಇದನ್ನೂ ಓದಿ: IND vs SA: ರಿಷಭ್ ಪಂತ್ ದಾಖಲೆಗಳು; ಟೀಮ್ ಇಂಡಿಯಾದ ಕ್ಯಾಚ್ ಬಲಿ ದಾಖಲೆಗಳು

    ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನ ಸೌತ್ ಆಫ್ರಿಕಾ 2-1ರಿಂದ ಗೆದ್ದಿದೆ. ಸೆಂಚುರಿಯನ್​ನಲ್ಲಿ ನಡೆದ ಮೊದಲ ಪಂದ್ಯವನ್ನ ಭಾರತ 113 ರನ್​ಗಳಿಂದ ಗೆದ್ದಿತ್ತು. ಎರಡನೇ ಪಂದ್ಯದಲ್ಲಿ ಸೌತ್ ಆಫ್ರಿಕಾ 7 ವಿಕೆಟ್​ಗಳ ಅಂತರದಿಂದ ಜಯಿಸಿತು. ಈಗ ಮೂರನೇ ಪಂದ್ಯದಲ್ಲೂ ಸೌತ್ ಆಫ್ರಿಕಾ 7 ವಿಕೆಟ್ ಅಂತರದಿಂದಲೇ ಗೆದ್ದಿದೆ.

    ಮುಂದಿದೆ ಓಡಿಐ ಸರಣಿ:

    ಟೆಸ್ಟ್ ಸರಣಿ ಆಯಿತು. ಇನ್ನೀಗ ಎರಡೂ ತಂಡಗಳ ನಡುವೆ 3 ಓಡಿಐ ಪಂದ್ಯಗಳೂ ನಡೆಯಲಿವೆ. ಜನವರಿ 19, 21 ಮತ್ತು 23ರಂದು ಪಂದ್ಯಗಳು ನಡೆಯಲಿವೆ. ಮೊದಲೆರಡು ಪಂದ್ಯಗಳು ಪಾರ್ಲ್​ನಲ್ಲಿ ನಡೆದರೆ, ಕೊನೆಯ ಪಂದ್ಯ ಕೇಪ್​ಟೌನ್​ನ ನ್ಯೂಲೆಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.

    ಓಡಿಐ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡುತ್ತಿಲ್ಲದಿರುವುದು ಟೀಮ್ ಇಂಡಿಯಾಗೆ ಹಿನ್ನಡೆಯಾಗುವ ಸಂಭವ ಇದೆ. ರೋಹಿತ್ ಶರ್ಮಾ ಬದಲು ಕೆಎಲ್ ರಾಹುಲ್ ಅವರಿಗೆ ನಾಯಕತ್ವ ವಹಿಸಲಾಗಿದೆ. ಜಸ್​ಪ್ರೀತ್ ಬುಮ್ರಾ ಉಪನಾಯಕರಾಗಿದ್ದಾರೆ. ಐಪಿಎಲ್​ನಲ್ಲಿ ಮಿಂಚಿದ್ದ ಋತುರಾಜ್ ಗಾಯಕ್ವಡ್, ವೆಂಕಟೇಶ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರು ತಂಡದಲ್ಲಿದ್ದಾರೆ. ಕರ್ನಾಟಕದ ಪ್ರಸಿದ್ಧ್ ಕೃಷ್ಣ, ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಅವರ ಮೇಲೂ ಎಲ್ಲರ ಗಮನ ಇದೆ.

    ಇದನ್ನೂ ಓದಿ: Mayank Agarwal: ಮಯಂಕ್ ಬ್ಯಾಟಿಂಗ್​ನಲ್ಲಿ ತಾಂತ್ರಿಕ ದೋಷ; ವಿದೇಶದ ಪಿಚ್​ಗಳಲ್ಲಿ ಕಷ್ಟ: ಅಜಿತ್ ಅಗರ್ಕರ್

    ಸ್ಕೋರು ವಿವರ:

    ಭಾರತ ಮೊದಲ ಇನ್ನಿಂಗ್ಸ್ 77.3 ಓವರ್ 223/10

    ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ 76.3 ಓವರ್ 210/10

    ಭಾರತ ಎರಡನೇ ಇನ್ನಿಂಗ್ಸ್ 67.3 ಓವರ್ 198/10
    (ರಿಷಭ್ ಪಂತ್ ಅಜೇಯ 100, ವಿರಾಟ್ ಕೊಹ್ಲಿ 29 ರನ್ – ಮಾರ್ಕೊ ಜನ್ಸೆನ್ 36/4, ಲುಂಗಿ ಎನ್​ಗಿಡಿ 21/3, ಕಗಿಸೊ ರಬಡ 53/3)

    ಸೌತ್ ಆಫ್ರಿಕಾ ಎರಡನೇ ಇನ್ನಿಂಗ್ಸ್ 63.3 ಓವರ್ 212/3
    (ಕೀಗನ್ ಪೀಟರ್ಸನ್ 82,, ರಾಸಿ ವಾನ್ ಡರ್ ಡುಸೆನ್ ಅಜೇಯ 41, ಟೆಂಬ ಬವುಮ ಅಜೇಯ 32, ಡೀನ್ ಎಲ್ಗರ್ 30 ರನ್)
    Published by:Vijayasarthy SN
    First published: